ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮರ್ಶಾತ್ಮಕ ಚಿಂತನೆ ಯಶಸ್ಸಿನ ಜೀವಾಳ-ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪರೀಕ್ಷೆ

Last Updated 8 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿಗಾಗಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಪರೀಕ್ಷೆ ಸಿದ್ಧತೆ ಕುರಿತು ಮಾಹಿತಿ ಇಲ್ಲಿದೆ...

ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ ಹಲವರಿಗೆ ಪ್ರಾಧ್ಯಾಪಕರಾಗುವ ಕನಸಿರುತ್ತದೆ. ಆಧುನಿಕ ಕಾಲೇಜು ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಧ್ಯಾಪಕರ ಹುದ್ದೆ ಪಡೆಯುವುದು ಒಂದು ರೀತಿಯ ತಪಸ್ಸು. ಏಕೆಂದರೆ ಆ ಹುದ್ದೆ ಪಡೆಯುವ ಪ್ರತಿ ಹಂತದಲ್ಲೂ ಜಿದ್ದಾಜಿದ್ದಿನ ಸ್ಪರ್ಧೆ ಇರುತ್ತದೆ.

ಈಗ ಸರ್ಕಾರ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಪರೀಕ್ಷಾ ದಿನಾಂಕ ಪ್ರಕಟಣೆ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಪರೀಕ್ಷೆಯ ಅಂತಿಮ ಹಂತದ ಸಿದ್ಧತೆಯಲ್ಲಿದ್ದಾರೆ.

ಕಡ್ಡಾಯ ಭಾಷಾ ಪತ್ರಿಕೆ

ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎ ಮತ್ತು ಬಿ ಎಂಬ ಎರಡು ವಿಭಾಗಗಳಿವೆ. ‘ಎ’ ವಿಭಾಗದಲ್ಲಿ ಅಭ್ಯರ್ಥಿಯ ಭಾಷಾಜ್ಞಾನವನ್ನು ಅಳೆಯಲಾಗುತ್ತದೆ. ಈ ವಿಭಾಗದಲ್ಲಿ ಸಾಮಾನ್ಯ ಕನ್ನಡ ಮತ್ತು ಸಾಮಾನ್ಯ ಇಂಗ್ಲಿಷ್ ವಿಷಯಗಳ ಪತ್ರಿಕೆಗಳಿರುತ್ತವೆ. ಪ್ರತಿ ಪತ್ರಿಕೆಯು 100 ಅಂಕಗಳದ್ದಾಗಿದ್ದು, ವಿವರಣಾತ್ಮಕ ಪ್ರಶ್ನೆಗಳಿರುತ್ತವೆ. ಇಲ್ಲಿ ಹತ್ತನೇ ತರಗತಿವರೆಗಿನ ಭಾಷಾ ಜ್ಞಾನವನ್ನು ಪರೀಕ್ಷೆ ಮಾಡಲಾಗುತ್ತದೆ. ವ್ಯಾಕರಣ, ಭಾಷಾಜ್ಞಾನ, ಶಬ್ದ ಬಳಕೆ, ಪದಗಳ ಅರ್ಥ, ವಿರುದ್ಧ ಪದಗಳು, ಸಂಧಿ ಪ್ರಕರಣಗಳು, ವಾಕ್ಯಗಳ ಬಳಕೆ, ಭಾಷೆಯ ವಿವಿಧ ಅನ್ವಯಿಕೆಗಳು ಹೀಗೆ ಭಾಷೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಅಧ್ಯಯನ ಮಾಡಿದರೆ ಒಳಿತು. ಇವೆರಡೂ ಕಡ್ಡಾಯ ಪತ್ರಿಕೆಗಳಾಗಿದ್ದು, ಅಭ್ಯರ್ಥಿಗಳು ತಲಾ 30 ಅಂಕಗಳನ್ನು ಪಡೆಯಲೇಬೇಕು.

ವಿಷಯಾಧಾರಿತ ಪತ್ರಿಕೆ

‘ಬಿ’ ವಿಭಾಗದಲ್ಲಿಯೂ ಎರಡು ಪತ್ರಿಕೆಗಳಿರುತ್ತವೆ. ಇದರಲ್ಲಿ ಒಂದು ಪತ್ರಿಕೆ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿರುತ್ತದೆ. ಇನ್ನೊಂದು ಪತ್ರಿಕೆ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿರುತ್ತದೆ. ಸಾಮಾನ್ಯ ಜ್ಞಾನ ಪತ್ರಿಕೆಯು 50 ಅಂಕಗಳಿಗೆ ನಿಗದಿಯಾಗಿರುತ್ತದೆ. ಆದರೆ ಇಲ್ಲಿನ ಪ್ರಶ್ನೆಗಳು ಸಂಪೂರ್ಣವಾಗಿ ವೈವಿಧ್ಯಯಮವಾಗಿರುತ್ತವೆ. ಇತಿಹಾಸ, ರಾಜಕೀಯ, ಅರ್ಥಶಾಸ್ತ್ರ, ಭೂಗೋಳ, ಸಾಮಾನ್ಯ ವಿಜ್ಞಾನ ಮತ್ತು ಪ್ರಚಲಿತ ವಿಷಯಗಳನ್ನು ಒಳಗೊಂಡಿರುತ್ತವೆ. ಈ ಪತ್ರಿಕೆಯನ್ನು ಸಮರ್ಥವಾಗಿ ಎದುರಿಸಲು ತಕ್ಷಣದ ಸಿದ್ಧತೆ ಸಾಕಾಗದಿರಬಹುದು. ಇದಕ್ಕೆ ಕನಿಷ್ಠ ನಾಲ್ಕಾರು ತಿಂಗಳ ಅಭ್ಯಾಸ ಅಗತ್ಯ. ಕನಿಷ್ಠ ಆರು ತಿಂಗಳಿಂದೀಚೆಗಿನ ಪ್ರಚಲಿತ ವಿದ್ಯಮಾನಗಳ ಕುರಿತ ಪ್ರಶ್ನೆಗಳಿರುತ್ತವೆ. ಇತಿಹಾಸ, ರಾಜಕೀಯ, ಅರ್ಥಶಾಸ್ತ್ರ, ಭೂಗೋಳ, ಸಾಮಾನ್ಯ ವಿಜ್ಞಾನ ವಿಷಯಗಳ ಮೂಲ ಪರಿಕಲ್ಪನೆಯನ್ನಾಧರಿಸಿ ಪ್ರಶ್ನೆಗಳಿರುತ್ತವೆ. ಇದಕ್ಕಾಗಿ ನಾಲ್ಕರಿಂದ ಹತ್ತನೇ ತರಗತಿವರೆಗಿನ ಪಠ್ಯಪುಸ್ತಕಗಳನ್ನು ಅಭ್ಯಸಿಸಿದರೆ ಉತ್ತಮ.

ಐಚ್ಛಿಕ ವಿಷಯದ ಪತ್ರಿಕೆ

ಐಚ್ಛಿಕ ವಿಷಯ ಪತ್ರಿಕೆಯು 250 ಅಂಕಗಳಿಗೆ ನಿಗದಿಯಾಗಿದೆ. ಇಲ್ಲಿ ಪ್ರತಿ ವಿಷಯದ ಆಳವಾದ ಜ್ಞಾನ ಹಾಗೂ ಪ್ರಸ್ತುತತೆಯನ್ನು ಪರೀಕ್ಷಿಸಲಾಗುತ್ತದೆ. ಅದಕ್ಕಾಗಿ ಅಭ್ಯರ್ಥಿಗಳು ವಿಷಯವನ್ನು ವಿಮರ್ಶಾತ್ಮಕವಾಗಿ ಅಧ್ಯಯನ ಮಾಡಬೇಕು. ಪರೀಕ್ಷೆಗೆ ನಿಗದಿಪಡಿಸಿದ ಪಠ್ಯಕ್ರಮಕ್ಕನುಗುಣವಾಗಿ ಅಧ್ಯಯನ ನಡೆಸಬೇಕು. ಅಧ್ಯಯನದ ವೇಳೆ ಪ್ರಮುಖ ಅಂಶಗಳನ್ನು ಟಿಪ್ಪಣಿ ಮಾಡಿಕೊಂಡರೆ ನೆನಪಿನಲ್ಲಿಡಲು ಸುಲಭವಾಗುತ್ತದೆ.

ವಿಷಯಾಧಾರಿತ ಪತ್ರಿಕೆಗಾಗಿ ವಿಶ್ವವಿದ್ಯಾಲಯಗಳು ನಿಗದಿಪಡಿಸಿದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಠ್ಯಗಳನ್ನು ಅಭ್ಯಾಸ ಮಾಡಬೇಕು. ಅಂತೆಯೇ ವಿವಿಧ ಲೇಖಕರ ವಿಮರ್ಶಾತ್ಮಕ ಪುಸ್ತಕಗಳನ್ನು ಓದಬೇಕು. ವಿಷಯವನ್ನು ಮೂಲದಿಂದ ಇಲ್ಲಿನವರೆಗಿನ ಎಲ್ಲಾ ಮಾಹಿತಿಯನ್ನು ಆಳವಾಗಿ ಅಧ್ಯಯನ ಮಾಡಬೇಕು.

ವಿಷಯಾಧಾರಿತ ಪತ್ರಿಕೆಯು ಬಹುಆಯ್ಕೆ ಮಾದರಿಯಲ್ಲಿರುತ್ತದೆ. ಬಹುಆಯ್ಕೆಗಳು ಒಂದಕ್ಕೊಂದು ಸಾಮ್ಯತೆ ಹೊಂದಿದ್ದು ಅಭ್ಯರ್ಥಿಗಳನ್ನು ಗಲಿಬಿಲಿಗೊಳಿಸುವುದು ಸಹಜ. ಅದಕ್ಕಾಗಿ ವಿಷಯದ ಆಳವಾದ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸರಿಯಾಗಿ ಅರಿತಿರಬೇಕು. ಸಾಮಾನ್ಯಜ್ಞಾನ ಹಾಗೂ ವಿಷಯ ಪತ್ರಿಕೆಗಳಲ್ಲಿ ತಪ್ಪು ಉತ್ತರಗಳಿಗೆ ಅಂಕ ಕಡಿತ ಇರುತ್ತದೆ. ಹಾಗಾಗಿ ಖಚಿತ ಉತ್ತರಗಳನ್ನು ಮಾತ್ರ ಜಾಣತನದಿಂದ ಆಯ್ಕೆ ಮಾಡಬೇಕು.

ಸಮಯದ ಹೊಂದಾಣಿಕೆ

ಸಹಾಯಕ ಪ್ರಾಧ್ಯಾಪಕರ ಹುದ್ದೆಯ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಸ್ಪರ್ಧೆಯೂ ತೀವ್ರವಾಗಿರುತ್ತದೆ. ಅಭ್ಯರ್ಥಿಗಳು ಆ ಸ್ಪರ್ಧೆಯನ್ನು ಎದುರಿಸಲು ಕಠಿಣ ಅಧ್ಯಯನ ಅಗತ್ಯ. ದಿನವೊಂದಕ್ಕೆ ಕನಿಷ್ಠ 8-10 ಗಂಟೆಗಳಷ್ಟು ಅಧ್ಯಯನ ಮಾಡಬೇಕು. ಇದರಲ್ಲಿ ಒಂದು ಗಂಟೆಯನ್ನು ಕಡ್ಡಾಯವಾಗಿ ಭಾಷಾ ಪತ್ರಿಕೆ ಅಧ್ಯಯನಕ್ಕೆ ಹಾಗೂ ಒಂದು ಗಂಟೆಯನ್ನು ಸಾಮಾನ್ಯಜ್ಞಾನ ಪತ್ರಿಕೆ ಅಧ್ಯಯನಕ್ಕೆ ಹಾಗೂ ಉಳಿದ ಸಮಯವನ್ನು ಐಚ್ಛಿಕ ಪತ್ರಿಕೆ ಅಧ್ಯಯನಕ್ಕೆ ಮೀಸಲಿಡಬೇಕು. ಐಚ್ಛಿಕ ವಿಷಯದಲ್ಲಿನ ಹೆಚ್ಚಿನ ಸಾಧನೆಯು ಯಶಸ್ಸು ತಂದುಕೊಡುತ್ತದೆ.

ಅಧ್ಯಯನದ ವೇಳೆ ಪರಿಕಲ್ಪನೆಯನ್ನು ವಿವಿಧ ಆಯಾಮಗಳಿಂದ ವಿಮರ್ಶಾತ್ಮಕ ದೃಷ್ಟಿಕೋನದಿಂದ ಅರ್ಥ ಮಾಡಿಕೊಳ್ಳಬೇಕು. ಯಾಂತ್ರಿಕ ಓದು ಇಲ್ಲಿ ಫಲ ನೀಡದು. ಫ್ಲೋಚಾರ್ಟ್ ಹಾಗೂ ಮೈಂಡ್‌ಮ್ಯಾಪ್ ತಂತ್ರಗಳ ಮೂಲಕ ವಿಷಯವನ್ನು ಟಿಪ್ಪಣಿ ಮಾಡಿಕೊಂಡರೆ ಹೆಚ್ಚು ಅನುಕೂಲ. ಸತತ ಪರಿಶ್ರಮ ಎಂದಿಗೂ ಯಶಸ್ಸಿಗೆ ಪೂರಕವಾಗಿರುತ್ತದೆ ಎಂಬುದು ನೆನಪಿನಲ್ಲಿಡಿ.

ಓದಿಗೆ ಪೂರಕ ತಂತ್ರಗಳು

lಕಡಿಮೆ ಅವಧಿಯಲ್ಲಿ ಹೆಚ್ಚು ವಿಷಯ ಓದಿ ಗ್ರಹಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಇದಕ್ಕಾಗಿ ಕಣ್ಣಾಡಿಸುವುದು, ವಿವರವಾಗಿ ಓದುವುದು ಹಾಗೂ ಪ್ರಮುಖಾಂಶಗಳನ್ನು ಗುರುತಿಸುವುದು (ಸ್ಕಿಮ್ಮಿಂಗ್, ಸ್ಕ್ಯಾನಿಂಗ್ ಮತ್ತು ಸ್ಕ್ರೀನಿಂಗ್‌) ಇಂತಹ ತಂತ್ರಗಳನ್ನು ಬಳಸಬಹುದು.

lನಿಗದಿತ ಯೋಜನೆ/ವೇಳಾಪಟ್ಟಿಗೆ ಅನುಸಾರ ಅಧ್ಯಯನ ಅಗತ್ಯ.

lಕಠಿಣ ಎನಿಸಿದ ಪರಿಕಲ್ಪನೆಗಳನ್ನು ಪದೇ ಪದೇ ಅಭ್ಯಾಸ ಮಾಡಿದರೆ, ಅದು ಸರಳವಾಗಿ ಅರ್ಥವಾಗುತ್ತದೆ. ಸುಲಭವಾಗಿ ಉತ್ತರಿಸಲು ಸಹಕಾರಿಯಾಗುತ್ತದೆ.

lಪರಿಕಲ್ಪನೆಗಳನ್ನು ತಾರ್ಕಿಕವಾಗಿ ಅಭ್ಯಾಸ ಮಾಡಿ, ಟಿಪ್ಪಣಿ ಮಾಡಿಕೊಳ್ಳಿ.

lವೃತ್ತಿ ವೇಳೆ ಮತ್ತು ಪರೀಕ್ಷಾ ಅಭ್ಯಾಸದ ವೇಳೆಯ ನಡುವೆ ಸಮನ್ವಯತೆ ಇರಲಿ. (ಈಗಾಗಲೇ ವೃತ್ತಿಯಲ್ಲಿರುವವರಿಗೆ)

lಕೊನೆಯ ಹಂತದ ಸಿದ್ಧತೆಯ ವೇಳೆಯಲ್ಲಿ ಹಾರ್ಡ್ ಸ್ಟಡಿಗಿಂತ ಸ್ಮಾರ್ಟ್ ಸ್ಟಡಿ ಇರಲಿ.

lದಿನಾಂಕ, ಘಟನೆ, ದೇಶಗಳ ರಾಜಧಾನಿ, ಕರೆನ್ಸಿಗಳು, ಸೂತ್ರಗಳು, ಮುಂತಾದವುಗಳನ್ನು ಸರಣೀಕೃತ ಗುಂಪುಗಳು ಹಾಗೂ ಸಹಸಂಬಂಧಗಳ ಮೂಲಕ ನೆನಪಿಟ್ಟುಕೊಳ್ಳಬಹುದು.

lಓದಿನ ವೇಗಕ್ಕೆ ಬ್ರೇಕ್ ಹಾಕುವ ಘಟನೆ/ಅಂಶಗಳಿಂದ ದೂರವಿರಿ. ಟಿ.ವಿ, ಮೊಬೈಲ್, ಅಥವಾ ಇನ್ನಿತರೇ ಎಲೆಕ್ಟ್ರಾನಿಕ್ಸ್‌ ಗ್ಯಾಜೆಟ್‌ಗಳಿಂದ ದೂರವಿರಿ.

lಪರಿಕಲ್ಪನೆಯ ಸ್ಪಷ್ಟ ಗ್ರಹಿಕೆಗಾಗಿ ವಿಷಯ ತಜ್ಞರು/ಪರಿಣಿತರೊಂದಿಗೆ ಚರ್ಚಿಸಿ. ಸ್ನೇಹಿತರೊಂದಿಗೆ ಚರ್ಚೆಯೂ ಆಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT