ಯುಪಿಎಸ್‌ಸಿ-ಪ್ರಿಲಿಮ್ಸ್, ಕೆಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ - 2, ಎಲ್ಲಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳುವ ಸಾಮಾನ್ಯಜ್ಞಾನಕ್ಕೆ ಸಂಬಂಧಿಸಿದ ಮಾಹಿತಿ.
ವೀ ಮರ್ ಟ್ರಯಾಂಗಲ್ ಶೃಂಗಸಭೆಯು ಇತ್ತೀಚೆಗೆ ಬರ್ಲಿನ್‌ನಲ್ಲಿ ಮ್ಯಾಕ್ರನ್, ಸ್ಕೋಲ್ಜ್ ಮತ್ತು ಟಸ್ಕ್ ನಾಯಕರ ಉಪಸ್ಥಿತಿಯಲ್ಲಿ ಸಭೆ ಸೇರಿತು. ಸಭೆಯಲ್ಲಿ, ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ಯುದ್ಧಕ್ಕೆ ಯುರೋಪ್‌ನ ಪ್ರತಿಕ್ರಿಯೆಯ ಕುರಿತು ನಾಯಕರು ತಮ್ಮ ಒಗ್ಗಟ್ಟಿನ ನಿಲುವನ್ನು ಪ್ರದರ್ಶಿಸಿದರು.
ವೀಮರ್ ಟ್ರಯಾಂಗಲ್
lಫ್ರೆಂಚ್‌ನಲ್ಲಿ ‘ಟ್ರಯಾಂಗಲ್ ಡಿ ವೀಮರ್’, ಜರ್ಮನ್‌ನಲ್ಲಿ ‘ವೈಮರೆರ್ ಡ್ರೀಕ್’ ಮತ್ತು ಪೋಲಿಷ್‌ನಲ್ಲಿ ‘ಟ್ರೊಜ್‌ಕಾಟ್ ವೀಮಾರ್ಸ್ಕಿ’ ಎಂದು ಕರೆಯಲಾಗುವ ವೀಮರ್ ಟ್ರಯಾಂಗಲ್, 1991ರಲ್ಲಿ ಜರ್ಮನ್ ನಗರ ವೀಮರ್‌ನಲ್ಲಿ ಸ್ಥಾಪನೆಗೊಂಡ ಪ್ರಾದೇಶಿಕ ಒಕ್ಕೂಟವಾಗಿದೆ.
lಈ ಒಕ್ಕೂಟವು ಫ್ರಾನ್ಸ್, ಜರ್ಮನಿ ಮತ್ತು ಪೋಲೆಂಡ್ ಅನ್ನು ಒಳಗೊಂಡಿದ್ದು ಗಡಿಯಾಚೆಗಿನ ಮತ್ತು ಯುರೋಪಿಯನ್ ವಿಷಯಗಳಲ್ಲಿ ಸಹಕಾರವನ್ನು ಬೆಳೆಸುವ ಗುರಿಯನ್ನು ಹೊಂದಿದೆ.
ಉದ್ದೇಶ ಮತ್ತು ಚಟುವಟಿಕೆಗಳು : ವೀಮರ್ ಟ್ರಯಾಂಗಲ್ ಪ್ರಾಥಮಿಕವಾಗಿ ಮೇಲಿನ ಮೂರು ರಾಷ್ಟ್ರಗಳ ನಾಯಕರು ಮತ್ತು ವಿದೇಶಾಂಗ ಸಚಿವರ ನಡುವಿನ ಶೃಂಗಸಭೆಯ ಸಭೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ.
lಈ ಸಹಯೋಗವು ಅಂತರ-ಸಂಸದೀಯ ಸಂಪರ್ಕಗಳು, ಮಿಲಿಟರಿ ಸಹಕಾರ ಮತ್ತು ವೈಜ್ಞಾನಿಕ ಮತ್ತು ಸಾಂಸ್ಕೃತಿಕ ವಿನಿಮಯಗಳನ್ನು ಹೆಚ್ಚಿಸುವುದರ ಕಡೆಗೆ ಗಮನಹರಿಸುತ್ತದೆ.
ಅಫಾರ್ (AFAR) ಟ್ರಯಾಂಗಲ್
lಅಫಾರ್ ಟ್ರಯಾಂಗಲ್ ಅನ್ನು ಅಫಾರ್ ಡಿಪ್ರೆಷನ್ ಅಥವಾ ಅಫಾರ್ ಟ್ರಿಪಲ್ ಜಂಕ್ಷನ್ ಎಂದೂ ಕರೆಯುತ್ತಾರೆ. ಇದು ಆಫ್ರಿಕಾದ ಭೂಶಿರ ಕವಲಿನಲ್ಲಿದೆ. ಇದು ಇಥಿಯೋಪಿಯಾ, ಎರಿಟ್ರಿಯಾ ಮತ್ತು ಜಿಬೌಟಿಯಾದ್ಯಂತ ವ್ಯಾಪಿಸಿದ್ದು, ಈ ಪ್ರದೇಶವು ಆಫ್ರಿಕನ್, ಅರೇಬಿಯನ್ ಮತ್ತು ಸೊಮಾಲಿ ಟೆಕ್ಟೋನಿಕ್ ಪ್ಲೇಟ್‌ಗಳ(ಭೂ ಫಲಕಗಳು) ಭಾಗದಲ್ಲಿ ಸಂಧಿಸುತ್ತದೆ.
ಭೂವೈಜ್ಞಾನಿಕ ಮಹತ್ವ : ಅಫಾರ್ ಟ್ರಯಾಂಗಲ್ ಭೂಮಿಯ ಮೇಲಿನ ಅತ್ಯಂತ ಭೌಗೋಳಿಕವಾಗಿ ಸಕ್ರಿಯವಾಗಿರುವ ಪ್ರದೇಶ ಗಳಲ್ಲಿ ಒಂದಾಗಿದೆ. ಇದು ಗ್ರೇಟ್ ರಿಫ್ಟ್ ವ್ಯಾಲಿ ಸೇರಿ ಜ್ವಾಲಾಮುಖಿ ಚಟುವಟಿಕೆ ಮತ್ತು ಬಿರುಕು ಕಣಿವೆಗಳ ಸಂಕೀರ್ಣ ಜಾಲದಿಂದ ರೂಪುಗೊಂಡಿದೆ. ಇದು ಪೂರ್ವ ಆಫ್ರಿಕನ್ ಕಣಿವೆ ಭಾಗದಲ್ಲಿದೆ. ಇದು ಆಫ್ರಿಕನ್ ಖಂಡವನ್ನು ಎರಡು ಭಾಗಗಳಾಗಿ ವಿಭಜಿಸುತ್ತದೆ.
ವೈಶಿಷ್ಟ್ಯಗಳು:
ದನಕಿಲ್ ಡಿಪ್ರೆಷನ್(ತಗ್ಗು ಪ್ರದೇಶ): ಇದು ಭೂಮಿಯ ಮೇಲಿನ ಅತ್ಯಂತ ಬಿಸಿಯಾದ ಮತ್ತು ತಳಭಾಗದಲ್ಲಿರುವ ಸ್ಥಳಗಳಲ್ಲಿ ಒಂದಾಗಿದೆ. ಅತಿ ತಾಪಮಾನ, ಲವಣಭೂಮಿಗಳು, ಜ್ವಾಲಾಮುಖಿ ಕುಳಿಗಳು ಮತ್ತು ರೋಚಕವಾದ ಬಿಸಿನೀರಿನ ಬುಗ್ಗೆಗಳಂತಹಾ ವಿಶಿಷ್ಟ ಭೂವೈಜ್ಞಾನಿಕ ರಚನೆಗಳನ್ನು ಹೊಂದಿದೆ. ನೀರು ತಕ್ಷಣ ಆವಿಯಾಗುವ ತಾಪಮಯ ಪ್ರದೇಶವಿದು.
ಎರ್ಟಾ ಅಲೆ ಜ್ವಾಲಾಮುಖಿ: ನಿರಂತರವಾಗಿ ಹರಿಯುವ ಲಾವಾ ಸರೋವರಕ್ಕೆ ಹೆಸರುವಾಸಿಯಾದ ಎರ್ಟಾ ಅಲೆ ಜ್ವಾಲಾಮುಖಿಯು ವಿಶ್ವದ ಕೆಲವು ಪ್ರಮುಖ ಜ್ವಾಲಾಮುಖಿಗಳಲ್ಲಿ ಒಂದಾಗಿದೆ. ಅದರ ಶಿಖರ ಕುಳಿಯಲ್ಲಿ ನಿರಂತರವಾಗಿ ಸಕ್ರಿಯವಾಗಿರುವ ಲಾವಾ ಸರೋವರವೇ ಅಡಗಿದೆ.
ಸಂಸ್ಕೃತಿ : ಈ ಪ್ರದೇಶವು ಅಲ್ಲಿನ ಸ್ಥಳೀಯ ಸಮುದಾಯವಾದ ಅಫಾರ್ ಜನರಿಗೆ ನೆಲೆಯಾಗಿದ್ದು ಆ ಜನರು ತಲೆಮಾರುಗಳಿಂದಲೂ ಆ ಕಠಿಣಮಯ ದುರ್ಗಮ ಪರಿಸರದಲ್ಲಿ ಹೊಂದಿಕೊಂಡು ಬಾಳುತ್ತಿದ್ದಾರೆ. ಅಫಾರ್ ಭಾಷೆಯನ್ನಾಡುವ ಆ ಜನರು ಉಪ್ಪು ಗಣಿಗಾರಿಕೆಯನ್ನು ಮಾಡುತ್ತಾರೆ.
ವೈಜ್ಞಾನಿಕ ಹಿನ್ನೆಲೆ: ಅಫಾರ್ ಟ್ರಯಾಂಗಲ್ ಅದರ ಸಕ್ರಿಯವಾದ ಭೂಫಲಕಗಳು ಮತ್ತು ಸಮೃದ್ಧ ಪಳೆಯುಳಿಕೆ ನಿಕ್ಷೇಪಗಳಿಂದಾಗಿ ಭೂವಿಜ್ಞಾನಿಗಳು ಮತ್ತು ಪ್ರಾಗ್ ಜೀವಶಾಸ್ತ್ರಜ್ಞರಿಗೆ ಅಪಾರ ಕುತೂಹಲದ ತಾಣವಾಗಿದೆ. ಇದು ‘ಲೂಸಿ’(ಆಸ್ಟ್ರಲೋಪಿಥೆಕಸ್ ಅಫರೆನ್ಸಿಸ್) ಯಂತಹ ಆರಂಭಿಕ ಕಾಲದ ಮಾನವನ ಪಳೆಯುಳಿಕೆಗಳ ಅವಿಷ್ಕಾರಗಳು ಲಭಿಸಿದೆ.
ಲಿಥಿಯಂ ಟ್ರಯಾಂಗಲ್
ಇದು ದಕ್ಷಿಣ ಅಮೆರಿಕದಲ್ಲಿದೆ. ಅರ್ಜೆಂಟೀನಾ, ಬೊಲಿವಿಯಾ ಮತ್ತು ಚಿಲಿಯ ಭಾಗಗಳನ್ನು ಒಳಗೊಂಡಿದ್ದು ಇದು ಆಂಡೀಸ್ ಪರ್ವತ ಶ್ರೇಣಿಯೊಳಗೆ ನೆಲೆಗೊಂಡಿದೆ. ಲಿಥಿಯಂನ ಪ್ರಮುಖ ನಿಕ್ಷೇಪಗಳನ್ನು ಹೊಂದಿದೆ. ಲಿಥಿಯಂ ಎಲೆಕ್ಟ್ರಿಕ್ ವಾಹನಗಳು, ಎಲೆಕ್ಟ್ರಾನಿಕ್ಸ್ ಮತ್ತು ನವೀಕರಿಸಬಹುದಾದ ಶಕ್ತಿ ಸಂಗ್ರಹ ವ್ಯವಸ್ಥೆಗಳಿಗೆ ಪುನರ್ಭರ್ತಿ ಮಾಡಬಹುದಾದ ಬ್ಯಾಟರಿಗಳಲ್ಲಿ ಬಳಸಲಾಗುವ ನಿರ್ಣಾಯಕ ಅಂಶವಾಗಿದೆ. ಈ ಪ್ರದೇಶವು ಪ್ರಪಂಚದ ಅರ್ಧದಷ್ಟು ಲಿಥಿಯಂ ನಿಕ್ಷೇಪಗಳನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.
ಪ್ರಮುಖ ಲಕ್ಷಣಗಳು :ಲಿಥಿಯಂ ಟ್ರಯಾಂಗಲ್ ಬೊಲಿವಿಯಾದ ಹೆಸರಾಂತ ಲವಣ ಭೂಮಿಯಾದ ‘ಸಲಾರ್ ಡಿ ಯುಯುನಿ’ಯನ್ನು ಒಳಗೊಂಡಿದೆ. ಇದು ವಿಶ್ವದ ಅತಿದೊಡ್ಡ ಲವಣಭೂಮಿ ಮತ್ತು ಲಿಥಿಯಂ-ಸಮೃದ್ಧ ಉಪ್ಪುನೀರಿನ ಪ್ರಮುಖ ಮೂಲವಾಗಿದೆ.
ಆಂಡಿಯನ್ ಪರ್ವತ ಶ್ರೇಣಿ : ಆಂಡಿಯನ್ ಪರ್ವತ ಶ್ರೇಣಿಯು ಲಿಥಿಯಂ-ಸಮೃದ್ಧ ಲವಣ ನಿಕ್ಷೇಪಗಳನ್ನು ಹೊಂದಿದೆ.
ಸವಾಲುಗಳು ಮತ್ತು ಅವಕಾಶಗಳು : ಲಿಥಿಯಂ ಟ್ರಯಾಂಗಲ್ ಆರ್ಥಿಕ ಅಭಿವೃದ್ಧಿಗೆ ಮತ್ತು ಶುದ್ಧ ಶಕ್ತಿಯತ್ತ ಜಾಗತಿಕ ಪರಿವರ್ತನೆಗೆ ಅಪಾರ ಅವಕಾಶಗಳನ್ನು ಒದಗಿಸುತ್ತದೆ. ಆದರೆ ಅದೇ ಸಮಯದಲ್ಲಿ ಸುಸ್ಥಿರ ಪರಿಸರ, ಸ್ಥಳೀಯ ಹಕ್ಕುಗಳು ಮತ್ತು ಸಾಮಾಜಿಕ ಸಮಾನತೆಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುತ್ತಿದೆ.ಜವಾಬ್ದಾರಿಯುತ ಮಾದರಿಯಲ್ಲಿ ಲಿಥಿಯಂ ನಿಕ್ಷೇಪಗಳನ್ನು ಹೊರತೆಗೆಯುವ ಅಭ್ಯಾಸಗಳು ಮತ್ತು ಸ್ಥಳೀಯ ಸಮುದಾಯಗಳ ನಡುವೆ ಪ್ರಯೋಜನಗಳ ನ್ಯಾಯಯುತ ವಿತರಣೆಯ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ.
ಗೋಲ್ಡನ್ ಟ್ರಯಾಂಗಲ್
ಗೋಲ್ಡನ್ ಟ್ರಯಾಂಗಲ್ ಆಗ್ನೇಯ ಏಷ್ಯಾದಲ್ಲಿ ಮ್ಯಾನ್ಮಾರ್, ಲಾವೋಸ್ ಮತ್ತು ಥಾಯ್‌ಲೆಂಡ್ ಭಾಗಗಳನ್ನು ಒಳಗೊಂಡಿರುವ ಪ್ರದೇಶವನ್ನು ಸೂಚಿಸುತ್ತದೆ. ಇದು ಐತಿಹಾಸಿಕವಾಗಿ ಅಫೀಮು ವ್ಯಾಪಾರಕ್ಕೆ ಹೆಸರುವಾಸಿಯಾದ ಪ್ರದೇಶವಾಗಿದೆ.
ಐತಿಹಾಸಿಕ ಮಹತ್ವ: ಗೋಲ್ಡನ್ ಟ್ರಯಾಂಗಲ್ 20ನೇ ಶತಮಾನದಲ್ಲಿ ಅಫೀಮು ಉತ್ಪಾದನೆ ಮತ್ತು ವ್ಯಾಪಾರದ ಪ್ರಮುಖ ಕೇಂದ್ರವಾಗಿ ಕುಖ್ಯಾತಿ ಗಳಿಸಿತು. ಜಾಗತಿಕ ಅಕ್ರಮ ಅಫೀಮು ಮಾರುಕಟ್ಟೆಗಳಿಗೆ ಉತ್ತೇಜನ ನೀಡಿತು. ವಿಶೇಷವಾಗಿ ಆ ಪ್ರದೇಶದಲ್ಲಿ ಸಂಘರ್ಷ ಮತ್ತು ಅಸ್ಥಿರತೆಯ ಅವಧಿಯಲ್ಲಿ ಇದು ಅಫೀಮು ಗಸಗಸೆ ಕೃಷಿಯ ಪ್ರಾಥಮಿಕ ಮೂಲವಾಗಿತ್ತು,
ಆಧುನಿಕ ಸಂದರ್ಭ : ಇತ್ತೀಚಿನ ದಶಕಗಳಲ್ಲಿ ಅಫೀಮು ಕೃಷಿ ಮತ್ತು ವ್ಯಾಪಾರವು ಇಳಿಮುಖವಾಗಿದ್ದರೂ, ಗೋಲ್ಡನ್ ಟ್ರಯಾಂಗಲ್ ಮಾದಕವಸ್ತು ಕಳ್ಳಸಾಗಣೆ, ಸಂಘಟಿತ ಅಪರಾಧ, ಮತ್ತು ಮಾದಕ ವ್ಯಸನ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತಹಾ ಸಮಸ್ಯೆಗಳನ್ನು ಎದುರಿಸುತ್ತಿದೆ.
ಆರ್ಥಿಕ ಚಟುವಟಿಕೆಗಳು: ಅಫೀಮು ವ್ಯಾಪಾರದೊಂದಿಗೆ ಅದರ ಐತಿಹಾಸಿಕ ಸಂಬಂಧದ ಜೊತೆಗೆ, ಗೋಲ್ಡನ್ ಟ್ರಯಾಂಗಲ್ ಈಗ ಅಕ್ರಮ ಟಿಂಬರ್ ವ್ಯಾಪಾರ, ಗಣಿಗಾರಿಕೆ ಮತ್ತು ಮೆಥಾಂಫೆಟಮೈನ್‌ನಂತಹ ಅಕ್ರಮ ಔಷಧಿಗಳ
ಉತ್ಪಾದನೆಯಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ.
ಪ್ರವಾಸೋದ್ಯಮ : ಈ ತೆರನಾದ ಕುಖ್ಯಾತಿಯ ಹೊರತಾಗಿಯೂ, ಗೋಲ್ಡನ್ ಟ್ರಯಾಂಗಲ್‌ನ ಪ್ರದೇಶಗಳು ಜನಪ್ರಿಯ ಪ್ರವಾಸಿ ತಾಣಗಳಾಗಿ ಮಾರ್ಪಟ್ಟಿವೆ. ಸಾಂಸ್ಕೃತಿಕ ಆಕರ್ಷಣೆಗಳು, ರಮಣೀಯ ಭೂದೃಶ್ಯಗಳು ಮತ್ತು ಸಾಹಸ ಪ್ರವಾಸೋದ್ಯಮಕ್ಕೆ ಇರುವ ಅವಕಾಶಗಳಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ಈ ಪ್ರತಿಯೊಂದು ಭೌಗೋಳಿಕ ಪ್ರದೇಶಗಳು ಭೌಗೋಳಿಕ, ಆರ್ಥಿಕ, ಐತಿಹಾಸಿಕ ಅಥವಾ ಸಾಂಸ್ಕೃತಿಕವಾಗಿ ತಮ್ಮದೇ ಆದ ವಿಶಿಷ್ಟವಾದ ಪ್ರಾಮುಖ್ಯತೆಯನ್ನು ಹೊಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.