ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಿಕ ಸೇವಾ ಮುಖ್ಯ ಪರೀಕ್ಷೆ: ಅಧ್ಯಯನ- ಅಭ್ಯಾಸ ಮುಖ್ಯ

Last Updated 15 ಡಿಸೆಂಬರ್ 2021, 22:45 IST
ಅಕ್ಷರ ಗಾತ್ರ

(ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವೆಗಳ ಮುಖ್ಯಪರೀಕ್ಷೆ 2022ರ ಜನವರಿ 7 ರಿಂದ 16ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆ ಎದುರಿಸಲು ಬೇಕಾದ ಅಗತ್ಯ ಸಿದ್ಧತೆ ಕುರಿತ ವಿವರ ಇಲ್ಲಿದೆ)

ದೇಶದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆ ಪ್ರಮುಖವಾದದ್ದು.ಪ್ರತಿ ವರ್ಷ ಆಯೋಗ ನಡೆಸುವ ಈ ಪರೀಕ್ಷೆಯಲ್ಲಿ ಲಕ್ಷಾಂತರ ಆಕಾಂಕ್ಷಿಗಳು ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತಾರೆ. ಮೂರು ಹಂತಗಳಲ್ಲಿ ನಡೆಯುವ ಈ ಪರೀಕ್ಷೆಯಲ್ಲಿ ಎರಡನೇ ಹಂತವೇ ಮುಖ್ಯ ಪರೀಕ್ಷೆ. ಇದು ನಿರ್ಣಾಯಕ ಹಂತವೂ ಹೌದು. ಇದು, ಸಂದರ್ಶನಕ್ಕೆ ಅರ್ಹತೆ ನೀಡುವುದಷ್ಟೇ ಅಲ್ಲದೇ, ಐಎಎಸ್‌/ಐಪಿಎಸ್‌ನಂತಹ ಉನ್ನತ ಹುದ್ದೆಯನ್ನೂ ನಿರ್ಧಾರ ಮಾಡುವ ಮಹತ್ಪಪೂರ್ಣ ಹಂತವೂ ಹೌದು.

ಈ ಮೊದಲುಲೋಕಸೇವಾ ಆಯೋಗ ನಡೆಸಿದ್ದ ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಲು ಅರ್ಹತೆ ಪಡೆದಿರುತ್ತಾರೆ. ಈ ಅಭ್ಯರ್ಥಿಗಳು ಒಟ್ಟು 9 ಪತ್ರಿಕೆಗಳನ್ನು ಎದುರಿಸಬೇಕು. ಅವುಗಳೆಂದರೆ;

ಎರಡು ಕಡ್ಡಾಯ ಭಾಷಾ ಪತ್ರಿಕೆ. ಅದರಲ್ಲಿ ಒಂದು ಇಂಗ್ಲಿಷ್ ಮತ್ತು ಮತ್ತೊಂದು ಪ್ರಾದೇಶಿಕ ಭಾಷೆ (ತಲಾ 300 ಅಂಕ). (ಕಡ್ಡಾಯ ಭಾಷೆ ಕೇವಲ ಅರ್ಹತಾ ಪತ್ರಿಕೆಗಳಾಗಿದ್ದು ಅವುಗಳ ಅಂಕಗಳನ್ನು ಅಂತಿಮವಾಗಿ ಪರಿಗಣಿಸುವುದಿಲ್ಲ)

ಪ್ರಬಂಧ (250 ಅಂಕ)

ಸಾಮಾನ್ಯ ಅಧ್ಯಯನ- ಒಟ್ಟು 4 ಪತ್ರಿಕೆಗಳು (ತಲಾ 250 ಅಂಕ)

ಐಚ್ಛಿಕ ವಿಷಯ- 2 ಪತ್ರಿಕೆಗಳು (ತಲಾ 250 ಅಂಕ)
ಪರಿಗಣನೆಗೆ ಇರುವ ಒಟ್ಟು ಅಂಕಗಳು - 1750

ಎಲ್ಲಾ 9 ಪತ್ರಿಕೆಗಳು ವಿವರಣಾತ್ಮಕ ಪತ್ರಿಕೆಗಳಾಗಿದ್ದು, ಇವು ಅಭ್ಯರ್ಥಿಗಳ ಬುದ್ಧಿಶಕ್ತಿಯನ್ನು ಅವರ ಬರವಣಿಗೆಯ ಸಾಮರ್ಥ್ಯದ ಮೂಲಕ ಅಳೆಯಲಾಗುತ್ತದೆ. ಹಾಗಾಗಿ ಈ ಹಂತವನ್ನು ಜಯಿಸಬೇಕಾದರೆ ಕೇವಲ ಅಧ್ಯಯನದಿಂದ ಮಾತ್ರ ಸಾಧ್ಯವಾಗದು. ಬದಲಿಗೆ ಸುದೀರ್ಘ ಬರವಣಿಗೆಯ ಅಭ್ಯಾಸವೂ ಬೇಕು.

ಪ್ರಬಂಧ

ಮೂರುಗಂಟೆಗಳಲ್ಲಿ 1000 ದಿಂದ 1200 ಪದಗಳ ಮಿತಿಯಲ್ಲಿ ತಲಾ ಎರಡು ಪ್ರಬಂಧಗಳನ್ನು ಬರೆಯಬೇಕು. ಪ್ರಬಂಧ ಪ್ರಶ್ನೆಪತ್ರಿಕೆ ಅಭ್ಯರ್ಥಿಯ ಆಲೋಚನಾ ಕ್ರಮವನ್ನು ಇಡಿಯಾಗಿ ಮತ್ತು ಬಿಡಿಯಾಗಿ ಅಳೆಯುವ ಪ್ರಮುಖ ಪತ್ರಿಕೆ. ಪ್ರಬಂಧ ರಚನೆಗೆ ಪ್ರಬುದ್ಧ ವಿಚಾರಗಳನ್ನು, ಸುಲಲಿತವಾಗಿ ಮಂಡಿಸುವ ಚಾಕಚಕ್ಯತೆ ಅಗತ್ಯ. ಮುಂದೊಂದು ದಿನ ದೇಶದ ಉನ್ನತ ಹುದ್ದೆಯನ್ನು ಅಲಂಕರಿಸುವ ಅಭ್ಯರ್ಥಿಗಳ ಮನೋಧೋರಣೆ, ನಾವೀನ್ಯತೆ, ಹೊಣೆಗಾರಿಕೆ, ವಿಚಾರ ಸ್ಪಷ್ಟತೆಯಂತಹ ಗುಣಗಳನ್ನು ಪ್ರಬಂಧ ನಿರೀಕ್ಷಿಸುತ್ತದೆ ಮತ್ತು ಪರೀಕ್ಷಿಸುತ್ತದೆ. ಅಭ್ಯರ್ಥಿಗಳು ಪ್ರಬಂಧ ರಚನೆಗೆ ತನ್ನದೇ ಆದ ಕೌಶಲವನ್ನು ಬೆಳೆಸಿಕೊಳ್ಳಬೇಕು. ಪ್ರಬಂಧಕ್ಕೆಂದೇ ಪ್ರತ್ಯೇಕವಾದ ಅಣಕು ಪರೀಕ್ಷೆಗಳನ್ನು ಬರೆದು ಅಭ್ಯಸಿಸುವುದು ಬಹಳ ಮುಖ್ಯ.

ಸಾಮಾನ್ಯ ಅಧ್ಯಯನ

ಹೆಸರೇ ಸೂಚಿಸುವ ಹಾಗೆ ಇಲ್ಲಿಯ ವಿಷಯಗಳಿಗೆ ಸಾಮಾನ್ಯ ಅಧ್ಯಯನಕ್ಕೆ ತಕ್ಕುದಾದ ಅರ್ಥೈಸುವಿಕೆ ಮಾತ್ರ ಬೇಕಿದೆ. ವಿಷಯದ ಆಳಕ್ಕಿಂತ ಇಲ್ಲಿ ವಿಸ್ತಾರ ಹಾಗೂ ವಿಭಿನ್ನ ಆಯಾಮಗಳು ಮುಖ್ಯ. ಇತಿಹಾಸ, ಭೂಗೋಳ, ಸಮಾಜಶಾಸ್ತ್ರ, ರಾಜಕೀಯ ಮತ್ತು ಆಡಳಿತ, ಅಂತರರಾಷ್ಟ್ರೀಯ ಸಂಬಂಧಗಳು, ಆರ್ಥಿಕತೆ, ಪರಿಸರ, ಭದ್ರತೆ, ವಿಜ್ಞಾನ ಮತ್ತು ತಂತ್ರಜ್ಞಾನ ಇವು ಸಾಮಾನ್ಯ ಅಧ್ಯಯನದ ಮೊದಲ 3 ಪತ್ರಿಕೆಗಳಲ್ಲಿರುವ ವಿಷಯಗಳು.

ಸಾಮಾನ್ಯ ಅಧ್ಯಯನದ ಪತ್ರಿಕೆ-4ರಲ್ಲಿ ‘ನೈತಿಕತೆ ಮತ್ತು ಸಮಗ್ರತೆ’ಯ ವಿಷಯಗಳಿರುತ್ತವೆ. ಇದು ಅಭ್ಯರ್ಥಿಗಳಲ್ಲಿ ಸಕಾರಾತ್ಮಕ ಮೌಲ್ಯಗಳು ಹಾಗೂ ತಮಗೆ ಸಿಗುವ ಉನ್ನತ ಹುದ್ದೆಗಳನ್ನು ಸಮರ್ಥವಾಗಿ, ನ್ಯಾಯಬದ್ಧವಾಗಿ ನಡೆಸಿಕೊಂಡು ಹೋಗುವ ಸಾಮರ್ಥ್ಯವಿದೆಯೇ ಎಂಬುದನ್ನು ಒರೆಗೆ ಹಚ್ಚಿ ನೋಡುತ್ತದೆ. ನಾಗರಿಕ ಸೇವೆ, ಅಭ್ಯರ್ಥಿಯಲ್ಲಿ ಪ್ರಾಮಾಣಿಕತೆ, ಹೊಣೆಗಾರಿಕೆ, ಪಾರದರ್ಶಕತೆಯಂತಹ ಗುಣಗಳನ್ನು ಬಯಸುತ್ತದೆ. ಇಂಥ ವಿಷಯಗಳನ್ನು ಅಭ್ಯರ್ಥಿಗಳಲ್ಲಿ ಹುಡುಕುವ ಪ್ರಯತ್ನ ಮಾಡುತ್ತದೆ ಈ ಪತ್ರಿಕೆ.

ಒಟ್ಟಾರೆ ಸಾಮಾನ್ಯ ಅಧ್ಯಯನ ಪತ್ರಿಕೆಗಳು ಅಭ್ಯರ್ಥಿಗಳ ಗ್ರಹಿಕೆ ಹಾಗೂ ಗೃಹಿಸಿದ್ದನ್ನು ಸ್ಪಷ್ಟವಾಗಿ ಅಳವಡಿಸಿಕೊಂಡು ನಡೆಯುವ ಅವರ ಮನೋ ಇರಾದೆಯನ್ನು ಸೂಕ್ಷ್ಮವಾಗಿ ಅಳೆಯುತ್ತವೆ. ಇಲ್ಲಿ ಅಭ್ಯರ್ಥಿಗಳಿಗೆ ವಿಷಯ ಗ್ರಹಿಕೆಯ ಜೊತೆಗೆ ಬಹು ದೊಡ್ಡ ಸಮಸ್ಯೆ ಎಂದರೆ ಸಮಯದ ಅಭಾವ. ಪ್ರತಿ ಪತ್ರಿಕೆಗೂ 3 ಗಂಟೆ ಮೀಸಲಿದ್ದು 150 ರಿಂದ 250 ಪದಗಳ ಮಿತಿಯಲ್ಲಿ 20 ಪ್ರಶ್ನೆಗಳನ್ನು ಸುಮಾರು 4,000 ಪದಗಳಲ್ಲಿ ಉತ್ತಮವಾಗಿ ವಿಷಯವನ್ನು ಮಂಡಿಸಬೇಕು. ಇದು ಅಷ್ಟು ಸುಲಭದ ಕೆಲಸವಲ್ಲ. ಇಲ್ಲಿಯೂ ಅಭ್ಯರ್ಥಿಗಳ ಕೈ ಹಿಡಿಯುವುದು ಅಣಕು ಪರೀಕ್ಷೆಗಳು. ಪ್ರತಿ ಪತ್ರಿಕೆಗೆ ಕನಿಷ್ಠ 6 ರಿಂದ 8 ಅಣಕು ಪರೀಕ್ಷೆ ಬರೆದು ಅಭ್ಯಸಿಸದೆ ಹೋದರೆ, ಯುಪಿಎಸ್‌ಸಿ ಪರಿಕ್ಷಾ ಸಿದ್ಧತೆ ಅಪೂರ್ಣವಾಗುತ್ತದೆ.

ಐಚ್ಛಿಕ ವಿಷಯ

ಸಾಮಾನ್ಯ ಅಧ್ಯಯನ ಪತ್ರಿಕೆಗಳು ಹಲವು ವಿಷಯಗಳ ವಿಸ್ತಾರದ ಪರಿಚಯವನ್ನು ಮಾಡಿಕೊಟ್ಟರೆ, ಐಚ್ಛಿಕ ವಿಷಯವು ಆಯಾ ಕ್ಷೇತ್ರದ ಆಳವನ್ನು ಪರಿಚಯಿಸುತ್ತದೆ. ಕೇಂದ್ರ ಲೋಕಸೇವಾ ಆಯೋಗವು ಇತಿಹಾಸ, ಭೌತಶಾಸ್ತ್ರ, ಕಾನೂನು, ಸಾಹಿತ್ಯ ಹೀಗೆ ಸುಮಾರು 26 ವಿಷಯಗಳನ್ನು ಐಚ್ಛಿಕ ವಿಷಯವನ್ನಾಗಿ ಆರಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಅಭ್ಯರ್ಥಿಗಳು ಪದವಿಯ ವಿಷಯವನ್ನೇ ಆರಿಸಿಕೊಳ್ಳಬೇಕೆಂದಿಲ್ಲ. ಉದಾಹರಣೆಗೆ ಮೆಕ್ಯಾನಿಕಲ್‌ ಎಂಜಿನಿಯರ್ ಪದವೀಧರರು ಆಸಕ್ತಿ ಇದ್ದರೆ ಕನ್ನಡ ಸಾಹಿತ್ಯವನ್ನು ಆರಿಸಿಕೊಂಡು ಬರೆಯಬಹುದು. ಒಂದೇ ಐಚ್ಛಿಕ ವಿಷಯದ 2 ಪತ್ರಿಕೆಗಳನ್ನು ಅಭ್ಯರ್ಥಿಗಳು ಎದುರಿಸಬೇಕು. ಇಲ್ಲಿಯೂ ಅಭ್ಯರ್ಥಿಗಳು ಅಧ್ಯಯನ ನಡೆಸುವುದರ ಜೊತೆಗೆ ದೊಡ್ಡಮಟ್ಟದಲ್ಲಿ ಅಣುಕು ಪರೀಕ್ಷೆಯನ್ನು ಬರೆದೇ ಅಭ್ಯಾಸ ಮಾಡಬೇಕಿದೆ.

ಐದು ದಿನಗಳ ಕಾಲ ನಡೆಯುವ 9 ಪತ್ರಿಕೆಗಳ ಮುಖ್ಯ ಪರೀಕ್ಷೆಯು ಅಭ್ಯರ್ಥಿಯ ಬುದ್ಧಿಗಷ್ಟೇ ಅಲ್ಲದೇ, ಅವರ ದೈಹಿಕ, ಮಾನಸಿಕ ಹಾಗೂ ಭಾವನಾ ಶಕ್ತಿಗಳಿಗೂ ದೊಡ್ಡ ಸವಾಲಾಗಿರುತ್ತದೆ. ಹಾಗಾಗಿ ಇವೆಲ್ಲವನ್ನೂ ಎದುರಿಸಿ ಮುನ್ನುಗ್ಗುವವರು ಮಾತ್ರ ಸಂದರ್ಶನದ ಹಂತಕ್ಕೆ ತಲುಪುವಲ್ಲಿ ಯಶಸ್ವಿಯಾಗುತ್ತಾರೆ.


–ಪ್ರಶಾಂತ್ ಶ್ರೀನಿವಾಸ್

(ಲೇಖಕರು: ಡೈರೆಕ್ಟರ್ ಅಕಾಡೆಮಿಕ್‌,ಇಂಡಿಯಾ ಫಾರ್ ಐಎಎಸ್ ಅಕಾಡೆಮಿ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT