ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾ ವಾಣಿ: ಉಪ ಕುಲಪತಿಗಳ ನೇಮಕಾತಿ - ತಮಿಳುನಾಡು ಮಸೂದೆ ಬಗ್ಗೆ ಮಾಹಿತಿ

Last Updated 27 ಜುಲೈ 2022, 20:30 IST
ಅಕ್ಷರ ಗಾತ್ರ

ಸುದ್ದಿಯಲ್ಲಿ ಇರುವ ಕಾರಣ ?

* ಸ್ವಾಭಾವಿಕವಾಗಿ ರಾಜ್ಯದ ರಾಜ್ಯಪಾಲರುಗಳು ಉಪಕುಲಪತಿಗಳನ್ನು ನೇಮಿಸುತ್ತಾರೆ. ಆದರೆ ಇತ್ತೀಚಿಗೆ ತಮಿಳುನಾಡು ವಿಧಾನಸಭೆ ಎರಡು ಮಸೂದೆಗಳನ್ನು ಅಂಗೀಕರಿಸಿದ್ದು, ರಾಜ್ಯಪಾಲರ ನೇಮಕಾತಿ ಅಧಿಕಾರವನ್ನು ರಾಜ್ಯಸರ್ಕಾರಕ್ಕೆ ವರ್ಗಾಯಿಸುವ ನಿಟ್ಟಿನಲ್ಲಿ ಶಾಸನವನ್ನು ಜಾರಿಗೆ ತರಲು ಮುಂದಾಗಿದೆ.

* ಇತರೆ ರಾಜ್ಯಗಳ ಬಗ್ಗೆ ಗಮನಿಸುವುದಾದರೆ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದ ಸರ್ಕಾರಗಳು ಈಗಾಗಲೇ ರಾಜ್ಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಬದಲಾವಣೆಗಳನ್ನು ತಂದಿದ್ದು, ರಾಜ್ಯಪಾಲರ ಬಳಿಯಿದ್ದ ಅಧಿಕಾರವನ್ನು ರಾಜ್ಯ ಸರ್ಕಾರಗಳು ತಮ್ಮ ಕೈಗೆ ತೆಗೆದುಕೊಂಡಿದೆ.

* ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳನ್ನು ಹೊರತುಪಡಿಸಿ ಇತರೆ ರಾಜ್ಯ ಸರ್ಕಾರಗಳಾದ ಕರ್ನಾಟಕ, ಜಾರ್ಖಂಡ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ, ರಾಜ್ಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳನ್ನು ನೇಮಿಸುವ ಸಂದರ್ಭದಲ್ಲಿ ಸರ್ಕಾರದೊಂದಿಗೆ ಸಮಾಲೋಚಿಸು ತಕ್ಕದ್ದು ಹಾಗೂ ಸರ್ಕಾರದ ಸಲಹೆಗೆ ಅನುಗುಣವಾಗಿ ರಾಜ್ಯಪಾಲರು ಉಪಕುಲಪತಿಗಳನ್ನು ನೇಮಿಸ ತಕ್ಕದ್ದು.

* ಕೆಲ ರಾಜ್ಯಗಳಲ್ಲಿ ಉಪ ಕುಲಪತಿಗಳನ್ನು ನೇಮಿಸುವ ಸಂದರ್ಭದಲ್ಲಿ, ರಾಜ್ಯಪಾಲರು ಸಮಾಲೋಚನೆಯ ಮೂಲಕ ಉಪಕುಲಪತಿಗಳನ್ನು ನೇಮಿಸುತ್ತಾರೆ ಆದರೆ ಕೆಲ ರಾಜ್ಯಗಳಲ್ಲಿ ಉಪ ಕುಲಪತಿಗಳನ್ನು ನೇಮಿಸುವ ಸಂದರ್ಭದಲ್ಲಿ ರಾಜ್ಯಪಾಲರು ಕಡ್ಡಾಯವಾಗಿ ರಾಜ್ಯ ಸರ್ಕಾರದ ಸಲಹೆಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ.

ಪ್ರಸ್ತುತ ತುಳುನಾಡಿನ ಬೆಳವಣಿಗೆಗಳು ?

* ಪ್ರಸ್ತುತ ಮಸೂದೆ ಅಂಗೀಕಾರವಾಗುವ ಮುನ್ನ, ರಾಜ್ಯದ ರಾಜ್ಯಪಾಲರು ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿ ನಂತರ ತಮ್ಮ ವಿವೇಚನೆಗೆ ಅನುಗುಣವಾಗಿ ಉಪ ಕುಲಪತಿಗಳನ್ನು ನೇಮಿಸುವ ಅಧಿಕಾರವನ್ನು ಹೊಂದಿದ್ದರು. ಆದರೆ ಪ್ರಸ್ತುತ ಮಸೂದೆ ಕೆಲ ಬದಲಾವಣೆಗಳನ್ನು ತಂದಿದ್ದು, ರಾಜ್ಯ ಸರ್ಕಾರ ಆಯ್ಕೆ ಸಮಿತಿಯನ್ನು ರಚಿಸುವ ಅಧಿಕಾರವನ್ನು ಹೊಂದಿರುತ್ತದೆ.

* ರಾಜ್ಯ ಸರ್ಕಾರದಿಂದ ರಚನೆಯಾದ ಆಯ್ಕೆ ಸಮಿತಿಯು ಮೂರು ಸದಸ್ಯರ ಹೆಸರನ್ನು ಶಿಫಾರಸು ಮಾಡುತ್ತದೆ, ಈ ಮೂರು ಸದಸ್ಯರಲ್ಲಿ ಒಬ್ಬರನ್ನು ರಾಜ್ಯಪಾಲರು ಕಡ್ಡಾಯವಾಗಿ ಆಯ್ಕೆಮಾಡುವ ನಿಬಂಧನೆಯನ್ನು ಹೇರಲಾಗಿದೆ.

* ಇದಲ್ಲದೆ ಉಪಕುಲಪತಿಗಳನ್ನು ತೆಗೆದುಹಾಕುವ ಪರಿಸ್ಥಿತಿ ಉದ್ಭವವಾದರೆ ರಾಜ್ಯ ಸರ್ಕಾರಗಳು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬಹುದು ಹಾಗೂ ರಾಜ್ಯ ಸರ್ಕಾರಗಳ ನಿರ್ಧಾರವೇ ಅಂತಿಮವಾಗಿರುತ್ತದೆ ಮತ್ತು ರಾಜ್ಯಪಾಲರು ಯಾವುದೇ ಪ್ರತಿರೋಧವನ್ನು ಒಡ್ಡುವ ಅಧಿಕಾರವಿರುವುದಿಲ್ಲ.

* ಉಪಕುಲಪತಿಗಳನ್ನು ತೆಗೆದುಹಾಕುವ ಸಂದರ್ಭದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಅಥವಾ ಮುಖ್ಯ ಕಾರ್ಯದರ್ಶಿಯ ಹುದ್ದೆಯಲ್ಲಿ ನಿವೃತ್ತಿಯಾಗಿರುವ ಅಧಿಕಾರಿಯ ತನಿಖಾ ತಂಡವನ್ನು ರಚಿಸಲಾಗುತ್ತದೆ.

* ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವವಿರುವ ತನಿಖಾ ತಂಡ ಅಥವಾ ನಿವೃತ್ತ ಅಧಿಕಾರಿಯ ತನಿಖಾ ತಂಡ ಆರೋಪ ಸಾಬೀತಾಗಿದೆ ಎಂದು ದೃಢೀಕರಿಸಿದರೇ ರಾಜ್ಯ ಸರ್ಕಾರ ಉಪಕುಲಪತಿಗಳನ್ನು ತೆಗೆದುಹಾಕಬಹುದು.

ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ರಾಜ್ಯಪಾಲರ ಪಾತ್ರ ?

* ಬಹುತೇಕ ರಾಜ್ಯಗಳಲ್ಲಿ ರಾಜ್ಯದ ರಾಜ್ಯಪಾಲರುಗಳು ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಾರೆ.

* ರಾಜ್ಯಪಾಲರ ಕಾರ್ಯವನ್ನು ನಿರ್ವಹಿಸುವ ಸಂದರ್ಭದಲ್ಲಿ ರಾಜ್ಯ ಮಂತ್ರಿ ಮಂಡಲದ ಸಲಹೆಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಅವಕಾಶವಿರುತ್ತದೆ, ಆದರೆ ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿಗಳಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ರಾಜ್ಯದ ಮಂತ್ರಿಮಂಡಲದ ಸಲಹೆಯನ್ನು ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ ಬದಲಾಗಿ ಸ್ವಂತ ವಿವೇಚನೆಯ ಅಧಿಕಾರದ ಮೇಲೆ ಕಾರ್ಯನಿರ್ವಹಿಸುವ ಅಧಿಕಾರವನ್ನು ಹೊಂದಿರುತ್ತಾರೆ.

ಕೇಂದ್ರ ವಿಶ್ವವಿದ್ಯಾಲಯಗಳ ನಿಯಮ ?

* ಕೇಂದ್ರ ವಿಶ್ವವಿದ್ಯಾಲಯ ಕಾಯ್ದೆ 2009 ರ ಅನುಗುಣವಾಗಿ ರಾಷ್ಟ್ರಪತಿಗಳು ಕೇಂದ್ರ ವಿಶ್ವವಿದ್ಯಾಲಯಗಳ ಸಂದರ್ಶಕನ ಕಾರ್ಯವನ್ನು ನಿರ್ವಹಿಸುತ್ತಾರೆ.

* ಸಂದರ್ಶಕನ ಕಾರ್ಯವೆಂದರೆ ಸ್ನಾತಕೋತ್ತರ ಪದವಿಯನ್ನು ನೀಡುವ ಸಂದರ್ಭದಲ್ಲಿ ಅದರ ಅಧ್ಯಕ್ಷತೆಯನ್ನು ವಹಿಸುವುದು, ಕೇಂದ್ರ ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ನೇಮಿಸುವುದು ಹಾಗೂ ಇತರೆ ಸಾಂಪ್ರದಾಯಿಕ ಕೆಲಸಗಳನ್ನು ನಿರ್ವಹಿಸುತ್ತಾರೆ.

ವಿಶೇಷ ಸೂಚನೆ : ಕೇಂದ್ರ ವಿಶ್ವವಿದ್ಯಾಲಯಗಳ ಕುಲಪತಿಗಳನ್ನು ರಾಷ್ಟ್ರಪತಿಗಳು ಸಂದರ್ಶಕನ ಸ್ಥಾನದಿಂದ ನೇಮಿಸುತ್ತಾರೆ ವಿನಹ ರಾಷ್ಟ್ರಪತಿಗಳ ಅಧಿಕಾರದಿಂದಲ್ಲ.

* ರಾಷ್ಟ್ರಪತಿಗಳು ಕೇಂದ್ರ ವಿಶ್ವವಿದ್ಯಾಲಯಗಳ ಸಂದರ್ಶಕನಾಗಿ, ವಿಶ್ವವಿದ್ಯಾಲಯಗಳ ತಪಾಸಣೆ, ವಿಶ್ವವಿದ್ಯಾಲಯಗಳ ಪ್ರಗತಿ ಹಾಗೂ ಇತರ ವಿಚಾರಗಳ ಮೇಲೆ ಪರಿವೀಕ್ಷಣ ಅಧಿಕಾರವನ್ನು ಹೊಂದಿರುತ್ತಾರೆ.

ವಿಶ್ವವಿದ್ಯಾಲಯಗಳ ಅನುದಾನ ಆಯೋಗ ?

* ಸಂವಿಧಾನಾತ್ಮಕವಾಗಿ ಅರ್ಥೈಸಿಕೊಳ್ಳುವುದಾದರೆ, ಶಿಕ್ಷಣವನ್ನು ಸಮವರ್ತಕ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಉನ್ನತ ಶೈಕ್ಷಣಿಕ ಸಂಸ್ಥೆಗಳ, ಉನ್ನತ ಶೈಕ್ಷಣಿಕ ಸಂಶೋಧನಾ ಸಂಸ್ಥೆಗಳ, ಉನ್ನತ ವೈಜ್ಞಾನಿಕ ಮತ್ತು ತಾಂತ್ರಿಕ ಸಂಸ್ಥೆಗಳ ನಡುವೆ ಸಮನ್ವಯತೆಯನ್ನು ತರುವ ಕಾರ್ಯವಾಗಲಿ ಅಥವಾ ಮಾನದಂಡಗಳನ್ನು ನಿಗದಿಪಡಿಸುವ ವಿಚಾರವಾಗಲಿ ಸಂಸತ್ತಿನ ಅಧಿಕಾರವಾಗಿರುತ್ತದೆ. ಏಕೆಂದರೆ ಉನ್ನತ ಶೈಕ್ಷಣಿಕ ಸಂಸ್ಥೆಗಳಿಗೆ ಸಂಬಂಧಪಟ್ಟ ಅಧಿಕಾರಗಳನ್ನು ಕೇಂದ್ರ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಸಮವರ್ತಕ ಪಟ್ಟಿ ಮತ್ತು ಕೇಂದ್ರ ಪಟ್ಟಿಯಲ್ಲಿ ಉಲ್ಲೇಖಿಸಿರುವ ಕಾರಣದಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅಧಿಕಾರವಿದೆ ಎಂದು ಪರಿಗಣಿಸಬಹುದು.

* ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಹುದ್ದೆಗಳಿಗೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ರೂಪಿಸುವ ಅಧಿಕಾರ ವಿಶ್ವವಿದ್ಯಾಲಯಗಳ ಅನುದಾನ ಆಯೋಗದ ಬಳಿ ಇರುತ್ತದೆ.

* ಇದಲ್ಲದೆ ವಿದೇಶಿ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಹಭಾಗಿತ್ವದಲ್ಲಿ ಭಾರತೀಯ ಉನ್ನತ ಶೈಕ್ಷಣಿಕ ಸಂಸ್ಥೆಗಳು ಪದವಿ ಹಾಗೂ ಜಂಟಿ ಪದವಿಗಳನ್ನು ಕಲ್ಪಿಸುವ ಅಧಿಕಾರವಿರುತ್ತದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳ ಅನುದಾನ ಆಯೋಗ ನಿಯಮಾವಳಿಗಳನ್ನು ರೂಪಿಸಲು ಸಂಪೂರ್ಣ ಅಧಿಕಾರವನ್ನು ಹೊಂದಿದೆ.

* ವಿಶ್ವವಿದ್ಯಾಲಯಗಳ ಅನುದಾನ ಆಯೋಗ ನಿಯಮಾವಳಿಗಳನ್ನು 2018 ರಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದು, ಈ ನಿಯಮಾವಳಿಗಳ ಪ್ರಕಾರ ಕೇಂದ್ರ ವಿಶ್ವವಿದ್ಯಾಲಯಗಳ ಉಪಕುಲಪತಿಗಳನ್ನು ಸಂದರ್ಶಕರಾಗಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರಪತಿಗಳು ನೇಮಿಸುವ ಅಧಿಕಾರವನ್ನು ಹೊಂದಿದ್ದರೆ, ರಾಜ್ಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳನ್ನು ನೇಮಿಸುವ ಅಧಿಕಾರ ರಾಜ್ಯಪಾಲರ ಬಳಿ ಇರುತ್ತದೆ.

* ಪ್ರಸ್ತುತ ತಮಿಳುನಾಡು ಸರ್ಕಾರದ ನಡೆಯನ್ನು ಗಮನಿಸಿದರೆ 2018 ರ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿದೆ.

ನ್ಯಾಯಾಂಗದ ನಿಲುವು ?

* ಸುಪ್ರೀಂ ಕೋರ್ಟ್ ಹಲವಾರು ಪ್ರಕರಣಗಳಲ್ಲಿ ವಿಶ್ವವಿದ್ಯಾಲಯಗಳ ಅನುದಾನ ಆಯೋಗದ ನಿಯಮಾವಳಿಗಳು ಅಂತಿಮವಾಗಿರುತ್ತದೆ ಎಂದು ಉಲ್ಲೇಖಿಸಿದೆ. ಈ ನಿಯಮಾವಳಿಗಳನ್ನು ಉಲ್ಲಂಘಿಸಿದರೆ ಶಾಸನೀಯ ಮಾನದಂಡಗಳನ್ನು ಉಲ್ಲಂಘಿಸಿದಂತೆ ಎನ್ನುವ ತೀರ್ಪನ್ನು ಹಲವಾರು ಪ್ರಕರಣಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುತ್ತದೆ.

* ರಾಜ್ಯದ ಶಾಸನ ಮತ್ತು ಕೇಂದ್ರದ ಶಾಸನದ ನಡುವೆ ಘರ್ಷಣೆ ಉಂಟಾದರೆ ಕೇಂದ್ರದ ಶಾಸನ ಅಸ್ತಿತ್ವದಲ್ಲಿರುತ್ತದೆ ಎಂದು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದ್ದು, ಪ್ರಸ್ತುತ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸರ್ಕಾರಗಳ ಇತ್ತೀಚಿನ ನಡೆಗಳು ಮುಂದಿನ ದಿನಗಳಲ್ಲಿ ಅಸ್ತಿತ್ವವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

* ವಿಶ್ವವಿದ್ಯಾಲಯಗಳು ಸ್ವಾತಂತ್ರ್ಯಪೂರ್ವದಿಂದಲೂ ಕೂಡ ಹಲವಾರು ರಚನಾತ್ಮಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದು, ವಿಶ್ವವಿದ್ಯಾಲಯಗಳ ಘನತೆಯನ್ನು ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳುವುದು ಎಲ್ಲ ಸರ್ಕಾರಗಳ ಆದ್ಯ ಕರ್ತವ್ಯವಾಗಿರುತ್ತದೆ.

ಪ್ರಶ್ನೋತ್ತರಗಳು :

1. ಇತ್ತೀಚಿಗೆ ಕೆಳಗಿನ ಯಾವ ರಾಜ್ಯ, ರಾಜ್ಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಎರಡು ಮಸೂದೆಗಳನ್ನು ಅಂಗೀಕರಿಸಿದೆ?

ಎ. ತಮಿಳುನಾಡು.

ಬಿ. ಕರ್ನಾಟಕ.

ಸಿ. ಆಂಧ್ರಪ್ರದೇಶ.

ಡಿ. ಅರುಣಾಚಲ ಪ್ರದೇಶ.

ಉತ್ತರ : ಎ

2. ಕೆಳಗಿನ ಯಾವ ಕಾಯ್ದೆಗಳ ಪ್ರಕಾರ ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ ರಾಷ್ಟ್ರಪತಿಗಳನ್ನು ಸಂದರ್ಶಕರೆಂದು ಪರಿಗಣಿಸಲಾಗುತ್ತದೆ?

ಎ. ಕೇಂದ್ರ ವಿಶ್ವವಿದ್ಯಾಲಯಗಳ ಕಾಯ್ದೆ 2018.

ಬಿ. ಕೇಂದ್ರ ವಿಶ್ವವಿದ್ಯಾಲಯಗಳ ಕಾಯ್ದೆ 2016.

ಸಿ. ಕೇಂದ್ರ ವಿಶ್ವವಿದ್ಯಾಲಯಗಳ ಕಾಯ್ದೆ 2014.

ಡಿ. ಕೇಂದ್ರ ವಿಶ್ವವಿದ್ಯಾಲಯಗಳ ಕಾಯ್ದೆ 2009.

ಉತ್ತರ : ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT