ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿವಿಲ್ ಸರ್ವೀಸಸ್‌ ಪರೀಕ್ಷೆಪಾಠ–4: ಸ್ವಯಂ ತಯಾರಿ ಸಾಕೇ?ವಿಶೇಷ ತರಬೇತಿ ಬೇಕೇ?

Last Updated 6 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಐಎಎಸ್, ಐಪಿಎಸ್ ಪರೀಕ್ಷೆಗೆ ತಯಾರಾಗುವವರೆಲ್ಲ ಕೇಳುವ ಮೊಟ್ಟಮೊದಲ ಪ್ರಶ್ನೆ ಪೂರ್ವಸಿದ್ಧತಾ ಪರೀಕ್ಷೆ (ಪ್ರಿಲಿಮ್ಸ್‌)ಗಾಗಲಿ, ಮುಖ್ಯಪರೀಕ್ಷೆ(ಮೇನ್ಸ್‌)ಗಾಗಲಿ ವಿಶೇಷ ತರಬೇತಿ ಅನಿವಾರ್ಯವೇ? ಅಥವಾ ಸ್ವಂತವಾಗಿ ಓದಿಕೊಂಡರೆ ಸಾಕೇ? ಎಂಬುದು.

ಇದಕ್ಕೆ ಉತ್ತರ ಪಡೆಯುವ ಮೊದಲು ಇದನ್ನು ಗಮನಿಸಿ. ಖ್ಯಾತ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಆಟದ ತಯಾರಿಗೆ ವೈಯಕ್ತಿಕವಾಗಿಕೋಚ್ ಇಟ್ಟುಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್‌, ರಾಹುಲ್ ದ್ರಾವಿಡ್ ನಂತರ ಆಡಿದ ಎಲ್ಲಾ ಕ್ರಿಕೆಟ್ ಫಾರ್ಮ್ಯಾಟ್‌ಗಳಿಂದ ಅತಿ ಹೆಚ್ಚು ರನ್ ಮತ್ತು ಜಯಗಳಿಸಿದ ಭಾರತೀಯ ಆಟಗಾರನೆನಿಸಿದ್ದಾರೆ. ಅವರ ಯಶಸ್ಸಿನಲ್ಲಿ ಕೋಚ್‌ನ ಪಾತ್ರ ಎಷ್ಟು? ಸ್ವತಃ ಕೊಹ್ಲಿ ಕೊಡುಗೆ ಎಷ್ಟು? ಎಂಬುದನ್ನು ವಿಶ್ಲೇಷಿಸಿರುವ ಹಿರಿಯ ಕ್ರಿಕೆಟಿಗರು ಅದನ್ನು ಕ್ರಮವಾಗಿ 30:70 ಎಂದು ಹೇಳಿ ದ್ದಾರೆ. ಇದನ್ನೇ ಎಲ್ಲ ರೀತಿಯ ಪರೀಕ್ಷೆಗಳಿಗೂ ಅನ್ವಯಿಸಬಹುದು. ವಿಸ್ತರಿಸಿ ಹೇಳುವುದಾದರೆ ತರಬೇತಿ ನೀಡುವವನ ಪಾಲಿಗಿಂತ ಸ್ವತಃ ಆಡುವ ಆಟಗಾರನ ಪಾಲೇ ಯಶಸ್ಸಿನಲ್ಲಿ ಹೆಚ್ಚಾಗಿರುತ್ತದೆ. ಇಲ್ಲೊಂದು ವೈರುದ್ಯವನ್ನು ಗಮನಿಸಿ. ಸುನಿಲ್ ಗವಾಸ್ಕರ್, ವಿವಿಯನ್ ರಿಚರ್ಡ್ಸ್, ಮೈಕೆಲ್ ಶುಮಾಕರ್‌ಗೆ ಯಾವುದೇ ಪರ್ಸನಲ್ ಕೋಚ್ ಇರಲಿಲ್ಲ. ಆದರೂ ಅವರ ಸಾಧನೆ, ಯಶಸ್ಸನ್ನು ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ.

ವಿಶೇಷ ತರಬೇತಿ ಅನಿವಾರ್ಯವಲ್ಲ

ಐಎಎಸ್, ಐಪಿಎಸ್ ಪರೀಕ್ಷೆಗಳಲ್ಲಿ ಯಶಸ್ಸುಗಳಿಸಲು ವಿಶೇಷ ತರಬೇತಿಯ ಅಗತ್ಯವಿಲ್ಲ. ಹಾಗೆಂದು ಇದು ಎಲ್ಲರಿಗೂ ಅನ್ವಯವಾಗುವುದೂ ಇಲ್ಲ. ಯಾವುದಾದರೂ ಕೋಚಿಂಗ್ ಇನ್‌ಸ್ಟಿಟ್ಯೂಟ್ ಸೇರಿಕೊಂಡು ಸಾಧಿಸುತ್ತೇನೆ ಎನ್ನುವವರು ಅದನ್ನು ಅನಿವಾರ್ಯ ಎಂದುಕೊಳ್ಳಬಾರದು. ತರಬೇತಿ ಕೇಂದ್ರಗಳಿಂದ ನೆರವು ಸಿಗುವುದು ಕೇವಲ ಕಾಲು ಭಾಗವಾದರೆ ಉಳಿದ ಮುಕ್ಕಾಲು ಭಾಗ ನೀವು ಶ್ರಮ ಹಾಕಲೇಬೇಕು. ನಿಮ್ಮ ಕಠಿಣ ಶ್ರಮ, ಸ್ವಯಂ ಓದು, ಸ್ಥಿರತೆ (Consistency) ಮತ್ತು ನೀವು ಎಷ್ಟು ಬದ್ಧತೆಯಿಂದ ಅಧ್ಯಯನ ನಡೆಸುತ್ತೀರಿ ಎಂಬುದು ಹೆಚ್ಚು ಮುಖ್ಯವಾಗುತ್ತದೆ. ಹಿಂದಿನ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಉನ್ನತ ರ‍್ಯಾಂಕ್ ತೆಗೆದವರು ‘ಕೋಚಿಂಗ್ ಕೇಂದ್ರದ ಪಾತ್ರ ಕೇವಲ ಶೇ 20 ರಷ್ಟು‘ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಹಾನಗರಗಳಲ್ಲಷ್ಟೇ ಇರುವ ಕೋಚಿಂಗ್ ಕೇಂದ್ರಗಳಿಗೆ ದೂರದ ಹಳ್ಳಿ ತಾಲ್ಲೂಕು ಕೇಂದ್ರಗಳ ಅಭ್ಯರ್ಥಿಗಳು ಬರುತ್ತಾರೆ. ವಸತಿ – ಊಟ – ಓಡಾಟಕ್ಕೆಂದು ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಇದರ ಬದಲಿಗೆ ಸ್ವಯಂ ಶಕ್ತಿಯನ್ನೇ ನಂಬಿಕೊಂಡು ಕೋಚಿಂಗ್ ಸಂಸ್ಥೆಗೆ ಹಾಕುವ ದುಡ್ಡಿನಲ್ಲಿ ಓದಿಗೆ ಅಗತ್ಯವಾದ ಪುಸ್ತಕ – ಪತ್ರಿಕೆಗಳನ್ನು ಕೊಂಡು ಓದಬಹುದು. ಮೊಬೈಲ್ – ಇಂಟರ್‌ನೆಟ್‌ಗಳ ಮೂಲಕ ಉಚಿತವಾಗಿ ಸಿಗುವ ಅಧ್ಯಯನ ಸಾಮಗ್ರಿಗಳನ್ನು ಡೌನ್‌ಲೋಡ್ ಮಾಡಿಕೊಂಡು, ಇಲ್ಲವೇ ವೆಬ್‌ಸೈಟ್‌ಗಳನ್ನು ನಿರಂತರವಾಗಿ ಸಂಪರ್ಕಿಸಿ ಬೇಕಾದಷ್ಟು ತಯಾರಿ ಮಾಡಿಕೊಳ್ಳಬಹುದು.

ಯಾರಿಗೆ ಕೋಚಿಂಗ್ ಅಗತ್ಯ?

ಎಂಜಿನಿಯರಿಂಗ್ ಓದಿದ ವಿದ್ಯಾರ್ಥಿಗಳಿಗೆ ಕಲಾ ವಿಭಾಗದ ವಿಷಯಗಳಾದ ತತ್ವಶಾಸ್ತ್ರ, ಸಮಾಜಶಾಸ್ತ್ರದ ಬಗ್ಗೆ ಪ್ರಾಥಮಿಕ ತಿಳಿವಳಿಕೆಯೂ ಇರುವುದಿಲ್ಲ. ಅಂಥವರಿಗೆ ತರಬೇತಿ ಕೇಂದ್ರಗಳ ಕೋಚಿಂಗ್‌ ಬೇಕು. ಇನ್ನು ಇಂಗ್ಲಿಷ್‌ ಮಾಧ್ಯಮದಲ್ಲೇ ಓದಿದ ಕರ್ನಾಟಕದ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯವನ್ನು ಆಯ್ದುಕೊಂಡರೆ ಅವರಿಗೂ ಇದೇ ಸಮಸ್ಯೆ ಎದುರಾಗುತ್ತದೆ. ಮುಖ್ಯ ಪರೀಕ್ಷೆ ಎದುರಿಸಲು ಆಯ್ದುಕೊಂಡ ವಿಷಯಗಳನ್ನು ಆಳವಾಗಿ ಅಭ್ಯಸಿಸಲು ಕ್ರಮಬದ್ಧವಾದ ಕೋಚಿಂಗ್‌ ಬೇಕು. ಇದು ಅಭ್ಯರ್ಥಿಗಳ ಕ್ಷಮತೆ ಹೆಚ್ಚಿಸುತ್ತದೆ.

ಕೋಚಿಂಗ್ ಕೇಂದ್ರ ಸೇರಿದರೂ ಅಲ್ಲಿ ಕೊಡುವ ನೋಟ್ಸ್, ಪಾಠ, ಪವರ್‌ಪಾಯಿಂಟ್ ಪ್ರೆಸೆಂಟೇಶನ್, ಪ್ರಶ್ನೋತ್ತರ ಸೆಷನ್‌ಗಳು ನಿಮ್ಮ ತಿಳಿವಳಿಕೆಯನ್ನೇನೋ ಹೆಚ್ಚಿಸುತ್ತವೆ. ಸಹಪಾಠಿಗಳ ಬಳಿ ನಡೆಸುವ ಚರ್ಚೆಗಳಿಂದ ನಿಮ್ಮ ಅನುಮಾ ನಗಳು ತಕ್ಕಮಟ್ಟಿಗೆ ಬಗೆಹರಿಯುತ್ತವೆ. ಅಧ್ಯಾಪಕರ ಉಪದೇಶ ಮತ್ತು ಎಚ್ಚರಿಕೆಯ ಮಾತುಗಳು ನಿಮ್ಮ ಕಲಿಯುವ ಕ್ಷಮತೆ ಹೆಚ್ಚಿಸುತ್ತವೆ. ಆದರೆ, ಇದೆಲ್ಲ ಆಗುವುದು ನೀವು ಉತ್ತಮ ಕೋಚಿಂಗ್ ಕೇಂದ್ರವನ್ನು ಸೇರಿದಾಗ ಮಾತ್ರ.

ನೆನಪಿರಲಿ. ಕೋಚಿಂಗ್ ಕೇಂದ್ರಗಳಲ್ಲಿ ನೀಡುವ ನೋಟ್ಸ್‌ಗಳು ಗುಣಮಟ್ಟದ ಪುಸ್ತಕಗಳಿಗೆ ಯಾವತ್ತೂ ಸಮವಲ್ಲ. ನುರಿತ ವಿಷಯ ತಜ್ಞರು, ಸಂಪನ್ಮೂಲ ವ್ಯಕ್ತಿಗಳು ಬರೆದಿರುವ ಪುಸ್ತಕಗಳಲ್ಲಿ ವಸ್ತು–ವಿಷಯಗಳ ಸರಿಯಾದ ವಿಶ್ಲೇಷಣೆಯಿರುತ್ತದೆ. ಸಮರ್ಥ ಉದಾಹರಣೆಗಳಿರುತ್ತವೆ. ಅಂಕಿ – ಅಂಶಗಳು ಸರಿಯಾಗಿರುತ್ತವೆ.

ಹಾಗೆಂದು, ನೋಟ್ಸ್‌ಗಳಿಂದ ಉಪಯೋಗವೇ ಇಲ್ಲವೆಂದಲ್ಲ. ಪರೀಕ್ಷೆಗೂ ಮುಂಚೆ ಪೂರ್ಣ ಪಠ್ಯಕ್ಕಿಂತ ಸಂಕ್ಷಿಪ್ತವಾಗಿರುವ ನೋಟ್ಸ್ ಓದಿದರೆ ಕಡಿಮೆ ಸಮಯದಲ್ಲಿ ಪುನರಾವರ್ತನೆ ಮಾಡಬಹುದು. ತರಬೇತಿ ಕೇಂದ್ರದ ನೋಟ್ಸ್‌ಗಳು ವಿಷಯಕ್ಕೆ ಸೀಮಿತವಾಗಿರುವುದರಿಂದ ಬೇಗ ಓದಿ ಮುಗಿಸಬಹುದು. ಉದಾಹರಣೆಗೆ ಸರ್ಕಾರಿ ಯೋಜನೆಯೊಂದರ ಬಗ್ಗೆ ಓದ ಬೇಕೆಂದುಕೊಂಡರೆ ವೆಬ್‌ಸೈಟ್‌ಗಳನ್ನು ಮತ್ತು ಪುಸ್ತಕವನ್ನು ಹುಡುಕಾಡುವ ಬದಲು ಅದಕ್ಕೆಂದೇ ಇರುವ ಪ್ರತ್ಯೇಕ ನೋಟ್ಸ್ ಓದಿದರೆ ಸಾಕಷ್ಟು ಸಮಯ ಉಳಿಯುತ್ತದೆ.

ಸಿವಿಲ್ ಸರ್ವಿಸಸ್ ಪರೀಕ್ಷೆಗಳು ಯಾವುದೋ ಪದವಿ ಪರೀಕ್ಷೆಯಂತಲ್ಲ. ಅದಕ್ಕೆ ಪ್ರಾಧ್ಯಾಪಕರು ನೀಡಿದ ನೋಟ್ಸ್‌ಗಳನ್ನು ಓದಿ ಮುಗಿಸಿದರೆ ಸಾಕು, ಉತ್ತಮ ಅಂಕಗಳಿಸಬಹುದು. ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಪ್ರಶ್ನೆಗಳು ಉನ್ನತ ಮಟ್ಟದಲ್ಲಿರುತ್ತವೆ. ಉತ್ತರಿಸಲು ತೀಕ್ಷ್ಣ ವಿಶ್ಲೇಷಣಾ ಸಾಮರ್ಥ್ಯವಿರಬೇಕಾಗುತ್ತದೆ. ಇದು ನೋಟ್ಸ್‌ಗಳಿಂದ ಸಿಗುವುದಿಲ್ಲ. ಕಾನ್ಸೆಪ್ಟ್‌ಗಳ ಬಗ್ಗೆ ನಿಮಗಿರುವ ಸ್ಪಷ್ಟತೆ ಮತ್ತು ಆಳವಾದ ತಿಳಿವಳಿಕೆಗಳು ಮೇನ್ಸ್ ಪರೀಕ್ಷೆಗಳಲ್ಲಿ ನಿಮಗೆ ಸತ್ವಪೂರ್ಣ ಉತ್ತರ ಬರೆಯಲು ನೆರವಾಗುತ್ತವೆ. ಆ ಕ್ಷಮತೆ ಬರುವುದಕ್ಕೆ ನೀವು ಗುಣಮಟ್ಟದ ಪುಸ್ತಕಗಳನ್ನು ಓದಬೇಕು. ಹಿಂದಿನ ವರ್ಷಗಳಲ್ಲಿ ಉನ್ನತ ರ‍್ಯಾಂಕ್‌ ಗಳಿಸಿದವರು ತಮ್ಮ ಅನುಭವಗಳನ್ನು ಜಾಲತಾಣ/ಬ್ಲಾಗ್‌ಗಳಲ್ಲಿ ಹೇಳಿಕೊಂಡಿರುತ್ತಾರೆ. ಅವರ ಅನುಭವದ ಮಾತುಗಳನ್ನು ಕೇಳಿಸಿಕೊಳ್ಳಬಹುದು. ಯಥಾವತ್ತು ಅವರನ್ನೇ ಅನುಸರಿಸುವ ಅಗತ್ಯವಿಲ್ಲ. ಈ ಪರೀಕ್ಷೆಗಳಲ್ಲಿ ಬೇರೆಲ್ಲ ವಿಷಯಗಳಿಗಿಂತ ನಿಮ್ಮ ತಯಾರಿ, ವೈಯಕ್ತಿಕ ಸಾಮರ್ಥ್ಯ, ಮನೋಬಲವೇ ಬಹಳ ಮುಖ್ಯವಾಗುತ್ತದೆ.

ಕೋಚಿಂಗ್ ಸೇರಲೇಬೇಕು ಎಂದಿದ್ದರೆ, ಈಗಾಗಲೇ ಆ ತರಬೇತಿ ಕೇಂದ್ರಗಳಲ್ಲಿ ತರಬೇತಿ ತೆಗೆದುಕೊಂಡವರನ್ನು ಮಾತನಾಡಿಸಿ ಮುಂದೆ ಹೆಜ್ಜೆ ಇಡಿ. ಅವರ ಪ್ರತಿಕ್ರಿಯೆಗಳನ್ನು ಆಧರಿಸಿ ಕೋಚಿಂಗ್ ಸೆಂಟರ್‌ಗೆ ಸೇರುವ ಕುರಿತು ನಿರ್ಧರಿಸಿ. ತರಬೇತಿ ಕೇಂದ್ರಗಳಲ್ಲಿ ಸರಣಿ ಪರೀಕ್ಷೆ ನಡೆಸುತ್ತಾರೆ. ಅವು ನಿಯಮಿತವಾಗಿ ನಡೆಯುವುದರಿಂದ ಅವುಗಳನ್ನು ತೆಗೆದುಕೊಂಡರೆ ನಿರ್ಣಾಯಕ ಪರೀಕ್ಷೆ ಹೇಗಿರುತ್ತದೆ ಎಂದು ಗೊತ್ತಾಗಿ ಅದನ್ನು ಬರೆಯುವ ವೇಳೆಗೆ ನಿಮ್ಮಲ್ಲಿ ಆತ್ಮವಿಶ್ವಾಸ ಮೂಡಿರುತ್ತದೆ. ಪ್ರಶ್ನೆಗಳಿಗೆ ಉತ್ತರಿಸುವಾಗ ಹೇಗೆ ಸಮಯ ನಿರ್ವಹಿಸಬೇಕೆಂಬುದು ತಿಳಿಯುತ್ತದೆ.

ಸ್ವಂತ ತಯಾರಿಯೇ ಉತ್ತಮ

ಯುಪಿಎಸ್‌ಸಿ ಪರೀಕ್ಷೆಗಳನ್ನು ಮ್ಯಾರಥ್ಯಾನ್ ಓಟಕ್ಕೆ ಹೋಲಿಸುತ್ತಾರೆ. ರೇಸ್‌ನ ದಿನ ಮೈದಾನಕ್ಕೆ ಬಂದರೆ ಆಗುವುದಿಲ್ಲ. ಪೂರ್ವ ತಯಾರಿ ಬೇಕೇ ಬೇಕು. ಸಿವಿಲ್ ಸರ್ವಿಸಸ್ ಪರೀಕ್ಷೆಗಳಿಗೂ ಸರಿಯಾದ ಪೂರ್ವ ತಯಾರಿ ಬೇಕು. ಅದು ಸ್ವಂತದ್ದಾಗಿದ್ದರೆ ತುಂಬಾ ಒಳ್ಳೆಯದು. ಕೋಚಿಂಗ್‌ಗೆ ಹೋಗದವರು Forum IAS, Civils Daily, Insights, IAS Baba ಮುಂತಾದ ಆನ್‌ಲೈನ್ ವೆಬ್‌ಸೈಟ್‌ಗಳಿಂದ ಹೆಚ್ಚಿನ ನೆರವು ಪಡೆಯಬಹುದು. ಪ್ರಸಕ್ತ ದಿನಗಳಲ್ಲಿ Clear IAS Website, Clear IAS Mobile app, Clear IAS Mock exam plat form, Insights ವೆಬ್‌ಸೈಟ್ ಬಹುಸಂಖ್ಯೆಯ ಅಭ್ಯರ್ಥಿಗಳ ಫೇವರೀಟ್ ಆಗಿದೆ.

(ಮುಂದಿನ ವಾರ: ಪಾಠ: 5 - ಸಿವಿಲ್ ಸರ್ವೀಸ್ ಪರೀಕ್ಷೆಯ ಯಶಸ್ಸಿಗೆ ಯಾವ ಪುಸ್ತಕ /ಸ್ಟಡಿ ಮೆಟೀರಿಯಲ್ ಓದಬೇಕು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT