ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರೌಢಶಾಲೆಗಳಲ್ಲಿ ಸ್ವಯಂ ಸೇವಾ ಸಂಸ್ಥೆಯೊಂದರ ವತಿಯಿಂದ ‘ಹದಿಹರೆಯದವರ ಆರೋಗ್ಯ’ ಕುರಿತು ತರಬೇತಿ ಆಯೋಜಿಸಲಾಗಿತ್ತು. ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳಿಗೆ ಪ್ರತ್ಯೇಕವಾಗಿ ಆಪ್ತಸಮಾಲೋಚನೆಯನ್ನು ವ್ಯವಸ್ಥೆಗೊಳಿಸಲಾಗಿತ್ತು. ಹೆಣ್ಣುಮಕ್ಕಳು ಆಪ್ತ ಸಮಾಲೋಚಕರ ಬಳಿ ತೆರಳಿ ಮಾತನಾಡಲು ಸಂಕೋಚಪಡುತ್ತಿದ್ದರು. ‘ನಾವು ಒಬ್ಬೊಬ್ಬರಾಗಿ ಹೋಗುವುದಿಲ್ಲ, ಸ್ನೇಹಿತೆಯರ ಜೊತೆ ಹೋಗಲು ಅವಕಾಶ ಮಾಡಿಕೊಡಿ’ ಎಂದು ವಿನಂತಿಸುತ್ತಿದ್ದರು. ಆದರೆ ಖಾಸಗಿತನ, ಗೋಪ್ಯತೆ ಪಾಲನೆಗೆ ಒತ್ತುಕೊಡುವ ಉದ್ದೇಶವನ್ನು ಸಂಘಟಕರು ಸ್ಪಷ್ಟಪಡಿಸಿದ ನಂತರ ಅವರು ಸಹಕರಿಸುವಂತೆ ಕಂಡುಬಂತು.

ಕೊಠಡಿಯೊಳಗೆ ತೆರಳುವ ಮುನ್ನ ಹೆಣ್ಣುಮಕ್ಕಳ ಸಂಕೋಚವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡೋಣವೆಂಬ ಉದ್ದೇಶದಿಂದ ‘ಏನೆಲ್ಲಾ ಪ್ರಶ್ನೆಗಳು, ಸಮಸ್ಯೆಗಳನ್ನು ಆಪ್ತಸಮಾಲೋಚಕರ ಬಳಿ ಕೇಳುವಿರಿ?’ ಎಂದು ಪ್ರಶ್ನಿಸಿದೆ. ಅವರು ಪರಸ್ಪರ ಮುಖ ನೋಡಿಕೊಂಡು ನಗುತ್ತಾ ನಾಚಿ ತಲೆ ತಗ್ಗಿಸುತ್ತಿದ್ದರೇ ವಿನಾ ಮಾತನಾಡಲಿಲ್ಲ. ‘ನೀವು ಸ್ನೇಹಿತೆಯರು ಮುಟ್ಟಿನ ಸಮಸ್ಯೆಗಳ ಬಗ್ಗೆ ಗುಟ್ಟಾಗಿ ಮಾತನಾಡಿಕೊಳ್ಳುತ್ತಿರುತ್ತೀರಿ, ಅಲ್ಲವೇ? ಅಂತಹವುಗಳನ್ನು ಕೇಳಬಹುದು’ ಎಂದೆ. ಅದಕ್ಕೆ ಒಬ್ಬಾಕೆ ‘ಇವಳಿಗೆ ಎರಡು ತಿಂಗಳಿಂದಲೂ ಮುಟ್ಟಾಗುತ್ತಿಲ್ಲ’ ಎಂದು ಸ್ನೇಹಿತೆಯೊಬ್ಬ ಳತ್ತ ಕೈತೋರಿದಳು. ‘ಆಯಿತು, ಚಿಂತೆ ಬೇಡ. ಅದಕ್ಕೆ ಕಾರಣ ಏನೆಂದು ಒಳಗೆ ಹೋದಾಗ ತಿಳಿಸುತ್ತಾರೆ. ನಾಚಿಕೆ ಇಲ್ಲದೆ ಮಾತನಾಡಿ’ ಎಂದೆ.

‘ಇವತ್ತು ಕ್ಲಾಸಲ್ಲಿ ಸರ್ ಹೇಳಿರೋ ವಿಚಾರಗಳಲ್ಲಿ ನಿಮಗೆ ಏನಿಷ್ಟವಾಯಿತು?’ ಎಂದು ಹುಡುಗರ ಬಳಿ ತೆರಳಿ ಪ್ರಶ್ನಿಸಿದೆ. ಯಾರೊಬ್ಬರೂ ಪ್ರತಿಕ್ರಿಯಿಸಲಿಲ್ಲ. ‘ಅದೇ, ಸರ್ ಹೇಳಿದ್ರಲ್ಲಾ ಮೇಡಂ, ಅದು’ ಎಂದು ಒಬ್ಬ ಹೇಳುತ್ತಿದ್ದ ಹಾಗೆ ಎಲ್ಲರೂ ಘೊಳ್ ಎಂದು ನಗಲಾರಂಭಿಸಿದರು. ‘ಆಪ್ತ ಸಮಾಲೋಚನೆಯಲ್ಲಿ ಯಾವ್ಯಾವ ಸಮಸ್ಯೆಗಳ ಬಗ್ಗೆ ಪ್ರಶ್ನೆ ಕೇಳಬಹುದು?’ ಎಂದು ಕೇಳಿದರೂ ಪ್ರಯೋಜನವಾಗಲಿಲ್ಲ. ಹುಡುಗರು ಕೂಡ ಇಂತಹ ವಿಷಯಗಳ ಬಗ್ಗೆ ಮಾತನಾಡಲು ಸಂಕೋಚಪಡುತ್ತಾರೆಯೇ ಎಂದು ಆಶ್ಚರ್ಯವಾಯಿತು. ನಾನು ಮಹಿಳೆ ಎಂಬ ಕಾರಣ ಇರಬಹುದು ಅಥವಾ ಎಲ್ಲರ ಮುಂದೆ ಹೇಳಿಕೊಳ್ಳಲು ಸಂಕೋಚ ಎನಿಸುತ್ತಿರಬಹುದು ಎನಿಸಿತು. ‘ಒಳಗೆ ಸರ್ ಇರುತ್ತಾರೆ, ಅವರೊಂದಿಗೆ ಮಾತನಾಡಲು ಸಂಕೋಚಪಡಬೇಡಿ’ ಎಂದು ಹೇಳಿ ತೆರಳಿದೆ.

ಮತ್ತೊಂದು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಇದೇ ಬಗೆಯ ಚರ್ಚೆಯಲ್ಲಿ ಹೈಸ್ಕೂಲ್ ಹುಡುಗ, ಹುಡುಗಿಯರ ಜೊತೆಗೆ ವಯಸ್ಕ ಪುರುಷ ಮತ್ತು ಮಹಿಳೆಯರು ಕೂಡ ಭಾಗವಹಿಸಿದ್ದರು. ‘ಹದಿಹರೆಯದವರಲ್ಲಿ ಆಗುವ ದೈಹಿಕ ಬದಲಾವಣೆಗಳು ಯಾವುವು?’ ಎಂಬ ಪ್ರಶ್ನೆಗೆ ಯಥಾಪ್ರಕಾರ ಹುಡುಗಿಯರು ನಗಲಾರಂಭಿಸಿದರು. ನಾಚಿಕೆ ಬಿಟ್ಟು ಮಾತನಾಡುವಂತೆ ಪ್ರೋತ್ಸಾಹಿಸಿದ ನಂತರ ಹೆಣ್ಣುಮಕ್ಕಳು ಚರ್ಚೆಯಲ್ಲಿ ಪಾಲ್ಗೊಳ್ಳತೊಡಗಿದರು. ಆದರೆ ಹುಡುಗರು ಮಾತ್ರ ಅಚ್ಚರಿ ಎನಿಸುವಷ್ಟರ ಮಟ್ಟಿಗೆ ತಲೆ ತಗ್ಗಿಸಿ ಕುಳಿತಿದ್ದರು. ಪುರುಷ ಸಂಪನ್ಮೂಲ ವ್ಯಕ್ತಿಗಳು ಅವರನ್ನು ಮಾತನಾಡಿಸಲೇಬೇಕೆಂದು ನಡೆಸಿದ ಪ್ರಯತ್ನ ಯಶ ಸಾಧಿಸಲೇ ಇಲ್ಲ.

ಶಾರೀರಿಕ ಬದಲಾವಣೆಗಳ ಬಗ್ಗೆ ಮುಕ್ತ ಸಂವಾದದಲ್ಲಿ ತೊಡಗಲು ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಷ್ಟೇ ಅಲ್ಲ ಕಾಲೇಜು ವಿದ್ಯಾರ್ಥಿಗಳಲ್ಲಿಯೂ ಹಿಂಜರಿಕೆ, ಮುಜುಗರ ಕಂಡುಬರುತ್ತದೆ. ಅದರಲ್ಲೂ ಹುಡುಗರು, ಹುಡುಗಿಯರಿಬ್ಬರನ್ನೂ ಒಂದೇ ಕಡೆ ಕಲೆಹಾಕಿ ಚರ್ಚೆ ನಡೆಸುವಾಗ, ತರಬೇತುದಾರರು ಮುಕ್ತ ಸಂವಾದದತ್ತ ಕೊಂಡೊಯ್ಯಲು ಪ್ರಜ್ಞಾಪೂರ್ವಕವಾಗಿಯೇ ಬಹಳಷ್ಟು ಪ್ರಯತ್ನ ನಡೆಸಬೇಕಾಗುತ್ತದೆ. ಆದ್ದರಿಂದ ಇಂಥ ವಿಷಯಗಳ ಬಗ್ಗೆ ತರಬೇತಿಗಳನ್ನು ಆಯೋಜಿಸುವಾಗ ಹುಡುಗರು ಮತ್ತು ಹುಡುಗಿಯರಿಗೆ ಸಂಘಟಕರು ಪ್ರತ್ಯೇಕವಾಗಿಯೇ ಚರ್ಚೆಗಳನ್ನು ಏರ್ಪಡಿಸಲು ಬಯಸುತ್ತಾರೆ.

ಇದೇಕೆ ಹೀಗೆ? ಭಾರತದಂಥ ದೇಶದಲ್ಲಿ ಮುಟ್ಟು, ಸಂತಾನೋತ್ಪತ್ತಿ, ಲೈಂಗಿಕತೆಯಂತಹ ಸಂಗತಿಗಳು ಮಡಿವಂತಿಕೆಯ ಗಡಿಗಳ ಒಳಗೆ ಬಂಧಿಸಲ್ಪಟ್ಟಿವೆ. ಹೆಣ್ಣುಮಕ್ಕಳು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಋತುಮತಿಯರಾಗುತ್ತಿದ್ದಾರೆ. ಅಮ್ಮನ ಸೆರಗಿನ ಹಿಂದೆ ಬಚ್ಚಿಟ್ಟುಕೊಳ್ಳುತ್ತಿದ್ದವಳು ಒಮ್ಮಿಂದೊಮ್ಮೆಲೇ ಪ್ರೌಢೆ ಎನಿಸಿಕೊಳ್ಳುತ್ತಾಳೆ. ‘ನೀನಿನ್ನೂ ಚಿಕ್ಕವಳು, ನಿಂಗೇನು ಗೊತ್ತಾಗುತ್ತದೆ?’ ಎಂದು ಗದರುತ್ತಾ ಆಕೆಯ ಮಾತಿಗೆ ಲಕ್ಷ್ಯ ಕೊಡದೇ ಇದ್ದವರು, ಆಕೆ ಋತುಮತಿಯಾದ ಕೂಡಲೇ ‘ನೀನು ದೊಡ್ಡವಳಾದೆ’ ಎಂದೆನ್ನತೊಡಗುತ್ತಾರೆ. ಓಡಾಡುವ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಒಂದು ಪಟ್ಟಿಯೇ ಅವಳೆದುರು ಬರುತ್ತದೆ.

ಆಕೆಯ ಮುಜುಗರ, ನಾಚಿಕೆ, ಅಂಜಿಕೆಯಂತಹ ಭಾವನಾತ್ಮಕ ಅಂಶಗಳಿಗೆ ಸ್ಪಂದನೆಯಾಗಲೀ ಅವಳ ಅಭಿಪ್ರಾಯಕ್ಕೆ ಮನ್ನಣೆಯಾಗಲೀ ಸಿಗುವುದಿಲ್ಲ. ಈ ಸಂದರ್ಭದಲ್ಲಿ ಎದುರಾಗುವ ಅವಳ ಪ್ರಶ್ನೆಗಳಿಗೆ ‘ಹಿಂದಿನಿಂದ ನಡೆಸಿಕೊಂಡು ಬಂದಿದ್ದೇವೆ’, ‘ನಮ್ಮ ದೇವರುಗಳಿಗೆ ಆಗಿಬರುವುದಿಲ್ಲ’, ‘ನೀನೊಬ್ಳೇನಾ ಹೆಣ್ಣಾಗಿದ್ದು, ನಾವೆಲ್ಲಾ ಅನುಭವಿಸಲಿಲ್ವಾ, ಅನುಸರಿಸಿಕೊಂಡು ಹೋಗಬೇಕು’ ಎನ್ನುವಂತಹ ಉತ್ತರಗಳು ಸಿಗುತ್ತವೆಯೇ ವಿನಾ ವೈಜ್ಞಾನಿಕ ನೆಲೆಯಲ್ಲಿ ಉತ್ತರಿಸುವ ಪ್ರಯತ್ನಗಳು ನಡೆಯುವುದಿಲ್ಲ. ಶಾರೀರಿಕ, ಮಾನಸಿಕ, ಭಾವನಾತ್ಮಕ ಬದಲಾವಣೆಗಳನ್ನು ಎದುರಿಸುವ ದಿಸೆಯಲ್ಲಿ ಹೆಣ್ಣುಮಕ್ಕಳನ್ನು ಸಜ್ಜುಗೊಳಿಸಿರುವುದಿಲ್ಲ.

ಈ ಸಂದರ್ಭದಲ್ಲಿ ಹೆಣ್ಣುಮಕ್ಕಳಿಗೆ ಪ್ರಮುಖವಾಗಿ ಬೇಕಿರುವುದು ವ್ಯವಸ್ಥಿತ ಶೌಚಾಲಯಗಳು. ಆದರೆ ಸ್ವಚ್ಛತೆ ಇಲ್ಲದ ಶೌಚಾಲಯ, ಯಥೇಚ್ಛ ಪ್ರಮಾಣದಲ್ಲಿ ನೀರು, ಪೌಷ್ಟಿಕಾಹಾರ, ಸ್ಯಾನಿಟರಿ ನ್ಯಾಪ್ಕಿನ್ಗಳ ಕೊರತೆ, ರಕ್ತ ಹೀರಲು ಬಳಸಿದ ವಸ್ತುಗಳ ವಿಲೇವಾರಿಯಲ್ಲಿ ಅವ್ಯವಸ್ಥೆ, ಮುಟ್ಟಿನ ಬಟ್ಟೆಗಳನ್ನು ಶುಚಿಯಾಗಿ ಒಗೆದು ಒಣಗಿಸಿ ಎತ್ತಿಡುವ ಅಗತ್ಯವನ್ನು ಮನಗಾಣದಿರುವುದು, ಏಕಾಂತದ ಕೊರತೆ, ಅಸುರಕ್ಷತೆ ಯಂತಹ ಸಮಸ್ಯೆಗಳನ್ನು ಹೆಚ್ಚಿನ ಹೆಣ್ಣುಮಕ್ಕಳು ಎದುರಿಸುತ್ತಾರೆ. ಹಲವರು ನೈರ್ಮಲ್ಯ ಪಾಲನೆಯ ಅಭಾವದಿಂದ ಸಂತಾನೋತ್ಪತ್ತಿ ಭಾಗದ ಸೋಂಕುಗಳು, ಅಸಹಜ ಡಿಸ್ಚಾರ್ಜ್ನಂತಹ ಸಂಕಷ್ಟಗಳಿಗೆ ಒಳಗಾಗುತ್ತಾರೆ. ಇಂತಹ ಪರಿಸ್ಥಿತಿಗಳು ಬಹುತೇಕ ಹೆಣ್ಣುಮಕ್ಕಳಲ್ಲಿ ಮುಟ್ಟೆಂಬುದು ಬೇಡದ ಪ್ರಕ್ರಿಯೆ ಎಂಬಷ್ಟರ ಮಟ್ಟಿಗೆ ಜುಗುಪ್ಸೆಯನ್ನು ಮೂಡಿಸುತ್ತವೆ. ಈ ಬಗೆಯ ತೊಂದರೆಗಳನ್ನೆಲ್ಲ ಮೌನವಾಗಿ ಸಹಿಸುವಂತೆ ಹೆಣ್ಣುಮಕ್ಕಳನ್ನು ಸಾಮಾಜೀಕರಣ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಆದ್ದರಿಂದಲೇ ಅವರು ಸಮಸ್ಯೆಗಳನ್ನು ಸಹಜವೆಂಬಂತೆ ಸ್ವೀಕರಿಸುತ್ತಾರೆ ಮತ್ತು ಮುಂದಿನ ಪೀಳಿಗೆಯನ್ನು ಸಹ ಇದೇ ರೀತಿ ಸಜ್ಜುಗೊಳಿಸಲು ಸಿದ್ಧರಾಗುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಏರಿಕೆಯಾಗಿರುವುದನ್ನು ತಿಳಿಸುವ ಅಂಕಿಅಂಶಗಳು, ನಾವು ಎಷ್ಟರ ಮಟ್ಟಿಗೆ ಕಿಶೋರಿಯರೊಂದಿಗೆ ಮುಕ್ತ ಸಂವಾದದಲ್ಲಿ ತೊಡಗಬೇಕಾಗಿದೆ ಎಂಬುದನ್ನು ಎತ್ತಿ ತೋರಿಸುತ್ತವೆ.

ಕಿಶೋರಾವಸ್ಥೆಯ ಮುಂದಿನ ವಯಸ್ಕ ಹಂತದ ಕೌಟುಂಬಿಕ ಜೀವನಕ್ಕೆ ಸಜ್ಜುಗೊಳಿಸುವ ದಿಸೆಯಲ್ಲಿ ಆರೋಗ್ಯ, ಲೈಂಗಿಕತೆ, ಸಂತಾನೋತ್ಪತ್ತಿ ಕುರಿತ ಜ್ಞಾನವನ್ನು, ಇಂಥ ವಿಷಯಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡುವಂತಹ ವಾತಾವರಣವನ್ನು ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು ಇಬ್ಬರಿಗೂ ಒದಗಿಸಬೇಕಾಗಿದೆ. ಸಮುದಾಯ, ಕುಟುಂಬದ ಸದಸ್ಯರು, ಶಾಲಾ ಕಾಲೇಜುಗಳು ಕಿಶೋರಿಯರ ಪ್ರಶ್ನೆಗಳಿಗೆ ಕಿವಿಯಾಗಬೇಕಾಗಿದೆ. ಅವರ ಸಮಸ್ಯೆಗಳನ್ನು ಅರಿತು, ಲಿಂಗ ಸೂಕ್ಷ್ಮಜ್ಞರಾಗಿ, ಸ್ಪಂದಿಸಿ ಪ್ರವರ್ತಿಸುವ ಸಮಾಜವೊಂದರ ನಿರ್ಮಾಣ ನಮ್ಮೆಲ್ಲರ ಹೊಣೆ. ಹಾಗಾದಾಗ ಮಾತ್ರ ಹೆಣ್ಣುಮಕ್ಕಳು ಸೃಷ್ಟಿಗೆ ಕಾರಣವಾಗುವ ಮುಟ್ಟಿನ ಬಗ್ಗೆ ಹೆಮ್ಮೆಪಡುವಂತಹ ಧೋರಣೆಯನ್ನು ಹೊಂದುವ ವಾತಾವರಣ ಸೃಷ್ಟಿಯಾಗಬಹುದು.

ಲೇಖಕಿ: ಕಾರ್ಯನಿರ್ವಾಹಕ ಟ್ರಸ್ಟಿ, ಜನನಿ ಸಮಗ್ರ ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಟ್ರಸ್ಟ್

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-51-97707065

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.