ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಸ್ಕಾಲರ್‌ಷಿಪ್‌ ಎಲ್ಲೆಲ್ಲಿ ಲಭ್ಯ?

Last Updated 23 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

1. ನಾನು ಪಿ.ಎಚ್‌ಡಿ ಸಂಶೋಧನೆ ಮಾಡುತ್ತಿರುವ ಒಬಿಸಿ ವರ್ಗದ ವಿದ್ಯಾರ್ಥಿನಿ. ಆದರೆ, 35 ವರ್ಷದ ನಂತರದವರಿಗೆ ಯಾವುದೇ ಸ್ಕಾಲರ್‌ಷಿಪ್ ಇಲ್ಲದೇ ಇರುವುದರಿಂದ, ಸಂಶೋಧನೆ ಕಷ್ಟವೆನಿಸುತ್ತಿದೆ. ಏನು ಮಾಡಬಹುದು?
ಹೆಸರು, ಊರು ತಿಳಿಸಿಲ್ಲ.

ಕೇಂದ್ರ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ವಿಧ್ಯಾರ್ಥಿ ವೇತನಗಳು ಮತ್ತು ಸ್ಕಾಲರ್‌ಷಿಪ್ ಸೌಲಭ್ಯಗಳಿವೆ. ನಮಗಿರುವ ಮಾಹಿತಿಯಂತೆ, ಕೆಲವು ಸೌಲಭ್ಯಗಳು 35 ವರ್ಷದ ನಂತರವೂ ಲಭ್ಯ. ಇದರ ಜೊತೆಗೆ ಕೆಲವು ವಿದ್ಯಾ ಸಂಸ್ಥೆಗಳು, ಖಾಸಗಿ ಕಂಪನಿಗಳು, ಟ್ರಸ್ಟ್‌ಗಳು ಈ ನಿಟ್ಟಿನಲ್ಲಿ ಶಿಷ್ಯವೇತನ, ಅನುದಾನ, ಸ್ಕಾಲರ್‌ಷಿಪ್ ಸೌಲಭ್ಯಗಳನ್ನು ನೀಡುತ್ತಿವೆ. ಅಗತ್ಯವಿದ್ದಲ್ಲಿ, ಬ್ಯಾಂಕ್‌ನಲ್ಲಿ ಶೈಕ್ಷಣಿಕ ಸಾಲವನ್ನು ಕೂಡ ಪಡೆದುಕೊಳ್ಳಬಹುದು.

ಹೆಚ್ಚಿನ ವಿವರಗಳಿಗಾಗಿ ಈ ಎರಡು ಜಾಲತಾಣಗಳನ್ನು ಪರಾಮರ್ಶಿಸಿ
https://scholarships.gov.in/
https://www.buddy4study.com/article/ugc-scholarship

2. ನಾನು ಒಂದೂವರೆ ವರ್ಷಗಳಿಂದ ಪೊಲೀಸ್ ಕಾನ್‌ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂ.ಎಸ್ಸಿ ಪದವಿ ಮುಗಿಸಿ, ಕೆಸೆಟ್ (KSET) ಅರ್ಹತೆ ಕೂಡ ಹೊಂದಿರುತ್ತೇನೆ. ಇದೀಗ ಬಿ.ಇಡಿ ಮಾಡುವ ಮನಸ್ಸಾಗಿದ್ದು, ಸರ್ಕಾರಿ ನೌಕರನಾಗಿರುವುದರಿಂದ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದಲ್ಲಿ ಓದಲು ಅವಕಾಶವಿದೆಯೇ? ಪಿ.ಎಚ್‌ಡಿಗೆ ಸೇರುವ ಮುಂಚೆಯೇ ಮೇಲಧಿಕಾರಿಗಳ ಪೂರ್ವಾನುಮತಿ ಇರಬೇಕೆ?
ಪ್ರಕಾಶ್ ಕರುನಾಡು, ಕುಣಿಗಲ್.

ಪೊಲೀಸ್ ನೌಕರಿಯಲ್ಲಿದ್ದು ಉನ್ನತ ಶಿಕ್ಷಣದ ಬಗ್ಗೆ ನಿಮಗಿರುವ ಆಸಕ್ತಿ ಶ್ಲಾಘನೀಯ. ನಿಮ್ಮ ಆಸಕ್ತಿಯ ಅನುಸಾರ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿ.ಇಡಿ ಅಥವಾ ಸೂಕ್ತ ವಿಶ್ವವಿದ್ಯಾಲಯದಲ್ಲಿ ಪಿ.ಎಚ್‌ಡಿ ಮಾಡಬಹುದು. ನಮಗಿರುವ ಮಾಹಿತಿಯಂತೆ, ಇಲಾಖೆಯ ಸೇವಾ ನಿಯಮಾವಳಿಗಳ ಪ್ರಕಾರ ಮೇಲಧಿಕಾರಿಗಳ ಪೂರ್ವಾನುಮತಿಯನ್ನು ಪಡೆಯಬೇಕು. ಖಚಿತವಾದ ಮಾಹಿತಿಗಾಗಿ ನಿಮ್ಮ ಇಲಾಖೆಯಲ್ಲಿ ವಿಚಾರಿಸಿ.

3. ಎಂ.ಎ ಮಾಡುವುದು ಹೇಗೆ ಮತ್ತು ಅರ್ಹತೆಗಳೆನು? ಯಾವ ವಿಶ್ವವಿದ್ಯಾಲಯ ಸೂಕ್ತ ಎಂದು ತಿಳಿಸಿ.
–ಹೆಸರು, ಊರು ತಿಳಿಸಿಲ್ಲ.

ಸಾಮಾನ್ಯವಾಗಿ ಬಿಎ ಪದವಿಯ ನಂತರ ಪದವಿಯಲ್ಲಿ ಓದಿರುವ ವಿಷಯದಲ್ಲಿ ಎಂಎ ಮಾಡಬಹುದು. ಆದರೆ, ಕೆಲವು ವಿಶ್ವವಿದ್ಯಾಲಯಗಳಲ್ಲಿ, ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ, ಇಂತಹ ನಿಬಂಧನೆಗಳಿಲ್ಲ. ಹಾಗಾಗಿ, ಎಂಎ ಮಾಡುವ ಉದ್ದೇಶ ಮತ್ತು ಯಾವ ವಿಷಯದಲ್ಲಿ ಮಾಡಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆಯಿದ್ದಲ್ಲಿ, ಯಾವ ವಿಶ್ವವಿದ್ಯಾಲಯ ಸೂಕ್ತವೆಂದು ನಿರ್ಧರಿಸಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=DmaXk-MuoOI

4. ನಾನು ಪಿಯುಸಿ (ಕಲಾ ವಿಭಾಗ) ನಂತರ ಬಿಕಾಂ ಪದವಿ ಮಾಡಿದ್ದೇನೆ. ಮುಂದೆ ಬಿ.ಇಡಿ ಮಾಡಬೇಕು ಅಂದುಕೊಂಡಿದ್ದೇನೆ. ಬಿ.ಇಡಿ ಕೋರ್ಸ್‌ನಲ್ಲಿ ಭೂಗೋಳಶಾಸ್ತ್ರ ಮತ್ತು ಇತಿಹಾಸ ವಿಷಯವನ್ನು ತೆಗೆದುಕೊಳ್ಳಲು ಆಗುವುದೇ?
–ಹೆಸರು, ಊರು ತಿಳಿಸಿಲ್ಲ.

ನಮಗಿರುವ ಮಾಹಿತಿಯಂತೆ ಬಿ.ಇಡಿ ಕೋರ್ಸ್‌ನಲ್ಲಿ ಆಯ್ಕೆ ಮಾಡಿಕೊಳ್ಳುವ ವಿಷಯಗಳನ್ನು ಪದವಿಯಲ್ಲಿ ಓದಿರಬೇಕು.

5. ಜೀವಶಾಸ್ತ್ರದಲ್ಲಿ ಎಂ.ಎಸ್ಸಿ ಮಾಡುತ್ತಿದ್ದೇನೆ. ಮುಂದಿನ ಭವಿಷ್ಯದ ಬಗ್ಗೆ ಏನು ಮಾಡಬೇಕು ತಿಳಿಸಿ.
ಹೆಸರು, ಊರು ತಿಳಿಸಿಲ್ಲ.

ಎಂ.ಎಸ್ಸಿ ನಂತರ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ವೈವಿಧ್ಯಮಯ ಉದ್ಯೋಗಾವಕಾಶಗಳಿವೆ. ಉದಾಹ ರಣೆಗೆ, ಕೃಷಿ ಸಂಶೋಧನಾ ಸಂಸ್ಥೆಗಳು, ಸಮೀಕ್ಷಾ ಸಂಸ್ಥೆಗಳು, ಆಸ್ಪತ್ರೆಗಳು, ವೈದ್ಯಕೀಯ ಸಂಶೋಧನೆ ಮತ್ತು ಪ್ರಯೋಗಾಲಯಗಳು, ಬೀಜ ಮತ್ತು ನರ್ಸರಿ ಸಂಸ್ಥೆಗಳು, ಆಹಾರ ಸಂಸ್ಥೆಗಳು, ವನ್ಯಜೀವಿ ಮತ್ತು ಮೀನುಗಾರಿಕೆ ಇತ್ಯಾದಿ ಸಂಸ್ಥೆಗಳಲ್ಲಿ ಉದ್ಯೋಗವನ್ನು ಅರಸಬಹುದು. ಪ್ರಮುಖವಾಗಿ, ಎಂ.ಎಸ್ಸಿ ಕೋರ್ಸ್‌ನಲ್ಲಿ ಯಾವ ವಿಷಯದಲ್ಲಿ ನಿಮಗೆ ಪರಿಣತಿಯಿದೆ ಎನ್ನುವುದರ ಜೊತೆಗೆ ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಅಭಿರುಚಿ, ವೃತ್ತಿಯ ಆಯ್ಕೆ ಮತ್ತು ಯಶಸ್ಸಿಗೆ ಕಾರಣವಾಗುತ್ತದೆ. ಹಾಗೂ, ಸರ್ಕಾರಿ ಇಲಾಖೆಗಳನ್ನು ಸೇರುವ ಆಸಕ್ತಿಯಿದ್ದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗಲೇ ತಯಾರಿಯನ್ನು ಶುರು ಮಾಡಿಕೊಳ್ಳಬಹುದು. ಇದಲ್ಲದೆ, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಅನುಷ್ಠಾನಗೊಳಿಸುತ್ತಿರುವ ಈ ಕಾಲಘಟ್ಟದಲ್ಲಿ ಶಿಕ್ಷಕರ ಕೊರತೆಯೇ ಒಂದು ಸವಾಲಾಗಿದೆ. ಹಾಗಾಗಿ, ಈ ವೃತ್ತಿಯಲ್ಲಿ ಆಸಕ್ತಿಯಿದ್ದರೆ ಬಿ.ಇಡಿ ಮಾಡಿ ಈ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು.

ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:
https://www.youtube.com/c/EducationalExpertManagementCareerConsultant

6. ನಾನು 2ನೇ ವರ್ಷದ ಬಿ.ಎಸ್ಸಿ ಮಾಡುತ್ತಿದ್ದೀನಿ. ಆದರೆ, ಕಾಲೇಜಿಗೆ ಹೋಗುವುದಕ್ಕೆ ಮನಸ್ಸಿಲ್ಲ; ಮನಸ್ಸನ್ನು ಓದಿನ ಕಡೆಗೆ ಕೇಂದ್ರೀಕರಿಸುವುದು ಹೇಗೆ?
–ಹೆಸರು, ಊರು ತಿಳಿಸಿಲ್ಲ.

ಮನಸ್ಸನ್ನು ಓದಿನ ಕಡೆಗೆ ಕೇಂದ್ರೀಕರಿಸಲು ಬದುಕಿನಲ್ಲಿ ಯಶಸ್ವಿಯಾಗಬೇಕೆಂಬ ಹಂಬಲ ಮತ್ತು ಗುರಿ ಅತ್ಯವಶ್ಯ. ಆದ್ದರಿಂದ, ಈ ಸಲಹೆಗಳನ್ನು ಗಮನಿಸಿ:
ಬದುಕಿನ ಗುರಿಗಳು: ಸ್ಪಷ್ಟವಾದ, ಸಾಧಿಸಬಹುದಾದ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಗುರಿಗಳು ದೃಢವಾಗಿದ್ದರೆ, ಸ್ವಯಂ ಪ್ರೇರಣೆ ತಾನೇ ತಾನಾಗಿ ಮೂಡುತ್ತದೆ.
ಸಕಾರಾತ್ಮಕ ಪರಿಸರ: ಸುತ್ತಮುತ್ತಲಿನ ಪರಿಸರ ಸಕಾರಾತ್ಮಕವಾಗಿರಲಿ.
ವಿಡಿಯೊ, ಪುಸ್ತಕಗಳು: ಸಾಧಕರ ಕುರಿತ ಪುಸ್ತಕಗಳನ್ನು ಓದುವುದರಿಂದಲೂ, ವಿಡಿಯೊಗಳನ್ನು ವೀಕ್ಷಿಸುವುದರಿಂದಲೂ, ಸಾಧಕರ ಯಶಸ್ಸಿನ ಹಿಂದಿರುವ ಪರಿಶ್ರಮದ ಕಥೆಗಳಿಂದ ನಿಮ್ಮ ಉತ್ಸಾಹವನ್ನೂ, ಸ್ವಯಂ-ಪ್ರೇರಣೆಯನ್ನೂ ಬೆಳೆಸಿಕೊಳ್ಳಬಹುದು.
ಪ್ರಶ್ನೆಗಾರಿಕೆ: ತರಗತಿಯಲ್ಲಿ ಭೋಧಿಸುವ ವಿಷಯ ಅರ್ಥವಾಗದಿದ್ದರೆ ಸಂಕೋಚವಿಲ್ಲದೆ ಪ್ರಶ್ನೆಗಳನ್ನು ಕೇಳಬೇಕು. ಏಕೆಂದರೆ, ಪ್ರಶ್ನೆಗಳನ್ನು ಕೇಳುವುದರಿಂದ ವಿಮರ್ಶಾತ್ಮಕ ಚಿಂತನಾ ಕೌಶಲ್ಯಗಳ ಅಭಿವೃದ್ಧಿಯ ಜೊತೆಗೆ, ವಿಷಯದ ಬಗ್ಗೆ ಒಳನೋಟಗಳು ಲಭಿಸಿ ಕಲಿಕೆ ಪರಿಣಾಮಕಾರಿಯಾಗುತ್ತದೆ.
• ತರಗತಿಯಲ್ಲಿ ಪರಿಣಾಮಕಾರಿಯಾಗಿ ಟಿಪ್ಪಣಿ (ನೋಟ್ಸ್) ಬರೆಯುವುದರಿಂದ ಕಲಿಕೆಯ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ಆತ್ಮವಿಶ್ವಾಸ ಬೆಳೆಯುತ್ತದೆ.
• ಪರಿಣಾಮಕಾರಿ ಓದುವಿಕೆಯ ಕಲೆಯನ್ನು ಎಸ್‌ಕ್ಯು3ಆರ್ (SQ3R) ನಂತಹ ತಂತ್ರಗಾರಿಕೆಯ ಮೂಲಕ ರೂಢಿಸಿಕೊಳ್ಳಿ. ಇದರಿಂದ, ಜ್ಞಾಪಕ ಶಕ್ತಿಯೂ ವೃದ್ಧಿಸುತ್ತದೆ.
ಸಕಾರಾತ್ಮಕವಾದ ಆಶಾಭಾವನೆಯಿಂದ ಈ ಸಲಹೆಗಳನ್ನು ಅನುಸರಿಸಿದರೆ ಕಲಿಕೆಯಲ್ಲಿ ನಿಮ್ಮ ಆಸಕ್ತಿ, ಏಕಾಗ್ರತೆ ಹೆಚ್ಚುತ್ತದೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ: http://www.vpradeepkumar.com/self-motivation/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT