ಶುಕ್ರವಾರ, ಏಪ್ರಿಲ್ 23, 2021
32 °C

ಕೋರ್ಸ್‌ ಆಯ್ಕೆ, ಪ್ರಬಲ ಕೌಶಲಕ್ಕೆ ಇರಲಿ ಆದ್ಯತೆ

ಅರ್ಜುನ್‌ ಶೆಣೈ Updated:

ಅಕ್ಷರ ಗಾತ್ರ : | |

Prajavani

‘ಈ ಕ್ಷೇತ್ರಕ್ಕೆ ಸ್ಕೋಪ್ ಇದೆಯಾ?’, ‘ಈ ಪದವಿ ಪಡೆದರೆ ಸುಲಭವಾಗಿ ಕೆಲಸ ಸಿಗುತ್ತಾ?’, ‘ಈ ಕೆಲಸಕ್ಕೆ ಸೇರಿದರೆ ಐದು ವರ್ಷಗಳಲ್ಲಿ ಸಾಕಷ್ಟು ಹಣ ಸಂಪಾದಿಸಬಹುದಾ?– ಉಪನ್ಯಾಸಕರಿಗೆ ವಿದ್ಯಾರ್ಥಿಗಳಿಂದ ಎದುರಾಗುವ ಸಾಮಾನ್ಯ ಪ್ರಶ್ನೆಗಳಿವು. ಪಿಯುಸಿಯ ವ್ಯಾಸಂಗ ಮುಗಿಯುತ್ತಲೇ ಮನದೊಳಗೆ ಮುಗಿಬೀಳುವ ಇಂತಹ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಉಪನ್ಯಾಸಕರೆದುರು ಇಡುವುದು ಸಾಮಾನ್ಯ ಸಂಗತಿ ಎನಿಸಿದರೂ ಕೂಡ ಇವುಗಳಿಗೆ ಉತ್ತರ ನೀಡುವುದು ಮಾತ್ರ ಕಠಿಣ ಸಾಧ್ಯ.

ಅಷ್ಟಕ್ಕೂ ‘ಸ್ಕೋಪ್’ ಎಂದರೇನು?
ಯಾವುದೋ ಒಂದು ನಿರ್ದಿಷ್ಟ ಕ್ಷೇತ್ರದ ಭವಿಷ್ಯವನ್ನು ಅಂದಾಜಿಸಿ, ನಿರ್ಣಯಿಸಿ, ತೀರ್ಪು ನೀಡುವುದು ಅಷ್ಟೊಂದು ಯೋಗ್ಯವಾದುದು, ಹಿತಕರವಾದುದು ಅಲ್ಲವೇ ಅಲ್ಲ. ಅದು ಅಷ್ಟೊಂದು ಸರಳ ವಿಚಾರವೂ ಅಲ್ಲ. ಒಂದು ದೃಷ್ಟಿಕೋನದಲ್ಲಿ ಸ್ಕೋಪ್ ಎನ್ನುವುದು ಭ್ರಾಂತಿ ಎಂದರೂ ತಪ್ಪಿಲ್ಲ. ಯಾಕೆಂದರೆ ಯಾವೊಂದು ಕ್ಷೇತ್ರವನ್ನು ಉತ್ಕೃಷ್ಟ ಎಂದಾಗಲಿ ನಿಕೃಷ್ಟ ಎಂದಾಗಲಿ ವಿಂಗಡಿಸಲಾಗದು. ಎಲ್ಲವೂ ಸಂಪೂರ್ಣವಾಗಿ ಅವಲಂಬಿತವಾಗಿರುವುದು ಆ ಹುದ್ದೆಯ ಆಕಾಂಕ್ಷಿಯ, ಆತನ ಆಯ್ಕೆಯ ಮೇಲೆ! ಅಷ್ಟಕ್ಕೂ ವಿದ್ಯಾರ್ಥಿಯ ಆಯ್ಕೆಯಲ್ಲಿ ದೋಷವಿರದೇ, ಅಗತ್ಯ ಕೌಶಲಗಳು ಇದ್ದರೆ ಖಂಡಿತಾ ಯಾವ ಕ್ಷೇತ್ರವೂ ಕೈಗೆಟುಕದ್ದೇನೂ ಅಲ್ಲ. ಹಾಗಾದರೆ ವಿದ್ಯಾರ್ಥಿಗಳು ಎಡವುವುದೆಲ್ಲಿ ಮತ್ತು ವಿದ್ಯಾರ್ಥಿಯೊಬ್ಬ ಯಾವುದಾದರೊಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕೆಂದರೆ ಆತನಲ್ಲಿರಬೇಕಾದ ಅಗತ್ಯ ಅಂಶಗಳು ಯಾವುವು?

ಯಾವ ಕ್ಷೇತ್ರ? ಆಯ್ಕೆ ಹೇಗೆ?
ಅನೇಕ ವಿದ್ಯಾರ್ಥಿಗಳಲ್ಲಿ, ಅಷ್ಟೇ ಯಾಕೆ ನಮ್ಮ ಸಮಾಜದಲ್ಲಿ ಒಂದು ಭ್ರಾಂತಿಯಿದೆ, ಅಂತಿಮ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದರೆ ವಿಜ್ಞಾನ, ಸಾಧಾರಣ ಅಂಕ ಗಳಿಸಿದರೆ ವಾಣಿಜ್ಯ ಮತ್ತು ಅತಿ ಕಡಿಮೆ ಅಂಕ ಗಳಿಸಿದರೆ ಕಲಾವಿಭಾಗ ಆಯ್ದುಕೊಳ್ಳುವುದು ಎಂದು! ಆದರೆ ಆಸಕ್ತಿದಾಯಕ ವಿಷಯವನ್ನು ಆಯ್ದುಕೊಳ್ಳುವ ಮುಕ್ತ ಸ್ವಾತಂತ್ರ್ಯ ವಿದ್ಯಾರ್ಥಿಗಿದ್ದೇ ಇದೆ. ಇಚ್ಛೆಯ ಕ್ಷೇತ್ರದಲ್ಲೇ ಓದು ಮುಂದುವರಿಸುವುದರಿಂದ ಭವಿಷ್ಯದಲ್ಲಿ ಯಾವುದೇ ವ್ಯಥೆ ಇರಲಾರದು! ಇಂದು ಅನೇಕ ವಿದ್ಯಾರ್ಥಿಗಳು ಪಿಯುಸಿಯ ಹಂತದಲ್ಲಿ ಆಯ್ದುಕೊಳ್ಳುವ ಕಾಂಬಿನೇಶನ್‌ನಲ್ಲೂ ತಪ್ಪು ಮಾಡುತ್ತಾರೆ. ಎರಡು ವರ್ಷ ಬಯಾಲಜಿ ಓದಿ ಬಳಿಕ ಕಂಪ್ಯೂಟರ್‌ನಲ್ಲಿ ಎಂಜಿನಿಯರಿಂಗ್ ಮಾಡುವ ಅನೇಕ ವಿದ್ಯಾರ್ಥಿಗಳಲ್ಲಿ ಎರಡು ವರ್ಷ ಬಯಾಲಜಿಯ ಬದಲು ಕಂಪ್ಯೂಟ್‌ ಅನ್ನೇ ಆಯ್ದುಕೊಂಡಿದ್ದರೆ ಪದವಿ ಮತ್ತಷ್ಟು ಸುಲಭವಾಗುತ್ತಿತ್ತು ಎಂಬ ಹಳಹಳಿಕೆ ಮೂಡುವುದಿದೆ. ಹೀಗಾಗದಂತೆ ಎಚ್ಚರ ವಹಿಸಬೇಕು. ಆ ನಿಮಿತ್ತ ಮೊದಲೇ ತಾನು ಸಾಗಬೇಕಾದ ದಾರಿಯಲ್ಲಿ ಸ್ಪಷ್ಟತೆಯನ್ನು ಕಂಡುಕೊಳ್ಳುವುದು ಒಳಿತು.

ಕೇವಲ ಓದಷ್ಟೇ ಸಾಕೆ?
ಕೇವಲ ಓದು ಮಾತ್ರವಲ್ಲದೇ ಪದವಿಗೆ ತಕ್ಕ ಕೌಶಲ ಇರಬೇಕಾಗಿರುವುದು ಇಂದಿನ ತುರ್ತು. ಪಿಯುಸಿಯವರೆಗೂ ಶಿಕ್ಷಣದಲ್ಲಿ ಅಂಕಗಳಿಗೇ ಪ್ರಾಧಾನ್ಯತೆ ಇರುವುದಾದರೂ ಪದವಿಯಲ್ಲಿ ಕನಿಷ್ಠ ಅಂಕದ ಜೊತೆಗೆ ವೃತ್ತಿಪರ ಕೌಶಲವುಳ್ಳವರಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಉದಾಹರಣೆಗೆ ಗಣಕಯಂತ್ರ ವಿಭಾಗದಲ್ಲಿ ಪದವಿ ಗಳಿಸುತ್ತಿರುವ ವಿದ್ಯಾರ್ಥಿಗೆ ತಂತ್ರಜ್ಞಾನದ ಹೊಸ ಆಗುಹೋಗುಗಳ ಸಾಮಾನ್ಯ ಅರಿವು ಇರಲೇಬೇಕಾಗುತ್ತದೆ. ಇದು ಪದವಿಯ ಜೊತೆಗೆ ಕೌಶಲವನ್ನು ಬೆಳೆಸುತ್ತದೆ. ಕೌಶಲ ನಿಮ್ಮನ್ನು ಅಸಾಮಾನ್ಯ ಮತ್ತು ಅಸಾಧಾರಣ ಎಂದು ಇತರರೊಂದಿಗೆ ಪ್ರತ್ಯೇಕಿಸುತ್ತದೆ. ಇಂದು ಕಲಿಕೆ ಕಷ್ಟಕರವೇನಲ್ಲ. ಸಾಕಷ್ಟು ಆನ್‌ಲೈನ್ ಸಂಸ್ಥೆಗಳು ಕಡಿಮೆ ವೆಚ್ಚದಲ್ಲಿ ಪ್ರಾಯೋಗಿಕ ಶಿಕ್ಷಣ ದೊರಕಿಸುತ್ತವೆ. ಪದವಿಯ ಹಂತದಲ್ಲಿ ಒಂದಲ್ಲ ಒಂದು ವಿಷಯದಲ್ಲಿ ನಿರಂತರ ಅಧ್ಯಯನ ಮಾಡುತ್ತಲಿದ್ದರೆ ಭವಿಷ್ಯದಲ್ಲೆಂದೋ ಅದು ಉಪಯೋಗಕ್ಕೆ ಬಂದೀತು. ಹೀಗಾಗಿ ಜ್ಞಾನದ ಹಸಿವು ಮತ್ತು ಕಲಿಕೆಯ ಚಪಲ ತೀರಾ ಹಿತಕರ.

ಸಂವಹನ ಕಲೆ
ನಿಮ್ಮ ಅಂಕಪಟ್ಟಿ ಎಷ್ಟೇ ಅಂಕಗಳಿಂದ ತುಂಬಿರಲಿ, ನಿಮ್ಮ ಪದವಿ ಎಷ್ಟೇ ಉತ್ಕೃಷ್ಟವಾಗಿರಲಿ, ಆದರೆ ಅಷ್ಟೇ ಮಜಬೂತು ಸಂವಹನ ಶೈಲಿಯಲ್ಲೂ ಇರಲೇಬೇಕು. ಬಹುತೇಕ ಎಲ್ಲ ಕಾರ್ಯಕ್ಷೇತ್ರದಲ್ಲೂ ಆಂಗ್ಲಭಾಷೆಯೇ ವ್ಯಾವಹಾರಿಕ ಭಾಷೆಯಾಗಿರುವುದರಿಂದ ಭಾಷೆಯ ಮೇಲಿನ ಹಿಡಿತ, ಜ್ಞಾನ ಕೂಡಾ ಅಷ್ಟೇ ಅನಿವಾರ್ಯ. ಕೆಲವೊಂದು ನಿರ್ದಿಷ್ಟ ಹುದ್ದೆಗಳಲ್ಲಿ ಬರವಣಿಗೆಯಲ್ಲಿಯೂ ಉತ್ಕೃಷ್ಟತೆಯನ್ನು ಅಪೇಕ್ಷಿಸಲಾಗುತ್ತದೆ. ಹೀಗಾಗಿ ಪದಬಳಕೆ, ಸ್ಪೆಲ್ಲಿಂಗ್, ವ್ಯಾಕರಣಗಳು ಕೂಡ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ. ಭಾಷಾಹಿಡಿತ ಸಾಕಷ್ಟು ಆತ್ಮಸ್ಥೈರ್ಯವನ್ನು ತುಂಬುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು