ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ್ಟ್ 23ರಿಂದ ಪ್ರೌಢಶಾಲೆಗಳು ಪುನರಾರಂಭ: ಮೊದಲ 15 ದಿನ ಪುನಶ್ಚೇತನ ಚಟುವಟಿಕೆ

Last Updated 19 ಆಗಸ್ಟ್ 2021, 22:15 IST
ಅಕ್ಷರ ಗಾತ್ರ

ಬೆಂಗಳೂರು: ‘ಇದೇ 23ರಿಂದ ಪ್ರೌಢಶಾಲೆಗಳು ಪುನರಾರಂಭವಾಗಲಿದ್ದು, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮೊದಲ 15 ದಿನ ಪುನಶ್ಚೇತನ ಚಟುವಟಿಕೆ ನಡೆಸಲು ಸೂಚಿಸಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

ನಗರದಲ್ಲಿ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ನಡೆಯುತ್ತಿರುವ ಕೇಂದ್ರಗಳಿಗೆ ಗುರುವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಪುನಶ್ಚೇತನ ಚಟುವಟಿಕೆ ನಡೆಸಿ ಮಕ್ಕಳನ್ನು ಶಾಲಾ ವಾತಾವರಣಕ್ಕೆ ಮರಳಿ ತರುವ ಕೆಲಸವನ್ನು ಶಿಕ್ಷಕರು, ಉಪನ್ಯಾಸಕರು ಮಾಡಬೇಕು’ ಎಂದು ಅವರು ಹೇಳಿದರು.

‘ಶಾಲೆ, ಕಾಲೇಜು ಆರಂಭವಾಗದೆ ಭೌತಿಕ ತರಗತಿಗಳಿಂದ ದೂರ ಉಳಿದಿದ್ದಾರೆ. ಅವರು ತರಗತಿಗೆ ಮರಳುತ್ತಿದ್ದಂತೆ ಪಠ್ಯ ಬೋಧನೆ ಶುರು ಮಾಡದೆ ಕೋವಿಡ್ ಸಂದರ್ಭದ ಅನುಭವಗಳು, ಈ ಅವಧಿಯಲ್ಲಿ ವಿದ್ಯಾರ್ಥಿಗಳು ಏನು ಮಾಡುತ್ತಿದ್ದರು, ಯಾವ ರೀತಿ ಕಲಿಕಾ ಕಾರ್ಯದಲ್ಲಿ ತೊಡಗಿದ್ದರು ಎಂಬಿತ್ಯಾದಿ ವಿಚಾರಗಳನ್ನು ಚರ್ಚಿಸಬೇಕು’ ಎಂದರು.

‘ಉಳಿದ ತರಗತಿಗಳ ಮಕ್ಕಳನ್ನು ಶಾಲೆಗೆ ಕಳುಹಿಸಲೂ ಪೋಷಕರು ಉತ್ಸುಕರಾಗಿದ್ದಾರೆ. ಮಕ್ಕಳೂ ಶಾಲೆಗೆ ಬರಲು ಸಿದ್ಧರಿದ್ದಾರೆ. ಈ ಸಂಬಂಧ ಸ್ವತಃ ನನಗೇ ಸಾಕಷ್ಟು ಮಕ್ಕಳು ಪೋಷಕರು ಕರೆ ಮಾಡಿ ಹೇಳುತ್ತಿದ್ದಾರೆ. 9ರಿಂದ 12ನೇ ತರಗತಿ ಆರಂಭದ ದಿನಗಳು ಯಶಸ್ವಿಯಾದರೆ ಇತರೆ ತರಗತಿಗಳ ಆರಂಭಕ್ಕೆ ನಿರ್ಧಾರ ಕೈಗೊಳ್ಳಲು ಅನುಕೂಲವಾಗುತ್ತದೆ’ ಎಂದರು.

19 ವಿದ್ಯಾರ್ಥಿಗಳು ಗೈರು:
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಮೊದಲ ದಿನ ಸುಸೂತ್ರವಾಗಿ
ನಡೆಯಿತು. ಮೊದಲ ದಿನದ ಐಚ್ಛಿಕ ಕನ್ನಡ, ಗಣಿತ, ಮೂಲಗಣಿತ ಪರೀಕ್ಷೆ ಇತ್ತು.

ರಾಜ್ಯದಲ್ಲಿ ಐಚ್ಛಿಕ ಕನ್ನಡಕ್ಕೆ 198, ಗಣಿತಕ್ಕೆ 80 ಹಾಗೂ ಮೂಲಗಣಿತಕ್ಕೆ 55 ವಿದ್ಯಾಾರ್ಥಿಗಳು ಸೇರಿ 333 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 19 ವಿದ್ಯಾಾರ್ಥಿಗಳು ಗೈರು ಹಾಜರಾಗಿದ್ದು, 314 ವಿದ್ಯಾಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 187 ಪರೀಕ್ಷಾ ಕೇಂದ್ರಗಳ ಪೈಕಿ 58ರಲ್ಲಿ ಪರೀಕ್ಷೆ ನಡೆದಿದೆ.

‘ಇಲಾಖೆಯಿಂದ ನೀಡಲಾದ ಅಂಕಗಳನ್ನು ತಿರಸ್ಕರಿಸಿ ಪರೀಕ್ಷೆ ತೆಗೆದುಕೊಂಡಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಪರೀಕ್ಷೆ ಬರೆಯುತ್ತಿರುವವರಲ್ಲಿ ಖಾಸಗಿ ಶಾಲೆಗಳ ವಿದ್ಯಾರ್ಥಿಗಳೇ ಹೆಚ್ಚಾಗಿದ್ದಾರೆ. ಖಾಸಗಿ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿ ಉತ್ತೀರ್ಣಗೊಳಿಸಲು ಸಾಧ್ಯವಿಲ್ಲ’ ಎಂದೂ ಸಚಿವರು ಹೇಳಿದರು.

ವಸಂತನಗರದ ಸೇಂಟ್‌ ಆನ್‌ ವಿದ್ಯಾ ಸಂಸ್ಥೆ ಮತ್ತು ಕೋಟೆವಾಣಿವಿಲಾಸ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ, ಕೋವಿಡ್ ಸುರಕ್ಷತಾ ಕ್ರಮಗಳ ಪಾಲನೆ ಮತ್ತು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಅವರು ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT