ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೀಗ ಪರೀಕ್ಷೆ: ಮಾನಸಿಕ ಸಮತೋಲನ ಹೇಗೆ?

Last Updated 22 ಮಾರ್ಚ್ 2022, 2:16 IST
ಅಕ್ಷರ ಗಾತ್ರ

‘ಪರೀಕ್ಷೆ’ – ಅದು ಶಾಲಾ–ಕಾಲೇಜುಗಳಲ್ಲಿ ನಡೆಯುವಂಥದ್ದಿರಬಹುದು ಅಥವಾ ಜೀವನದ ಅನೇಕ ಘಟ್ಟಗಳಲ್ಲಿ ಎದುರಾಗುವಂಥದ್ದಿರಬಹುದು, ಪರೀಕ್ಷೆ ಎಂದರೇ ಒಂದು ಬಗೆಯ ಬಿಗುವಿನ ವಾತಾವರಣ, ಆತಂಕ ಸೃಷ್ಟಿಯಾಗುವುದು ಸಾಮಾನ್ಯ. ಮೌಲ್ಯಮಾಪನಗಳು, ಸೋಲು–ಗೆಲುವಿನ ಮಾನದಂಡಗಳು, ಪರೀಕ್ಷೆಯ ಫಲಿತಾಂಶದಿಂದ ದೊರಕಬಹುದಾದ ಸನ್ಮಾನ, ಅವಮಾನಗಳು – ಇವೆಲ್ಲ ನಮ್ಮ ಜೀವನವನ್ನು ಎಷ್ಟರ ಮಟ್ಟಿಗೆ ಪ್ರಭಾವಿಸಬಹುದೆನ್ನುವ ಕುರಿತು ನಮಗಿರುವ ಕಲ್ಪನೆಗಳು ಎಲ್ಲವೂ ಸೇರಿ ಪರೀಕ್ಷೆ ಎನ್ನುವುದು ನಮ್ಮ ‘ಯೋಗ್ಯತೆ’ಯ ಅಳತೆಗೋಲು ಎನಿಸಿಬಿಡುವುದೇ ಪರೀಕ್ಷೆಯ ಕುರಿತಾದ ಭಯಕ್ಕೆ ಕಾರಣ. ಹಾಗಾಗಿ ಪರೀಕ್ಷೆಯ ಸಮಯದಲ್ಲಿನ ನಮ್ಮ ಮಾನಸಿಕ ಸಮತೋಲನ ನಾವು ಈ ಭಯವನ್ನು ಹೇಗೆ ನಿರ್ವಹಿಸುತ್ತೇವೆ ಎನ್ನುವುದರ ಮೇಲೆ ಅವಲಂಬಿತವಾಗಿದೆ.

ಪರೀಕ್ಷೆಯ ಫಲಿತಾಂಶಕ್ಕೂ ನಮ್ಮ ನಮ್ಮ ಯೋಗ್ಯತೆ ಅಥವಾ ಸೆಲ್ಫ್ ವರ್ಥ್(self worth)ಗೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಪೋಷಕರು, ಶಿಕ್ಷಕರು ತಮ್ಮ ವರ್ತನೆಯ ಮೂಲಕ ಚಿಕ್ಕ ವಯಸ್ಸಿಗೇ ಮಕ್ಕಳಿಗೆ ಅರ್ಥಮಾಡಿಸುವುದು ಸಾಧ್ಯವಾಗಿಬಿಟ್ಟರೆ ಅಂತಹ ಮಕ್ಕಳು ಪರೀಕ್ಷೆಯ ಅನಗತ್ಯ ಆತಂಕದಿಂದ ಮುಕ್ತರಾಗುತ್ತಾರೆ. ಶೈಕ್ಷಣಿಕ ಹಾದಿಯಲ್ಲಿ ಮುಂದುವರೆಯಲು, ಇಷ್ಟದ ಉದ್ಯೋಗವನ್ನು ಗಳಿಸಲು ಪರೀಕ್ಷೆಗಳು ಅಗತ್ಯವೇ ಹೊರತು ಅವು ಯಾವುದೇ ರೀತಿಯಲ್ಲೂ, ಯಾವುದೇ ಯೋಗ್ಯತೆಯ ಮಾಪಕವಲ್ಲ ಎನ್ನುವುದು ಮನವರಿಕೆಯಾಗಬೇಕು; ಅನಂತರ ಪರೀಕ್ಷೆಗಳನ್ನು ಹೆಚ್ಚು ಆತ್ಮವಿಶ್ವಾಸದಿಂದ ಎದುರಿಸುವುದು ಸಾಧ್ಯವಾಗುತ್ತದೆ.

ಇಂದಿನ ಪ್ರಪಂಚ ಈ ಮಟ್ಟಕ್ಕೆ ಸ್ಪರ್ಧಾತ್ಮಕಗೊಂಡಿರುವುದು ಖಂಡಿತ ಮಕ್ಕಳ ತಪ್ಪಲ್ಲ. ತಮ್ಮಿಷ್ಟದ ವಿಷಯವನ್ನು, ಪರಿಣತರ ಮಾರ್ಗದರ್ಶನದಲ್ಲಿ, ಉತ್ಕೃಷ್ಟ ವಿದ್ಯಾಸಂಸ್ಥೆಗಳಲ್ಲಿ ಕಲಿಯುವುದು ಸುಲಭದಲ್ಲಿ ಸಾಧ್ಯವಿಲ್ಲದಂತಹ, ಅದಕ್ಕಾಗಿ ಅನೇಕ ಸ್ಪರ್ಧೆಗಳನ್ನು ಎದುರಿಸಬೇಕಾದಂತಹ ಅಸ್ವಾಭಾವಿಕ ಸಂಕೀರ್ಣ ವ್ಯವಸ್ಥೆ ಸೃಷ್ಟಿಯಾಗಿದೆ. ಇಂತಹ ಉಸಿರುಗಟ್ಟಿಸುವ ವ್ಯವಸ್ಥೆಯಲ್ಲಿ ಒತ್ತಡಕ್ಕೆ ಸಿಲುಕಿ, ಬಳಲಿ ತಮ್ಮ ನೈಜ ಕ್ರಿಯಾಶೀಲತೆ, ಸೃಜನಶೀಲತೆಗಳನ್ನು ಮಕ್ಕಳು ಕಳೆದುಕೊಳ್ಳಬೇಕಾಗಿರುವುದು ಶೋಚನೀಯವೇ ಸರಿ. ಇಂತಹ ಪರಿಸ್ಥಿತಿಯನ್ನು ಚೆನ್ನಾಗಿ ಅರಿತು ಮಕ್ಕಳನ್ನು ಸಹಾನುಭೂತಿಯಿಂದ ಕಾಣಬೇಕಾಗಿರುವುದೂ ಅಗತ್ಯವಾದ ಪರೀಕ್ಷಾ ತಯಾರಿಯ ಒಂದು ಹಂತವೇ ಹೌದು.

ತಮ್ಮ ತಮ್ಮ ಆಸಕ್ತಿ, ಗ್ರಹಿಕೆಯ ಸಾಮರ್ಥ್ಯ, ವ್ಯಕ್ತಿತ್ವ, ಸುತ್ತಲಿನ ಸಮಾಜಕ್ಕೆ/ಜೀವನಕ್ಕೆ ಸ್ಪಂದಿಸುವ ರೀತಿ ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಕೇವಲ ‘ಎಲ್ಲರೂ ಓದುವ’ ಬಹು ಬೇಡಿಕೆಯ ಕೋರ್ಸ್‌ಗಳನ್ನು ಹಠದಿಂದಲೋ ಒತ್ತಾಯದಿಂದಲೋ ಮಾಡಬೇಕೆಂದು ಹೊರಡುವವರಿಗೆ ಪರೀಕ್ಷೆ ದುಃಸ್ವಪ್ನದಂತೆ ಕಾಡದಿರುತ್ತದೆಯೇ?

ಕಲಿಕೆಯಲ್ಲಿನ ಆನಂದವನ್ನು ಅನುಭವಿಸದೆ, ಹೆಚ್ಚು ಕಲಿಯಬೇಕೆನ್ನುವ ಉತ್ಸಾಹ, ಕುತೂಹಲಗಳಿಲ್ಲದೆ ಯಾವ ಅಧ್ಯಯನವೂ ಮುಂದೆ ಸಾಗುವುದಿಲ್ಲ. ಒಂದು ಬೆಟ್ಟದ ತುದಿಯನ್ನು ಮುಟ್ಟಬೇಕಾದರೆ ಆ ಬೆಟ್ಟದ ಮೇಲೆ ನಿಂತಾಗ ಕಾಣುವ ನಯನ ಮನೋಹರ ದೃಶ್ಯದ ಬಗೆಗೆ, ಅದು ನೀಡುವ ಅನುಭವದ ಬಗೆಗೆ ಒಂದು ಕನಸು, ಆಸೆ, ನಿರೀಕ್ಷೆ ಇರಬೇಕಾಗುತ್ತದೆ. ಅದಿಲ್ಲದಿದ್ದರೆ ಒಂದು ಹೆಜ್ಜೆ ಎತ್ತಿಡುವುದೂ ಸಾಧ್ಯವಾಗುವುದಿಲ್ಲ. ಕಲಿಕೆ ಎಂಬ ಚಾರಣದ ಹಾದಿಯೂ ಹೀಗೇ, ಹಾದಿಯೂ ಸುಂದರವಾಗಿರಬೇಕು, ಗುರಿಯೂ ಧನ್ಯತೆ ಮೂಡಿಸುವಂಥದ್ದಾಗಿರಬೇಕು. ಆಗಷ್ಟೇ ಕಷ್ಟ ಪಡಲು, ಬೆವರು ಹರಿಸಲು ನಾವು ಸಿದ್ಧರಿರುತ್ತೇವೆ. ಹಾಗಿಲ್ಲದೆ ಬರೀ ಆಯಾಸ, ಆತಂಕ ತರುವ ಪ್ರಯಾಣ ಯಾರಿಗೆ ಬೇಕಿರುತ್ತದೆ? ಓದುವುದರಲ್ಲಿ ಅನಾಸಕ್ತಿ, ಪರೀಕ್ಷಾ ಭಯ ಮುಂತಾದ ಸಮಸ್ಯೆಗಳು ಕಲಿಕೆ, ಪರೀಕ್ಷೆ – ಇವುಗಳ ಕುರಿತಾದ ತಪ್ಪು ಕಲ್ಪನೆಗಳಿಂದ ಹುಟ್ಟಿಕೊಂಡಿರುವ ಸಾಧ್ಯತೆಗಳೇ ಹೆಚ್ಚು.

ಇನ್ನೇನು ಪರೀಕ್ಷೆ ಇನ್ನೊಂದು ತಿಂಗಳಿದೆ ಎನ್ನುವಾಗ ನಮ್ಮ ವ್ಯಕ್ತಿತ್ವದಲ್ಲಾಗಲಿ, ಅಧ್ಯಯನ ಕ್ರಮದಲ್ಲಾಗಲಿ, ಓದುವುದಕ್ಕೆ ಪೂರಕವಾಗಿ ಮನೆಯ ವಾತಾವರಣವನ್ನು ಸೃಷ್ಟಿಸಿಕೊಳ್ಳುವುದರಲ್ಲಾಗಲಿ ಹೆಚ್ಚಿನ ಬದಲಾವಣೆ ತಂದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಶಿಸ್ತುಬದ್ಧ ಜೀವನ, ನಿಯಮಿತ ಅಧ್ಯಯನಗಳಿಲ್ಲದೆ ಕೊನೆಯ ಗಳಿಗೆಯಲ್ಲಿ ಯಾವ ಪವಾಡವೂ ನಡೆಯುವುದಿಲ್ಲ.

ಓದುವ ಸಮಯವನ್ನು, ಓದುವ ಮನಸ್ಸನ್ನು ಕಸಿದುಕೊಂಡು ಬಿಡುವ ಮೊಬೈಲ್, ಇಂಟರ್‌ನೆಟ್ ವ್ಯಸನವನ್ನು ಪರೀಕ್ಷೆಯ ಸಮಯದಲ್ಲಿ ಏಕಾಏಕಿ ಹತೋಟಿಗೆ ತರುವುದು ಸಾಧ್ಯವಾಗದಿರಬಹುದು. ತಂತ್ರಜ್ಞಾನದ ಸೌಲಭ್ಯಗಳನ್ನು ಬಳಸುವಲ್ಲಿನ ಸಂಯಮವನ್ನು ಮೊದಲಿನಿಂದಲೂ ರೂಢಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಏಕಾಗ್ರತೆಯ ಸಮಸ್ಯೆಗಳು ಅಷ್ಟಾಗಿ ಬಾಧಿಸದು. ಹಾಗೆಯೇ ಮನಸ್ಸು ಎಲ್ಲೆಲ್ಲಿಗೋ ಹೋಗುತ್ತಿರುವಾಗ ಅದನ್ನು ಮತ್ತೆ ಮತ್ತೆ ಅಧ್ಯಯನದ ಕಡೆಗೆ ತಂದು ನಿಲ್ಲಿಸಿಕೊಳ್ಳುವ ಅಭ್ಯಾಸಗಳನ್ನು ಮೈಗೂಡಿಸಿಕೊಂಡಿರುವುದೊಳಿತು.

ತಂದೆ/ತಾಯಿ ತಮ್ಮ ಮಕ್ಕಳ ಪರೀಕ್ಷೆಯ ಕುರಿತಾದ ಆತಂಕವನ್ನು ನಿರ್ವಹಿಸುವ ಹೊಣೆಯನ್ನು ತಾವೇ ಹೊತ್ತುಕೊಳ್ಳಬೇಕು. ಪೋಷಕರು ತಮ್ಮ ಪರೀಕ್ಷಾ ಆತಂಕವನ್ನು ‘ಚೆನ್ನಾಗಿ ಓದಿ ಅತ್ಯುತ್ತಮ ಅಂಕಗಳನ್ನು ಪಡೆಯುವುದರ ಮೂಲಕ’ ಮಕ್ಕಳು ತೊಡೆದುಹಾಕಬೇಕೆಂದು ಬಯಸುವುದು ಇನ್ನಷ್ಟು ಸಮಸ್ಯೆಗಳಿಗೆ ಮೂಲ. ಪರೀಕ್ಷೆಯ ಸಮಯದಲ್ಲಿ ಪೋಷಕರು ತಮ್ಮ ಸಾಮಾಜಿಕ ಜೀವನವನ್ನು ಇತಿಮಿತಿಯಲ್ಲಿಟ್ಟುಕೊಂಡು ಮಕ್ಕಳಿಗೆ ಹೆಚ್ಚಿನ ಗಮನ ನೀಡುವುದು ಮಕ್ಕಳ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ.

ಚಿಕ್ಕ ಮಕ್ಕಳಾಗಿದ್ದಾಗ ಕಲಿಯುವುದು ಸ್ವಾಭಾವಿಕ ಕ್ರಿಯೆ ಎನಿಸುವ ವಯಸ್ಸಿನಲ್ಲಿ ಪರೀಕ್ಷೆಯ ಅಗತ್ಯ ಹೆಚ್ಚಿರುವುದಿಲ್ಲ. ಅನಂತರದ ಕೆಲವು ವರ್ಷಗಳು ಮಕ್ಕಳು ತಮ್ಮ ಆಸಕ್ತಿಯ ಕ್ಷೇತ್ರಗಳನ್ನು ಅನ್ವೇಷಿಸುತ್ತಾ ಏಕಾಗ್ರತೆ, ಜ್ಞಾಪಕಶಕ್ತಿ, ಸಮಯಪಾಲನೆ, ಪರೀಕ್ಷೆಗಾಗಿ ಓದಿ ಬರೆಯುವ ಕೌಶಲಗಳನ್ನು ಕಲಿಯುವ ವಯಸ್ಸು. ಆಗ ಶಿಸ್ತುಬದ್ಧ ಅಧ್ಯಯನ ಕ್ರಮದಿಂದ ಪರೀಕ್ಷೆಯ ಭಯವನ್ನು ದೂರವಿಡಬಹುದು. ಅನಂತರದ ಹಲವು ವರ್ಷಗಳು ತಮ್ಮ ಇಷ್ಟದ ವಿಷಯವನ್ನು ಅಧ್ಯಯನ ಮಾಡುವ ಮೂಲಕ ಸ್ವಪ್ರೇರಣೆಯಿಂದ ಓದಿ, ಕಲಿಕೆಯ ಹಾದಿಯಲ್ಲಿ ಮುಂದುವರೆಯುವ ಕಾರಣ ಆಗಲೂ ಪರೀಕ್ಷೆಯ ಭಯವನ್ನು ಗೆಲ್ಲಬಹುದು. ಒಟ್ಟಿನಲ್ಲಿ ಯಾವ ಹಂತದಲ್ಲಿಯೂ ಪರೀಕ್ಷೆ ಎನ್ನುವುದು ಒತ್ತಡ ಎನಿಸುವಂತಹ ಪರಿಸ್ಥಿತಿಗೆ ಸಿಲುಕದಿರುವುದು ನಮ್ಮ ಕೈಯಲ್ಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT