ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆಯಲ್ಲಿ ನೆನಪಿನ ನಂಟಿಗೆ ನಾನಾ ದಾರಿ

Last Updated 17 ಜುಲೈ 2022, 19:30 IST
ಅಕ್ಷರ ಗಾತ್ರ

ಕೆಲವೊಮ್ಮೆ ವಿದ್ಯಾರ್ಥಿಗಳ ಕಲಿಕೆ ಮಸುಕು ಮಸುಕಾಗುವುದು ಮಕ್ಕಳು ಕಲಿಯುವ ಮತ್ತು ಶಿಕ್ಷಕರು ಕಲಿಸುವ ಕೆಲವು ವಿಧಾನಗಳಿಂದ. ಅದರಲ್ಲಿ ಮುಂದಿರುವುದೇ ಕಂಠಪಾಠ ವಿಧಾನ. ಉರು ಹೊಡೆಯುವುದು, ಬಾಯಿಪಾಠ ಮಾಡುವುದು ಅಂತಾನು ಕರೆಸಿಕೊಂಡಿದೆ ಇದು. ಎಷ್ಟೋ ವಿದ್ಯಾರ್ಥಿಗಳಿಗೆ ಓದು ಅಂದ್ರೆ ಅದು ಕಂಠಪಾಠವೇ ಅನ್ನುವಂತಾಗಿ ಬಿಟ್ಟಿದೆ. ಆದರೆ, ಕಂಠಪಾಠ ನಮ್ಮ ನಂಬಿಕೆಗೆ ಅರ್ಹ ದೋಸ್ತ್ ಅಲ್ಲ, ಅದು ಕೈ ಕೊಡುತ್ತದೆ. ಅದೊಂದು ಸಮರ್ಪಕ ಕಲಿಕಾ ವಿಧಾನವೂ ಅಲ್ಲ.

ಹಿಂದೆ ಕಂಠಪಾಠಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಆದರೆ ಇಷ್ಟೆಲ್ಲಾ ಬದಲಾವಣೆಯ ನಡುವೆಯೂ ಅದೇ ವಿಧಾನಕ್ಕೆ ಹೆಚ್ಚು ಒತ್ತುಕೊಡುತ್ತಿದ್ದೇವೆ. ಕೆಲವು ಶಿಕ್ಷಕರು ಮತ್ತು ಪೋಷಕರು ಕೂಡ ಇದನ್ನು ಪ್ರೋತ್ಸಾಹಿಸುತ್ತಾರೆ. ಆದರೆ ಇದು ತಪ್ಪು. ನೆನಪಿಡಿ ಇದು ಮಗು ಹೊರ ಜಗತ್ತಿನಲ್ಲಿ ಜೀವಿಸಲು ಸಿದ್ಧತೆಯನ್ನು ಮಾಡಿಕೊಡುವುದಿಲ್ಲ. ಕಲ್ಪನೆಗಳನ್ನು ಮತ್ತು ಭಾವನೆಗಳನ್ನು ಹುಟ್ಟು ಹಾಕುವುದಿಲ್ಲ. ಆಲೋಚನೆಯಂತೂ ದೂರ ದೂರ!ಆದ್ದರಿಂದಲೇ ಶಿಕ್ಷಣದ ಹೊಸ ಬದಲಾವಣೆಗಳು ಈ ಕಂಠಪಾಠ ಕಲಿಕೆಯನ್ನು ವಿರೋಧಿಸುತ್ತವೆ. ಅಮೆರಿಕದಲ್ಲಿ ವಿಜ್ಞಾನ ಮತ್ತು ಗಣಿತ ಮಾನದಂಡಗಳು ವಾಸ್ತವಾಂಶಗಳ ಬರಿಯ ನೆನಪಿನ ಅಳದ ತಿಳಿವಳಿಕೆಯ ಪ್ರಾಮುಖ್ಯತೆಯನ್ನು ಸ್ಪಷ್ಟವಾಗಿ ಒತ್ತಿ ಹೇಳುತ್ತವೆ.

ಕಲಿಕೆಗೆ ಸಹಾಯ ಮಾಡುವುದಿಲ್ಲ!

ಶಿಕ್ಷಣಕ್ಕೆ ‘ಕಲಿಕೆ’ ‘ನೆನಪು’ ಎಂಬುದೇ ಮೂಲಾಧಾರ. ಆದರೆ ವಿಷಯ ನೆನಪಿನೊಳಗೆ ಹೇಗೆ ಬಂದು ಸೇರಬೇಕು ಎಂಬುದು ಮುಖ್ಯ. ಈಗೀಗ ಪರೀಕ್ಷೆಗಳಿಗಾಗಿ ಉರು ಹೊಡೆಯುವುದು ಕಲಿಕೆಯಂತಾಗಿದೆ. ಹಾಗಂತ ಅವರು ಪರೀಕ್ಷೆ ಗೆಲ್ಲುತ್ತಾರಾ? ಸಾಧ್ಯವಿಲ್ಲ! ಈ ಉರು ಹಚ್ಚುವಿಕೆಯ ತಂಟೆಗೆ ಹೋಗದವ ಕೇವಲ ಅರ್ಥೈಸುವಿಕೆಯಿಂದಲೇ ಕಲಿಕೆ ಯನ್ನು ಯಶಸ್ವಿಗೊಳಿಸಿಕೊಳ್ಳುತ್ತಾನೆ. ಕಂಠ ಪಾಠ ಮಾಡಲೇ ಬೇಕು ಅಂತ ನೀವು ನಿರ್ಧರಿಸಿದರೆ ಕೆಳಗಿನ ನಾಲ್ಕು ಕಾರಣಗಳಿಂದ ನಿಮ್ಮ ಕಲಿಕೆ ಸೋಲುತ್ತದೆ.‌

ಕಂಠಪಾಠ ನೆನಪುಳಿಯುವುದಿಲ್ಲ

ನಿಮ್ಮ ತರಗತಿಗಳು ಆರೇಳು ಕಲಿಕಾ ವಿಷಯಗಳನ್ನು ಹೊಂದಿರುತ್ತವೆ. ನೀವು ಅದೆಲ್ಲವನ್ನು ಕಂಠಪಾಠ ಮಾಡಲು ಸಾಧ್ಯವಿಲ್ಲ. ಕಷ್ಟಪಟ್ಟು ಅಷ್ಟೊ ಇಷ್ಟೊ ಮಾಡಿದರೆ ಒತ್ತಡಕ್ಕೆ ಒಳಗಾಗಿ ಮರೆತು ಹೋಗುತ್ತೀರಿ.ಕಲಿಕೆ ಯಾಂತ್ರಿಕವಾದದ್ದಲ್ಲ ಅದು ಸೃಜನಾತ್ಮಕವಾದದ್ದು. ಕಂಠಪಾಠ ಸೃಜನಾತ್ಮಕತೆಗೆ ಅವಕಾಶ ಕೊಡುವುದಿಲ್ಲ. ಕಲಿಕೆ ಅರ್ಥವಾಗದ ಹೊರತು ಅದು ಸಿದ್ಧಿಸುವುದಿಲ್ಲ. ವಿಷಯ ಅರ್ಥವಾದರೆ ಕಂಠಪಾಠದ ಅವಶ್ಯಕತೆಯೇ ಬೀಳುವುದಿಲ್ಲ.

ಕಂಠಪಾಠ ಮಾಡದೆ ನೆನಪಿಡುವುದು ಹೇಗೆ?

ಕಲಿಕೆ ಎಂದರೆ ಬರಿ ಹೊಸದನ್ನು ತಿಳಿದುಕೊಳ್ಳುವುದಲ್ಲ. ಹಳೆಯ ಮಾಹಿತಿಯೊಂದಿಗೆ ಹೊಸದನ್ನು ಸಂಬಂಧೀಕರಿಸಿಕೊಳ್ಳುವುದು ಎಂಬ ಮಾತಿದೆ. ಹಾಗೆ ಕಲಿತ ಕಲಿಕೆ ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ. ಕಂಠಪಾಠದ ಸಹಾಯವಿಲ್ಲದೆ ವಿಷಯವನ್ನು ನೆನಪಿಡುವುದಕ್ಕೆ ಅನೇಕ ದಾರಿಗಳಿವೆ. ಅದರಲ್ಲಿ ಕೆಲವೊಂದು ಇಲ್ಲಿವೆ ನೋಡಿ..

1 ಪದೇ ಪದೇ ಓದುವುದು: ಇದನ್ನು ಪುನರಾವರ್ತನೆ ಅಂತ ಬೇಕಾದರೂ ಅಂದುಕೊಳ್ಳಿ. ಮಿದುಳಿಗೆ ಒಂದೇ ವಿಚಾರ ಪದೇಪದೇ ಹೋಗಿ ಮುಟ್ಟಿದಾಗ ಅದು ಶಾಶ್ವತ ಮೆಮೊರಿಗೆ ಹೋಗಿ ತಲುಪುತ್ತದೆ ಎನ್ನುತ್ತದೆ ಮನೋವಿಜ್ಞಾನ. ಮತ್ತೆ-ಮತ್ತೆ ಓದುವುದರಿಂದ ಓದಿದ ವಿಚಾರ ನೆನಪಿನಲ್ಲಿ ಉಳಿಯುತ್ತದೆ. ಮತ್ತು ಯಾವುದೇ ಸಮಯದಲ್ಲಿ ಕೈ ಕೊಡದೆ ಬೇಕೆಂದಾಗಲೆಲ್ಲಾ ಸಹಾಯಕ್ಕೆ ಬರುತ್ತದೆ.

2→ಓದಿದನ್ನು ಬರೆಯುವುದು: ಹತ್ತು ಬಾರಿ ಓದುವುದು ಒಂದು ಬಾರಿ ಬರೆಯುವುದು ಸಮ ಎನ್ನುವ ಮಾತಿದೆ. ಓದಿದ್ದೆಲ್ಲವನ್ನು ಬರೆಯಲಾಗದಿದ್ದರೂ
ಸಂಕ್ಷಿಪ್ತವಾಗಿ ಸಾರಾಂಶ ರೂಪದಲ್ಲಿ ಬರೆಯುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ವಿಷಯದ
ಮೇಲೆ ಹಿಡಿತ ಸಾಧ್ಯವಾಗುತ್ತದೆ. ಆಗುವ
ತಪ್ಪುಗಳನ್ನೆಲ್ಲಾ ತಿದ್ದಿಕೊಳ್ಳಲು ಅವಕಾಶವಿರುವುದರಿಂದ ಸ್ಪಷ್ಟ ಕಲಿಕೆ ಸಾಧ್ಯ.

3→ಚಿತ್ರಗಳ ಸಹಾಯ: ಒಂದೊಂದು ವಿಷಯಕ್ಕೆ ಒಂದೊಂದು ಚಿತ್ರವನ್ನು ಸಂಬಂಧೀಕರಿಸಿಕೊಳ್ಳಬೇಕು. ಅದಕ್ಕೆ ಹತ್ತಿರದ ಚಿತ್ರವಾದರೆ ಇನ್ನೂ ಸುಲಭ. ನೀವು ಭಟ್ಟಿ ಇಳಿಸುವಿಕೆಯ ಚಿತ್ರವನ್ನು ಚೆನ್ನಾಗಿ ನೆನಪಿಟ್ಟುಕೊಂಡರೆ ಸಾಕು ಅದಕ್ಕೆ ಸಂಬಂಧಿಸಿದ ಪೂರ್ಣ ವಿವರಣೆ ಅದರೊಂದಿಗೆ ಬರುವಂತೆ ಕಲಿತಿರಬೇಕು.

4→ಮೈಂಡ್ ಮ್ಯಾಪಿಂಗ್: ಇದೊಂದು ವಂಶವೃಕ್ಷ ತರಹದ ಕಲ್ಪನೆ. ಆದರೆ ಇದು ವಿಷಯ ವೃಕ್ಷ. ಒಂದು ವಿಷಯದಿಂದ ಇನ್ನೊಂದಕ್ಕೆ ಮತ್ತು ಅದರಿಂದ ಮತ್ತೊಂದಕ್ಕೆ ಸಂಬಂಧ ಕೂಡಿಸಿಕೊಂಡು ನೆನಪಿಟ್ಟುಕೊಳ್ಳುವುದು. ಇತಿಹಾಸದ ಪಾಠಗಳು, ಕವಿ ಪರಿಚಯ, ವ್ಯಾಕರಣಾಂಶಕ್ಕೆ ಸಂಬಂಧಿಸಿದಂತೆ ಬಳಸಿಕೊಳ್ಳಬಹುದು.

5→ಮೊದಲ ಅಕ್ಷರ ಶ್ರೇಣಿ: ಮುಖ್ಯವಾದ ವಿಚಾರಗಳನ್ನು ನೆನಪಿಟ್ಟುಕೊಳ್ಳಲು ಅದರ ಮೊದಲ ಅಕ್ಷರಗಳನ್ನು ಆಯ್ದು ಒಂದು ಪದವನ್ನೋ, ವಾಕ್ಯವನ್ನೊ ಮಾಡಿಕೊಂಡು ನೆನಪಿಡುವುದು. ಉದಾಹರಣೆಗೆ, ದಿಕ್ಕುಗಳನ್ನು (ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಆಗ್ನೇಯ, ಈಶಾನ್ಯ, ನೈರುತ್ಯ‌, ವಾಯವ್ಯ) ನೆನಪಿಡಲು 'ಉಈಪೂಆದನೈಪವಾ' ಎಂಬ ಪದ ನೆನಪಿಟ್ಟುಕೊಂಡರೆ ಸಾಕು ಎಲ್ಲ ದಿಕ್ಕುಗಳು ಕ್ರಮವಾಗಿ ನೆನಪಾಗುತ್ತವೆ.

6→ಕಥಾರೂಪ: ಓದಿದ ವಿಷಯಗಳನ್ನು ಮನಸ್ಸಿನಲ್ಲಿ ಒಂದು ಕಥೆಯ ರೂಪದಲ್ಲಿ ಹೆಣೆದುಕೊಳ್ಳಬಹುದು. ಇತಿಹಾಸದ ಘಟನೆಗಳು, ಜೀವನ ಚರಿತ್ರೆ, ಜಲಚಕ್ರ ಹೀಗೆ ಅನೇಕ ವಿಷಯಗಳು ಇದಕ್ಕೆ ಸೂಕ್ತವಾಗಿವೆ. ಸಾಮಾನ್ಯವಾಗಿ ಕಥೆಯು ಮಗುವಿಗೆ ಆಸಕ್ತಿ ಕ್ಷೇತ್ರವಾಗಿರುವುದರಿಂದ ಮರೆಯುವ ಸಾಧ್ಯತೆ ಕಡಿಮೆ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT