ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ವೃತ್ತಿಗೆ ತಕ್ಕ ಕೋರ್ಸ್ ಆಯ್ಕೆ ಮಾಡಿಕೊಳ್ಳಿ

Last Updated 12 ಜೂನ್ 2022, 19:30 IST
ಅಕ್ಷರ ಗಾತ್ರ

1. ನಾನು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದೇನೆ. ಬಿಸಿಎ ಮಾಡಿ ನಂತರ ಎಂಬಿಎ (ಇವೆಂಟ್ ಮ್ಯಾನೇಜ್‌ಮೆಂಟ್) ಮಾಡಬೇಕೆಂಬ ಅಭಿಲಾಷೆ ಇದೆ. ಆದರೆ, ನನ್ನ ಪೋಷಕರು ಬಿಎಸ್‌ಸಿ (ಕೃಷಿ) ಮಾಡು ಎಂದು ಒತ್ತಾಯಿಸುತ್ತಿದ್ದಾರೆ. ನನಗೆ ಮಾನಸಿಕವಾಗಿ ತುಂಬಾ ಹಿಂಸೆಯಾಗುತ್ತಿದೆ. ನಾನು ಓದಬೇಕೆಂದಿರುವ ಈ ಕೋರ್ಸುಗಳು, ನನ್ನ ಗುರಿ ಸಮಂಜಸವಾಗಿದೆಯೇ, ದಯವಿಟ್ಟು ತಿಳಿಸಿ.

ಸುಜನ್, ಹೊನ್ನಾಳಿ

ಬಿಸಿಎ, ಎಂಬಿಎ ಕೋರ್ಸ್‌ಗಳ ನಂತರದ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಕನಸುಗಳ ಬಗ್ಗೆ ನಿಮಗೆ ಸ್ಪಷ್ಟತೆಯಿರಬೇಕು. ನೀವು ವೃತ್ತಿಯಲ್ಲೂ, ವೈಯಕ್ತಿಕ ಜೀವನದಲ್ಲೂ ಬೆಳೆದು ಸಂತೃಪ್ತಿ ಪಡೆಯಬೇಕಾದರೆ, ನಿಮಗೆ ಆಸಕ್ತಿಯಿರುವ, ಇಷ್ಟವಿರುವ ವೃತ್ತಿಯನ್ನೇ ಅರಸಬೇಕು. ಹಾಗಾಗಿ, ನಿಮ್ಮ ಆಸಕ್ತಿ, ಅಭಿರುಚಿ, ವೃತ್ತಿಯ ಆಯ್ಕೆಗೆ ಪೂರಕವಾಗುವ ಸಾಮರ್ಥ್ಯ ಮತ್ತು ಸನ್ನದ್ದತೆಯನ್ನು ನಿಮ್ಮ ಪೋಷಕರಿಗೆ ಮನವರಿಕೆ ಮಾಡಿಕೊಡಿ. ಅವರ ಆತಂಕವನ್ನು ಹೋಗಲಾಡಿಸಿ. ಏಕೆಂದರೆ, ಮಕ್ಕಳ ಭವಿಷ್ಯದ ಬಗ್ಗೆ ಪೋಷಕರ ಆಸಕ್ತಿ, ಚಿಂತನೆ, ಆತಂಕ ಇವೆಲ್ಲವೂ ಸಾಮಾನ್ಯ. ನಿಮ್ಮ ಆಸಕ್ತಿ, ಒಲವು, ಪ್ರತಿಭೆ, ಕೌಶಲಗಳನ್ನೂ, ಕುಟುಂಬದ ಅಗತ್ಯ ಮತ್ತು ಸವಾಲುಗಳನ್ನೂ ಪರಿಗಣಿಸಿ, ಒಂದು ಮುಕ್ತ ವಾತಾವರಣದಲ್ಲಿ ಪರಸ್ಪರ ಚರ್ಚಿಸಿ, ವೃತ್ತಿಯ ಆಯ್ಕೆ ಮತ್ತು ಯೋಜನೆಯನ್ನು ಮಾಡಿ. ಅದರಂತೆ ಕೋರ್ಸ್ ಆಯ್ಕೆಯನ್ನು ಮಾಡಿ. ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ. ವೃತ್ತಿ ಯೋಜನೆಯನ್ನು ಮಾಡುವುದರ ಕುರಿತ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ:
https://www.youtube.com/c/EducationalExpertManagementCareerConsultant
ಅಗತ್ಯವೆನಿಸಿದರೆ, ಈ ಅಂಕಣದ ಮೂಲಕ ನಮ್ಮನ್ನು ಸಂಪರ್ಕಿಸಿ.

2. ‌ನಾನು ಬಿಕಾಂ ಮೊದಲನೇ ವರ್ಷದಲ್ಲಿ ಓದುತ್ತಾ ಇದ್ದೇನೆ. ಪಿಯುಸಿ ವಿದ್ಯಾರ್ಹತೆ ಮೇಲೆ ಉದ್ಯೋಗಕ್ಕೆ ಪ್ರಯತ್ನಿಸಿ, ಉದ್ಯೋಗ ಸಿಕ್ಕಿದ ಮೇಲೆ ಎರಡನೇ ವರ್ಷದ ಪದವಿಯನ್ನು ದೂರಶಿಕ್ಷಣದ ಮೂಲಕ ಮುಂದುವರಿಸಲು ಅವಕಾಶವಿದೆಯೇ ಎಂದು ತಿಳಿಸಿ.

ಸವಿತಾ, ಚಿಕ್ಕಮಗಳೂರು.

ನಮಗಿರುವ ಮಾಹಿತಿಯಂತೆ ಈ ಬದಲಾವಣೆ ಸಾಧ್ಯವಿಲ್ಲ. ಆದರೂ, ನೀವು ಬಿಕಾಂ ಮಾಡುತ್ತಿರುವ ವಿಶ್ವವಿದ್ಯಾಲಯದಲ್ಲಿ ದೂರಶಿಕ್ಷಣವೂ ಇದ್ದಲ್ಲಿ, ಬದಲಾವಣೆಯ ಸಾಧ್ಯತೆಯನ್ನು ಸಂಬಂಧಪಟ್ಟ ಅಧಿಕಾರಿಗಳೊಡನೆ ವಿಚಾರಿಸಿ.

3. ನಾನು ಈ ವರ್ಷದ ಎನ್‌ಇಇಟಿ (ನೀಟ್) ಪರೀಕ್ಷೆಯನ್ನು ಬರೆಯುತ್ತಿದ್ದೇನೆ. ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ, ಒಬಿಸಿ ವರ್ಗದ ಅಡಿಯಲ್ಲಿ ಎಂಬಿಬಿಎಸ್ ಸೀಟ್ ಪಡೆಯಲು ಯಾವ ರ‍್ಯಾಂಕ್ ಮತ್ತು ಅಂಕಗಳನ್ನು ಪಡೆಯಬೇಕು ಎಂದು ತಿಳಿಸಿ.

ಹೆಸರು, ಊರು ತಿಳಿಸಿಲ್ಲ.

ಎನ್‌ಇಇಟಿ (ನೀಟ್)-2022ರ ಪರೀಕ್ಷೆಯಲ್ಲಿ ನಿರೀಕ್ಷಿಸುವ ರ‍್ಯಾಂಕ್ ಮತ್ತು ಅಂಕಗಳ ಆಧಾರದ ಮೇಲೆ ಒಬಿಸಿ ಮೀಸಲಾತಿಯಲ್ಲಿ ಯಾವ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟ್ ಸಿಗಬಹುದುದೆಂದು ಈಗಲೇ ನಿಖರವಾಗಿ ಅಂದಾಜು ಮಾಡುವುದು ಸಾಧ್ಯವಿಲ್ಲ.
ಏಕೆಂದರೆ, ಪ್ರತಿ ವರ್ಷ ಪರೀಕ್ಷೆಯನ್ನು ಬರೆಯುವ ವಿದ್ಯಾರ್ಥಿಗಳ ಸಂಖ್ಯೆ, ಪರೀಕ್ಷೆಯ ಕಠಿಣತೆ ಮತ್ತು ಫಲಿತಾಂಶ, ನೂತನ ಕಾಲೇಜುಗಳು ಮತ್ತು ಹೆಚ್ಚುವರಿ ಸೀಟುಗಳು, ಒಟ್ಟಾರೆ ಲಭ್ಯವಿರುವ ಸೀಟುಗಳು, ಸೀಟ್ ಹಂಚಿಕೆಯನ್ನು ನಿರ್ಧರಿಸುತ್ತವೆ. ಹಾಗಾಗಿ, ಈ ಅಂಶಗಳನ್ನು ಗಮನದಲ್ಲಿಟ್ಟು ಕೊಂಡು, ಹಿಂದಿನ ವರ್ಷಗಳ ರ‍್ಯಾಂಕ್ ಮತ್ತು ಅಂಕಗಳ ಆಧಾರದ ಮೇಲೆ, ನಾನಾ ಕಾಲೇಜುಗಳಲ್ಲಿ ಸೀಟ್ ಲಭಿಸಿದ ಮಾಹಿತಿಯನ್ನು ಪರಿಶೀಲಿಸಿ, ನಿಮ್ಮ ಗುರಿ ಮತ್ತು ಕಾರ್ಯತಂತ್ರವನ್ನು ನಿರ್ಧರಿಸುವುದು ಸೂಕ್ತ. ನಮ್ಮ ಅಭಿಪ್ರಾಯದಂತೆ, ಕನಿಷ್ಠ 550 (ಗರಿಷ್ಠ 720) ಅಂಕಗಳನ್ನು ಗಳಿಸಿದಲ್ಲಿ, ಸರ್ಕಾರಿ ಸೀಟ್ ಸಿಗುವ ಸಾಧ್ಯತೆಯಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ:
https://www.collegedekho.com/articles/neet-cutoff-karnataka-aiq-state-quota-seats/

4. ನಾನು, ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ಓದಿದ್ದೇನೆ. ನನಗೆ, ಆರನೇ ಸೆಮಿಸ್ಟರ್ ಅಂಕಪಟ್ಟಿ ಮತ್ತು ಪದವಿಯ ಸರ್ಟಿಫಿಕೆಟ್ ಬಂದಿಲ್ಲ. ಈ ಸಮಸ್ಯೆ ಪರಿಹರಿಸಲು, ನಿಮ್ಮ ಅಮೂಲ್ಯವಾದ ಸಲಹೆಯನ್ನು ಬಯಸಿದ್ದೇನೆ.

ಹೆಸರು ತಿಳಿಸಿಲ್ಲ, ಬೆಂಗಳೂರು.

ಬೆಂಗಳೂರು ವಿಶ್ವವಿದ್ಯಾಲಯದ ವೆಬ್‌ಸೈಟಿನ ರಾಷ್ಟ್ರೀಯ ಶೈಕ್ಷಣಿಕ ಕಣಜದ (ಎನ್‌ಎಡಿ) ಮೂಲಕ ಅಂಕಪಟ್ಟಿಗಳು ಮತ್ತು ಪ್ರಮಾಣಪತ್ರಗಳನ್ನು ಆನ್‌ಲೈನ್ ಮೂಲಕ ಪಡೆಯುವ ವ್ಯವಸ್ಥೆಯಿದೆ. ಈ ಸಾಧ್ಯತೆಯನ್ನು ಪರಿಶೀಲಿಸಿ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://eng.bangaloreuniversity.ac.in/nad/ ನಿಮ್ಮ ಸಮಸ್ಯೆ ಪರಿಹಾರವಾಗದಿದ್ದಲ್ಲಿ, ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ರನ್ನು ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT