ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್

Last Updated 5 ಅಕ್ಟೋಬರ್ 2022, 20:45 IST
ಅಕ್ಷರ ಗಾತ್ರ

ಯುಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-3, ಕೆಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-3 ಸೇರಿದಂತೆ ಎಲ್ಲಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ವಿದ್ಯಮಾನದ ಮಾಹಿತಿ ಇಲ್ಲಿದೆ.

ನಾಲ್ಕು ವರ್ಷ ಪೂರೈಸಿದ ಆಯುಷ್ಮಾನ್‌ ಭಾರತ– ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಹಾಗೂ ಒಂದು ವರ್ಷ ಪೂರೈಸಿದ ಆಯುಷ್ಮಾನ್‌ ಭಾರತ ಡಿಜಿಟಲ್‌ ಮಿಷನ್‌ (ಎನ್‌ಡಿಎಚ್‌ಎಂ) ಯೋಜನೆಗಳ ಸಂಬಂಧ ನಡೆದ‘ಆರೋಗ್ಯ ಮಂಥನ್‌ 2022’ ಕಾರ್ಯಕ್ರಮವನ್ನು ಕೇಂದ್ರ ಆರೋಗ್ಯಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್‌ ಮಾಂಡವೀಯ ಇತ್ತೀಚೆಗೆ ಉದ್ಘಾಟಿಸಿದರು,

74ನೇ ಸ್ವಾತಂತ್ರ್ಯ ದಿನದಂದು (2020ರಲ್ಲಿ) ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಆಯುಷ್ಮಾನ್ ಭಾರತ್‌ ಡಿಜಿಟಲ್‌ ಮಿಷನ್‌’ ಪ್ರಾಯೋಗಿಕ ಯೋಜನೆಯನ್ನು ಪ್ರಕಟಿಸಿದ್ದರು. ಪ್ರಧಾನಿ ಯವರುಅಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, ‘ಈಗ ರಾಷ್ಟ್ರೀಯ ಡಿಜಿಟಲ್‌ ಆರೋಗ್ಯ ಮಿಷನ್ ಉದ್ಘಾಟಿಸಲಾಗಿದ್ದು, ಇದರ ಅಡಿಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಗೂ‘ಡಿಜಿಟಲ್ ರೂಪ’ದ ಆರೋಗ್ಯ ಗುರುತಿನ ಚೀಟಿಯನ್ನು ನೀಡಿ, ವಿಶಿಷ್ಟ ಸಂಖ್ಯೆಯನ್ನು ನೀಡಲಾಗುತ್ತದೆ’ ಎಂದು ಹೇಳಿದ್ದರು.

ಏನಿದು ಎನ್‌ಡಿಎಚ್‌ಎಂ?

ಇದೊಂದು ಡಿಜಿಟಲ್ ರೂಪದ ಗುರುತಿನ ಆರೋಗ್ಯ ಚೀಟಿಯಾಗಿದ್ದು, ಇದರಲ್ಲಿವ್ಯಕ್ತಿಯೊಬ್ಬರ ಸಮಗ್ರ ಆರೋಗ್ಯ ಮಾಹಿತಿ ಇರುತ್ತದೆ.

ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್, ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY) ಅಡಿಯಲ್ಲಿ ಬರುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಈ‌ ಯೋಜನೆಯನ್ನು ವಿನ್ಯಾಸಗೊಳಿಸಿ ದೇಶದಾದ್ಯಂತ ಅನುಷ್ಠಾನಗೊಳಿಸುತ್ತಿದೆ.

ಈ ಗುರುತಿನ ಚೀಟಿಯನ್ನು ವ್ಯಕ್ತಿಯ ಆರೋಗ್ಯ ಖಾತೆ ಎಂಬಂತೆ ಬಳಸಲಾಗುತ್ತದೆ. ಬಡವರು ಮತ್ತು ಮಧ್ಯಮ ವರ್ಗದವರ ವೈದ್ಯಕೀಯ ಚಿಕಿತ್ಸೆಯಲ್ಲಿನ ಸಮಸ್ಯೆಗಳನ್ನು ನಿವಾರಿಸುವಲ್ಲಿ ಈ ಯೋಜನೆ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ಯೋಜನೆಯು ಆರು ಪ್ರಮುಖ ಅಂಶಗಳಾದ ಆರೋಗ್ಯ ಗುರುತಿನ ಚೀಟಿ, ಡಿಜಿ ಡಾಕ್ಟರ್, ಆರೋಗ್ಯ ಸೌಲಭ್ಯ ನೋಂದಣಿ, ವೈಯಕ್ತಿಕ ಆರೋಗ್ಯ ದಾಖಲೆಗಳು, ಇ-ಫಾರ್ಮಸಿ ಮತ್ತು ಟೆಲಿಮೆಡಿಸಿನ್ ಅನ್ನು ಒಳಗೊಂಡಿದೆ. ಇವೆಲ್ಲವನ್ನು ಕೇಂದ್ರ ಸರ್ಕಾರವೇ ನಿರ್ವಹಿಸುತ್ತದೆ.

ಈ ಯೋಜನೆಯಲ್ಲಿನ ಖಾಸಗಿ ಪಾಲುದಾರರಿಗೆ ತಮ್ಮದೇ ಆದ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಪ್ರವೇಶಿಸಲು ಸಮಾನ ಅವಕಾಶವಿದೆ. ಈ ಎಲ್ಲ ಪ್ರಕ್ರಿಯೆಗಳು ಸರ್ಕಾರದ ಸುಪರ್ದಿನಲ್ಲಿ ನಡೆಯುತ್ತವೆ. ಈ ಯೋಜನೆಯ ಅಡಿಯಲ್ಲಿ, ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಆರೋಗ್ಯ ಗುರುತಿನ ಚೀಟಿ ಪಡೆಯುತ್ತಾನೆ. ಆ ಚೀಟಿಯಲ್ಲಿ ರೋಗಿಯ ವೈದ್ಯಕೀಯ ಪರೀಕ್ಷೆಗಳು, ರೋಗದ ವಿಧ, ವೈದ್ಯರು ನೀಡಿದ ಪ್ರಿಸ್ಕ್ರಿಪ್ಷನ್, ಔಷಧಗಳು, ಚಿಕಿತ್ಸೆಗಳು ಮತ್ತುತೆಗೆದುಕೊಂಡ ರೋಗನಿರ್ಣಯದ ವಿವರಗಳು ಹಾಗೂ ಎಲ್ಲ ರೀತಿಯವೈದ್ಯಕೀಯ ದಾಖಲೆಗಳಂತಹ ಮಾಹಿತಿಯನ್ನು ಒಳಗೊಂಡಿರುತ್ತದೆ.

ಆರೋಗ್ಯ ಗುರುತಿನ ಸಂಖ್ಯೆ(ಹೆಲ್ತ್ ಐಡಿ) ಎನ್ನುವುದು 14 ಅಂಕಿಯ ಸಂಖ್ಯೆಯಾಗಿದೆ. ವ್ಯಕ್ತಿಗಳನ್ನು ವಿಶಿಷ್ಟವಾಗಿ ಗುರುತಿಸುವ, ದೃಢೀಕರಿಸುವ ಹಾಗೂ ಆರೋಗ್ಯ ದಾಖಲೆಗಳನ್ನು(ಅವರ ಒಪ್ಪಿಗೆಯೊಂದಿಗೆ) ಸಂಬಂಧಿಸಿದ ವ್ಯವಸ್ಥೆಗಳ ಜೊತೆಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಬಳಸಬಹುದಾಗಿದೆ. ಈ ಗುರುತಿನ ಸಂಖ್ಯೆಯನ್ನು ಆ ವ್ಯಕ್ತಿಯ ಆಧಾರ್ ಅಥವಾ ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಮಾಡಬಹುದು. ವೈದ್ಯರು ಮತ್ತು ಆರೋಗ್ಯ ಸೇವಾ ಪೂರೈಕೆ ದಾರರಿಗೆ ಈ ಐಡಿ ನೀಡಿದರೆ, ಮುಂದೆ ವ್ಯಕ್ತಿಯು ತನ್ನ ಲ್ಯಾಬ್ ವರದಿಗಳು, ವೈದ್ಯರ ಚೀಟಿಗಳು ಮತ್ತು ರೋಗನಿರ್ಣಯ ವರದಿಗಳನ್ನು ಡಿಜಿಟಲ್ ಮೂಲಕವೇ ಪಡೆಯಬಹುದು. ಸಮಾಲೋಚನೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದಾಗ ವೈದ್ಯರಿಗೆ ರೋಗಿಯನ್ನು ಈ ಮೂಲಕ ಅರ್ಥೈಸಿಕೊಳ್ಳಲು ಸುಲಭವಾಗುತ್ತದೆ.

ಆರೋಗ್ಯ ಗುರುತಿನ ಚೀಟಿ ಉಚಿತವಾಗಿ ನೀಡಲಾಗುತ್ತಿದ್ದು, ಇದು ಆರೋಗ್ಯ ದತ್ತಾಂಶದ ವಿಶ್ಲೇಷಣೆಗೆ ಸಹಾಯ ಮಾಡುತ್ತದೆ. ಮಾತ್ರವಲ್ಲ, ಮುಂದಿನ ದಿನಗಳಲ್ಲಿಸರ್ಕಾರಕ್ಕೆ ಆರೋಗ್ಯ ಕಾರ್ಯಕ್ರಮಗಳನ್ನು ಇನ್ನಷ್ಟು ಉತ್ತಮವಾಗಿ ರೂಪಿಸಲು, ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಲು ಹಾಗೂ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನೆರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT