ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಪರಿಣಾಮಕಾರಿ ಓದುವಿಕೆ ಹೇಗೆ?

Last Updated 28 ನವೆಂಬರ್ 2021, 21:30 IST
ಅಕ್ಷರ ಗಾತ್ರ

1. ನಾವು ದೈನಂದಿನ ಜೀವನದಲ್ಲಿ ಸಾಕಷ್ಟು ಓದುತ್ತಿರುತ್ತೇವೆ. ಓದಿದ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಹೇಗೆ?

ಚೇತನ್ ಕಳ್ಳಿಮನಿ, ಮಹಾಲಿಂಗಪುರ

ವಿದ್ಯೆಯೆಂದರೆ ಕೇವಲ ಓದು, ಬರಹ, ಪರೀಕ್ಷೆಗಳಷ್ಟೇ ಅಲ್ಲ; ವಿದ್ಯೆಯ ಮೂಲ ಉದ್ದೇಶ ಜ್ಞಾನಾರ್ಜನೆ. ಶಾಲಾ ಕಾಲೇಜುಗಳಲ್ಲಿ ಹೇಗೆ ಕಲಿಸುತ್ತಾರೆ ಎಂಬುದರ ಜೊತೆಗೆ ನೀವು ಹೇಗೆ ಕಲಿಯುತ್ತೀರ ಎಂಬುದು ಮುಖ್ಯ. ಅಧ್ಯಾಪಕ ರೊಂದಿಗೆ ದೈಹಿಕ ಭಾಷೆ, ನಿಲುವು, ಕಣ್ಣುಸಂಪರ್ಕ, ಮುಖಭಾವ ಮುಂತಾದ ಅಮೌಖಿಕ ಸಂವಹನದ ಸಂಜ್ಞೆಗಳಿಂದ ಪ್ರತಿಕ್ರಿಯಿಸುತ್ತಾ, ಉಪನ್ಯಾಸವನ್ನು ಕೇಳುವ ಅಭ್ಯಾಸವಿರಲಿ. ಜೊತೆಗೆ, ನಿಮ್ಮ ಓದುವಿಕೆ ಪರಿಣಾಮಕಾರಿಯಾಗಿದ್ದರೆ, ಓದಿದ ವಿಷಯ ನೆನಪಿನಲ್ಲಿರುತ್ತದೆ. ಪರಿಣಾಮಕಾರಿ ಓದುವಿಕೆಗೆ ಈ ಕಾರ್ಯತಂತ್ರಗಳನ್ನು ಬಳಸಿ.

1.ಸಮೀಕ್ಷೆ: ಇದು, ನೀವು ಚಾರಣವನ್ನು ಪ್ರಾರಂಭಿಸುವ ಮೊದಲು ಬೆಟ್ಟದ ವೈಮಾನಿಕ ನೋಟವನ್ನು ಪಡೆಯುವಂತೆ. ಅಂದರೆ, ಆಳವಾದ ಓದುವಿಕೆಗೆ ಮೊದಲು ಓದುವ ವಸ್ತುವಿನ ಸಾರಾಂಶ/ಅಧ್ಯಾಯವನ್ನು ಅರ್ಥಮಾಡಿಕೊಳ್ಳುವುದು. ಸಮೀಕ್ಷೆಗಾಗಿ ಒಟ್ಟು ಸಮಯದ ಶೇ 10 ಬೇಕಾಗುತ್ತದೆ.

2.ಪ್ರಶ್ನಿಸುವಿಕೆ: ಪ್ರಶ್ನೆಗಳನ್ನು ಕೇಳುವುದರಿಂದ ವಿಷಯದಲ್ಲಿನ ಒಳನೋಟವನ್ನು ಪಡೆದು ಕಲಿಕೆ ಪರಿಣಾಮಕಾರಿ ಯಾಗುತ್ತದೆ. ಪ್ರಶ್ನಿಸುವಿಕೆಗೆ ಒಟ್ಟು ಸಮಯದ ಶೇ 10 ಬೇಕಾಗುತ್ತದೆ.

3.ಓದುವಿಕೆ: ಈ ಪ್ರಕ್ರಿಯೆಯನ್ನು ಮತ್ತೆ ಚಾರಣಕ್ಕೆ ಹೋಲಿಸಬಹುದು; ಕಷ್ಟಕರವಾದ ವಿಷಯವನ್ನು ನಿಧಾನ ವಾಗಿಯೂ (ನಿಧಾನವಾಗಿ ಏರುವುದು), ತಿಳಿದಿರುವ ಅಥವಾ ಸುಲಭದ ವಿಷಯವನ್ನು ತ್ವರಿತವಾಗಿಯೂ (ತ್ವರಿತವಾಗಿ ಇಳಿಯುವುದು) ಮತ್ತು ಪ್ರಚೋದನಕಾರಿ, ವಾದ, ಪರಿಕಲ್ಪನೆಯ ವಿಷಯವನ್ನು ಎಚ್ಚರಿಕೆಯಿಂದ ಓದುವುದು (ಅಪಾಯವಿರುವಲ್ಲಿ ಎಚ್ಚರಿಕೆಯಿಂದ). ಈ ರೀತಿ ಓದುವುದಕ್ಕೆ ಒಟ್ಟು ಸಮಯದ ಶೇ 50 ಮೀಸಲಿಡಿ.

4. ಪುನರುಚ್ಛಾರಣೆ: ಓದಿದ ನಂತರ ಪುಸ್ತಕವನ್ನು ತೆಗೆದಿಟ್ಟು, ಮುಖ್ಯ ಅಂಶಗಳು ಮತ್ತು ಪ್ರಮುಖ ವಿವರಗಳನ್ನು ಪುನರುಚ್ಛರಿಸುವುದು ಅಥವಾ ಟಿಪ್ಪಣಿ ಬರೆಯುವುದು ಪರಿಣಾಮಕಾರಿ ಕಲಿಕೆಗೆ ಅಗತ್ಯ. ಇದಕ್ಕಾಗಿ, ಒಟ್ಟು ಸಮಯದ ಶೇ 20 ಮೀಸಲಿಡಿ.

5. ಪುನರಾವರ್ತನೆ: ಕೊನೆಯ ಹಂತದಲ್ಲಿ, ಮೊದಲ ನಾಲ್ಕು ಹಂತಗಳನ್ನು ಮತ್ತೊಮ್ಮೆ ಪುನರಾವರ್ತಿಸಬೇಕು. ಈ ಪ್ರಕ್ರಿಯೆಗೆ, ಒಟ್ಟು ಸಮಯದ ಶೇ 10 ಬೇಕಾಗುತ್ತದೆ. ಒಂದು ವೇಳೆ, ನಿಮ್ಮ ಕಲಿಕೆ ಅಸಮರ್ಪಕವೆನಿಸಿದರೆ, ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ.

ಓದುವ ಕಾರ್ಯತಂತ್ರಗಳ ಜೊತೆಗೆ, ಕಣ್ಣುಗಳಿಗೂ, ಮನಸ್ಸಿಗೂ ತರಬೇತಿಯ ಅಗತ್ಯವಿದೆ. ಹೆಚ್ಚಿನ ವಿವರಗಳಿಗೆ ಗಮನಿಸಿ: http://www.vpradeepkumar.com/effective-learning/

2. ನಾನು ಬಿಎಸ್‌ಸಿ (ಸಿಬಿಝೆಡ್) 2021 ರಲ್ಲಿ ಮುಗಿಸಿದ್ದೇನೆ. ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮಾಡಬೇಕೆಂದು ಬಯಸಿದ್ದೇನೆ. ಈ ಕ್ಷೇತ್ರದ ಉದ್ಯೋಗಾವಕಾಶಗಳೇನು?

ಹೆಸರು, ಊರು ತಿಳಿಸಿಲ್ಲ.

ನೀವು ಓದಲು ಬಯಸುತ್ತಿರುವ ಸ್ನಾತಕೋತ್ತರ ಪದವಿಯ ನಂತರ ಪರಿಸರ ವಿಜ್ಞಾನಿ, ಪರಿಸರ ಎಂಜಿನಿಯರ್, ಪರಿಸರ ಜೀವಶಾಸ್ತ್ರ, ಪರಿಸರ ಪತ್ರಕರ್ತ ಇತ್ಯಾದಿ ವೃತ್ತಿಗಳ ಅವಕಾಶಗಳಿವೆ. ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಗಣಿಗಳು, ಪರಮಾಣು ಘಟಕಗಳು, ರಸಗೊಬ್ಬರ ಸ್ಥಾವರಗಳು, ಡಿಸ್ಟಿಲರೀಸ್, ಜವಳಿ ಮತ್ತು ವರ್ಣದ್ರವ್ಯ ಉದ್ದಿಮೆಗಳು, ಆಹಾರ ಸಂಸ್ಕರಣಾ ಘಟಕಗಳು, ಜಲ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗಳು, ಸರೋವರ ಸಂರಕ್ಷಣಾ ಇಲಾಖೆಗಳು, ನಗರ ಪ್ರಾಧಿಕಾರಗಳು ಇತ್ಯಾದಿ ವಲಯಗಳಲ್ಲಿ ವೃತ್ತಿಯನ್ನು ಅರಸಬಹುದು. ಈ ಕ್ಷೇತ್ರದಲ್ಲಿ ವೈವಿಧ್ಯಮಯ ಅವಕಾಶಗಳಿ ರುವುದರಿಂದ ನಿಮ್ಮ ಆಸಕ್ತಿ ಮತ್ತು ಅಭಿರುಚಿಯಂತೆ ವೃತ್ತಿಯ ಯೋಜನೆಯನ್ನು ಮಾಡಿಕೊಳ್ಳಬೇಕು.

3. ನಾನು ಎಂ.ಕಾಂ ಮಾಡಿ ಖಾಸಗಿ ಕಂಪನಿಯಲ್ಲಿದ್ದೇನೆ. ಆದರೆ ಈ ಕಂಪನಿಯಲ್ಲಿ ಎಂಬಿಎ ಗೆ ತುಂಬಾ ಮಹತ್ವ ಕೊಡುತ್ತಾರೆ. ನನಗೀಗ 35 ವರ್ಷ. ನಾನು ಎಂಬಿಎ ಮಾಡಬೇಕೇ? ನಾನು ಎಂ.ಕಾಂ ಮಾಡಿದ್ದು ತಪ್ಪಾಯಿತೇ?

ಸ್ವಾತಿ, ಹುಬ್ಬಳ್ಳಿ.

ವೃತ್ತಿಯ ಯೋಜನೆಯಂತೆ ಕೋರ್ಸ್ ಮಾಡುವುದು ಸಮಂಜಸ. ನೀವು ಕಲಿತ ವಿದ್ಯೆಗೂ, ನಿಮ್ಮಲ್ಲಿರುವ ಕೌಶಲಗಳಿಗೂ ಮತ್ತು ವೃತ್ತಿಯ ಅವಶ್ಯಕತೆಗಳಿಗೂ ಹೊಂದಾಣಿಕೆಯಿರಬೇಕು. ಪ್ರಮುಖವಾಗಿ, ಉದ್ಯೋಗದ ಯಶಸ್ಸಿಗೆ ವೃತ್ತಿ ಸಂಬಂಧಿತ ಕೌಶಲಗಳಲ್ಲದೆ ಯೋಜನೆ ಮತ್ತು ಸಮಯದ ನಿರ್ವಹಣೆ, ಸಂವಹನ ಕೌಶಲ, ಅಂತರ್-ವೈಯಕ್ತಿಕ ಕೌಶಲ, ನಾಯಕತ್ವದ ಕೌಶಲಗಳಂತಹ ಪ್ರಾಥಮಿಕ ಕೌಶಲಗಳಿರಬೇಕು. ಹಾಗಾಗಿ, ನಿಮ್ಮ ವ್ಯಕ್ತಿತ್ವದಲ್ಲಿ ಈ ಕೌಶಲಗಳನ್ನು ವೃದ್ಧಿಸಿ ನಿಮ್ಮ ಉದ್ಯೋಗದ ಕಾರ್ಯಕ್ಷಮತೆಯನ್ನು ನಿರೀಕ್ಷಿತ ಮಟ್ಟಕ್ಕೆ ಏರಿಸಿ.

4. ಎಂಕಾಂ ಮುಗಿಸಿದ್ದೇನೆ. ಎನ್‌ಇಟಿ, ಎಸ್‌ಎಲ್‌ಇಟಿ ಅಥವಾ ಕೆಎಸ್‌ಇಟಿ ಪರೀಕ್ಷೆ ಬರೆಯಬೇಕು ಎಂದಿದ್ದೇನೆ. ಯಾವ ಪುಸ್ತಕ ಓದಬೇಕು. ಮೊದಲನೇ ಬಾರಿಗೆ ಪರೀಕ್ಷೆಯಲ್ಲಿ ಪಾಸಾಗುವುದು ಹೇಗೆ?

ಸ್ಪೂರ್ತಿ ಎಂ., ಶಿವಮೊಗ್ಗ

ಈ ಪರೀಕ್ಷೆಗಳಲ್ಲಿನ ವ್ಯತ್ಯಾಸಗಳನ್ನರಿತು ನಿಮ್ಮ ವೃತ್ತಿ ಯೋಜನೆಯಂತೆ ಯಾವ ಪರೀಕ್ಷೆಯನ್ನು ಬರೆಯಬೇಕೆನ್ನುವ ನಿರ್ಧಾರ ನಿಮ್ಮದು. ಪರೀಕ್ಷೆಯ ತಯಾರಿ, ಪುಸ್ತಕಗಳು ಇತ್ಯಾದಿ ವಿವರಗಳಿಗೆ ಗಮನಿಸಿ: https://www.shiksha.com/exams/ugc-net-exam-preparation

5.ಎನ್‌ಟಿಎಸ್‌ಇ ಪರೀಕ್ಷೆಗೆ 8ನೇ ತರಗತಿಯಿಂದ ತಯಾರಿ ಹೇಗೆ ಮಾಡುವುದು? ನಾನು ಮುಂಜಾನೆಯಿಂದ ಸಂಜೆ 4 ರವರೆಗೆ ಶಾಲೆಗೆ ಹೋಗುತ್ತೇನೆ. ಇನ್ನುಳಿದ ಸಮಯದಲ್ಲಿ ಶಾಲೆ ಹಾಗೂ ಇತರ ಪರೀಕ್ಷೆಗೆ ತಯಾರಿ ಹೇಗೆ ಮಾಡುವುದು?

ಹೆಸರು, ಊರು ತಿಳಿಸಿಲ್ಲ.

ಎನ್‌ಟಿಎಸ್‌ಇ ಪರೀಕ್ಷೆಯಂತಹ ನಿರ್ದಿಷ್ಟವಾದ ಗುರಿಯನ್ನು ಸಾದಿಸಲು ಸಮಯವನ್ನು ಸೂಕ್ತವಾಗಿ ಬಳಸಲು ಯೋಜನಾ ಶಕ್ತಿ ಮತ್ತು ಅದನ್ನು ಪರಿಪಾಲಿಸುವ ಶಿಸ್ತಿರಬೇಕು. ನಿಮ್ಮ ದೈನಂದಿನ ದಿನಚರಿಯ ತರಗತಿಗಳು, ತರಬೇತಿ, ವ್ಯಾಯಾಮ, ಹವ್ಯಾಸ, ಆಟ, ಅಭ್ಯಾಸ, ಪ್ರಯಾಣ, ಮನರಂಜನೆ, ಮನೆಯ ಮತ್ತು ವೈಯಕ್ತಿಕ ಕೆಲಸಗಳು ಸೇರಿದಂತೆ ಸಮಗ್ರವಾದ ಪಟ್ಟಿಯನ್ನು ತಯಾರಿಸಿ. ಕೆಲಸಗಳ ಪ್ರಾಮುಖ್ಯತೆಯಂತೆ, ಅವುಗಳ ಆದ್ಯತೆಯನ್ನು ತುರ್ತಾಗಿ ಮಾಡಬೇಕಾದ ಅಥವಾ ತಡವಾಗಿ ಮಾಡಬಹುದಾದ ಕೆಲಸಗಳಂತೆ ಗುರುತಿಸಿ ಚತುಷ್ಕೋನದ ನಾಲ್ಕು ಭಾಗಗಳಲ್ಲಿ ವಿಂಗಡಿಸಿ. ಸಾಮಾನ್ಯವಾಗಿ, ಭಾಗ 4 ರಲ್ಲಿ ಮಹತ್ವವಲ್ಲದ ಅನೇಕ ಚಟುವಟಿಕೆಗಳಿದ್ದು, ಸಮಯದ ನಿರ್ವಹಣೆಗೆ ಅಗಾಧವಾದ ಅವಕಾಶಗಳಿರುವುದನ್ನು ಗಮನಿಸಿ. ಈ ಭಾಗದಲ್ಲಿ, ಸಮಯದ ದುರ್ಬಳಕೆಯಾಗದಂತೆ ನಿಯಂತ್ರಿಸಿ, ಉಳಿಸಿದ ಸಮಯವನ್ನು ಉನ್ನತ ಶಿಕ್ಷಣ ಮತ್ತು ವೃತ್ತಿಜೀವನ ಕುರಿತಂತೆ, ಚಿಂತನೆಗೂ, ಯೋಜನೆಗೂ ಮೀಸಲಿಡಿ. ಹೆಚ್ಚಿನ ವಿವರಗಳಿಗೆ ಗಮನಿಸಿ: http://www.vpradeepkumar.com/how-to-manage-time-effectively/

6.ನಾನು ಬಿಎ ಕೊನೆಯ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದೇನೆ. ಐಎಫ್‌ಎಸ್ ಅಧಿಕಾರಿಯಾಗಬೇಕು ಎಂಬ ಬಯಕೆ ಇದೆ. ಇದಕ್ಕೇನು ಮಾಡಬೇಕು?

ಹೆಸರು, ಊರು ತಿಳಿಸಿಲ್ಲ.

ಯಾವುದೇ ಪದವಿಯ ನಂತರ ಯುಪಿಎಸ್‌ಸಿ ಮುಖ್ಯ ಪರೀಕ್ಷೆಯ ಮುಖಾಂತರ ಐಎಫ್‌ಎಸ್ ಅಧಿಕಾರಿಯಾಗಬಹುದು. ನೀವು ಪದವಿ ಕೋರ್ಸಿನ ಅಂತಿಮ ವರ್ಷದಲ್ಲಿರುವುದರಿಂದ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಭಾಗವಹಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT