ಗುರುವಾರ , ಡಿಸೆಂಬರ್ 8, 2022
18 °C

ನಿಮಗಿದು ಗೊತ್ತೇ? ಅತಿ ದೊಡ್ಡ ಸಮುದ್ರ ಪಕ್ಷಿ ಅಲ್‌ಬಟ್ರಾಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಲ್‌ಬಟ್ರಾಸ್‌(Albatrosses) ಎಂಬುದು ಅತ್ಯಂತ ದೊಡ್ಡ ಸಮುದ್ರ ಪಕ್ಷಿ. ಇದು ಸಮಭಾಜಕ ವೃತ್ತದ ದಕ್ಷಿಣಕ್ಕಿರುವ ದೇಶಗಳಲ್ಲಿ ಮುಖ್ಯವಾಗಿ ಕಂಡುಬರುತ್ತದೆ. ಈ ಪಕ್ಷಿಯಲ್ಲಿ ಹನ್ನೆರಡಕ್ಕೂ ಹೆಚ್ಚು ಜಾತಿಗಳಿವೆ. 

ಈ ಪಕ್ಷಿಯ ಕೊಕ್ಕು ಉದ್ದವಾಗಿರುತ್ತದೆ. ರೆಕ್ಕೆಗಳು ಉದ್ದವಾಗಿರುತ್ತವೆ (ರೆಕ್ಕೆಯ ಉದ್ದ 3.6 ಮಿಟರ್‌ಗಳು), ಅಗಲ ಕಿರಿದಾಗಿರುತ್ತದೆ. ಆದ್ದರಿಂದ ಇದು ಅತ್ಯಂತ ಎತ್ತರೆಕ್ಕೆ ಹೋಗಿ ಗಂಟೆಗಟ್ಟಲೆ ನಿರಾಯಾಸವಾಗಿ ಹಾರುವ ಸಾಮರ್ಥ್ಯ ಹೊಂದಿದೆ. ಪಕ್ಷಿಯ ದೇಹ 1.2 ಮಿಟರ್ ಉದ್ದವಿರುತ್ತದೆ.

ಅಲ್‌ಬಟ್ರಾಸ್ ಪಕ್ಷಿ ಹಾರಾಟ ಶುರು ಮಾಡಲು ಸ್ವಲ್ಪ ಕಷ್ಟಪಡುತ್ತದೆ. ಮೇಲಕ್ಕೆ ಏರಲು ಈ ಪಕ್ಷಿಗೆ ಸ್ವಲ್ಪ ಗಾಳಿ ಬೇಕಾಗುತ್ತದೆ. ಆದ್ದರಿಂದ ಅದು ನೆಲದ ಮೇಲೆ ಅಥವಾ ನೀರಿನ ಮೇಲೆ ಬಹಳ ಕಾಲ ರೆಕ್ಕೆಗಳನ್ನು ಬಡಿದುಕೊಂಡು ಓಡಿ, ಅನಂತರ ಮೇಲೆ ಏರುತ್ತದೆ.

ಇತರ ಸಾಗರ ಪಕ್ಷಿಗಳಂತೆ ಅಲ್‌ಬಟ್ರಾಸ್‌ ಕೂಡ‌ ಸಮುದ್ರದ ನೀರನ್ನು ಕುಡಿಯುತ್ತದೆ. ಇದು ಮೀನಗಳನ್ನು ತಿಂದು ಜೀವಿಸುತ್ತದೆ. ಅಲ್ಲದೇ ಹಡಗಿನಲ್ಲಿ ಶೇಖರವಾದ ತ್ಯಾಜ್ಯ ಪದಾರ್ಥಗಳನ್ನೂ ತಿನ್ನುತ್ತದೆ.

ಸಂತಾನೋತ್ಪತ್ತಿಯ ಕಾಲದಲ್ಲಿ ಮಾತ್ರ, ಈ ಪಕ್ಷಿ ದ್ವೀಪಗಳಲ್ಲಿರುವ ಕಾಲೊನಿಗಳಿಗೆ ಬರುತ್ತದೆ. ಇದು ನೆಲದ ಮೇಲೆ ಒಂದೇ ಒಂದು ದೊಡ್ಡ ಮೊಟ್ಟೆ ಇಡುತ್ತದೆ. ಬಯಲಿನಲ್ಲಿ ಇಡುವ ಆ ಮೊಟ್ಟೆಗೆ ಗಂಡು ಮತ್ತು ಹೆಣ್ಣು ಅಲ್‌ಬಟ್ರಾಸ್ ಪಕ್ಷಿ ಒಂದಾದ ಮೇಲೊಂದರಂತೆ ಕಾವು ಕೊಡುತ್ತಾ ಹೋಗುತ್ತವೆ. ಈ ಪಕ್ಷಿಯ ಮರಿ ಬೆಳೆಯುವುದು ತುಂಬ ನಿಧಾನ. ಈ ಮರಿಗೆ ರೆಕ್ಕೆಗಳು ಬರಲು 3 ರಿಂದ 10 ತಿಂಗಳ ಕಾಲ ಹಿಡಿಯುತ್ತದೆ. ರೆಕ್ಕೆ ಬಂದ ನಂತರ ಅದು 5 ರಿಂದ 10 ವರ್ಷಗಳಷ್ಟು ಸಮುದ್ರದಲ್ಲೇ ದಿನ ಕಳೆಯುತ್ತವೆ. ಸಮುದ್ರದಲ್ಲಿ ಸಂಚರಿಸುವ ಮತ್ತು ಆಹಾರ ಹುಡುಕಿಕೊಳ್ಳುವ ವಿಧಾನವನ್ನೂ ಈ ಮರಿಗಳು ಕಲಿತುಕೊಳ್ಳುತ್ತವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು