ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಪ್ಲೊಮಾ ಬಳಿಕ ಪದವಿ ಸೇರಬಹುದೇ?

Last Updated 6 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

* ನಾನು ಡಿಪ್ಲೊಮಾ ಓದುತ್ತಿದ್ದೇನೆ. ಮೂರು ವರ್ಷದ ಡಿಪ್ಲೊಮಾ ಬಳಿಕ ಪದವಿ ಕೋರ್ಸ್ ಸೇರಲು ಸಾಧ್ಯವೇ?

ಪವನಾ, ಊರು ತಿಳಿಸಿಲ್ಲ.

-ಮೂರು ವರ್ಷದ ಡಿಪ್ಲೊಮಾ ಬಳಿಕ ಪದವಿ ಕೋರ್ಸ್‌ಗೆ ಸೇರಬಹುದು.

* ನಾನು 75 ವರ್ಷದ ವ್ಯಾಪಾರಸ್ಥ. ನಾನು ಎಂಎ, ಬಿಕಾಂ, ಪದವಿಗಳನ್ನು ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪಡೆದಿರುತ್ತೇನೆ. ಸರ್ಟಿಫಿಕೇಟ್ ಲಭ್ಯವಿಲ್ಲ. ಓದಿನಲ್ಲಿ ಆಸಕ್ತಿಯಿದೆ.ಕೇವಲ ವಯಸ್ಸಿನ ಆಧಾರದ ಮೇಲೆ ಎಲ್‍ಎಲ್‍ಬಿ ಕಲಿಯಬಹುದೇ?

ಪೀ.ಕೆ. ಎಂ., ಊರು ತಿಳಿಸಿಲ್ಲ.

-ನಿಮ್ಮ ಜ್ಞಾನಾರ್ಜನೆಯ ಆಸಕ್ತಿ ಶ್ಲಾಘನೀಯ. ನಮಗಿರುವ ಮಾಹಿತಿಯಂತೆ, ಪದವಿ ಕೋರ್ಸ್ ಆಧಾರದ ಮೇಲೆ ದೂರ ಶಿಕ್ಷಣದ ಮುಖಾಂತರ ಎಲ್ಎಲ್‍ಬಿ ಕೋರ್ಸ್ ಅನ್ನು ಮಾಡಬಹುದು. ಹಾಗಾಗಿ, ಪದವಿಯ ಸರ್ಟಿಫಿಕೇಟ್ ಅಗತ್ಯವಾಗಬಹುದು. ಈ ಕೋರ್ಸ್‍ಗೆ ಬಾರ್ ಕೌನ್ಸಿಲ್‌ ಮಾನ್ಯತೆ ಇರುವುದಿಲ್ಲ.

* ನಾನು ಈಗ ಬಿಕಾಂ ಅಂತಿಮ ವರ್ಷದಲ್ಲಿ ಓದುತ್ತಿದ್ದು, ಮನೆಯಲ್ಲಿ ಆರ್ಥಿಕ ಸಮಸ್ಯೆ ಇರುವ ಕಾರಣ ಓದಿನ ಜೊತೆ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಆದ್ದರಿಂದ, ಬೇಗನೆ ಉದ್ಯೋಗ ಮಾಡಲು ಯಾವ ಕೋರ್ಸ್‌ ಕಲಿಯಬೇಕು ಎಂದು ತಿಳಿಸಿಕೊಡಿ.

ಹೆಸರು, ಊರು ತಿಳಿಸಿಲ್ಲ.

-ಈಗಿನ ಪರಿಸ್ಥಿತಿಯಿಂದ ಎದೆಗುಂದದೆ, ನಿಮ್ಮ ದೀರ್ಘಾವಧಿ ಕನಸುಗಳನ್ನು ಸಾಕಾರಗೊಳಿಸುವ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಿ. ಆರ್ಥಿಕ ಸಮಸ್ಯೆಯ ಕಾರಣದಿಂದ ನಿಮ್ಮ ಭವಿಷ್ಯದ ಕನಸುಗಳನ್ನು ಕಾಣದೆ ಮುಂದಿನ ಬದುಕಿನ ಬಗ್ಗೆ ರಾಜಿಯಾಗದಿರಿ; ಏಕೆಂದರೆ, ಆರ್ಥಿಕ ಸಮಸ್ಯೆಗಳು ತಾತ್ಕಾಲಿಕ.

ಬಿಕಾಂ ನಂತರ ಬ್ಯಾಂಕಿಂಗ್, ಫೈನಾನ್ಸ್, ಇನ್ವೆಸ್ಟ್‌ಮೆಂಟ್, ಇನ್ಶ್ಯೂರೆನ್ಸ್, ರೀಟೇಲ್, ಮಾರ್ಕೆಟಿಂಗ್, ಎಫ್‌ಎಂಜಿಸಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನೀವು ವೃತ್ತಿಯನ್ನು ಅರಸಬಹುದು ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಕೆಲಸಗಳನ್ನೂ ಪಡೆದುಕೊಳ್ಳಬಹುದು. ಜೊತೆಗೆ, ನಿಮ್ಮ ಆಸಕ್ತಿಯ ಅನುಸಾರ ದೂರ ಶಿಕ್ಷಣದ ಮುಖಾಂತರ ಎಂಬಿಎ, ಎಂಕಾಂ ಮುಂತಾದ ಸ್ನಾತಕೋತ್ತರ ಕೋರ್ಸ್‍ಗಳನ್ನು ಮಾಡಬಹುದು. ಬಿಕಾಂ ಮುಗಿಯುವವರೆಗೆ ಅರೆಕಾಲಿಕ ಕೆಲಸಗಳನ್ನು ಮಾಡಬಹುದು. ಹೆಚ್ಚಿನ ವಿವರಗಳಿಗೆ ಗಮನಿಸಿ: http://www.vpradeepkumar.com/earn-while-you-learn-3/

* ನಾನು ದ್ವಿತೀಯ ಪಿಯುಸಿ ಓದುತ್ತಿದ್ದು, ಮುಂದೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಐದು ವರ್ಷದ ಕಾನೂನು ಪದವಿ ಮಾಡಬೇಕೆಂಬ ಕನಸಿದೆ. ಈ ಬಗ್ಗೆ ಮಾಹಿತಿ ನೀಡಿ.

ಹೆಸರು, ಊರು ತಿಳಿಸಿಲ್ಲ.

ಈ ಬಗ್ಗೆ ಹೆಚ್ಚಿನ ವಿವರಗಳಿಗೆ ಗಮನಿಸಿ: https://www.nls.ac.in/

* ನಾನು ಬಿಬಿಎ ಪದವಿಯಲ್ಲಿ ಶೇಕಡ 80 ಅಂಕ ಪಡೆದಿದ್ದೇನೆ. ಮುಂದೆ ಯಾವ ಕೋರ್ಸ್‌ ಮಾಡಿದರೆ ಹೆಚ್ಚಿನ ಉದ್ಯೋಗಾವಕಾಶಗಳು ಸಿಗುತ್ತವೆ ಮತ್ತು ಆ ಕೋರ್ಸ್ ಮಾಡಲು ಇರುವ ಒಳ್ಳೆಯ ಕಾಲೇಜುಗಳನ್ನು ತಿಳಿಸಿ.

-ಚೇತನ್ ಎಸ್.ಕೆ., ಚಿತ್ರದುರ್ಗ.

ಬಿಬಿಎ ನಂತರ ಎಂಬಿಎ ಕೋರ್ಸ್ ಮಾಡುವುದು ಉತ್ತಮ. ಉದ್ಯಮಗಳ ಅಭಿವೃದ್ಧಿಗಾಗಿ, ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಯೋಜನೆಗಳನ್ನು ರಚಿಸಿ, ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವುದೇ ಮ್ಯಾನೇಜ್‍ಮೆಂಟ್‍ನ ಮೂಲ ಉದ್ದೇಶ. ಈ ಜವಾಬ್ದಾರಿಗಳನ್ನು ನಿರ್ವಹಿಸಲು, ಸಮಗ್ರವಾದ ಜ್ಞಾನ ಮತ್ತು ಕೌಶಲಗಳನ್ನು ಎಂಬಿಎ ಕೋರ್ಸ್‌ನಲ್ಲಿ ನೀಡಲಾಗುತ್ತದೆ. ಇದಲ್ಲದೆ, ಉದ್ಯಮಗಳಲ್ಲಿ ಪ್ರಾಯೋಗಿಕವಾದ ತರಬೇತಿಯನ್ನು ಪ್ರಾಜೆಕ್ಟ್‌ಗಳ ಮುಖಾಂತರ ನೀಡುವುದರಿಂದ ಕಲಿಕೆ ಪರಿಪೂರ್ಣವಾಗುತ್ತದೆ. ನಿಮ್ಮ ನೈಪುಣ್ಯತೆ ಮತ್ತು ಚತುರತೆ ವರ್ಧಿಸಿ, ಯಾವುದೇ ಕೆಲಸವನ್ನು ನಿಭಾಯಿಸುವ ಆತ್ಮವಿಶ್ವಾಸ ಬೆಳೆಯುತ್ತದೆ.

ಒಟ್ಟಾರೆ, ಎಂಬಿಎ ಕಲಿಕೆಯ ವೈವಿಧ್ಯತೆಗಳಿಂದ ನಿಮ್ಮ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯಾಗುತ್ತದೆ. ಆದ್ದರಿಂದಲೇ, ಎಂಬಿಎ ಕೋರ್ಸ್ ಜನಪ್ರಿಯ.

ನಮ್ಮ ದೇಶದಲ್ಲಿ ಸುಮಾರು 5000ಕ್ಕೂ ಹೆಚ್ಚಿನ ಎಂಬಿಎ ಕಾಲೇಜುಗಳಿದ್ದು, ಸಿಎಟಿ, ಪಿಜಿಸಿಇಟಿ ಗಳಂತಹ ಪರೀಕ್ಷೆಗಳ ಮೂಲಕ ಪ್ರವೇಶದ ಆಯ್ಕೆಯಾಗುತ್ತದೆ. ಕ್ಯಾಂಪಸ್ ನೇಮಕಾತಿ ಇರುವ, ಉತ್ತಮ ರ‍್ಯಾಂಕಿಂಗ್‌ ಇರುವ ಪ್ರತಿಷ್ಟಿತ ಕಾಲೇಜು/ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡಬೇಕು. ಈ ಮಾಹಿತಿಯನ್ನು ಅನೇಕ ಮಾಧ್ಯಮಗಳು ಅಂತರ್ಜಾಲದಲ್ಲಿ ಪ್ರಕಟಿಸುತ್ತವೆ. ಎಲ್ಲಕ್ಕಿಂತ ಪ್ರಮುಖವಾಗಿ ಎಂಬಿಎ ಕೋರ್ಸಿನಲ್ಲಿ ವೃತ್ತಿಗೂ, ಜೀವನಕ್ಕೂ ಅಗತ್ಯವಾದ ಅನೇಕ ಮೂಲಭೂತ ತತ್ವಗಳ, ಮೌಲ್ಯಗಳ ಮನದಟ್ಟಾಗುತ್ತದೆ. ಈ ತತ್ವಗಳ ಆಧಾರದ ಮೇಲೆ, ನೀವು ವೃತ್ತಿ ಮತ್ತು ಖಾಸಗಿ ಜೀವನಗಳೆರಡರಲ್ಲೂ ಯಶಸ್ಸು ಸಾಧಿಸಬಹುದು.ಹೆಚ್ಚಿನ ವಿವರಗಳಿಗಾಗಿ ಈ ವೀಡಿಯೊ ವೀಕ್ಷಿಸಿ: https://www.youtube.com/watch?v=WHZTFCmu3zg

* ದ್ವಿತೀಯ ಪಿಯುಸಿ ನಂತರ ಸಿಎ ಮಾಡಬಹುದಾ?

-ಪಿಯುಸಿ ಮುಗಿಸಿ ಸಿಎ ಫೌಂಡೇಷನ್ ಕೋರ್ಸ್ ಮಾಡಬೇಕು. ನಂತರ ಇಂಟರ್‌ಮೀಡಿಯೆಟ್ ಮತ್ತು ಫೈನಲ್ ಕೋರ್ಸ್‍ಗಳನ್ನು ಮಾಡಬೇಕು. ಹೆಚ್ಚಿನ ವಿವರಗಳಿಗೆ ಗಮನಿಸಿ: https://www.icai.org/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT