ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆಗೆ ಬೇಕು ಮಾನಸಿಕ ತಯಾರಿ

Last Updated 28 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಪರೀಕ್ಷಾ ಕೊಠಡಿಯೂ ಸಮಾಜದ ಒಂದು ಭಾಗವೇ ಅಲ್ಲವೇ? ಪ್ರಪಂಚದ ಆಗುಹೋಗುಗಳೆಲ್ಲ ಪರೀಕ್ಷಾ ಕೊಠಡಿಯಲ್ಲೂ ಪ್ರತಿಫಲಿಸುತ್ತವೆ. ಹೊರಗಿನ ಪ್ರಪಂಚದಲ್ಲಿ ಇರುವ ಅವ್ಯವಸ್ಥೆ, ಆತಂಕ, ಭಯಗಳೆಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಕಾಣಿಸಿಕೊಳ್ಳುತ್ತವೆ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿಯ ಉತ್ತರಪತ್ರಿಕೆಯ ನಡುವೆ ಕೇವಲ ಓದಿದ ವಿಷಯಗಳು, ಗೊತ್ತಿರುವ ಉತ್ತರ ಮತ್ತು ಅರ್ಥವಾಗದೇ ಉಳಿದ ಪಠ್ಯಭಾಗಗಳಷ್ಟೇ ಇರುವುದಿಲ್ಲ, ಬದಲಾಗಿ ಇಡೀ ಸಮಾಜದ ಎಲ್ಲ ಓರೆಕೋರೆಗಳು ಮತ್ತು ವೈರುಧ್ಯಗಳು ಪರೀಕ್ಷೆಯ ಸ್ಥಳದಲ್ಲಿ ತಮ್ಮ ಇರುವಿಕೆಯನ್ನು ತೋರ್ಪಡಿಸಿಕೊಳ್ಳುತ್ತವೆ.

ಈಗ ಎರಡು ವರ್ಷಗಳಿಂದಲಂತೂ ಕೋವಿಡ್ ನಮ್ಮ ಕಲಿಕೆಯ ರೀತಿ, ವಿದ್ಯಾರ್ಥಿಜೀವನ ಮತ್ತು ಪರೀಕ್ಷಾ ಮಾದರಿಗಳನ್ನು ಹಿಂದೆಂದೂ ಇಲ್ಲದಷ್ಟು ಬದಲಾಯಿಸಿಬಿಟ್ಟಿದೆ. ಶಾಲೆಗೇ ಹೋಗದೆ ಬರೆಯುವ ಪರೀಕ್ಷೆಗೆ ಮೊದಲೆಲ್ಲ ಹೆಚ್ಚಿನ ಮಾನ್ಯತೆಯೇ ಇರಲಿಲ್ಲ. ದೂರಶಿಕ್ಷಣದಲ್ಲಿ ಪಡೆದುಕೊಂಡ ಪದವಿಗಳಿಗೆ ಯಾವತ್ತೂ ಒಂದು ರೀತಿಯ ಅಪೂರ್ಣತೆ, ಕೀಳರಿಮೆ ಅಂಟಿಕೊಂಡೇ ಇರುತ್ತಿತ್ತು. ಆದರೆ ಇಂದು ನಾವು ದೂರಶಿಕ್ಷಣದ ಮಾದರಿಯನ್ನೇ ಹೆಚ್ಚಾಗಿ ಅನುಸರಿಸಬೇಕಾಗಿ ಬಂದಿರುವುದು ಶಿಕ್ಷಣದ ಕುರಿತಾದ ಹಲವು ಮೂಲಭೂತ ಪ್ರಶ್ನೆಗಳಿಗೆ ದಾರಿಮಾಡಿಕೊಟ್ಟಿದೆ. ಕಲಿಸುವವರು ಮತ್ತು ಕಲಿಯುವವರು ಮುಖಾಮುಖಿಯಾಗದೆ ಪಡೆದ ವಿದ್ಯೆಗೆ ಬೆಲೆಯಿದೆಯೇ? ವಿದ್ಯೆಯನ್ನು ಗಳಿಸುವ ಪ್ರಕ್ರಿಯೆಯಲ್ಲಿ ಶಿಕ್ಷಕರ ಪಾತ್ರ ಏನು? ಎಲ್ಲರೊಡನೆ ಬೆರೆತು ಕುಳಿತು ಕಲಿಯದ ವಿದ್ಯೆಯ ಮಿತಿಗಳೇನು? ಹೀಗೆ ಹಲವು ಸಂದೇಹಗಳು ಹುಟ್ಟುತ್ತವೆ.

ಇನ್ನು ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳಂತೂ ಭಿನ್ನ ಪ್ರದೇಶಗಳಲ್ಲಿ, ಭಿನ್ನ ಸಾಂಸ್ಕೃತಿಕ ಪರಿಸರಗಳಲ್ಲಿ ಕಲಿತ ವಿದ್ಯಾರ್ಥಿಗಳ ಕಲಿಕೆಯ ಸಮರ್ಥ ಅಭಿವ್ಯಕ್ತಿಯಾಗಲಾರದು ಎನ್ನುವುದೂ ಕೂಡ ಮನನ ಮಾಡಬೇಕಾದ ವಿಚಾರ. ಇಷ್ಟೇ ಅಲ್ಲದೆ ರಾಜಕೀಯ, ಸಾಮಾಜಿಕ ಗಲಾಟೆ ಗೊಂದಲಗಳು, ಆರ್ಥಿಕ ಅಸಮಾನತೆ, ಪ್ರತಿನಿತ್ಯ ಪ್ರತಿಕ್ಷಣವೂ ನೂರಾರು ಮಾಧ್ಯಮಗಳ ಮುಖಾಂತರ ನಮ್ಮನ್ನು ಬಂದು ತಲುಪುವ ಕಳವಳಕಾರಿ ಸಮಾಚಾರಗಳು, ಸುಳ್ಳುಸುದ್ದಿಗಳು, ಇನ್ನೂ ಹಲವು ಅಸ್ವಸ್ಥ ಸಂದರ್ಭಗಳು ವಿದ್ಯಾರ್ಥಿಗಳನ್ನು ನಿಜಕ್ಕೂ ಕಂಗೆಡಿಸುವಂಥದ್ದು. ಒಟ್ಟಿನಲ್ಲಿ ಸಾವಧಾನದಿಂದ ಕಲಿಯುವುದು, ಕಲಿಸುವುದು ಎರಡೂ ಕಷ್ಟಸಾಧ್ಯವಾಗಿ ಹೋಗಿರುವ ಸಂದರ್ಭವನ್ನು ನಾವಿಂದು ಎದುರಿಸುತ್ತಿದ್ದೇವೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಪರೀಕ್ಷೆಗೆ ಹೋಗಲೇಬೇಕು, ಪರೀಕ್ಷೆ ಬರೆಯಲೇಬೇಕು. ಪರೀಕ್ಷಾ ಕೇಂದ್ರದಲ್ಲಿ ಆಗುವ ಭಯ, ಉದ್ವೇಗ, ಪರೀಕ್ಷೆಯ ನಂತರ ಬರುವ ಫಲಿತಾಂಶಗಳಿಗೆ ಹೆದರಿ ಪರೀಕ್ಷೆಗೆ ಹೋಗದಿದ್ದರೆ ಅದೇ ನಿಜವಾದ ಸೋಲು. ಹಾಗಾಗಿ ತಯಾರಿ ಹೇಗೆ ಇರಲಿ ಪರೀಕ್ಷಾ ಕೇಂದ್ರಕ್ಕೆ ಬರುವ ಪ್ರತಿ ವಿದ್ಯಾರ್ಥಿಯನ್ನೂ ಶ್ಲಾಘಿಸಲೇಬೇಕು.

ಪರೀಕ್ಷೆಯ ದಿನಗಳು ಬಂದೇ ಬಿಟ್ಟಿರುವ ಈ ದಿನಗಳಲ್ಲಿ ಧೈರ್ಯವನ್ನು, ನೆಮ್ಮದಿಯನ್ನು ಸ್ವಲ್ಪಮಟ್ಟಿಗಾದರೂ ಕೊಡಬಹುದಾದ ಕೆಲವು ವಿಚಾರಗಳೆಡೆಗೆ ಗಮನ ಹರಿಸೋಣ:

ನಾಳೆ ಪರೀಕ್ಷೆ ಎನ್ನುವಾಗ ಇವತ್ತು ಅರ್ಥವಾಗದ ವಿಷಯಗಳನ್ನು ಓದುತ್ತಾ ಆತಂಕಗೊಳ್ಳುವುದು ಬೇಡ. ಶಾಲೆ/ಕಾಲೇಜಿಗೆ ಹೋಗದೇ ಕೇವಲ ಆನ್‌ಲೈನ್‌ನಲ್ಲಿ ಕ್ಲಾಸಿಗೆ ಹಾಜರಾಗಿದ್ದರಿಂದ ಪಾಠಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅನ್ವಯಿಸುವ ಕೌಶಲ ಅಷ್ಟಾಗಿ ಕೈಗೂಡಿರುವುದಿಲ್ಲ. ಆನ್‌ಲೈನ್ ಪಾಠಗಳ ಕಾಲದಲ್ಲಿ ಹೆಚ್ಚಾಗಿ ಕುಂಠಿತಗೊಂಡಿರುವ ಮತ್ತೊಂದು ಕೌಶಲವೆಂದರೆ ಬರವಣಿಗೆಯದ್ದು. ದೀರ್ಘ ಉತ್ತರಗಳನ್ನು ತಪ್ಪಿಲ್ಲದೆ ಸ್ವಂತವಾಗಿ ರಚಿಸುವ ಸಾಮರ್ಥ್ಯಕ್ಕೆ ಹೊಡೆತ ಬಿದ್ದಿರುವುದು ಸ್ಪಷ್ಟ. ಹಾಗೆಯೇ ಸೃಜನಶೀಲ ಚಿಂತನೆ ಕೂಡ ಸಹಪಾಠಿಗಳೊಡನೆ ಬೆರೆತು ಕಲಿತಾಗಲೇ ಬೆಳೆಯುವಂಥದ್ದು. ಈ ಎಲ್ಲ ಮಿತಿಗಳ ಬಗೆಗೆ ಈ ಸಮಯದಲ್ಲಿ ಚಿಂತೆ ಬೇಡ. ಪರೀಕ್ಷೆಯ ಈ ಹೊತ್ತಿನಲ್ಲಿ ಓದದೇ ಕಳೆದ ಸಮಯದ ಬಗೆಗೆ ವಿದ್ಯಾರ್ಥಿಗಳು ಪಶ್ಚಾತ್ತಾಪ ಪಡುವುದಾಗಲಿ, ಪೋಷಕರು ಕೋಪ ತೋರಿಸುವುದಾಗಲಿ ಎರಡೂ ಉಪಯೋಗವಿಲ್ಲದ್ದು.

ಪರೀಕ್ಷೆಯ ಹಿಂದಿನ ದಿನಗಳು ಅಥವಾ ಪರೀಕ್ಷೆಯ ದಿನದ ಬೆಳಗ್ಗೆ ಯಾವುದೇ ಕಾರಣಕ್ಕೂ ಮಕ್ಕಳಿಂದ ದೂರವಿರದಂತೆ ಪೋಷಕರು ನೋಡಿಕೊಂಡರೆ ಒಳ್ಳೆಯದು. ಹಾಗೆಯೇ ಪರೀಕ್ಷೆಯ ದಿನಗಳಲ್ಲಿ ಮಕ್ಕಳ ಜೊತೆ ಜಗಳ, ವಾದ- ವಿವಾದ, ಅವರನ್ನು ಶಿಕ್ಷಿಸುವುದು, ಅವಮಾನಿಸುವುದು, ಮನೆಯ ಕೆಲಸಗಳನ್ನು ಮಾಡುವಂತೆ ಒತ್ತಾಯಿಸುವುದು, ಸೋಲಿನ ಬಗೆಗೆ ಭಯಪಡಿಸುವುದು ಮುಂತಾದವು ಮಕ್ಕಳಲ್ಲಿ ಒತ್ತಡದ ಭಾವ ಮತ್ತು ಏಕಾಂಗಿತನವನ್ನು ಹುಟ್ಟಿಸುತ್ತದೆ.

ಕೆಲವರು ಪೋಷಕರು ತಮ್ಮ ಮಹತ್ವಾಕಾಂಕ್ಷೆಗಳನ್ನು ಮಕ್ಕಳ ಮೇಲೆ ಹೇರಿದರೆ ಇನ್ನು ಕೆಲವು ಪೋಷಕರು ಮಕ್ಕಳ ಪರೀಕ್ಷೆಯ ಬಗೆಗೆ ನಿರ್ಲಕ್ಷ್ಯ ತೋರುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ನಾವಂದುಕೊಂಡ ಗುರಿಯನ್ನು ನಮ್ಮ ಮಕ್ಕಳು ಮುಟ್ಟುವುದಕ್ಕಿಂತಲೂ ಸಹಜವಾದ ರೀತಿಯಲ್ಲಿ ಅವರು ಬೆಳೆಯುವುದೂ ಅರಳುವುದೂ ಮುಖ್ಯ.

ಮಕ್ಕಳು ಅವರ ಪರೀಕ್ಷಾ ಸಮಯದಲ್ಲಿ ಪೋಷಕರು ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಪೋಷಕರ ನಡೆ, ನುಡಿ, ಭಾವಗಳು ಮಕ್ಕಳ ಮೇಲೆ ದೀರ್ಘಕಾಲ ಪರಿಣಾಮ ಬೀರುತ್ತದೆ. ಸೋಲು ಗೆಲುವಿನ ಹೊರತಾಗಿಯೂ ತಮ್ಮ ಐಡೆಂಟಿಟಿಯನ್ನು ಮಕ್ಕಳು ಕೊಂಡುಕೊಳ್ಳಲು ಈ ಸಮಯದಲ್ಲಿ ಪೋಷಕರು ಅವರಿಗೆ ಜೊತೆಯಾಗಿ ನಿಲ್ಲಬೇಕು. ಪರೀಕ್ಷೆಯನ್ನು ಎದುರಿಸುವ ಸಮಯದಲ್ಲಿ ಅವರಿಗೆ ದೊರೆತ ಮಾನಸಿಕ ಬೆಂಬಲ ಮುಂದೆ ಅವರಿಗೆ ಧೈರ್ಯವನ್ನೂ ಆತ್ಮವಿಶ್ವಾಸವನ್ನೂ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT