ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಟ್- ಪಿಜಿ ಪ್ರವೇಶ ಪರೀಕ್ಷೆ: ಕ್ಲಿನಿಕಲ್‌ ವಿಷಯದ ಅಧ್ಯಯನಕ್ಕೆ ಒತ್ತು

Last Updated 14 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯು ಭಾರತದ ಸರ್ಕಾರಿ ಅಥವಾ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಡಾಕ್ಟರ್ ಆಫ್ ಮೆಡಿಸಿನ್ (ಎಂ.ಡಿ), ಮಾಸ್ಟರ್ ಆಫ್ ಸರ್ಜರಿ (ಎಂ.ಎಸ್), ಡಿಪ್ಲೊಮಾ ಕೋರ್ಸ್‌ಗಳು ಹಾಗೂ ಇತರ ಸ್ನಾತಕೋತ್ತರ ವಿಶೇಷ ಪರಿಣತಿಯನ್ನು ಪಡೆಯಲು ಇರುವ ಪ್ರವೇಶ ಪರೀಕ್ಷೆ. ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇ) ನೀಟ್-ಪಿಜಿ 2021 ಪರೀಕ್ಷಾ ವಿಧಾನದಲ್ಲಿ ಕೆಲವು ಬದಲಾವಣೆ ತಂದಿದೆ. ಹಿಂದಿನ ವರ್ಷ ಇದ್ದ 300 ಪ್ರಶ್ನೆಗಳಿಗೆ ಬದಲಾಗಿ ಈಗಿನ ಪರೀಕ್ಷೆಯು 200 ಪ್ರಶ್ನೆಗಳನ್ನು ಒಳಗೊಂಡಿದೆ. ಇದಕ್ಕೆ ಮೂರುವರೆ ಗಂಟೆಗಳ ಕಾಲಾವಕಾಶ ನಿಗದಿಪಡಿಸಲಾಗಿದೆ.

ವಿಕಿರಣ ಶಾಸ್ತ್ರ ಮತ್ತು ಮಕ್ಕಳ ಚಿಕಿತ್ಸೆಗೆ ವಿಶೇಷ ಪರಿಣತಿಗಾಗಿ ಇರುವ ಎಂಬಿಬಿಎಸ್ ಬಳಿಕದ ಎರಡು ವರ್ಷಗಳ ಡಿಪ್ಲೊಮಾ ಕೋರ್ಸ್‌ಗಳಿಗೆ ಕೂಡಾ ಇದೇ ಪ್ರವೇಶ ಪರೀಕ್ಷೆ ಅನ್ವಯವಾಗುತ್ತದೆ ಎಂದು ಎನ್‌ಬಿಇ ಹೇಳಿಕೆ ನೀಡಿದೆ. ರಾಷ್ಟ್ರೀಯ ಪರೀಕ್ಷಾ ಮಂಡಳಿಯು ಈ ಪರೀಕ್ಷೆಗಳನ್ನು ನಡೆಸುವುದಲ್ಲದೇ ಜನರಲ್ ಆಫ್ ಹೆಲ್ತ್ ಸರ್ವೀಸಸ್, ಕೌನ್ಸೆಲಿಂಗ್ ಮತ್ತು ಸೀಟು ಹಂಚಿಕೆ ಹೊಣೆಗಾರಿಕೆಯನ್ನು ನಿರ್ವಹಿಸುತ್ತದೆ. ಈ ವರ್ಷ ಪರೀಕ್ಷೆಯು ಏಪ್ರಿಲ್ 18ರಂದು ನಡೆಯಲಿದೆ.

ನೀಟ್-ಪಿಜಿ ದೇಶದಲ್ಲಿ ವೈದ್ಯಕೀಯ ಪರೀಕ್ಷೆಗಾಗಿ ಇರುವ ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿರುವ ಹಿನ್ನೆಲೆಯಲ್ಲಿ ಅದರಲ್ಲಿ ಯಶಸ್ಸು ಸಾಧಿಸುವ ಕೆಲ ಸಲಹೆಗಳು ಇಲ್ಲಿವೆ.

1. ಕ್ಲಿನಿಕಲ್ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಿ

ಸುಮಾರು 100-120 ಅಂದರೆ ಬಹುತೇಕ ಪ್ರಶ್ನೆಗಳು, ಕ್ಲಿನಿಕಲ್ ವಿಷಯಗಳಿಗೆ ಸಂಬಂಧಿಸಿದ್ದಾಗಿರುತ್ತವೆ. ಐದು ಪ್ರಮುಖ ವಿಭಾಗಗಳೆಂದರೆ, ಮೆಡಿಸಿನ್, ಸರ್ಜರಿ, ಒಬಿಜಿ, ಮಕ್ಕಳ ಚಿಕಿತ್ಸೆ ಮತ್ತು ಆರ್ಥೊಪೆಡಿಕ್ಸ್ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ರೋಗಿಗಳ ತಪಾಸಣೆ ಹಾಗೂ ನಿರ್ವಹಣೆ ಶಿಷ್ಟಾಚಾರಕ್ಕೆ ಸಂಬಂಧಿಸಿದ ವಿಷಯಗಳೂ ಒಳಗೊಂಡಿರುತ್ತವೆ.

2. ಮೂಲ ವಿಜ್ಞಾನ ವಿಷಯಗಳ ಕ್ಲಿನಿಕಲ್ ಆಯಾಮಗಳು

ಅನಾಟಮಿ, ಮನಶ್ಶಾಸ್ತ್ರ, ಜೀವ ರಸಾಯನ ಶಾಸ್ತ್ರ, ರೋಗ ನಿರ್ಣಯ ಶಾಸ್ತ್ರ ಮತ್ತು ಸೂಕ್ಷ್ಮ ಜೀವಶಾಸ್ತ್ರ ಮುಂತಾದ ಮೂಲ ವಿಜ್ಞಾನ ವಿಷಯಗಳ ಕ್ಲಿನಿಕಲ್ ಆಯಾಮಗಳ ಬಗ್ಗೆ ಅಧ್ಯಯನ ಮಾಡುವುದು ಕೂಡಾ ಮುಖ್ಯ. ಇವುಗಳನ್ನು ಕ್ಲಿನಿಕಲ್ ವಿಷಯಗಳ ಜತೆ ಸಮನ್ವಯ ಮಾಡಬೇಕಾಗುತ್ತದೆ.

3. ಪುನರ್‌ಮನನ ಮಾಡಿ

ಪ್ರತಿಯೊಂದನ್ನೂ ಪುನರ್ ಮನನ ಮಾಡುವ ಪ್ರಯತ್ನ ಮಾಡಿ. ನಿಮ್ಮ ತಯಾರಿಯ ಆರಂಭಿಕ ದಿನಗಳಲ್ಲಿ ನೀವು ಸ್ವತಃ ಸಿದ್ಧಪಡಿಸಿದ ವಿಷಯಗಳು/ ನೋಟ್ಸ್‌ಗಳನ್ನು ಪುನರ್ ಮನನ ಮಾಡಿ.

4. ಪರೀಕ್ಷಾಪೂರ್ವ ಕಾರ್ಯತಂತ್ರ

ಯಾವುದೇ ಹೊಸ ಪುಸ್ತಕಗಳನ್ನು ಹುಡುಕುವ ಪ್ರಯತ್ನ ಮಾಡಬೇಡಿ ಹಾಗೂ ಪರೀಕ್ಷೆಗೆ 30 ದಿನ ಮುಂಚಿತವಾಗಿ ಯಾವುದೇ ಹೊಸ ವಿಷಯವನ್ನು ಅಧ್ಯಯನ ಮಾಡುವ ಪ್ರಯತ್ನ ಮಾಡಬೇಡಿ. ಪರೀಕ್ಷೆಗಾಗಿ ಹೊಸ ಅಧ್ಯಯನ ವಿಷಯಗಳನ್ನು ಪರಿಚಯ ಮಾಡಿಕೊಳ್ಳುವುದು ನಿಮ್ಮ ಸಿದ್ಧತಾ ಕಾರ್ಯತಂತ್ರದಿಂದ ನಿಮ್ಮ ಮನಸ್ಸನ್ನು ವಿಮುಖವಾಗಿಸುವ ಸಾಧ್ಯತೆ ಇರುತ್ತದೆ. ಇದರಿಂದ ನೀವು ಖಿನ್ನತೆಗೆ ಅಥವಾ ನಿರುತ್ಸಾಹಕ್ಕೆ ಒಳಗಾಗುವ ಸಾಧ್ಯತೆ ಇದೆ.

5. ಕೊನೆಯ ಕ್ಷಣಗಳ ಅಧ್ಯಯನ

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಕೊನೆಯ ಹತ್ತು ದಿನಗಳ ಸಿದ್ಧತೆ ಅತ್ಯಂತ ಮುಖ್ಯವಾದದ್ದು. ನೀವು ಎಲ್ಲ ಕ್ಲಿನಿಕಲ್ ಸ್ಕೋರಿಂಗ್ ಸಿಸ್ಟಂಗಳನ್ನು ತಿಳಿದುಕೊಂಡಿದ್ದೀರಾ ಮತ್ತು ರೋಗಿಗಳ ನಿರ್ವಹಣೆ ಶಿಷ್ಟಾಚಾರಕ್ಕೆ ಅನ್ವಯಿಸುವ ಎಲ್ಲ ಕ್ಲಿನಿಕಲ್ ಮಾನದಂಡಗಳನ್ನು ಮನನ ಮಾಡಿಕೊಂಡಿದ್ದೀರಾ ಎನ್ನುವುದನ್ನು ಖಾತರಿಪಡಿಸಿಕೊಳ್ಳಿ.

6. ಪರಿಕಲ್ಪನೆಗಳು

ಅಂಕಿ– ಅಂಶ ಆಧರಿತ ವಿಷಯಗಳಿಗೆ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ಪ್ರತಿಯೊಂದು ವಿಷಯವನ್ನೂ ನೀವು ಆಳವಾಗಿ ಅಧ್ಯಯನ ಮಾಡಿದ್ದೀರಿ ಎನ್ನುವುದನ್ನು ಖಾತರಿಪಡಿಸಿಕೊಳ್ಳಿ. ಪರಿಕಲ್ಪನೆಗಳನ್ನು ಕೇವಲ ನೆನಪು ಮಾಡಿಕೊಳ್ಳದೆ ಅವುಗಳನ್ನು ಅರ್ಥ ಮಾಡಿಕೊಳ್ಳಿ ಹಾಗೂ ಅವುಗಳನ್ನು ಕ್ಲಿನಿಕಲ್ ಆಗಿ ಅನ್ವಯಿಸುವ ಪ್ರಯತ್ನ ಮಾಡಿ.

ಸ್ನಾತಕೋತ್ತರ ಪದವಿ ಸೀಟುಗಳಿಗೆ ಮೀಸಲಾತಿಗಳನ್ನು ಭಾರತ ಸರ್ಕಾರ ಮತ್ತು ಆಯಾ ರಾಜ್ಯ ಸರ್ಕಾರಗಳ ನಿಯಮಾನುಸಾರ ಮಾಡಲಾಗುತ್ತದೆ. ಮೀಸಲಾತಿ ಮತ್ತು ಕೌನ್ಸಿಲಿಂಗ್‌ಗೆ ಸಂಬಂಧಪಟ್ಟ ಮಾಹಿತಿಯ ವಿವರಗಳನ್ನು ಒಳಗೊಂಡ ವಿವರವಾದ ಕೈಪಿಡಿಯನ್ನು ನಿಯೋಜಿತ ಪ್ರಾಧಿಕಾರವು ನೀಟ್-ಪಿಜಿ-2021ಗಾಗಿ ಬಿಡುಗಡೆ ಮಾಡಲಿದೆ. 2021ರ ಮೇ 31ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುತ್ತದೆ.

(ಲೇಖಕರು: ನೀಟ್ ಪಿಜಿ- ಒಬಿಜಿ ಉಪನ್ಯಾಸಕರು, ಅನ್‌ಅಕಾಡೆಮಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT