ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೂ ಬೇಕು ‘ಆರ್ಥಿಕ ಸಾಕ್ಷರತೆ’: ಏನಿದರ ಅಗತ್ಯತೆ? ಇಲ್ಲಿದೆ ವಿವರ

Last Updated 11 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಇಂದಿನ ಜಗತ್ತು ವ್ಯವಹಾರಮಯವಾಗಿದೆ. ಪ್ರತಿಯೊಂದು ಸಂಗತಿ, ಘಟನೆಗಳಲ್ಲಿ ವ್ಯವಹಾರ ಚತುರತೆ ಅತ್ಯಗತ್ಯ. ವಯಸ್ಕರಿಗೆ ಹೋಲಿಸಿದರೆ ಮಕ್ಕಳು ನಿತ್ಯ ವ್ಯವಹಾರಗಳಲ್ಲಿ ಭಾಗಿಯಾಗುವುದು ಅತಿ ವಿರಳ. 2019ರಲ್ಲಿ ‘ನ್ಯಾಷನಲ್ ಸೆಂಟರ್ ಫಾರ್ ಫೈನಾನ್ಶಿಯಲ್ ಎಜುಕೇಶನ್’ ಸಂಸ್ಥೆಯು ನಡೆಸಿದ ಸಮೀಕ್ಷೆಯ ಪ್ರಕಾರ ಕೇವಲ ಶೇ 27ರಷ್ಟು ಭಾರತೀಯರು ಆರ್ಥಿಕ ಸಾಕ್ಷರರಾಗಿದ್ದಾರೆ. ಬ್ರಿಕ್ಸ್ ದೇಶಗಳ ಪೈಕಿ ಭಾರತದಲ್ಲಿ ಆರ್ಥಿಕ ಸಾಕ್ಷರತೆ ಅತ್ಯಂತ ಕಡಿಮೆ. ಮಕ್ಕಳಿಗೆ ಅಗತ್ಯ ವಯಸ್ಸಿನಿಂದಲೇ ಹಣಕಾಸಿನ ವ್ಯವಹಾರಗಳ ಬಗ್ಗೆ ತೊಡಗಿಸಿಕೊಳ್ಳದಿರುವುದು ಇದಕ್ಕೆಲ್ಲ ಕಾರಣ ಆಗಿದೆ.

ಮಕ್ಕಳು ಹಣ ಮತ್ತು ವ್ಯವಹಾರದ ಬಗ್ಗೆ ತಿಳಿದುಕೊಳ್ಳಲು ಶಾಲಾ ಶಿಕ್ಷಣದಲ್ಲಿ ನಿಗದಿತ ಪಠ್ಯಕ್ರಮ ಮೀಸಲಾಗಿದ್ದರೂ, ಅದು ಕೇವಲ ತರಗತಿ ಪ್ರಕ್ರಿಯೆಗಳಿಗೆ ಮಾತ್ರ ಸೀಮಿತವಾಗುತ್ತಿದೆ.

ಆರ್ಥಿಕ ಸಾಕ್ಷರತೆ ಎಂದರೆ?

ಜ್ಞಾನ ಮತ್ತು ಕೌಶಲಗಳನ್ನು ಬಳಸಿಕೊಂಡು ಆರ್ಥಿಕ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ, ಜೀವಮಾನದ ಆರ್ಥಿಕ ಯೋಗಕ್ಷೇಮಕ್ಕಾಗಿ ನಿರ್ವಹಿಸುವ ಸಾಮರ್ಥ್ಯವೇ ಆರ್ಥಿಕ ಸಾಕ್ಷರತೆ. ಹಣಕಾಸಿನ ಅರಿವು, ಜ್ಞಾನ, ಕೌಶಲಗಳು, ವರ್ತನೆ ಮತ್ತು ನಡವಳಿಕೆಯ ಸಂಯೋಜನೆಯು ಆರ್ಥಿಕ ಸಾಕ್ಷರತೆಯನ್ನು ಸಮರ್ಥ ಹಣಕಾಸಿನ ನಿರ್ಧಾರಗಳನ್ನು ಮಾಡಲು ಮತ್ತು ಅಂತಿಮವಾಗಿ ವೈಯಕ್ತಿಕ ಆರ್ಥಿಕ ಯೋಗಕ್ಷೇಮವನ್ನು ಸಾಧಿಸಲು ಅವಶ್ಯಕ.

ಮಕ್ಕಳಿಗೇಕೆ ಆರ್ಥಿಕ ಸಾಕ್ಷರತೆ?

ಹೆಚ್ಚಿನ ಪೋಷಕರು ತಮ್ಮ ಮಕ್ಕಳಿಗೆ ‘ಪಾಕೆಟ್ ಮನಿ’ ನೀಡುತ್ತಾರೆ. ಕೆಲ ಮಕ್ಕಳು ಆ ಹಣವನ್ನು ಪಿಗ್ಗಿ ಬ್ಯಾಂಕ್‌ನಲ್ಲಿ ಶೇಖರಿಸಿ ಇಡುತ್ತಾರೆ. ಅಗತ್ಯ ಇದ್ದಾಗ ಅದನ್ನು ಬಳಸುತ್ತಾರೆ. ಈ ಪರಿಕಲ್ಪನೆಯು ಅವರಿಗೆ ಉಳಿತಾಯದ ಶಿಸ್ತನ್ನು ಕಲಿಯಲು ಸಹಾಯ ಮಾಡುತ್ತದೆ. ಇದು ಕೇವಲ ಹಣ ಉಳಿತಾಯದ ಶಿಸ್ತನ್ನು ಮೂಡಿಸುತ್ತದೆಯೇ ವಿನಾ ಹಣದ ವಹಿವಾಟಿನ ಪ್ರಕ್ರಿಯೆಗಳನ್ನು ಕಲಿಸುವುದಿಲ್ಲ. ಮಕ್ಕಳು ತಮ್ಮ ವಯಸ್ಸಿಗೆ ಅನುಗುಣವಾಗಿ ಹಣಕಾಸು ಮತ್ತು ಮಾರುಕಟ್ಟೆಗಳ ಪರಿಕಲ್ಪನೆಯನ್ನು ಅರ್ಥಮಾಡಿಕೊಂಡರೆ, ಭವಿಷ್ಯದಲ್ಲಿ ಅವರು ತಪ್ಪು ಹಣಕಾಸು ಸಾಧನಗಳಲ್ಲಿ ಹೂಡಿಕೆ ಮಾಡುವುದನ್ನು ತಡೆಯಬಹುದು.

ಮಕ್ಕಳಿಗೆ ಹಣದ ವಹಿವಾಟಿನ ಪರಿಕಲ್ಪನೆಯ ಅರಿವು ಇದ್ದಾಗ, ಅವರು ಉಳಿತಾಯದ ಮಹತ್ವದ ಜ್ಞಾನವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಕುಟುಂಬದ ಮೇಲೆ ಪ್ರಭಾವ ಬೀರಬಹುದು. ತಾವು ಸಂಗ್ರಹಿಸಿದ ಹಣವನ್ನು ಉತ್ತಮವಾಗಿ ನಿರ್ವಹಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ.

ಹೇಗೆ ಮಾಡಬಹುದು?

ಶಾಲೆಗಳು/ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಮಕ್ಕಳಿಗೆ ಉದ್ಯಮಶೀಲತೆ, ಖರ್ಚು, ಉಳಿತಾಯ ಮತ್ತು ಹೂಡಿಕೆ, ಮುಕ್ತ ಮಾರುಕಟ್ಟೆಗಳ ಮೂಲಭೂತ ಅಂಶಗಳನ್ನು ಕಲಿಯಲು ಸಹಾಯ ಮಾಡಲಾಗುತ್ತದೆ ಎಂಬ ನಂಬಿಕೆ ಬಹಳ ಜನರಲ್ಲಿ ಇದೆ. ಮಕ್ಕಳಲ್ಲಿ ಆರ್ಥಿಕ ಸಾಕ್ಷರತೆ ಬೆಳೆಸುವುದು ಕೇವಲ ಶಾಲೆ/ಶಿಕ್ಷಣದ ಜವಾಬ್ದಾರಿ ಮಾತ್ರವಲ್ಲ. ಪಾಲಕರ ಜವಾಬ್ದಾರಿಯೂ ಇದೆ. ಮಕ್ಕಳು ತಮ್ಮ ಜೀವನದಲ್ಲಿ ಮೂಲಭೂತ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಬೇಕಾದ ಆರ್ಥಿಕ ಸಾಕ್ಷರತೆಯನ್ನು ಕಲಿಸುವ ಈ ಅವಕಾಶವನ್ನು ನಾವು ಕಳೆದುಕೊಂಡರೆ, ಭವಿಷ್ಯದಲ್ಲಿ ಯಶಸ್ವಿಯಾಗುವ ಅವರ ಸಾಮರ್ಥ್ಯವನ್ನು ನಾವೇ ಹಾಳುಮಾಡಿದಂತಾಗುತ್ತದೆ. ಪೋಷಕರು ಮನೆಯಿಂದಲೇ ಆರ್ಥಿಕ ಸಾಕ್ಷರತೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಕೆಲವು ವಿಧಾನಗಳು ಇಲ್ಲಿವೆ!

1. ಅಗತ್ಯ ಮತ್ತು ಅನಗತ್ಯ ವಸ್ತುಗಳ ವ್ಯತ್ಯಾಸ ತಿಳಿಸಿ : ಸಾಮಾನ್ಯವಾಗಿ ಮಕ್ಕಳು ನೋಡಿದ್ದೆಲ್ಲ ಬೇಕು ಎಂದು ಕೇಳುತ್ತಾರೆ. ಆ ವಸ್ತುವಿನ ತಕ್ಷಣದ ಅಗತ್ಯ ಮತ್ತು ಅನಿವಾರ್ಯತೆ ಬಗ್ಗೆ ತಿಳಿದು ಕೊಡಿಸಿ. ಅದನ್ನು ಮಕ್ಕಳಿಗೆ ತಿಳಿ ಹೇಳಿ. ಇದು ಭವಿಷ್ಯದಲ್ಲಿ ಅವರು ವೆಚ್ಚದ ಬಗ್ಗೆ ಮೌಲ್ಯ ನಿರ್ಣಯ ಮಾಡಲು ಸಹಾಯ ಮಾಡುತ್ತದೆ. ಹಣವನ್ನು ಯಾವಾಗ? ಯಾವುದಕ್ಕೆ? ಎಷ್ಟು ಖರ್ಚು ಮಾಡಬೇಕು ಎಂಬುದನ್ನು ತಿಳಿದುಕೊಳ್ಳುವರು. ಇದು ಹಣಕಾಸು ನಿರ್ವಹಣೆಯ ನಿರ್ಣಾಯಕ ಅಂಶವಾಗಿದೆ.

2. ಖರ್ಚು ವೆಚ್ಚಗಳ ಮಾಹಿತಿ ತಿಳಿಸಿ: ಮಕ್ಕಳಿಗೆ ನಿಯಮಿತವಾಗಿ ಮನೆಯ ಖರ್ಚುವೆಚ್ಚಗಳ ಬಗ್ಗೆ ಮಾಹಿತಿ ತಿಳಿಸಿ. ದುಡಿಯುವ ಹಣ ಮತ್ತು ಖರ್ಚಾಗುವ ಹಣ, ಉಳಿತಾಯದ ಬಗ್ಗೆ ತಿಳಿಸುವುದರಿಂದ ಮಕ್ಕಳು ಖರ್ಚುವೆಚ್ಚಗಳ ಬಗ್ಗೆ ತಿಳಿಯುವಂತಾಗುತ್ತದೆ. ಪ್ರತಿ ತಿಂಗಳು ಮಕ್ಕಳನ್ನು ಕೂರಿಸಿಕೊಂಡು ಕುಟುಂಬದ ಖರ್ಚು ವೆಚ್ಚಗಳ ಮಾಹಿತಿಯನ್ನು ಮಂಡಿಸಬೇಕು. ಇದರಿಂದ ಅವರಿಗೆ ಕುಟುಂಬದ ಖರ್ಚುವೆಚ್ಚಗಳ ಮಾಹಿತಿ ತಿಳಿಯುತ್ತದೆ.

3. ದೈನಂದಿನ ವ್ಯವಹಾರಗಳನ್ನು ಪರಿಚಯಿಸಿ: ಮಕ್ಕಳಿಗೆ ದೈನಂದಿನ ಹಣಕಾಸಿನ ವಹಿವಾಟಿನ ಪರಿಚಯ ಮಾಡಿಸುವುದು ಇಂದಿನ ಅಗತ್ಯಗಳಲ್ಲಿ ಒಂದು. ಹೀಗೆ ಮಾಡುವುದರಿಂದ ಮಕ್ಕಳಲ್ಲಿ ಕುಟುಂಬದ ಖರ್ಚು ಮತ್ತು ವೆಚ್ಚಗಳ ಮಾಹಿತಿ ತಿಳಿಯುತ್ತದೆ. ಜೊತೆಗೆ ವಹಿವಾಟಿನಲ್ಲಿ ಕೌಶಲ ಬೆಳಯುತ್ತದೆ. ಭವಿಷ್ಯದಲ್ಲಿ ಧೈರ್ಯದಿಂದ ಸ್ವಾವಲಂಬಿಗಳಾಗಿ ಆರ್ಥಿಕ ವಹಿವಾಟಿನಲ್ಲಿ ತೊಡಗಿಕೊಳ್ಳುತ್ತಾರೆ.

4. ಕುಟುಂಬದ ಬಜೆಟ್ ತಯಾರಿಸಿ : ಮಕ್ಕಳಿಂದಲೇ ಕುಟುಂಬದ ಬಜೆಟ್(ಮಾಸಿಕ/ವಾರ್ಷಿಕ) ತಯಾರಿಸಿ ಮಂಡಿಸುವ ಕಾರ್ಯಯೋಜನೆಯು ಅವರಲ್ಲಿ ಆರ್ಥಿಕ ಮೌಲ್ಯವನ್ನು ಬೆಳೆಸುತ್ತದೆ. ಪ್ರತಿ ತಿಂಗಳ ಖರ್ಚು–ವೆಚ್ಚವನ್ನು ಅವರಿಂದಲೇ ಸಿದ್ಧಪಡಿಸುವುದರಿಂದ ಹೊಸ ಹೊಸ ಆರ್ಥಿಕ ಯೋಜನೆಗಳನ್ನು ಕೈಗೊಳ್ಳಲು ಪ್ರೇರಣೆ ದೊರೆಯುತ್ತದೆ.

5. ಉಳಿತಾಯದ ಪ್ರಾಮುಖ್ಯವನ್ನು ತಿಳಿಸಿ: ಮಕ್ಕಳು ವಸ್ತುಗಳ ಬಳಕೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಮರುಬಳಕೆ ಮಾಡುವಂತಹ ಶೈಕ್ಷಣಿಕ ಪರಿಕರ (ನೋಟ್‌ ಪುಸ್ತಕ, ಪೆನ್ನು, ಪೆನ್ಸಿಲ್‌.. ಇತ್ಯಾದಿ) ಬಳಸುವ ಹವ್ಯಾಸ ಬೆಳೆಸಿದರೆ, ಉಳಿತಾಯ ಎನ್ನುವುದು ಅಲ್ಲಿಂದಲೇ ಆರಂಭವಾಗುತ್ತದೆ. ಮಿತವ್ಯಯ ಮತ್ತು ದಿಢೀರ್ ಖರ್ಚುಗಳ ಬಗ್ಗೆ ಮಕ್ಕಳಿಗೆ ಸ್ಪಷ್ಟ ಜ್ಞಾನ ಮೂಡುತ್ತದೆ. ಉದಾಹರಣೆಗೆ ಹಾಸ್ಟಲ್‌ನಲ್ಲಿರುವ ಮಗು ಪಾಲಕರಿಂದ ಪಡೆದ ಹಣವನ್ನು ಅನಗತ್ಯವಾಗಿ ಖರ್ಚು ಮಾಡದೇ ಉಳಿತಾಯ ಮಾಡಿಟ್ಟರೆ, ಅಗತ್ಯ ಇದ್ದಾಗ ಬಳಸಿಕೊಳ್ಳಬಹುದು. ಮಗುವಿನ ಹೆಸರಿನಲ್ಲೇ ಬ್ಯಾಂಕ್ ಖಾತೆ ತೆರೆದು, ಹೆಚ್ಚುವರಿ ಹಣವನ್ನು ಉಳಿತಾಯ ಖಾತೆಗೆ ಸೇರಿಸುವ ಮತ್ತು ಅಗತ್ಯವಿದ್ದಾಗ ಅದನ್ನು ಪಡೆ ಯುವ ಬ್ಯಾಂಕಿಂಗ್ ವ್ಯವಹಾರಗಳನ್ನು ಅಭ್ಯಾಸ ಮಾಡಿಸಿ. ಇಲ್ಲಿ ಮಗುವೇ ಬ್ಯಾಂಕಿಗೆ ಹೋಗಿ ವ್ಯವಹಾರಗಳನ್ನು ಮಾಡಬೇಕು. ಇದರಿಂದ ಉಳಿತಾಯ ಮನೋಭಾವನೆ ಜೊತೆಗೆ ಬ್ಯಾಂಕಿಂಗ್ ವ್ಯವಹಾರಗಳನ್ನೂ ಕಲಿಯುತ್ತಾರೆ.

6. ಹಣಕಾಸಿನ ಮುಕ್ತ ಮಾತುಕತೆ ಇರಲಿ: ಪೋಷಕರು ತಮ್ಮ ಹಣಕಾಸಿನ ನಿರ್ಧಾರಗಳ ಬಗ್ಗೆ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಬೇಕು. ತಮ್ಮ ಮಕ್ಕಳೊಂದಿಗೆ ಸಾಮಾನ್ಯ ವಿಷಯಗಳ ಚರ್ಚೆಯವೇಳೆಯೂ ಹಣಕಾಸಿನ ವಿಷಯವನ್ನು ಪ್ರಸ್ತಪಿಸಬಹುದು. ಹಣಕಾಸಿನ ಸಾಕ್ಷರತೆಯ ನಿರೀಕ್ಷೆಯಿಂದ ಮಕ್ಕಳಿಗೆ ಎಂದಿಗೂ ಬೇಸರವಾಗುವುದಿಲ್ಲ ಎಂದು ಖಚಿತಪಡಿಸಿ ಕೊಳ್ಳಲು ಆಗಾಗ್ಗೆ ಮಕ್ಕಳಿಗೆ ಕಿರು ಸವಾಲುಗಳನ್ನು ನೀಡಿ. ಉದಾಹರಣೆಗೆ ಗೃಹ ನಿರ್ಮಾಣ, ಮದುವೆ ಖರ್ಚುವೆಚ್ಚಗಳ ಬಗ್ಗೆ ನಿರ್ಧಾರ ಮಾಡುವಾಗ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ.

ಶಿಕ್ಷಣ ಕಲಿಕೆಗೆ ಮನೆಯ ಮೊದಲ ಪಾಠ ಶಾಲೆಯೋ ಹಾಗೆಯೇ, ‘ಆರ್ಥಿಕ ಸಾಕ್ಷರತೆ’ ಕಲಿಸುವುದಕ್ಕೂ ಮನೆಯೇ ಮೊದಲ ಪಾಠ ಶಾಲೆಯಾಗಬೇಕು.

ಮಕ್ಕಳಿಗೆ ಹಣಕಾಸಿನ ಅರಿವು ಮೂಡಿಸುವುದರಿಂದ ಭವಿಷ್ಯದಲ್ಲಿ ಹಣಕಾಸಿನ ಉತ್ತಮ ನಿರ್ವಹಣೆಯ ಬಗ್ಗೆ ತಿಳಿಯುತ್ತಾರೆ. ಆದ್ಯತೆಗೆ ಅನುಗುಣವಾಗಿ ಹಣ ಬಳಕೆ ಮತ್ತು ಉಳಿತಾಯ ಮನೋಭಾವನೆ ಬೆಳೆಸಲು ಈ ಅರಿವು ಅಗತ್ಯ.

- ಪ್ರೊ. ಎಸ್.ಎಸ್.ಪಾಟೀಲ್, ಅರ್ಥಶಾಸ್ತ್ರ ಪ್ರಾಧ್ಯಾಪಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT