ಮಂಗಳವಾರ, ಜನವರಿ 18, 2022
15 °C

ಕೋವಿಡ್: ಕ್ರ್ಯಾಶ್‌ ಕೋರ್ಸ್- ಕಲಿಕೆಯ ಜೊತೆ ಗಳಿಕೆ

ಗುರುರಾಜ್ ಎಸ್. ದಾವಣಗೆರೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್ ವೈರಾಣು ದಿನಕ್ಕೊಂದು ಹೊಸರೂಪ ತಳೆದು ಜನರನ್ನು ಆತಂಕಕ್ಕೆ ದೂಡುತ್ತಿದೆ.  ಸೋಂಕು ಪತ್ತೆಯಾದ ತಕ್ಷಣ ಹೀಗೆ ಹೀಗೆ ಮಾಡಿ ಎಂದು ಮಾರ್ಗದರ್ಶನ ನೀಡುತ್ತಿದ್ದರೂ, ಜನ ಆಸ್ಪತ್ರೆಗೆ ದೌಡಾಯಿಸುವುದನ್ನು ಬಿಡುತ್ತಿಲ್ಲ. ಕಳೆದ ಎರಡು ಅಲೆಗಳಲ್ಲೂ ಆಸ್ಪತ್ರೆಗಳು ಭರ್ತಿಯಾಗಿ, ಬೆಡ್‌ ಸಿಗದೇ, ಆಕ್ಸಿಜನ್ ಸಿಗದೇ, ರೋಗಿಗಳ ಆರೈಕೆಗೆ ವೈದ್ಯರು, ವೈದ್ಯಕಿಯೇತರ ಸಿಬ್ಬಂದಿಯ ಕೊರತೆಯಾಗಿ ಪರದಾಡಿದ್ದನ್ನು ಎಲ್ಲರೂ ನೋಡಿದ್ದಾರೆ.

ಇದರ ನಡುವೆ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಜೀವದ ಹಂಗು ತೊರೆದು ಸೇವೆ ಮಾಡುತ್ತಿರುವ ವೈದ್ಯರು, ದಾದಿಯರು, ಮೇಲ್ ನರ್ಸ್‌ಗಳು ತಮಗೆ ಸಿಗಬೇಕಾದ ಭತ್ಯೆ - ಸಂಬಳ ದೊರಕದಿದ್ದಾಗ ಮುಷ್ಕರ ನಡೆಸಿ ಸರ್ಕಾರಗಳನ್ನು ಹೈರಾಣ ಮಾಡಿದ್ದೂ ಇದೆ.

ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಸೋಂಕು ನಿಯಂತ್ರಿಸಲು, ರೋಗಿಗಳಿಗೆ ಚಿಕಿತ್ಸೆ ನೀಡಲು ಏಕಾಏಕಿ ಸಾವಿರಾರು ವೈದ್ಯರು, ನರ್ಸ್‌ಗಳನ್ನು ನೇಮಿಸಿಕೊಳ್ಳುವ ಪರಿಸ್ಥಿತಿ ಎದುರಾಗಿತ್ತು. ಆದರೆ, ಏಕಾ ಏಕಿ ಇಷ್ಟು ದೊಡ್ಡ ಪ್ರಮಾಣದಲ್ಲಿ ವೈದ್ಯ ಸಿಬ್ಬಂದಿ ನೇಮಿಸಿಕೊಳ್ಳಲು ಸರ್ಕಾರದ ಬಳಿ ದೊಡ್ಡ ಬಜೆಟ್ ಇರಲಿಲ್ಲ. 

ಕೋವಿಡ್ ಕಾಲದಲ್ಲಿ ಎದುರಾದ ಮಾನವ ಸಂಪನ್ಮೂಲ ಕೊರತೆಯನ್ನು ಎದುರಿಸಲು ಹಾಗೂ ಭವಿಷ್ಯದ ಆರೋಗ್ಯ ಕ್ಷೇತ್ರದಲ್ಲಿ ವೈದ್ಯಕೀಯೇತರ ಆರೋಗ್ಯ ಕಾರ್ಯಕರ್ತರ ಸಂಖ್ಯೆ ಹೆಚ್ಚಿಸಲು ಕೇಂದ್ರ ಸರ್ಕಾರ ಕೊರೊನಾ ವಾರಿಯರ್‌ಗಳಿಗೆ ತರಬೇತಿ ನೀಡಲು ‘ಕ್ರ್ಯಾಶ್ ಕೋರ್ಸ್‌‘ ಆರಂಭಿಸಿದೆ. ರಾಜ್ಯದಲ್ಲಿ ಕರ್ನಾಟಕ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್‌ (ಕೆಎಸ್‌ಡಿಸಿ) ಹಾಗೂ ವಿಪ್ರೊ ಮತ್ತು ಜಿ.ಇ ಹೆಲ್ತ್ ಕೇರ್ ಕಂಪನಿಗಳ ಸಹಯೋಗದಲ್ಲಿ ಕಡಿಮೆ ಖರ್ಚು ಮತ್ತು ಅವಧಿಯಲ್ಲಿ ಕ್ರ್ಯಾಶ್‌ ಕೋರ್ಸ್‌ಗಳನ್ನು ಪ್ರಾರಂಭಿಸಿದೆ.

ನೋಡಿ-ಮಾಡಿ-ಕಲಿ ಎನ್ನುವ ತಳಹದಿಯ ಮೇಲೆ ಜಿಲ್ಲಾ ಕೇಂದ್ರಗಳಲ್ಲಿ ನುರಿತ ತರಬೇತುದಾರರಿಂದ ತರಬೇತಿ ನೀಡಲಾಗುತ್ತದೆ. ತರಬೇತಿ ಸಮಯದಲ್ಲಿ ಊಟ, ದೂರದೂರಿನಿಂದ ಬಂದವರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ.

ತರಬೇತಿಯ ಅವಧಿಯಲ್ಲಿ ಅಭ್ಯರ್ಥಿಗಳಿಗೆ, ‘ರೋಗಿಗಳಿಗೆ ಮಾರ್ಗದರ್ಶನ ನೀಡುವುದು‘, ವೈದ್ಯರಿಗೆ ನೆರವಾಗುವುದು, ಆರೈಕೆಯ ವಿಧಾನ ಮತ್ತು ಆರೋಗ್ಯ ತುರ್ತುಪರಿಸ್ಥಿತಿಯಲ್ಲಿ ಎದುರಾಗುವ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು  ಎಂಬುದರ ಕುರಿತು ಮಾಹಿತಿ ನೀಡಲಾಗುತ್ತದೆ. ಮೂರು ವರ್ಷಗಳ ನರ್ಸಿಂಗ್ ಕೋರ್ಸ್‌ನಲ್ಲಿ ಕಲಿಸುವಂತೆ ಮೂರು ತಿಂಗಳ ಒಜೆಟಿ (ಆನ್ ಜಾಬ್ ಟ್ರೈನಿಂಗ್‌) ಇರುತ್ತದೆ.

ಈ ಮಾರ್ಚ್ ವೇಳೆಗೆ ಸುಮಾರು 20,000 ಯುವಕ/ಯುವತಿಯರಿಗೆ ತರಬೇತಿ ನೀಡುವ ಉದ್ದೇಶ ಹೊಂದಿರುವ ಕೆಎಸ್‌ಡಿಸಿ ಈಗಾಗಲೇ 24 ಜಿಲ್ಲಾ ತರಬೇತಿ ಕೇಂದ್ರಗಳ 38 ಕ್ರೇಂದ್ರಗಳಲ್ಲಿ ತರಬೇತಿ ಪ್ರಾರಂಭಿಸಿದೆ.

ರಾಷ್ಟ್ರೀಯ ಕೌಶಲಾಭಿವೃದ್ಧಿ ಮಂಡಳಿಯ(ಎನ್‌ಎಸ್‌ಡಿಸಿ) ಮಾರ್ಗಸೂಚಿಯಂತೆ ಮೊದಲ ಹಂತದ ಆರು ಕೋರ್ಸ್‌ಗಳನ್ನು ವಿನ್ಯಾಸಗೊಳಿಸಿ ಥಿಯರಿ ಮತ್ತು ಪ್ರಾಕ್ಟಿಕಲ್ ಎರಡೂ ಇರುವ ಈ ಕೋರ್ಸ್‌ಗಳಲ್ಲಿ, ಪ್ರಾಯೋಗಿಕ ಕಲಿಕೆಯನ್ನು ಜಿಲ್ಲಾ ವೈದ್ಯಕೀಯ ಕೇಂದ್ರಗಳಲ್ಲಿ ನೀಡಲಾಗುತ್ತಿದೆ.

ಜೀವ ಮತ್ತು ಜೀವನೋಪಾಯಗಳೆರಡನ್ನೂ ಕಾಪಾಡುವ ಬದ್ಧತೆಯನ್ನು ಹೊಂದಿರುವ ತರಬೇತಿ ಮಾಡ್ಯೂಲ್‌ಗಳು ಇರುವ, ಕೋವಿಡ್ ನಂತರವೂ ಉಪಯೋಗಕ್ಕೆ ಬರುವ ತರಬೇತಿ ಇದಾಗಿದೆ. ಈ ಕೋರ್ಸ್‌ ಮುಗಿಸಿದ ನಂತರ ರಾಜ್ಯ ಸರ್ಕಾರ ಪ್ರಮಾಣ ಪತ್ರ ನೀಡುತ್ತದೆ. ಈ ಪ್ರಮಾಣ ಪತ್ರದ ಆಧಾರದಲ್ಲಿ ಕೆನಡಾ ಸೇರಿದಂತೆ ಇತರ ದೇಶಗಳಲ್ಲೂ ಉದ್ಯೋಗ ಸಿಗುತ್ತದೆ.

ಹೆಚ್ಚಿನ ಮಾಹಿತಿಗಾಗಿ www.kaushalkar.com / www.skillconnect.kaushalkar.com ಈ ಜಾಲತಾಣಗಳಿಗೆ ಭೇಟಿ ನೀಡಿ. ಕೌಶಲ ಸಹಾಯವಾಣಿ: 155267 ಇಲ್ಲಿಗೂ ಸಂಪರ್ಕಿಸಬಹುದು.

ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸ್ ಅಥವಾ ಫೇಲ್
ತರಬೇತಿಯ ಅವಧಿ: 3 ತಿಂಗಳು (350 ಗಂಟೆ)
ಕೋರ್ಸ್ ಶುಲ್ಕ: ಇರುವುದಿಲ್ಲ
ಪ್ರಶಿಕ್ಷಣಾರ್ಥಿಗಳಿಗೆ ದಿನಭತ್ಯೆ: ₹125

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು