ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರಿಂಗ್‌ಗೂ ಇವೆ ಪರ್ಯಾಯಗಳು: ಇಲ್ಲಿದೆ ಕೋರ್ಸ್‌ ಆಯ್ಕೆಗಳ ವಿವರ

Last Updated 11 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಸಿಇಟಿ ಫಲಿತಾಂಶ ಬಂದ ನಂತರ, ಅನೇಕ ಪೋಷಕರು ಮಕ್ಕಳ ಅಂಕಗಳನ್ನು ನೋಡಿ ತೊಳಲಾಟದಲ್ಲಿದ್ದಾರೆ. ಪಿಯುಸಿಯಲ್ಲಿ ಉತ್ತಮ ಅಂಕ ಪಡೆದು, ಸಿಇಟಿ ರ‍್ಯಾಂಕಿಂಗ್‌ನಲ್ಲಿ ಸ್ವಲ್ಪ ವ್ಯತ್ಯಾಸವಾಗಿ ತಾವು ಬಯಸಿದ ಎಂಜಿನಿಯರಿಂಗ್ ಕೋರ್ಸ್‌ಗೆ ಪ್ರವೇಶ ಸಿಗದಿರುವುದು, ಒಂದು ವೇಳೆ ಸಿಕ್ಕಿದರೂ ದುಬಾರಿ ಶುಲ್ಕ ಇತ್ಯಾದಿ ಆತಂಕಗಳು ಅವರನ್ನು ಕಾಡುತ್ತಿವೆ. ಎಂಜಿನಿಯರಿಂಗ್‌ ಬಿಟ್ಟು ಪರ್ಯಾಯವಾಗಿ ಇನ್ಯಾವ ಕೋರ್ಸ್‌ಗಳಿವೆ ಎಂದು ಚಿಂತಿಸುತ್ತಿದ್ದಾರೆ.

ಹಾಗಾದರೆ, ಇಂಥ ಪರಿಸ್ಥಿತಿಯಲ್ಲಿ ಎಂಜಿನಿಯರಿಂಗ್ ಓದಬೇಕೆಂಬ ಆಸೆ ಇಟ್ಟುಕೊಂಡಿರವವರು ಏನು ಮಾಡಬಹುದು. ಕಡಿಮೆ ಶುಲ್ಕದಲ್ಲಿ, ಎಂಜಿನಿಯರಿಂಗ್‌ ಪದವಿಗೆ ಪರ್ಯಾಯವಾದ ಹಾಗೂ ಸಮಾನದ ಯಾವ ಕೋರ್ಸ್‌ಗಳನ್ನು ಮಾಡಬಹುದು ಎಂಬ ಪ್ರಶ್ನೆಗೆ ಶಿಕ್ಷಣ ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ;

ಪರ್ಯಾಯ ಕೋರ್ಸ್‌ಗಳು ಯಾವುವು?

ಎಂಜಿನಿಯರಿಂಗ್ ಪದವಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ತಜ್ಞರು ಹೇಳಿದ್ದರೂ, ಆ ಪದವಿಯಲ್ಲಿರುವ ಕಂಪ್ಯೂಟರ್ ಸೈನ್ಸ್ ಶಾಖೆ(ಬ್ರಾಂಚ್)ಯೇ ಬೇಕು ಎನ್ನುವವರ ಸಂಖ್ಯೆ ಹೆಚ್ಚಿದೆ. ಇಂಥ ಕೋರ್ಸ್‌ಗಳಿಗೆ ಬೇಡಿಕೆಯೂ ಹೆಚ್ಚು, ಶುಲ್ಕವೂ ದುಬಾರಿ. ಈ ಹಿನ್ನೆಲೆಯಲ್ಲಿ ಎಂಜಿನಿಯರಿಂಗ್‌ನಲ್ಲಿ ಕಂಪ್ಯೂಟರ್ ಸೈನ್ಸ್ ಸೀಟ್‌ ಸಿಗದವರು /ಹೋಗಲಾಗದವರು ಬಿಸಿಎ ಅಥವಾ ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್) ಮಾಡಬಹುದು. ಅದೇ ರೀತಿ, ಎಂಜಿನಿಯರಿಂಗ್ (ಎಲೆಕ್ಟ್ರಿಕಲ್) ಬದಲು ಬಿ.ಎಸ್ಸಿ (ಅಪ್ಲೈಡ್ ಫಿಸಿಕ್ಸ್). ಎಲೆಕ್ಟಾನಿಕ್ಸ್ ಬದಲು ಬಿ.ಎಸ್ಸಿ (ಎಲೆಕ್ಟ್ರಾನಿಕ್ಸ್), ಸಿವಿಲ್ ಎಂಜಿನಿಯರಿಂಗ್‌ ಬದಲು ಬಿ.ಎಸ್ಸಿ (ಜಿಯಾಲಜಿ), ಕೆಮಿಕಲ್ ಎಂಜಿನಿಯರಿಂಗ್ ಬದಲು ಬಿ.ಎಸ್ಸಿ (ಕೆಮಿಸ್ಟ್ರಿ) ಮಾಡಬಹುದು. ಇದಲ್ಲದೇ, ಬಿಎಸ್ಸಿಯಲ್ಲಿ ಏರೊನಾಟಿಕಲ್ ಎಂಜಿನಿಯರ್‌ ಕೂಡ ಇದೆ. ಎಂಜಿಯರಿಂಗ್‌ಗೆ ಇರುವ ಇಂಥ ಪರ್ಯಾಯ ಕೋರ್ಸ್‌ಗಳ ನಂತರ ಉನ್ನತ ಅಧ್ಯಯನದ ಜೊತೆಗೆ, ಉದ್ಯೋಗಾವಕಾಶಗಳೂ ವಿಫುಲವಾಗಿವೆ. ಈ ಪರ್ಯಾಯ ಕೋರ್ಸ್‌ಗಳ ಜೊತೆಗೆ ಅರೆಕಾಲಿಕ ಕೌಶಲಾಭಿವೃದ್ಧಿ ಕೋರ್ಸ್‌ಗಳನ್ನು ಮಾಡಿದರೆ, ಎಂಜಿನಿಯರಿಂಗ್ ಕೋರ್ಸ್‌ಗೆ ಸರಿಸಮಾನವಾದ ತಜ್ಞತೆಯನ್ನು ಪಡೆಯಬಹುದು ಎನ್ನುತ್ತಾರೆ ಶಿಕ್ಷಣ ತಜ್ಞ ಹಾಗೂ ವೃತ್ತಿಪರ ಸಲಹೆಗಾರ ಪ್ರದೀಪ್ ವೆಂಕಟರಾಮ್.

ಇಷ್ಟೇ ಅಲ್ಲ‌…

ಎಂಜಿನಿಯರಿಂಗ್ ಪದವಿಯಷ್ಟೇ ಪ್ರಾಮುಖ್ಯವಾಗಿರುವ, ಆ ಶಿಕ್ಷಣದಲ್ಲಿ ಕಲಿಸುವಂತಹ ಡೇಟಾ ಸೈನ್ಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಮಷೀನ್ ಲರ್ನಿಂಗ್ ವಿಷಯಗಳಲ್ಲಿ ಬಿಎಸ್ಸಿ ಪದವಿಗಳಿವೆ. ಈ ಪದವಿ ಮೂಲಕ ಎಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ಪಡೆದು ಮುಂದುವರಿಯಬಹುದು ಎನ್ನುತ್ತಾರೆ ಬೆಂಗಳೂರಿನ ವಿಡಿಯ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಗುರುರಾಜ್ ಎಸ್. ದಾವಣಗೆರೆ.

ಇದಲ್ಲದೇ, ಆ‍್ಯನಿಮೇಷನ್‌, ಬಯೋಟೆಕ್ನಾಲಜಿ, ಇನ್ಸ್ಟ್ರುಮೆಂಟೇಷನ್, ಕಂಪ್ಯೂಟರ್ ಸೈನ್ಸ್, ಫ್ಯಾಷನ್ ಟೆಕ್ನಾಲಜಿ ಆ್ಯಂಡ್‌ ಅಪಾರೆಲ್ ಡಿಸೈನ್, ಏವಿಯೇಷನ್, ಡ್ರೋನ್ ಟೆಕ್ನಾಲಜಿ ,ಪ್ರಾಡಕ್ಟ್ ಡಿಸೈನಿಂಗ್, ಮ್ಯಾನುಫ್ಯಾಕ್ಚರಿಂಗ್ ಸೈನ್ಸ್ ವಿಷಯಗಳಲ್ಲಿ ಬಿಎಸ್ಸಿ ಪದವಿ ಪಡೆದು ನಂತರ ಉನ್ನತ ಅಧ್ಯಯನ ಇಲ್ಲವೇ ಆಯಾ ಕ್ಷೇತ್ರಗಳಲ್ಲಿ ಕೆಲಸ ಗಿಟ್ಟಿಸಬಹುದು ಎನ್ನುತ್ತಾರೆ ಅವರು.

ಭಾರತದ ಬಹುಪಾಲು ವಿಶ್ವವಿದ್ಯಾಲಯಗಳಲ್ಲಿ ಈ ಕೋರ್ಸ್‌ಗಳು ಇವೆ. ಎಂಜಿನಿಯರಿಂಗ್ ಪದವಿಯನ್ನೇ ಓದಬೇಕೆನ್ನುವವರು ಎಸ್ಸೆಸ್ಸೆಲ್ಸಿ ಅಂಕಗಳ ಆಧಾರದ ಮೇಲೆ ಡಿಪ್ಲೊಮಾ ಇನ್ ಎಂಜಿನಿಯರಿಂಗ್ ಮುಗಿಸಿ ಲ್ಯಾಟರಲ್ ಎಂಟ್ರಿ ವಿಧಾನದಲ್ಲಿ ಎರಡನೇ ವರ್ಷದ ಎಂಜಿನಿಯರಿಂಗ್‌ಗೆ ನೇರ ಪ್ರವೇಶ ಪಡೆಯಬಹುದು ಎನ್ನುವುದು ಅವರ ಸಲಹೆ.

ಬೇರೆ ದಾರಿಗಳೂ ಇವೆ..

ಸಿಇಟಿ ಮೂಲಕ ಎಂಜಿನಿಯರಿಂಗ್‌ ಕೋರ್ಸ್‌ ಮಾಡಲು ಸಾಧ್ಯವಾಗದೇ ಇದ್ದರೂ ತಾಂತ್ರಿಕ ಕ್ಷೇತ್ರದಲ್ಲಿ ಮುಂದುವರಿಯಲೇಬೇಕು ಎನ್ನುವವರು ಡಿಪ್ಲೊಮಾ, ಪಾಲಿಟೆಕ್ನಿಕ್ ಮಾಡಬಹುದು. ಇದನ್ನು ಮುಗಿಸಿದ ನಂತರ ಕಾಲೇಜಿಗೆ ಹೋಗದೆಯೂ ಎಂಜಿನಿಯರಿಂಗ್ ಪದವಿಗೆ ಸಮನಾದ ಡಿಗ್ರಿ ಪಡೆಯಬೇಕು ಎನ್ನುವವರು ಎಎಂಐಇ (ಅಸೋಸಿಯೇಟೇಡ್‌ ಮೆಂಬರ್‌ ಆಫ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರ್ಸ್‌)ನಲ್ಲಿರುವ ಕೋರ್ಸ್‌ಗಳನ್ನು ಕಲಿಯಬಹುದು. ಇವು ಬಿ.ಟೆಕ್‌ ಹಾಗೂ ಎಂ.ಟೆಕ್‌ ಕೋರ್ಸ್‌ಗಳಿಗೆ ಸಮನಾಗಿವೆ. ಎಎಂಐಇಯು ಬಿ.ಟೆಕ್ ಮತ್ತು ಎಂ.ಟೆಕ್ ಕೋರ್ಸ್‌ಗಳಿಗೆ ಸಮನಾದ ಡಿಗ್ರಿಗಳನ್ನು ನೀಡುತ್ತದೆಎನ್ನುತ್ತಾರೆ ಮತ್ತೊಬ್ಬ ಶಿಕ್ಷಣ ತಜ್ಞ, ಸ್ಮಾರ್ಟ್‌ ಸೆರಬ್ರಮ್ ಸಂಸ್ಥೆಯ ನಿರ್ದೇಶಕ ವಿ. ವೆಂಕಟ ಸುಬ್ಬರಾವ್.

‘ಎಎಂಐಇ’ ಕೋರ್ಸ್‌ ಪ್ರವೇಶಕ್ಕೆ ದ್ವಿತೀಯ ಪಿಯುಸಿ, ಡಿಪ್ಲೊಮಾ ಮತ್ತು ಕೆಲಸದ ಅನುಭವ ಇರಬೇಕು. ಇದರ ಜತೆ ಐಇಟಿಇಯ (ಇನ್‌ಸ್ಟಿಟ್ಯೂಟ್‌ ಎಲೆಕ್ಟ್ರಾನಿಕ್ಸ್‌ ಆ್ಯಂಡ್ ಟೆಲಿಕಮ್ಯುನಿಕೇಷನ್‌ ಎಂಜಿನಿಯರ್ಸ್‌) ಆಯ್ಕೆಯೂ ಇದೆ. ಇದರಲ್ಲಿ ಗ್ರ್ಯಾಡ್‌ ಐಇಟಿಇ– ಡೀಪ್‌ ಐಇಟಿಇಯೂ ಅಂತ ಎರಡು ಇವೆ. ಇದಕ್ಕೂ ದ್ವಿತೀಯ ಪಿಯು ಆಗಿರಬೇಕು. ಇವೆಲ್ಲ ಕೋರ್ಸ್‌ಗಳು ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿವೆ’ ಎಂದು ಅವರು ವಿವರಿಸುತ್ತಾರೆ. ಇನ್ನೊಂದು ಸರಳ ಮಾರ್ಗವೆಂದರೆ, ಎನ್‌ಟಿಟಿಎಫ್‌ (ನೆಟ್ಟೂರು ಟೆಕ್ನಿಕಲ್‌ ಟ್ರೇನಿಂಗ್ ಫೌಂಡೇಷನ್‌) ಕೋರ್ಸ್‌ ಮೂಲಕವೂ ತಾಂತ್ರಿಕ ಕೌಶಲ ಪಡೆಯಲು ಸಾಧ್ಯವಿದೆ’ ಎನ್ನುತ್ತಾರೆ ಅವರು.

ಹೀಗಾಗಿ, ವೃತ್ತಿಜೀವನದ ಗುರಿಯನ್ನು ಸಾಧಿಸಲು ಎಂಜಿನಿಯರಿಂಗ್ ಕೋರ್ಸ್ ಅಲ್ಲದೆ ಅನೇಕ ಪರ್ಯಾಯ ಮಾರ್ಗಗಳಿವೆ‌.‌ ಈ ಕೋರ್ಸ್‌ಗಳಿಗೆ ತಕ್ಕಮಟ್ಟಿಗೆ ಶುಲ್ಕ ಕಡಿಮೆ. ಇವು ಸ್ಥಳೀಯ ಕಾಲೇಜುಗಳಲ್ಲೂ ಲಭ್ಯವಿರುತ್ತವೆ. ಈ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಗಮನ ಹರಿಸಿ, ಎಂಜಿನಿಯರಿಂಗ್ ಕೋರ್ಸ್ ಕುರಿತ ತಮ್ಮ ಅಭಿಪ್ರಾಯವನ್ನು ಪುನರ್ಮೌಲ್ಯಗೊಳಿಸಬಹುದು.

ಆನ್‌ಲೈನ್ ಕೋರ್ಸ್‌ಗಳು

ಬಿ.ಎಸ್ಸಿ ಪದವಿ ಓದುತ್ತಾ, ಕಂಪ್ಯೂಟರ್ ಸೈನ್ಸ್ ಕ್ಷೇತ್ರಕ್ಕೆ ಸಂಬಂಧಿಸಿದ ಬೇಡಿಕೆಯಲ್ಲಿರುವ ಅರೆಕಾಲಿಕ ಕೋರ್ಸ್‌ಗಳಾದ ಮಷೀನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಪೈಥಾನ್, ಜಾವ, ಸಿ++, ಸ್ವಿಫ್ಟ್, ಲೈನಕ್ಸ್, ಡೇಟಾ ಸೈನ್ಸ್, ಸೈಬರ್ ಸೆಕ್ಯೂರಿಟಿಯಂತಹ ಕೋರ್ಸ್‌ಗಳನ್ನು ಮಾಡಬಹುದು ಎನ್ನುತ್ತಾರೆ ಪ್ರದೀಪ್. ಈ ಕೋರ್ಸ್‌ಗಳು ಎಂಜಿನಿಯರಿಂಗ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಇವೆ. ವಿಶೇಷವೇನೆಂದರೆ, ಸಾವಿರಾರು ಕೋರ್ಸ್‌ಗಳು ‘ಮೂಕ್’ (ಮ್ಯಾಸ್ಸೀವ್ ಓಪನ್ ಆನ್‌ಲೈನ್ ಕೋರ್ಸ್– https://www.mooc.org/) ವೇದಿಕೆಯಡಿ ಉಚಿತವಾಗಿಯೂ ಲಭ್ಯ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT