ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗಾಗಿ ನೀತಿ ಪಾಠಕ್ಕಿರಲಿ ಅಗ್ರಸ್ಥಾನ: ಮನೆಯೇ ಮೊದಲ ಪಾಠ ಶಾಲೆ

Last Updated 26 ಡಿಸೆಂಬರ್ 2021, 21:15 IST
ಅಕ್ಷರ ಗಾತ್ರ

ಇತ್ತೀಚೆಗೆ ಚನ್ನಗಿರಿ ಶಾಲೆಯೊಂದರಲ್ಲಿ ಕೆಲ ವಿದ್ಯಾರ್ಥಿಗಳು ಶಿಕ್ಷಕರೊಬ್ಬರ ಮೇಲೆ ಕಸದಬುಟ್ಟಿ ಹಾಕಿ ಅಪಮಾನ ಮಾಡಿದ ಘಟನೆ ಬಹುದೊಡ್ಡ ಸುದ್ದಿಯಾಗಿತ್ತು. ಘಟನೆಯ ನಂತರ ‘ಮಕ್ಕಳು ಹೀಗೇಕೆ ಮಾಡಿದರು’ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿತು. ಆಗ ಕೇಳಿ ಬಂದ ಉತ್ತರ ‘ಮಕ್ಕಳಲ್ಲಿನ ನೈತಿಕ ಶಿಕ್ಷಣದ ಕೊರತೆ’ ಎಂಬುದಾಗಿತ್ತು..!

ಇಂಥ ಘಟನೆಗಳು ನಡೆದಾಗಲೆಲ್ಲ, ನೈತಿಕತೆ ಮತ್ತಿತರ ಜೀವನಮೌಲ್ಯಗಳು ಶಿಥಿಲವಾಗುತ್ತಿರುವ ಕುರಿತ ಚರ್ಚೆ ಮುನ್ನೆಲೆಗೆ ಬರುತ್ತವೆ.

ಮಕ್ಕಳ ಕಲಿಕೆ ಮತ್ತು ವ್ಯಕ್ತಿತ್ವ ರೂಪುಗೊಳ್ಳುವ ಬಗೆಗಿನ ಸಂಶೋಧನೆಗಳು ಹೇಳುವಂತೆ ‘ಮಕ್ಕಳು ಅನುಕರಿಸುವ ಮೂಲಕ ಕಲಿಯಲು ಆರಂಭಿಸುತ್ತಾರೆ’. ಅಂದರೆ ಹಿರಿಯರ ವರ್ತನೆ, ಜೀವನ ಮೌಲ್ಯಗಳು, ನೈತಿಕ ಚೌಕಟ್ಟು ಇವು ಮಕ್ಕಳಿಗೆ ಮಾದರಿಯಾಗುತ್ತವೆ. ಇಂದಿನ ಮಕ್ಕಳ, ಯುವಕರ ವರ್ತನೆ ಮತ್ತು ನೈತಿಕ ಚೌಕಟ್ಟು ಕೆಳಮಟ್ಟಕ್ಕೆ ಇಳಿದಿದೆ ಎಂದರೆ ಅದು ಕೇವಲ ಇಂದಿನ ಸಮಾಜದ ಪ್ರತಿಬಿಂಬವಷ್ಟೇ ಎನ್ನುವುದನ್ನು ಶಿಕ್ಷಣವನ್ನು ರೂಪಿಸುತ್ತಿರುವ ನಾವು ಮನಗಾಣಬೇಕು.

‘ಸಮಾಜ’ದ ವರ್ತನೆಯೂ ಕಾರಣ

ಪುಂಡಾಟಿಕೆಯನ್ನು ಮೆರೆಸುವ, ಮಾತು ಮಾತಿಗೆ ಜಗಳಕ್ಕೆಸಗುವ, ಭ್ರಷ್ಟಾಚಾರ ಮೆರೆಸುವ, ಸೆರೆಮನೆಯಿಂದ ಭ್ರಷ್ಟಾಚಾರಿಯೋ, ರೌಡಿಯೊ ಬಿಡುಗಡೆಯಾದಾಗ ಸಂಭ್ರಮಾಚರಣೆ ಮಾಡುವ ಹಿರಿಯರು ಮಕ್ಕಳಿಗೆ ನೀಡುವ ಸಂದೇಶದಲ್ಲಿಯೇ ನೈತಿಕ ಶಿಕ್ಷಣ ಅಡಗಿದೆ. ಕಾನೂನು, ನಿಯಮಗಳನ್ನು ಉಲ್ಲಂಘಿಸಿದ್ದು ತಪ್ಪು ಎಂದು ತಿಳಿಸಿದಾಗ ಅಥವಾ ಸರ್ಕಾರಿ ಕಚೇರಿಯಲ್ಲಿ ನಡೆಯುವ ಭ್ರಷ್ಟಾಚಾರದ ವಿರುದ್ಧ ಮಾತನಾಡಿದಾಗ ದೊಡ್ಡವರು ಹೇಗೆ ವರ್ತಿಸುತ್ತಾರೆ ಎನ್ನುವುದನ್ನು ಸಮಾಜದಲ್ಲಿ ನಾವು ನೋಡುತ್ತಲೇ ಇದ್ದೇವೆ. ಇಂಥದ್ದನ್ನೇ ನೋಡುತ್ತಾ ಬೆಳೆದ ಮಕ್ಕಳ ವರ್ತನೆಯಲ್ಲಿ ಅಂಥದ್ದೇ ವರ್ತನೆಗಳನ್ನೇ ಕಾಣುತ್ತೇವೆ ಎಂಬುದನ್ನು ನಾವು ಮನಗಾಣಬೇಕಿದೆ. ‘ಒಂದು ಮಗುವನ್ನು ಇಡೀ ಊರು, ಸಮಾಜ ಬೆಳೆಸುತ್ತದೆ’ ಎನ್ನುವ ನಾಣ್ಣುಡಿ ಇರುವುದೂ ಇದೇ ಹಿನ್ನೆಲೆಯಲ್ಲಿ.

ಮಗು ತನ್ನ ಎರಡನೇ ವಯಸ್ಸಿಗೆ ಬರುವ ಮುನ್ನವೇ ತನ್ನ ಸುತ್ತಲಿನ ಪರಿಸರವನ್ನು ಗಮನಿಸುತ್ತಾ ತನ್ನ ಅರಿವನ್ನು ಬೆಳೆಸಿಕೊಳ್ಳುತ್ತಿರುತ್ತದೆ. ತನ್ನ ಸುಪ್ತಮನಸ್ಸಿನಲ್ಲಿ ಇವುಗಳನ್ನೆಲ್ಲ ಸಂಗ್ರಹಿಸಿಕೊಳ್ಳುತ್ತಿರುತ್ತದೆ. ಮನೆ, ಸಮಾಜದ ವಾತಾವರಣ ಸಕಾರಾತ್ಮಕ ಚಿಂತನೆಗಳನ್ನು, ದ್ವೇಷ–ರೋಷವಿಲ್ಲದ ಮಾತು ವರ್ತನೆಗಳನ್ನು ತೋರಿಸಿದರೆ, ಮಕ್ಕಳು ಅವುಗಳನ್ನು ತಮ್ಮ ನೆನಪಿನ ಕೋಶದಲ್ಲಿ ತುಂಬಿಕೊಳ್ಳುತ್ತಾರೆ. ಮನೆಯ ಹಿರಿಯರು, ಸಮಾಜ ಕರುಣೆ ಅನುಕಂಪಗಳನ್ನು ಎತ್ತಿ ಹಿಡಿದರೆ ಮಕ್ಕಳು ಅದನ್ನೇ ಅನುಕರಿಸುತ್ತಾರೆ.

‘ಸಮಾಜ’ ಎನ್ನುವುದರ ಇಂದಿನ ವಿವರಣೆ ಬಹಳ ವಿಸ್ತಾರಗೊಂಡಿದೆ. ಅಂಗೈಯಲ್ಲಿನ ಮೊಬೈಲ್‌ನಲ್ಲಿ ಇಡೀ ಪ್ರಪಂಚವೇ ಸಮಾಜವಾಗಿ ಮಗುವಿನ ಮುಂದೆ ತೆರೆದುಕೊಳ್ಳುತ್ತದೆ. ಆ ಸಮಾಜದಲ್ಲಿ ಹಿಂಸೆ, ದಬ್ಬಾಳಿಕೆ, ವಂಚನೆ, ಕಪಟ, ಕ್ರೂರತೆ ಇವುಗಳು ಮನರಂಜನೆಯ ಹೆಸರಿನಲ್ಲಿ ಆಟಗಳ ಮೂಲಕವೋ, ಧಾರವಾಹಿ (ಟಿವಿ, ವೆಬ್ ಸೀರೀಸ್ ಇತ್ಯಾದಿ) ಮೂಲಕವೋ ಮಕ್ಕಳನ್ನು ಮುಟ್ಟಿದರೆ, ಆ ಮಕ್ಕಳು ವಯಸ್ಕರಾದಾಗ ಹಾಗೆಯೇ ವರ್ತಿಸುತ್ತಾರೆ. ಹಾಗಾಗಿ, ಕೇವಲ ನೀತಿ ಕಥೆಗಳನ್ನು ಹೇಳುವ ಮೂಲಕವೋ, ದಂಡಿಸುವ ಮೂಲಕವೋ ಮಕ್ಕಳಿಗೆ ನೈತಿಕ ಶಿಕ್ಷಣವನ್ನು ನೀಡಲು ಸಾಧ್ಯವಿಲ್ಲ. ಮನೆ, ಸಮಾಜ, ಶಾಲೆಯಲ್ಲಿನ ಹಿರಿಯರು (ಶಿಕ್ಷಕರು, ಆಯಾಗಳು, ಇಲಾಖೆಯ ಅಧಿಕಾರಿಗಳು) ಎಲ್ಲರ ವರ್ತನೆಯೂ, ನಡೆನುಡಿಗಳೂ ಉತ್ತಮ ನೈತಿಕ ಮೌಲ್ಯಗಳನ್ನು ಪ್ರತಿನಿಧಿಸುವಂತಿದ್ದರೆ ಅವರಿಗೆ ಉತ್ತಮ ನೈತಿಕ ಶಿಕ್ಷಣ ದೊರಕುತ್ತದೆ.

ಯಾವ ಸಮಾಜ ಕ್ರೂರಿಗಳು, ರೌಡಿಗಳು, ವಂಚಕರು, ಭ್ರಷ್ಟಾಚಾರಿಗಳನ್ನು, ಧನದಾಹಿಗಳನ್ನು ತನ್ನ ಜನಪ್ರತಿನಿಧಿಗಳನ್ನಾಗಿ ಆರಿಸುತ್ತದೆಯೋ ಅದು ಅಂತಹುದೇ ಮೌಲ್ಯಗಳನ್ನು ಮಕ್ಕಳಿಗೆ ದಾಟಿಸುತ್ತದೆ. ಮಹಾತ್ಮ ಗಾಂಧೀಜಿಯವರು ತಮ್ಮ ಸತ್ಯಾಗ್ರಹದ ಜೀವನದಲ್ಲಿ ಹೆಚ್ಚು ಒತ್ತು ನೀಡಿದ್ದೇ ಇಡೀ ದೇಶದ ಒಟ್ಟಾರೆ ನೈತಿಕ ಮೌಲ್ಯಗಳು, ನೈತಿಕ ಚೌಕಟ್ಟು ಉತ್ತಮವಾಗಿರಬೇಕು ಎನ್ನುವುದರ ಬಗ್ಗೆ. ಅವರು ಪ್ರಜ್ಞಾಪೂರ್ವಕವಾಗಿ ಶ್ರಮಜೀವನವನ್ನು ರೂಢಿಸಿಕೊಳ್ಳುವುದು ಹಾಗೂ ಕಾಯಕ ಜೀವನ ಆತ್ಮಶುದ್ಧಿಯ ಮಾರ್ಗವೆಂಬುದನ್ನೂ ಎತ್ತಿ ತೋರಿಸಿದರು. ಸಮಾಜದ ನಿರ್ಧಾರಗಳು ಆ ನೈತಿಕ ನೆಲೆಗಟ್ಟಿನಲ್ಲಿ ಇದ್ದರೆ ಎಲ್ಲರ ಬಾಳು ಹಸನಾಗಿರುತ್ತದೆ, ದೇಶ ಸಮೃದ್ಧವಾಗಿರುತ್ತದೆ ಎನ್ನುವುದನ್ನು ಅವರು ಒತ್ತಿ ಹೇಳಿದ್ದರು.

ಪುಸ್ತಕಗಳಿಂದ ಮೌಲ್ಯಗಳ ಕಲಿಕೆ

ಇದರ ಜೊತೆಗೆ ವಿಸ್ತೃತವಾದ ಓದು ಮಕ್ಕಳು ಸೇರಿದಂತೆ ಎಲ್ಲ ವರ್ಗದವರಿಗೂ ಜೀವನಾನುಭವ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸಲು ಬಹಳ ಉಪಯುಕ್ತವಾಗುತ್ತದೆ. ಮಕ್ಕಳ ಓದಿಗೆ ಸದಾಕಾಲ ಕೈಗೆಟಕುವಂತೆ ಪುಸ್ತಕಗಳು ಶಾಲೆಯಲ್ಲಾಗಲೀ ಮನೆಯಲ್ಲಾಗಲೀ ದೊರಕುವಂತಾಗಬೇಕು. ಕೇವಲ ನೀತಿಯ ಸೂಕ್ತಿಗಳಿರುವ ಪುಸ್ತಕಗಳು ಆಳದ ಕಲಿಕೆಗೆ ಸಹಕಾರಿ ಆಗುವುದಿಲ್ಲ. ವಿಭಿನ್ನ ವಿಷಯಗಳ ಮತ್ತು ಸಮಾಜದ ಎಲ್ಲ ಆಯಾಮಗಳ ಬಗೆಗಿನ ಕಥಾರೂಪದ ಪುಸ್ತಕಗಳಿಂದ ಆರಂಭಿಸಿ ಆಳವಾದ ಹಾಗೂ ಗಂಭೀರವಾದ ಓದಿಗೆ ತೆರೆದುಕೊಳ್ಳುವಂತೆ ಗ್ರಂಥಾಲಯದ ಚಟುವಟಿಕೆಗಳನ್ನು ರೂಪಿಸಬೇಕು.

ದೃಶ್ಯ ಮಾಧ್ಯಮಗಳೂ ಸುಲಭವಾಗಿ ದಕ್ಕುವಂತಹ ಈ ಕಾಲದಲ್ಲಿ ಸದಭಿರುಚಿಯ, ಸತ್ಯಘಟನೆ ಆಧಾರಿತ ಚಲನಚಿತ್ರಗಳು, ಸಾಕ್ಷ್ಯಚಿತ್ರಗಳು ಹಾಗೂ ಸಣ್ಣ ಸಣ್ಣ ವಿಡಿಯೊಗಳು ಕೂಡ ಉತ್ತಮ ಸಂಪನ್ಮೂಲಗಳಾಗಿ ಬಳಕೆಗೆ ದಕ್ಕುತ್ತವೆ. ಮಕ್ಕಳಲ್ಲಿ ಪ್ರಶ್ನೆಗಳು ಹುಟ್ಟುವಂತೆ ಮಾಡಿ, ಸಂವಾದದ ಮೂಲಕ ಉತ್ತರ ಕಂಡುಕೊಂಡು ತಮ್ಮ ವರ್ತನೆಗೆ ತಾವೇ ಜವಾಬ್ದಾರರಾಗುವಂತೆ ಮಾಡಬೇಕು. ಹೀಗೆ ಹಿರಿಯರ ನಡವಳಿಕೆ, ತಮ್ಮ ವರ್ತನೆಯ ಪರಾಮರ್ಶೆ ಮತ್ತು ವಿಸ್ತೃತವಾದ ಲೋಕಜ್ಞಾನಗಳ ಮೂಲಕ ಜೀವನ ಮೌಲ್ಯ ಮತ್ತು ನೈತಿಕ ಮೌಲ್ಯಗಳು ಶಿಕ್ಷಣದಲ್ಲಿ ಅಡಕವಾಗುತ್ತವೆ.

ಸಂವಾದ –ಪರಾಮರ್ಶೆ

ಹಲವು ಸಂದರ್ಭಗಳಲ್ಲಿ ಮಕ್ಕಳ ವರ್ತನೆ ಶಾಲೆಯ ವಾತಾವರಣಕ್ಕೆ ಸೂಕ್ತವಾಗಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಮಕ್ಕಳಲ್ಲಿ ಆ ವರ್ತನೆಯ ಬಗ್ಗೆ ಚಿಂತನೆ ಹುಟ್ಟುವಂತಹ ಸಂವಾದವನ್ನು ಮಕ್ಕಳ ಕೇಂದ್ರಿತವಾಗಿ ನಡೆಸಬೇಕು. ಮಕ್ಕಳೇ ತಮ್ಮ ವರ್ತನೆಯನ್ನು ಪರಾಮರ್ಶಿಸಿಕೊಂಡು, ಅವರಿದ್ದ ಪರಿಸ್ಥಿತಿಯಲ್ಲಿ ಅವರು ಬೇರೆ ಯಾವ ರೀತಿಯಲ್ಲಿ ವರ್ತಿಸಿದ್ದರೆ ಸೂಕ್ತವಾಗಿರುತ್ತಿತ್ತು ಎನ್ನುವ ಆಯ್ಕೆಗಳು ಅವರಿಂದಲೇ ಹೊರಬರುವಂತೆ ಸಂವಾದವನ್ನು ಕಟ್ಟಬೇಕು. ಇಂತಹ ಸಂವಾದ ಹಾಗೂ ಚಟುವಟಿಕೆಗಳು ಮಕ್ಕಳ ಕಲಿಕೆಯಲ್ಲಿ ಬೆರೆತುಹೋಗಿರಬೇಕು. ಆಗ ಇವು ಮಕ್ಕಳಲ್ಲಿ ಹಾಗೂ ಶಿಕ್ಷಕರಲ್ಲಿ ಪುನರ್ಮನನದ ಮೂಲಕ ಆಳಕ್ಕಿಳಿದು ಗಟ್ಟಿಗೊಳ್ಳುತ್ತಾ ಹೋಗುತ್ತವೆ. ಮಾನವ ಸಹಜವಾಗಿ ಮತ್ತು ವಯೋಸಹಜವಾಗಿ ಮಕ್ಕಳ ವರ್ತನೆಯಲ್ಲಿ ಅದೂ ಮುಖ್ಯವಾಗಿ ಅವರು ಒಂದು ಗುಂಪಿನಲ್ಲಿದ್ದಾಗ ನೈತಿಕವಾಗಿ ಸೂಕ್ತವಲ್ಲದ ವರ್ತನೆಗಳೂ ಹಲವು ಬಾರಿ ಎದ್ದು ಕಾಣುತ್ತಿರುತ್ತವೆ. ಈ ರೀತಿಯ ನಿರಂತರ ಸಂವಾದಗಳ ಮೂಲಕ ಮಾತ್ರ ನೈತಿಕ ನಿರ್ಧಾರಗಳು ಮಕ್ಕಳ ಅರಿವಿನ ಮಟ್ಟದಲ್ಲಿ ಆಗುವಂತೆ ಮಾಡಬಹುದು.

–ಜನಾರ್ಧನ್ ಸಿ.ಎಸ್‌

(ಲೇಖಕರು: ಶಿಕ್ಷಣ ಕಾರ್ಯಕರ್ತ,
ಅರಿವು ವಿದ್ಯಾಸಂಸ್ಥೆ, ಮೈಸೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT