ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರೂಪ್-ಸಿ (ತಾಂತ್ರಿಕೇತರ) ಹುದ್ದೆ: ರಾಜ್ಯ ಮತ್ತು ಪ್ರಾದೇಶಿಕ ಆಡಳಿತ

ಸ್ಪರ್ಧಾತ್ಮಕ ಪರೀಕ್ಷೆ ತಯಾರಿ
Last Updated 8 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಭಾಗ-1

ಕರ್ನಾಟಕ ಲೋಕಸೇವಾ ಆಯೋಗವು ಗ್ರೂಪ್ ‘ಸಿ’ ವೃಂದದ ತಾಂತ್ರಿಕೇತರ ಹುದ್ದೆಗಳಿಗೆ ಡಿಸೆಂಬರ್ 19ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದೆ. ಪರೀಕ್ಷೆಗೆ ಸಿದ್ಧತೆ ನಡೆಸುವವರಿಗಾಗಿ ‘ಸಾಮಾನ್ಯ ಜ್ಞಾನ’ ವಿಭಾಗದಲ್ಲಿ‘ರಾಜ್ಯ ಮತ್ತು ಪ್ರಾದೇಶಿಕ ಆಡಳಿತ’ ವಿಷಯದ ಕುರಿತಾದ ಬಹುಆಯ್ಕೆ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.

1) ವಿಧಾನಪರಿಷತ್ ರಚಿಸಲು ವಿಧಾನಸಭೆಯಲ್ಲಿ ಮೂರನೇ ಎರಡರಷ್ಟು ಸದಸ್ಯರ ಬಹುಮತದಿಂದ ನಿರ್ಣಯ ಅಂಗೀಕಾರವಾಗಬೇಕು. ನಂತರ ಆ ನಿರ್ಣಯವನ್ನು ರಾಜ್ಯಪಾಲರ ಸಹಿಯೊಂದಿಗೆ ಸಂಸತ್ತಿಗೆ ಕಳುಹಿಸಬೇಕು. ಅಲ್ಲಿ ಸರಳ ಬಹುಮತದೊಂದಿಗೆ ವಿಧಾನಪರಿಷತ್ತನ್ನು ರಚಿಸಬಹುದು ಎಂದು ನಮ್ಮ ಸಂವಿಧಾನದ ಯಾವ ವಿಧಿ (ಆರ್ಟಿಕಲ್) ತಿಳಿಸುತ್ತದೆ?

ಎ) 169 ಬಿ) 269 ಸಿ) 369

ಡಿ) ಮೇಲಿನ ಯಾವುದೂ ಅಲ್ಲ

ಉತ್ತರ:- ಎ

2) ಭಾರತ, ಸಂವಿಧಾನವನ್ನು ಅಂಗೀಕರಿಸುವ ಮೊದಲೇ ಮೈಸೂರು ಸಂಸ್ಥಾನದಲ್ಲಿ ಮೇಲ್ಮನೆ ಸ್ಥಾಪನೆಯಾಗಿತ್ತು. ಮುಂದೆ ರಾಷ್ಟ್ರ ಮಟ್ಟದಲ್ಲಿ ‘ರಾಜ್ಯಸಭೆ’ ಸ್ಥಾಪನೆಗೂ ಇದು ಸ್ಫೂರ್ತಿಯಾಯಿತು. ಹಾಗಾದರೆ ಮೈಸೂರು ಸಂಸ್ಥಾನದಲ್ಲಿ ಯಾವ ವರ್ಷ ಮೇಲ್ಮನೆ ಸ್ಥಾಪನೆ ಮಾಡಲಾಗಿತ್ತು?

ಎ) 1901 ಬಿ) 1907 ಸಿ) 1913

ಡಿ) ಮೇಲಿನ ಯಾವುದೂ ಅಲ್ಲ

ಉತ್ತರ:- ಬಿ

3) ದೇಶದಲ್ಲಿ ಅತಿ ಹೆಚ್ಚು ವಿಧಾನಪರಿಷತ್ ಸದಸ್ಯರನ್ನು ಹೊಂದಿರುವ ಪ್ರಥಮ ರಾಜ್ಯ ಉತ್ತರ ಪ್ರದೇಶ. ಹಾಗಾದರೆ ದ್ವಿತೀಯ ರಾಜ್ಯ ಯಾವುದು?

ಎ) ಮಹಾರಾಷ್ಟ್ರ ಬಿ) ಕರ್ನಾಟಕ

ಸಿ) ಬಿಹಾರ ಡಿ) ತೆಲಂಗಾಣ

ಉತ್ತರ:- ಎ (ವಿವರಣೆ:- ಕರ್ನಾಟಕ ಹಾಗೂ ಬಿಹಾರ ರಾಜ್ಯಗಳು ಕ್ರಮವಾಗಿ 3ನೇ ಸ್ಥಾನದಲ್ಲಿವೆ. ಎರಡೂ ರಾಜ್ಯಗಳು ತಲಾ 75 ವಿಧಾನಪರಿಷತ್ ಸದಸ್ಯರನ್ನು ಹೊಂದಿವೆ. ಉತ್ತರ ಪ್ರದೇಶ 100 ಹಾಗೂ ಮಹಾರಾಷ್ಟ್ರ 78 ಸ್ಥಾನಗಳನ್ನು ಹೊಂದಿವೆ)

4) ಸಂವಿಧಾನದ 352ನೇ ವಿಧಿಯನ್ವಯ ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿ ಜಾರಿಯಾಗಿ, ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಸಲು ಸಾಧ್ಯವಾಗದ ಸಂದರ್ಭದಲ್ಲಿ ಸಂಸತ್ತು ತುರ್ತು ಪರಿಸ್ಥಿತಿ ಅವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸಬಹುದು. ಆದರೆ ತುರ್ತುಪರಿಸ್ಥಿತಿ ರದ್ದಾಗಿ …………………. ತಿಂಗಳ ಒಳಗಾಗಿ ಚುನಾವಣೆ ನಡೆದು ಹೊಸ ವಿಧಾನಸಭೆ ರಚನೆಯಾಗಬೇಕು.

ಎ) 6 ತಿಂಗಳ ಬಿ) 10 ತಿಂಗಳ

ಸಿ) 3 ತಿಂಗಳ ಡಿ) 9 ತಿಂಗಳ

ಉತ್ತರ:- ಎ

5) ವಿಧಾನಸಭಾಅಧಿವೇಶನ ನಡೆಸಲು ಬೇಕಾದ ಕನಿಷ್ಠ ಸದಸ್ಯರ ಸಂಖ್ಯೆಯನ್ನು ಕೋರಂ ಎಂದು ಕರೆಯುವರು. ಕೋರಂ ಆಗಲು ಒಟ್ಟು ವಿಧಾನಸಭೆಯ ಒಟ್ಟು ಸದಸ್ಯರಲ್ಲಿ 1/10 ರಷ್ಟು ಭಾಗದಷ್ಟು ಸದಸ್ಯರು ಅಧಿವೇಶನದಲ್ಲಿ ಉಪಸ್ಥಿತರಿರಬೇಕು. ಹಾಗಾದರೆ ಕರ್ನಾಟಕದಲ್ಲಿ ವಿಧಾನಸಭಾ ಅಧಿವೇಶನ ನಡೆಸಲು ಅಗತ್ಯವಾದ ಕೋರಂಗೆ ಎಷ್ಟು ಸದಸ್ಯರು ಉಪಸ್ಥಿತರಿರಬೇಕು?

ಎ) 28 ಬಿ) 29 ಸಿ) 32 ಡಿ) 22

ಉತ್ತರ:-ಡಿ

6) ವಿಧಾನಸಭೆಯ ಉಪಸಭಾಧ್ಯಕ್ಷ(ಡೆಪ್ಯೂಟಿ ಸ್ಪೀಕರ್‌) ತಮ್ಮ ರಾಜೀನಾಮೆ ಪತ್ರವನ್ನು ಸಭಾಧ್ಯಕ್ಷರಿಗೆ (ಸ್ಪೀಕರ್‌ಗೆ) ಸಲ್ಲಿಸುತ್ತಾರೆ. ಒಂದು ವೇಳೆ ಸಭಾಧ್ಯಕ್ಷರೇ ರಾಜೀನಾಮೆ ನೀಡಬೇಕಾದ ಸಂದರ್ಭ ಒದಗಿ ಬಂದರೆ ತಮ್ಮ ರಾಜೀನಾಮೆ ಪತ್ರವನ್ನು ಯಾರಿಗೆ ಸಲ್ಲಿಸುತ್ತಾರೆ?

ಎ) ರಾಜ್ಯಪಾಲರು ಬಿ) ಮುಖ್ಯ ಮಂತ್ರಿಗಳು

ಸಿ) ಡೆಪ್ಯೂಟಿ ಸ್ಪೀಕರ್ ಡಿ) ಗೃಹ ಸಚಿವರು

ಉತ್ತರ:- ಸಿ

7) Adjournment Sinedie ಇದು ಏನನ್ನು ಸೂಚಿಸುತ್ತದೆ?

ಎ) ವಿಧಾನಸಭೆಯ ಅಧಿವೇಶನ ಮುಗಿಯಿತು

ಬಿ) ವಿಧಾನಸಭೆಯ ಅಧಿವೇಶನ ಆರಂಭ

ಸಿ) ವಿಧಾನಸಭೆಯ ಮುಕ್ತಾಯ

ಡಿ) ಮೇಲಿನ ಯಾವುದೂ ಅಲ್ಲ

ಉತ್ತರ:- ಎ

8) ವಿಧಾನಸಭೆಯ ಸಭಾಧ್ಯಕ್ಷರ ಮತ್ತು ಉಪಸಭಾಧ್ಯಕ್ಷರ ಹಾಗೂ ವಿಧಾನಪರಿಷತ್‌ನ ಸಭಾಪತಿ ಮತ್ತು ಉಪಸಭಾಪತಿಯ ವೇತನವನ್ನು ಶಾಸನ ಸಭೆಯ ಸದಸ್ಯರು ನಿಶ್ಚಯ ಮಾಡುತ್ತಾರೆ. ಆ ವೇತನವನ್ನು ರಾಜ್ಯದ …………………ನಿಂದ ನೀಡಲಾಗುತ್ತದೆ.

ಎ) ಕನ್ಸಾಲಿಡೇಟೆಡ್ ಫಂಡ್(Consolidated Fund)

ಬಿ) ಕಂಟೆಂಜೆನ್ಸಿ ಫಂಡ್‌

ಸಿ) ರಾಜ್ಯದ ಖಜಾನೆ(ಟ್ರೆಷರಿ) ಬಿಲ್ಲುಗಳು

ಡಿ) ಮೇಲಿನ ಯಾವುದೂ ಅಲ್ಲ

ಉತ್ತರ:- ಎ

9) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ರಾಜ್ಯ ವಿಧಾನಸಭೆಯು ಸಂವಿಧಾನದ ರಾಜ್ಯಪಟ್ಟಿಯಲ್ಲಿರುವ 61 ಹಾಗೂ ಸಮವರ್ತಿ ಪಟ್ಟಿಯಲ್ಲಿರುವವರ 52 ವಿಷಯಗಳ ಮೇಲೆ ಶಾಸನ ರೂಪಿಸುವ ಅಧಿಕಾರವನ್ನು ಪಡೆದಿರುತ್ತದೆ.

2) ಸಂವಿಧಾನದ 250ನೇ ವಿಧಿಯ ಪ್ರಕಾರ ರಾಷ್ಟ್ರೀಯ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯ ಪಟ್ಟಿಯಲ್ಲಿರುವ ವಿಷಯದ ಮೇಲೆ ಕಾನೂನು ರೂಪಿಸುತ್ತದೆ.

3) ರಾಜ್ಯ ಶಾಸಕಾಂಗದಲ್ಲಿ ಅಂಗೀಕಾರಗೊಂಡ(ಪಾಸಾದ) ಮಸೂದೆಯು ರಾಜ್ಯಪಾಲರ ಒಪ್ಪಿಗೆಗೆ ಕಳುಹಿಸಿದಾಗ, ರಾಜ್ಯಪಾಲರಿಗೆ ಆ ಮಸೂದೆಯಿಂದ ಕೇಂದ್ರ ಹಾಗೂ ರಾಜ್ಯಗಳ ನಡುವೆ ವಿವಾದ ಉಂಟಾಗುತ್ತದೆ ಎಂದೆನಿಸಿದರೆ ಅಥವಾ ನ್ಯಾಯಾಂಗ/ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದೆನಿಸಿದರೆ ಅಂತಹ ಮಸೂದೆಗೆ ಒಪ್ಪಿಗೆ ನೀಡುವುದನ್ನು ರಾಷ್ಟಪತಿಯವರು ಕಾಯ್ದಿರಿಸುತ್ತಾರೆ.

4) ಶಾಸನ ರೂಪಿಸಲು ಇರುವ ಮಸೂದೆಯನ್ನು (ಬಿಲ್‌) ವಿಧಾನಸಭೆ ಅಂಗೀಕಾರ ಮಾಡಿ (ಪಾಸ್ ಮಾಡಿ) ವಿಧಾನ ಪರಿಷತ್‌ಗೆ ಕಳುಹಿಸಿದಾಗ ಅದೂ ಒಪ್ಪಿ ಅಂಗೀಕರಿಸಬೇಕು (ಪಾಸ್ ಮಾಡಬೇಕು). ಒಂದು ವೇಳೆ ತಿರಸ್ಕರಿಸಿದರೆ(ರಿಜೆಕ್ಟ್ ಮಾಡಿದರೆ) ಮತ್ತೆ ವಿಧಾನಸಭೆ ಅಂಗೀಕರಿಸಿ ವಿಧಾನಪರಿಷತ್‌ಗೆ ಕಳುಹಿಸಿದಾಗ ಅಲ್ಲೂ ಅಂಗೀಕಾರವಾಗಲೇಬೇಕು. ಈ ಮಸೂದೆಯನ್ನು ಒಂದು ತಿಂಗಳ ಒಳಗೆ ಅಂಗೀಕರಿಸದಿದ್ದರೆ ‘ವಿಧಾನಪರಿಷತ್ತು ಅಂಗೀಕರಿಸಿದೆ’ ಎಂದೇ ಭಾವಿಸಿ ರಾಜ್ಯಪಾಲರ ಸಹಿಗೆ ಕಳುಹಿಸಲಾಗುವುದು.

ಮೇಲಿನ ಹೇಳಿಕೆಗಳಲ್ಲಿ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ) ಹೇಳಿಕೆ 1, 2 ಮತ್ತು 3 ಮಾತ್ರ ಸರಿಯಾಗಿವೆ

ಬಿ) ಹೇಳಿಕೆ 3 ಮತ್ತು 4 ಮಾತ್ರ ಸರಿಯಾಗಿವೆ

ಸಿ) ಹೇಳಿಕೆ 1 ರಿಂದ 4ರವರೆಗೆ ಎಲ್ಲವೂ ಸರಿಯಾಗಿವೆ

ಡಿ) ಯಾವ ಹೇಳಿಕೆಯೂ ಸರಿಯಾಗಿಲ್ಲ

ಉತ್ತರ:- ಸಿ

10) ಕೆಳಮನೆಯಾದ ವಿಧಾನಸಭೆಯಲ್ಲಿ ಯಾವಾಗಲೂ ಮೊದಲು ಹಣಕಾಸಿನ ಮಸೂದೆ ಮಂಡಿಸಬೇಕು. ವಿಧಾನಸಭೆಯಲ್ಲಿ ಒಪ್ಪಿಗೆ ಪಡೆದ ಹಣಕಾಸಿನ ಮಸೂದೆಯನ್ನು ನಂತರ ವಿಧಾನಪರಿಷತ್ತಿಗೆ ಕಳುಹಿಸಲಾಗುತ್ತದೆ. ವಿಧಾನ ಪರಿಷತ್ ಆ ಮಸೂದೆಗೆ ………………. ದಿನಗಳ ಒಳಗಾಗಿ ಯಾವುದೇ ತರಹದ ತಿದ್ದುಪಡಿಯನ್ನು ಸೂಚಿಸದೇ ಒಪ್ಪಿಗೆಯನ್ನು ನೀಡಬೇಕು. ಅಷ್ಟು ದಿನಗಳೊಳಗೆ ಒಪ್ಪಿಗೆ ನೀಡದಿದ್ದರೆ, ‘ಹಣಕಾಸಿನ ಮಸೂದೆಗೆ ಒಪ್ಪಿಗೆ ನೀಡಿದೆ’ ಎಂದೇ ಭಾವಿಸಿ ರಾಜ್ಯಪಾಲರ ಸಹಿಗಾಗಿ ಕಳುಹಿಸಲಾಗುತ್ತದೆ.

ಎ) 15 ಬಿ) 14 ಸಿ) 21 ಡಿ) 30

ಉತ್ತರ:- ಬಿ

11) ರಾಜ್ಯಪಾಲರು ಮಸೂದೆಯೊಂದನ್ನು ರಾಷ್ಟಪತಿಯವರ ಒಪ್ಪಿಗೆಗೆ ಕಳುಹಿಸಲು ಕಾಯ್ದಿರಿಸಬಹುದು. ರಾಷ್ಟ್ರಪತಿಯವರು ಆ ಮಸೂದೆಗೆ ತಿದ್ದುಪಡಿಗಾಗಿ ಸೂಚಿಸಿ ಪುನರ್ ಪರಿಶೀಲನೆಗೆ ಕಳುಹಿಸಬಹುದು. ಈ ರೀತಿ ಕಳುಹಿಸಿದ ಮಸೂದೆಗೆ ರಾಜ್ಯ ಶಾಸಕಾಂಗ ………………………. ಒಳಗಾಗಿ ರಾಷ್ಟ್ರಪತಿಯವರು ಸೂಚಿಸಿದ ತಿದ್ದುಪಡಿಯೊಂದಿಗೆ ಅಥವಾ ತಿದ್ದುಪಡಿ ಇಲ್ಲದೆಯೇ ಸದನದಲ್ಲಿ ಮಂಡಿಸಿ, ಅದರ ಒಪ್ಪಿಗೆ ಪಡೆದು ಕಳುಹಿಸಬಹುದು. (ಆದರೆ ಸಂವಿಧಾನದಲ್ಲಿ ಈ ಮಸೂದೆಗೆ ರಾಷ್ಟಪತಿಯವರು ಒಪ್ಪಿಗೆ ನೀಡಬೇಕೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಏನನ್ನು ಹೇಳಿಲ್ಲ)

ಎ) 10 ತಿಂಗಳ ಬಿ) 6 ತಿಂಗಳ

ಸಿ) 9 ತಿಂಗಳ ಡಿ) 3 ತಿಂಗಳ

ಉತ್ತರ:- ಬಿ

12) ರಾಜ್ಯ ಶಾಸಕಾಂಗವು ಅಧಿವೇಶನ ನಡೆಯದ ಸಂದರ್ಭದಲ್ಲಿ ಅಗತ್ಯವಿದ್ದಾಗ ರಾಜ್ಯಪಾಲರು ಸುಗ್ರೀವಾಜ್ಞೆಯನ್ನು ಹೊರಡಿಸುತ್ತಾರೆ. ಈ ಸುಗ್ರೀವಾಜ್ಞೆಯು ಕಾನೂನಿನಷ್ಟೇ ಪ್ರಬಲವಾಗಿರುತ್ತದೆ. ಈ ಸುಗ್ರೀವಾಜ್ಞೆಗೆ ಸದನಗಳು ಸಭೆ ಸೇರಿದ 6 ವಾರಗಳ ಒಳಗಾಗಿ ಒಪ್ಪಿಗೆಯನ್ನು ಪಡೆಯಬೇಕು. ಇಲ್ಲವಾದರೆ ಅದು ಅನೂರ್ಜಿತವಾಗುತ್ತದೆ. ಹಾಗಾದರೆ ಸಂವಿಧಾನದ ಯಾವ ವಿಧಿಯ(ಆರ್ಟಿಕಲ್) ಪ್ರಕಾರ ಸುಗ್ರೀವಾಜ್ಞೆಯನ್ನು ಹೊರಡಿಸಲು ಅವಕಾಶಗಳಿವೆ?

ಎ) 113ನೇ ವಿಧಿ ಬಿ) 313ನೇ ವಿಧಿ

ಸಿ) 223ನೇ ವಿಧಿ ಡಿ) 213ನೇ ವಿಧಿ

ಉತ್ತರ:- ಡಿ

ಮಾಹಿತಿ: Spardha Bharati UPSCಯೂಟ್ಯೂಬ್‌ ಚಾನೆಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT