ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ವಿವಿಗಳಲ್ಲಿ ಉನ್ನತ ವ್ಯಾಸಂಗ: ಪ್ರವೇಶ ಪ್ರಕ್ರಿಯೆ ಹೇಗೆ?

Last Updated 5 ಜೂನ್ 2022, 22:30 IST
ಅಕ್ಷರ ಗಾತ್ರ

ಉತ್ತಮ ಮೂಲ ಸೌಕರ್ಯ, ತಾಂತ್ರಿಕ ಜ್ಞಾನ ಹಾಗೂ ಪ್ರಯೋಗಾಧಾರಿತ ಶಿಕ್ಷಣ ವ್ಯವಸ್ಥೆ ಹೊಂದಿರುವ ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳುವ ಭಾರತೀಯರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಅದರಲ್ಲೂ ಎಂಜಿನಿಯರಿಂಗ್‌ ಮತ್ತು ಮ್ಯಾನೇಜ್‌ಮೆಂಟ್‌ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನಕ್ಕಾಗಿ ತೆರಳುತ್ತಿರುವವರ ಸಂಖ್ಯೆ ಸ್ವಲ್ಪ ಹೆಚ್ಚೇ ಇದೆ. ಉನ್ನತಮಟ್ಟದ ಕಲಿಕೆ ಹಾಗೂ ಹೆಚ್ಚು ವೇತನದ ಉದ್ಯೋಗದ ಖಾತರಿ –ಈ ಅಂಶಗಳು ವಿದೇಶಿ ವಿವಿಗಳ ಆಕರ್ಷಣೆಗೆ ಪ್ರಮುಖ ಕಾರಣ.

ಯಾವ್ಯಾವ ಕೋರ್ಸ್‌ಗಳಿವೆ?

ವಿದೇಶಿ ವಿವಿಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ(ಪಿ.ಜಿ) ಹಾಗೂ ಪಿಎಚ್‌.ಡಿ ಅಧ್ಯಯನಕ್ಕೆ ಅವಕಾಶವಿದೆ. ನಮ್ಮಲ್ಲಿರುವಂತೆಯೇಆ ವಿವಿಗಳಲ್ಲೂ ಮೂರು, ನಾಲ್ಕು ಹಾಗೂ ಐದು ವರ್ಷಗಳ ಪದವಿ ಕೋರ್ಸ್‌ ಗಳಿವೆ. ಎಂಜಿನಿಯರಿಂಗ್, ಮ್ಯಾನೇಜ್‌ಮೆಂಟ್‌, ಮೂಲ ಮತ್ತು ಅನ್ವಯಿಕ (ಪ್ಯೂರ್ ಆ್ಯಂಡ್ ಅಪ್ಲೈಡ್ ಸೈನ್ಸ್‌) ವಿಜ್ಞಾನ, ಮಾನವಿಕ (ಹ್ಯೂಮಾನಿಟೀಸ್), ಕಾನೂನು, ಫೈನ್‌ ಆರ್ಟ್‌, ಫಾರ್ಮಸಿ ಸೇರಿದಂತೆ ಸಾಮಾನ್ಯ ಪದವಿ ಕೋರ್ಸ್‌ಗಳೂ ಇವೆ.

ಪದವಿ ಕಲಿಕೆಗೆ ಅರ್ಹತೆ

ವಿದೇಶದ ವಿವಿಗಳಲ್ಲಿ ಪದವಿಗೆ ಸೇರ ಬಯಸುವವರು ಪ್ರವೇಶ ಪರೀಕ್ಷೆ ಬರೆಯಬೇಕು. ಯಾವುದೇ ಪದವಿ ಪ್ರವೇಶಕ್ಕೆ ಎಸ್‌ ಎ ಟಿ (Scholastic Assessment Test) ಅರ್ಹತಾ ಪರೀಕ್ಷೆಯಲ್ಲಿ ನಿಗದಿತ ಅಂಕ ಪಡೆಯಬೇಕು. ಕಾನೂನು ಪದವಿ ಪ್ರವೇಶಕ್ಕೆ ಎಲ್‌ಎಸ್‌ಎಟಿ(ಲಾ ಸ್ಕೂಲ್ ಅಡ್ಮಿಷನ್‌ ಟೆಸ್ಟ್‌) ಅರ್ಹತಾ ಪರೀಕ್ಷೆಯಲ್ಲೂ ನಿಗದಿತ ಅಂಕ ಪಡೆಯಬೇಕು. ಪ್ರತಿಷ್ಠಿತ ವಿವಿಗಳು ಈ ಪ್ರವೇಶ ಪರೀಕ್ಷೆಯ ಅಂಕವನ್ನು ಆಯ್ಕೆಗೆ ಪರಿಗಣಿಸುತ್ತವೆ(ಕೆಲವೊಂದು ವಿವಿಗಳು SAT ಹಾಗೂ LSAT ಅಂಕವನ್ನು ಪರಿಗಣಿಸದೆ ಪದವಿ ಪೂರ್ವ(10+2) ಪರೀಕ್ಷೆಯ ಅಂಕದ ಆಧಾರದ ಮೇಲೆ ಪ್ರವೇಶ ಕಲ್ಪಿಸುತ್ತಿವೆ).

ಭಾರತದಲ್ಲಿ ಐಜಿಸಿಎಸ್‌ಇ(ಇಂಟರ್‌ನ್ಯಾಷನಲ್‌ ಜನರಲ್ ಸರ್ಟಿಫಿಕೆಟ್ ಆಫ್ ಸೆಕೆಂಡರಿ ಎಜುಕೇಷನ್‌) ಮತ್ತು ಐಬಿ (ಇಂಟರ್‌ನ್ಯಾಷನಲ್‌ ಬಕಾಲೌರೇಟ್‌) ಮಂಡಳಿಯ ಶಾಲೆಗಳಲ್ಲಿ ಓದಿದವರಿಗೆ ಯಾವುದೇ ಅರ್ಹತಾ ಪರೀಕ್ಷೆಗಳಲ್ಲದೇ ಕೆಲವು ವಿದೇಶಿ ವಿವಿಗಳಲ್ಲಿ ಪ್ರವೇಶಾವಕಾಶ ನೀಡಲಾಗುತ್ತಿದೆ.

ಸ್ನಾತಕೋತ್ತರ ಪದವಿಗೆ ಅರ್ಹತೆ

ವಿದೇಶಿ ವಿವಿಯಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಪ್ರವೇಶ ಬಯಸುವವರು, ಈ ಕೆಳಗಿನ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ ಸ್ಪರ್ಧಾತ್ಮಕ ಅಂಕ(ಕಾಂಪಿಟೆಂಟ್ ಸ್ಕೋರ್‌) ಪಡೆಯಬೇಕು;

1. ಜಿಆರ್‌ಇ(ಗ್ರಾಜುಯೇಟ್ ರೆಕಾರ್ಡ್ ಎಕ್ಸಾಮ್‌–GRE)

ಎಂಜಿನಿಯರಿಂಗ್‌, ಮೂಲ ಮತ್ತು ಅನ್ವಯಿಕ ವಿಜ್ಞಾನ (Pure and applied science) ಅಧ್ಯಯನ ಮಾಡಲು ಬಯಸುವವರು ಜಿ.ಆರ್.ಇ ಅರ್ಹತಾ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಈ ಪರೀಕ್ಷೆಯನ್ನು ಎಜುಕೇಷನಲ್‌ ಟೆಸ್ಟಿಂಗ್ ಸರ್ವೀಸ್‌(ETS) ಸಂಸ್ಥೆ ನಡೆಸುತ್ತದೆ. 340 ಅಂಕಗಳ ಈ ಪರೀಕ್ಷೆಯಲ್ಲಿ 290 ಕ್ಕಿಂತ ಹೆಚ್ಚು ಅಂಕಗಳಿಸಿದವರಿಗೆ ವಿಶ್ವದ ಅತ್ಯುತ್ತಮ ಕ್ಯೂಎಸ್‌, ಯುಎಸ್‌ ನ್ಯೂಸ್, ಟಿಎಚ್‌ಇ ರ‍್ಯಾಂಕಿಂಗ್‌ನ ವಿವಿಗಳಲ್ಲಿ ಪ್ರವೇಶಾವಕಾಶ ದೊರೆಯುತ್ತದೆ. ಇತ್ತೀಚೆಗೆ ಅಮೆರಿಕ, ಕೆನಡಾ ಸೇರಿದಂತೆ ಕೆಲವು ದೇಶಗಳ ವಿವಿಗಳು ಜಿಆರ್‌ಇ ಅಂಕವನ್ನು ಆಯ್ಕೆ ಮಾನದಂಡವಾಗಿ ಪರಿಗಣಿಸುತ್ತಿಲ್ಲ.

2. ಜಿಎಂಎಟಿ(ಗ್ರಾಜ್ಯುಯೇಟ್ ಮ್ಯಾನೇಜ್‌ಮೆಂಟ್ ಅಡ್ಮಿಷನ್‌ ಟೆಸ್ಟ್‌–GMAT)

ಜಿಮ್ಯಾಟ್‌ ಪ್ರವೇಶ ಪರೀಕ್ಷೆಯನ್ನು ಗ್ರಾಜ್ಯುಯೇಟ್ ಮ್ಯಾನೇಜ್‌ಮೆಂಟ್‌ ಅಡ್ಮಿಷನ್ ಕೌನ್ಸಿಲ್‌(GMAC) ನಡೆಸುತ್ತದೆ. ಈ ಪರೀಕ್ಷೆಯ ಅಂಕಗಳನ್ನು ವಿಶ್ವದ 2300 ಕ್ಕೂ ಹೆಚ್ಚು ಬ್ಯುಸಿನೆಸ್ ಸ್ಕೂಲ್‌ಗಳು ಆಯ್ಕೆಯ ಮಾನದಂಡವಾಗಿ ಪರಿಗಣಿಸುತ್ತವೆ.

ಪ್ರತಿಷ್ಠಿತ ವಿದೇಶಿ ವಿವಿಗಳಲ್ಲಿ ಎಂಬಿಎ ಹಾಗೂ ಇತರೆ ಮ್ಯಾನೇಜ್‌ ಮೆಂಟ್ ಕೋರ್ಸ್‌ಗಳಿಗೆ ಪ್ರವಶಾವಕಾಶ ಬಯಸುವವರು 800 ಅಂಕದ ಜಿಮ್ಯಾಟ್‌ ಪರೀಕ್ಷೆಯಲ್ಲಿ ಕನಿಷ್ಠ 400 ಕ್ಕಿಂತ ಹೆಚ್ಚಿನ ಅಂಕಗಳಿಸಿರಬೇಕು. ಉತ್ತಮ ಅಂಕ ಪಡೆದರೆ ಉತ್ತಮ ಗ್ಲೋಬಲ್‌ ರ‍್ಯಾಂಕಿಂಗ್ ವಿವಿಗಳಲ್ಲಿ ಪ್ರವೇಶಾವಕಾಶ ಲಭ್ಯ. ಆದರೆ ಇತ್ತೀಚೆಗೆ ಕೆಲ ದೇಶಗಳ ವಿವಿಗಳು GMAT ಅಂಕವನ್ನು ಪರಿಗಣಿಸದೆ ಪದವಿಯಲ್ಲಿ ಗಳಿಸಿದ ಅಂಕ ಹಾಗೂ ಸಂದರ್ಶನದ ಅಂಕವನ್ನು ಆಯ್ಕೆ ಮಾನದಂಡವನ್ನಾಗಿ ಪರಿಗಣಿಸುತ್ತಿವೆ.

3. ಭಾಷಾ ಪರೀಕ್ಷೆಗಳು

ಐಇಎಲ್‌ಟಿಎಸ್‌(International English Language Testing System–IELTS): ಆಂಗ್ಲ ಭಾಷಾ ಪ್ರೌಢಿಮೆ ಪರೀಕ್ಷೆಗಾಗಿ ಐಇಎಲ್‌ಟಿಎಸ್‌ ಅರ್ಹತಾ ಪರೀಕ್ಷೆ ನಡೆಸಲಾಗುತ್ತದೆ. ಅಮೆರಿಕ, ಬ್ರಿಟನ್, ಕೆನಡಾ, ಐರ‍್ಲೆಂಡ್‌ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ಈ ಪ್ರವೇಶ ಪರೀಕ್ಷೆಯ ಆಯ್ಕೆಯನ್ನು ಪರಿಗಣಿಸುತ್ತವೆ. ಈ ಭಾಷಾ ಪರೀಕ್ಷೆಯಲ್ಲಿ 6.5 ಕ್ರೆಡಿಟ್‌ ಸ್ಕೋರ್‌ಗಿಂತ ಹೆಚ್ಚು ಅಂಕಗಳಿಸಿದವರನ್ನುಕಾಂಪಿಟೆಂಟ್ ಯೂಸರ್‌ (Competent User) ಎಂದು ಪರಿಗಣಿಸಿ ಅರ್ಹತೆ ನೀಡಲಾಗುತ್ತದೆ.

ಟಿಒಇಎಫ್‌ಎಲ್‌(Test of English as a Foreign Language –TOEFL): ಜಗತ್ತಿನ ಅತಿ ಪ್ರಸಿದ್ದ ಭಾಷಾ ಅರ್ಹತಾ ಪರೀಕ್ಷೆಯಲ್ಲಿ ಟೊಫೆಲ್‌(TOEFL) ಕೂಡ ಒಂದು. ಇಂಗ್ಲಿಷ್‌ ಭಾಷಾ ಸಾಮರ್ಥ್ಯ ಪರೀಕ್ಷಿಸುವ 120 ಅಂಕಗಳ ಈ ಪರೀಕ್ಷೆ ಯಲ್ಲಿ 80 ಕ್ಕಿಂತ ಹೆಚ್ಚು ಅಂಕಗಳಿಸಿದವರನ್ನುಕಾಂಪಿಟೆಂಟ್ ಯೂಸರ್‌ (competent User) ಎಂದು ಪರಿಗಣಿಸಲಾಗುತ್ತದೆ. ಅದೇ ರೀತಿ ಪಿಬಿಟಿ(PBT–) ಭಾಷಾ ಅರ್ಹತಾ ಪರೀಕ್ಷೆಯಲ್ಲಿ 645 ಅಂಕಕ್ಕೆ 550ಕ್ಕಿಂತ ಹೆಚ್ಚು ಅಂಕಗಳಿಸಿದರೆ ಅರ್ಹ ಭಾಷಾ ಪ್ರಾವೀಣ್ಯ ಹೊಂದಿರುವವರೆಂದು ಪರಿಗಣಿಸಲಾಗುತ್ತದೆ.

ಕೋರ್ಸ್, ದೇಶಗಳ ಆಯ್ಕೆ

ಭಾರತದ ಹೆಚ್ಚಿನ ಅಭ್ಯರ್ಥಿಗಳು ಎಂಜಿನಿಯರಿಂಗ್‌, ಮ್ಯಾನೇಜ್‌ಮೆಂಟ್‌, ಮೂಲ ಮತ್ತು ಅನ್ವಯಿಕ ವಿಜ್ಞಾನ ವಿಷಯಗಳಲ್ಲಿ ಪಿ.ಜಿಗಾಗಿ ವಿದೇಶಗಳಿಗೆ ತೆರಳುತ್ತಾರೆ. ಅಲ್ಪ ಪ್ರಮಾಣದಲ್ಲಿ ಅಕೌಂಟಿಂಗ್ ಅಂಡ್ ಫೈನಾನ್ಸ್, ಕಾನೂನು, ಇಂಟರ್‌ನ್ಯಾಷನಲ್‌ ಕಾಮರ್ಸ್, ಮೆಡಿಸನ್, ಫೈನ್ ಆರ್ಟ್ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ಜರ್ಮನಿ, ಕೆನಡಾ ದೇಶಗಳು ವಿದೇಶಿ ಅಧ್ಯಯನದ ಹಾಟ್ ಸ್ಪಾಟ್‌ಗಳಾಗಿವೆ. ಭಾರತದ ಹೆಚ್ಚಿನ ವಿದ್ಯಾರ್ಥಿಗಳುಅಮೆರಿಕ, ಇಂಗ್ಲೆಂಡ್‌, ಕೆನಡಾ, ಜರ್ಮನಿ, ಆಸ್ಟ್ರೇಲಿಯಾ, ಸ್ವೀಡನ್ ದೇಶಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಲ್ಪ ಪ್ರಮಾಣದಲ್ಲಿ ಮಾತ್ರ ಫ್ರಾನ್ಸ್, ಇಟಲಿ, ಐರ‍್ಲೆಂಡ್‌, ಸ್ವೀಡನ್, ನ್ಯೂಜಿಲೆಂಡ್ ದೇಶಗಳಿಗೆ ಹೋಗುತ್ತಾರೆ. ಇಂಗ್ಲೆಂಡ್‌ನಲ್ಲಿ ಎರಡುಸೆಮಿಸ್ಟರ್‌ನ ಸ್ನಾತಕೋತ್ತರ ಪದವಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅಮೆರಿಕ, ಆಸ್ಟ್ರೇಲಿಯಾ, ಕೆನಡಾದಲ್ಲಿ ನಾಲ್ಕು ಸೆಮಿಸ್ಟರ್‌ನ ಸ್ನಾತಕೋತ್ತರ ಪದವಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಅರ್ಜಿ ಸಲ್ಲಿಕೆಯ ಅವಧಿ

ವಿದೇಶಿ ವಿ‍ವಿಗಳು ವರ್ಷದಲ್ಲಿ ಎರಡು ಬಾರಿ ಪ್ರವೇಶ ಅವಕಾಶ ಕಲ್ಪಿಸುತ್ತವೆ. ಮೊದಲನೆಯದು ಜನವರಿ-ಫೆಬ್ರವರಿಯಲ್ಲಿ. ಅದನ್ನು ಸ್ಪ್ರಿಂಗ್ ಸೀಸನ್ (Spring Season) ಎನ್ನುತ್ತಾರೆ. ಎರಡನೆ
ಯದು ಆಗಸ್ಟ್-ಸೆಪ್ಟೆಂಬರ್‌ನಲ್ಲಿ. ಇದಕ್ಕೆ ಫಾಲ್ ಸೀಸನ್(Fall Season) ಎನ್ನುತ್ತಾರೆ.

ಯಾವುದೇ ಸೀಸನ್‌ನಲ್ಲಿ ಪ್ರವೇಶಕ್ಕಾಗಿ ಕನಿಷ್ಠ 12 ತಿಂಗಳು ಮುಂಚಿತವಾಗಿ ಅರ್ಜಿ
ಆಹ್ವಾನಿಸಲಾಗುತ್ತದೆ. 2023ರ ಸ್ಪ್ರಿಂಗ್ ಸೀಸನ್ (ಜನವರಿ-ಫೆಬ್ರವರಿ) ಆಯ್ಕೆ ಬಯಸುವವರು 2022ರ ಜನವರಿ-ಫೆಬ್ರವರಿಯಿಂದಲೇ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಜೂನ್ ಅಥವಾ ಜುಲೈ ತಿಂಗಳಲ್ಲಿ ಪ್ರವೇಶಾವಕಾಶ ಪತ್ರ (Offer Letter) ನೀಡಲಾಗುತ್ತದೆ ಮೂರು ತಿಂಗಳು ವೀಸಾ ಪ್ರಕ್ರಿಯೆಗೆ ಅವಕಾಶವಿರುತ್ತದೆ. ಇದು ಬಹುತೇಕ ವಿದೇಶಿ ವಿವಿಗಳು ಅನುಸರಿಸುವ ಸಾಮಾನ್ಯ ವೇಳಾಪಟ್ಟಿ. ಕೆಲವು ವಿವಿಗಳಲ್ಲಿ ವ್ಯತ್ಯಾಸವಿರಲೂಬಹುದು.

ಖರ್ಚು ವೆಚ್ಚ ಅಂದಾಜು

ವಿದೇಶಿ ಉನ್ನತ ವ್ಯಾಸಂಗ ದುಬಾರಿ. ವಿದೇಶಿ ಕರೆನ್ಸಿ ದರ ಹೆಚ್ಚಾದಂತೆ ವರ್ಷದಿಂದ ವರ್ಷಕ್ಕೆ ವಿದೇಶದಲ್ಲಿ ಉನ್ನತ ವ್ಯಾಸಂಗದ ವೆಚ್ಚವೂ ಹೆಚ್ಚುತ್ತಿದೆ. ಸದ್ಯ ವಿದೇಶದಲ್ಲಿ ಅಧ್ಯಯನ ಮಾಡಲು ವಿವಿ ಶುಲ್ಕ, ಜೀವನ ನಿರ್ವಹಣೆ, ಸಾರಿಗೆ, ವೀಸಾ, ಜೀವ ವಿಮಾ ಇತರೆ ವೆಚ್ಚ ಸೇರಿ ಅಮೆರಿಕದಲ್ಲಿ 2 ವರ್ಷದ ಸ್ನಾತಕೋತ್ತರ ಪದವಿಗೆ ₹50 ಲಕ್ಷದಿಂದ ₹60 ಲಕ್ಷ ವೆಚ್ಚವಾಗುತ್ತದೆ. ಆಸ್ಟ್ರೇಲಿಯಾದಲ್ಲಿಯೂ ₹45 ಲಕ್ಷದಿಂದ ₹55 ಲಕ್ಷ, ಬ್ರಿಟನ್‌ನಲ್ಲಿ 2 ಸೆಮಿಸ್ಟರ್ ಪದವಿಗೆ ₹30 ರಿಂದ ₹ 40 ಲಕ್ಷ ಹಾಗೂ ಕೆನಡಾ, ಐರ‍್ಲೆಂಡ್‌, ಜರ್ಮನಿ, ಸ್ವೀಡನ್‌ಗಳಲ್ಲಿ ₹ 25 ಲಕ್ಷದಿಂದ ₹30 ಲಕ್ಷ ವೆಚ್ಚವಾಗುತ್ತದೆ(ಇದು ಅಂದಾಜು ವೆಚ್ಚವಾಗಿದೆ).

ಆರ್ಥಿಕ ದೃಷ್ಟಿಯಿಂದ ಜರ್ಮನಿ, ಐರ್‌ಲ್ಯಾಂಡ್, ಸ್ವೀಡನ್ ದೇಶಗಳು ಉತ್ತಮ. ಉತ್ತಮ ಉದ್ಯೋಗಿಕ ಭವಿಷ್ಯದ ದೃಷ್ಟಿಯಿಂದ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ, ಕೆನಡಾ ದೇಶಗಳ ವೆಚ್ಚಕ್ಕೆ ಹೊಂದಿಕೊಳ್ಳುವವರ ಸಂಖ್ಯೆ ಹೆಚ್ಚಳವಾಗಿದೆ.

ಎಫ್‌ಎಂಜಿಇ ಕಡ್ಡಾಯ

ರಷ್ಯಾ, ಕಜಕಿಸ್ತಾನ,ಉಕ್ರೇನ್, ಪಾಕಿಸ್ತಾನ, ಚೀನಾ, ಬಾಂಗ್ಲಾದೇಶ, ಫಿಲಿಪ್ಪೀನ್ಸ್‌ ಸೇರಿದಂತೆ ಯಾವುದೇ ರಾಷ್ಟ್ರಗಳಲ್ಲಿ ವೈದ್ಯಕೀಯ ಪದವಿ (ಎಂಬಿಬಿಎಸ್) ಪೂರ್ಣಗೊಳಿಸಿದ ಭಾರತೀಯ ವಿದ್ಯಾರ್ಥಿಗಳು, ತಾವು ಕಲಿತ ಪದವಿಗೆ ಇಲ್ಲಿ ಮಾನ್ಯತೆ ದೊರೆಯಲು ಫಾರಿನ್ ಮೆಡಿಕಲ್ ಗ್ರಾಜುಯೇಟ್ ಎಕ್ಸಾಮಿನೇಷನ್‌ (FMGE) ನಲ್ಲಿ ಕನಿಷ್ಠ ಆರ್ಹತಾ ಅಂಕಗಳೊಂದಿಗೆ ತೇರ್ಗಡೆಯಾಗಬೇಕು. ಪ್ರಸ್ತುತ ಎಫ್‌ಎಂಜಿಇ ಪ್ರವೇಶ ಪರೀಕ್ಷೆ ಉತ್ತೀರ್ಣವಾಗುತ್ತಿರುವ ವಿದ್ಯಾರ್ಥಿಗಳ ಪ್ರಮಾಣ ಶೇ 16 ರಿಂದ ಶೇ 18ರ ಆಸುಪಾಸಿನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT