ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೋರ್ಸ್

Published 7 ಮೇ 2023, 16:17 IST
Last Updated 8 ಮೇ 2023, 2:30 IST
ಅಕ್ಷರ ಗಾತ್ರ

ಸಿಬಂತಿ ಪದ್ಮನಾಭ ಕೆ. ವಿ.

ಕಂಪ್ಯೂಟರ್‌ಗಳು ಮನುಷ್ಯರಂತೆ ಯೋಚನೆ ಮಾಡುವುದನ್ನು ಕಲಿಯಲಾರಂಭಿಸಿ ಬಹಳ ವರ್ಷಗಳಾದವು. ಇಂದು ಈ ‘ಕೃತಕ ಬುದ್ಧಿಮತ್ತೆ’ (ಎಐ) ಬಹುತೇಕ ರಂಗಗಳಿಗೆ ಕಾಲಿಟ್ಟಿದೆ. ಜಾಲತಾಣಗಳು ನಮಗಿಂತ ಒಂದು ಹೆಜ್ಜೆ ಮುಂದೆ ಹೋಗಿ ನಮ್ಮನ್ನೇ ಚಕಿತಗೊಳಿಸುವಂತೆ ವರ್ತಿಸುತ್ತಿವೆ. ಚಾಲಕನಿಲ್ಲದೆ ಚಲಿಸುವ ಕಾರುಗಳ ಕನಸು ನನಸಾಗಿದೆ. ಮಾನವ ಸಹಜ ಭಾವನೆಗಳನ್ನು ವ್ಯಕ್ತಪಡಿಸುವ ರೊಬೊಟ್‌ಗಳು ಬಂದಿವೆ. ಚಾಟ್‌ಜಿಪಿಟಿ ಇತ್ತೀಚೆಗೆ ಹೆಚ್ಚು ಚರ್ಚೆಯಲ್ಲಿರುವ ವಿದ್ಯಮಾನ. ಭವಿಷ್ಯದ ಶೇ 80ರಷ್ಟು ತಂತ್ರಜ್ಞಾನಗಳು ಕೃತಕ ಬುದ್ಧಿಮತ್ತೆಯನ್ನು ಅವಲಂಬಿಸಲಿವೆ ಎನ್ನುತ್ತಾರೆ ವಿಜ್ಞಾನಿಗಳು.

ಸಹಜವಾಗಿಯೇ ಈ ಕ್ಷೇತ್ರಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲದ ಹುಡುಕಾಟ ಹೆಚ್ಚಾಗಿದೆ. ಇಷ್ಟೊಂದು ವೇಗವಾಗಿ ಬೆಳೆಯುತ್ತಿರುವ ರಂಗದಲ್ಲಿ ಕೆಲಸ ಮಾಡಲು ಕೃತಕ ಬುದ್ಧಿಮತ್ತೆಯ ಕೌಶಲಗಳನ್ನು ಅಭ್ಯಾಸ ಮಾಡಿದ ಯುವಕರ ಅಗತ್ಯವಿದೆ. ಇದಕ್ಕೆ ತಕ್ಕಂತೆ ಎಐ ಕುರಿತಾದ ಹೊಸಹೊಸ ಕೋರ್ಸುಗಳೂ ಶಿಕ್ಷಣಕ್ರಮದ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿವೆ. ಪ್ರಾಥಮಿಕ ಹಂತದ ಕೋರ್ಸುಗಳಿಂದ ತೊಡಗಿ ಉನ್ನತ ಅಧ್ಯಯನದವರೆಗೆ ಹಲವು ಹಂತಗಳ ಕೋರ್ಸುಗಳು ಈಗ ಔಪಚಾರಿಕ ಪದವಿಗಳ ಭಾಗವಾಗಿ ಮತ್ತು ಆನ್‌ಲೈನ್‌ ವಿಧಾನಗಳಲ್ಲಿ ಲಭ್ಯವಾಗುತ್ತಿವೆ.

ಏನಿದು ಕೋರ್ಸ್?

’ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ನ ಕಲಿಕೆಗೆ ಹಲವು ಆಯಾಮಗಳು. ಮಷಿನ್ ಲರ್ನಿಂಗ್, ನ್ಯೂಟ್ರಲ್ ನೆಟ್‌ವರ್ಕ್ಸ್, ಡೀಪ್ ಲರ್ನಿಂಗ್, ಕಂಪ್ಯೂಟರ್ ವಿಷನ್, ನ್ಯಾಚುರಲ್ ಲ್ಯಾಂಗ್ವೇಜ್ ಪ್ರಾಸೆಸಿಂಗ್- ಹೀಗೆ ಅನೇಕ ವಿಭಾಗಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ. ನಾವು ಆರಿಸಿಕೊಳ್ಳುವ ಕೋರ್ಸ್‌ಗಳು ಯಾವುದಾದರೂ ಒಂದು ಆಯಾಮವನ್ನು ಅಥವಾ ಹೆಚ್ಚು ಆಯಾಮಗಳನ್ನು ಒಳಗೊಂಡಿರಬಹುದು.
ಎಐ ಕುರಿತ ಪ್ರಾಥಮಿಕ ತಿಳುವಳಿಕೆ ನೀಡುವ ಕೋರ್ಸ್‌ಗಳು, ಸರ್ಟಿಫಿಕೇಟ್ ಕೋರ್ಸ್‌ಗಳು, ಪದವಿ ಹಾಗೂ ಸ್ನಾತಕೋತ್ತರ ಕೋರ್ಸುಗಳೂ ಲಭ್ಯವಿವೆ. ಪ್ರಾಥಮಿಕ ಜ್ಞಾನ ಹಾಗೂ ಕೌಶಲಗಳನ್ನು ಒದಗಿಸುವ ಕೋರ್ಸ್‌ಗಳನ್ನು ಆರಂಭದಲ್ಲಿ ಆಯ್ದುಕೊಳ್ಳುವುದು ಸೂಕ್ತ.

ಯಾರು ಮಾಡಬಹುದು?

ಇದು ಕೊಂಚ ತಾಂತ್ರಿಕ ವಿಷಯವಾಗಿರುವುದರಿಂದ ಪಿಯುಸಿ ಅಥವಾ ಪದವಿಯಲ್ಲಿ ವಿಜ್ಞಾನ ವಿಷಯಗಳನ್ನು ವ್ಯಾಸಂಗ ಮಾಡಿರುವವರು ಅಥವಾ ಮಾಡುತ್ತಿರುವವರಿಗೆ ಆಸಕ್ತಿಕರ ಎನಿಸಬಹುದು. ಪಿಯುಸಿ ಇಲ್ಲವೇ ಪದವಿಯಲ್ಲಿ ಕಂಪ್ಯೂಟರ್ ಸೈನ್ಸ್ ಅಥವಾ ಕಂಪ್ಯೂಟರ್ ಅಪ್ಲಿಕೇಶನ್ಸ್ ಅನ್ನು ಒಂದು ವಿಷಯವಾಗಿ ಅಧ್ಯಯನ ಮಾಡುತ್ತಿರುವವರು ಅದರ ಜೊತೆಗೆ ಎಐ ಕುರಿತ ಕೋರ್ಸ್‌ಗಳನ್ನು ತೆಗೆದುಕೊಂಡರೆ ಭವಿಷ್ಯಕ್ಕೆ ಉಪಯುಕ್ತ. ಇಂಗ್ಲಿಷ್ ಓದುವ, ಅರ್ಥಮಾಡಿಕೊಳ್ಳುವ ಪ್ರಾಥಮಿಕ ಸಾಮರ್ಥ್ಯ ಅಗತ್ಯ. ಎಂಜಿನಿಯರಿಂಗ್‌ನಲ್ಲೇ ಇಂದು ಎಐ ಸ್ಪೆಷಲೈಸೇಶನ್ ಶಾಖೆಗಳು ಬಂದಿವೆ.

ಎಲ್ಲೆಲ್ಲಿವೆ ಅವಕಾಶಗಳು: 

ಹಣಕಾಸು ಸೇವಾಸಂಸ್ಥೆಗಳು, ಆರೋಗ್ಯ, ತಂತ್ರಜ್ಞಾನ, ಮಾಧ್ಯಮ, ಮಾರ್ಕೆಟಿಂಗ್, ಸರ್ಕಾರ, ಮಿಲಿಟರಿ, ಭದ್ರತೆ, ಕೃಷಿ, ಗೇಮಿಂಗ್- ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಎಐ ಬಳಕೆಯಾಗುತ್ತಿದೆ. ಹೀಗಾಗಿ ಎಐ ಉದ್ಯೋಗಾವಕಾಶಗಳು ವೇಗವಾಗಿ ಬೆಳೆಯುತ್ತಿವೆ.

ಎಲ್ಲಿ ಲಭ್ಯ?

l ಇನ್ಫೋಸಿಸ್ ಸ್ಪ್ರಿಂಗ್‌ ಬೋರ್ಡ್ ಯೋಜನೆಯ ಮೂಲಕ ನೂರಕ್ಕೂ ಹೆಚ್ಚು ಎಐ ಕುರಿತಾದ ಕೋರ್ಸುಗಳನ್ನು ಒದಗಿಸುತ್ತಿದೆ. ಇವುಗಳಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಉನ್ನತ ಮಟ್ಟದ ಕೋರ್ಸ್‌ಗಳಿದ್ದು, ಉಚಿತವಾದವೂ ಸಾಕಷ್ಟು ಇವೆ. ಕೊಂಡಿ: https://infyspringboard.onwingspan.com/ 

l ಗೂಗಲ್ ಕಂಪೆನಿಯು ‘ಎಲಿಮೆಂಟ್ಸ್ ಆಫ್ ಎಐ’ ಎಂಬ 30 ಗಂಟೆಗಳ ಉಚಿತ ಕೋರ್ಸನ್ನು ನೀಡುತ್ತಿದೆ. ಇದು ಆರಂಭಿಕ ಹಂತದಲ್ಲಿರುವವರಿಗೆ ಸೂಕ್ತ. ಫಿನ್ಲೆಂಡಿನ ಹೆಲ್ಸಿಂಕಿ ವಿಶ್ವವಿದ್ಯಾನಿಲಯವು ಈ ಕೋರ್ಸನ್ನು ಅಭಿವೃದ್ಧಿಪಡಿಸಿದೆ. ಕೊಂಡಿ: https://learndigital.withgoogle.com/digitalgarage/ 

l ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ರೂಪಿಸಿರುವ ‘ಸ್ವಯಂ’ ಕೆಲವು ಎಐ ಕೋರ್ಸ್‌ಗಳನ್ನು ಸಿದ್ಧಪಡಿಸಿದ್ದು ಉಚಿತವಾಗಿ ಕಲಿಯಬಹುದು. ಇವುಗಳಲ್ಲಿ ಮದ್ರಾಸ್ ಹಾಗೂ ದೆಹಲಿ ಐಐಟಿಗಳು ರೂಪಿಸಿರುವ ಕೋರ್ಸ್‌ಗಳೂ ಇವೆ. ಪದವಿ ಹಂತದಲ್ಲಿರುವವರು ಈ ಆನ್‌ಲೈನ್‌ ಕೋರ್ಸ್‌ಗಳ ಪ್ರಯೋಜನ ಪಡೆಯಬಹುದು. ಕೊಂಡಿ: https://onlinecourses.swayam2.ac.in/

l ಗ್ರೇಟ್ ಲರ್ನಿಂಗ್ ಎಂಬ ಸಂಸ್ಥೆ ಎಐಗೆ ಸಂಬಂಧಿಸಿದ ಅನೇಕ ಸಣ್ಣ ಅವಧಿಯ ಕೋರ್ಸ್‌ಗಳನ್ನು ನೀಡುತ್ತಿದೆ. ಡಿಜಿಟಲ್ ಇಮೇಜ್ ಪ್ರಾಸೆಸಿಂಗ್, ಮಲ್ಟಿ ಲೇಯರ್ ಪರ್‌ಸೆಪ್ಷನ್, ಡೀಪ್ ಲರ್ನಿಂಗ್, ಮಶಿನ್ ಲರ್ನಿಂಗ್ ಮುಂತಾದ ವಿಷಯಗಳಿಗೆ ಪ್ರತ್ಯೇಕ ಕೋರ್ಸ್‌ಗಳಿವೆ. ಕೊಂಡಿ: https://www.mygreatlearning.com/ai/free-courses

(ಮುಂದಿನ ವಾರ: ವೆಬ್ ಡಿಸೈನಿಂಗ್ ಕೋರ್ಸ್)

(ಲೇಖಕರು: ಸಹಾಯಕ ಪ್ರಾಧ್ಯಾಪಕ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ,
ತುಮಕೂರು ವಿಶ್ವವಿದ್ಯಾನಿಲಯ )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT