ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಎಸ್ ಪರೀಕ್ಷೆಗೆ ಸಿದ್ಧತೆ ಹೇಗೆ? ತಜ್ಞರ ಪ್ರಶ್ನೋತ್ತರಗಳು

Last Updated 26 ಡಿಸೆಂಬರ್ 2022, 7:08 IST
ಅಕ್ಷರ ಗಾತ್ರ

1. ನಾನು ಎಂ.ಎಸ್ಸಿ (ಸಸ್ಯಶಾಸ್ತ್ರ ) ಪೂರ್ಣಗೊಳಿಸಿದ್ದೆನೆ. ಕೆಎಎಸ್ ಅಧಿಕಾರಿಯಾಗುವ ಆಸೆ ಇದೆ. ಆದರೆ, ಸದ್ಯಕ್ಕೆ ಉದ್ಯೋಗದ ಅವಶ್ಯಕತೆ ಇದ್ದು, ಅದಕ್ಕಾಗಿ, ಬಿ.ಇಡಿ ಮಾಡಿ ಶಿಕ್ಷಕ ವೃತ್ತಿಗೆ ಸೇರಿ, ಸ್ವಂತ ದುಡಿಮೆಯ ಮೇಲೆ ನಿಂತು, ನಂತರ ಕೆಎಎಸ್ ತಯಾರಿ ಮಾಡಬೇಕು ಎಂದುಕೊಂಡಿದ್ದೇನೆ. ಹೇಗೆ ಮಾಡಬಹುದು ? ಮಾರ್ಗದರ್ಶನ ನೀಡಿ.
ಹೆಸರು, ಊರು ತಿಳಿಸಿಲ್ಲ.

ಶಿಕ್ಷಕ ವೃತ್ತಿಗೂ ಕೆಎಎಸ್ ವೃತ್ತಿಗೂ ಅಗತ್ಯವಾದ ಜ್ಞಾನ, ಕೌಶಲ ಮತ್ತು ಮನೋ ಧೋರಣೆಗಳಲ್ಲಿ ಪ್ರಮುಖ ವ್ಯತ್ಯಾಸಗಳಿವೆ. ಒಬ್ಬ ದಕ್ಷ ಕೆಎಎಸ್ ಆಡಳಿತಾಧಿಕಾರಿಗೆ ಇರಬೇಕಾದ ಪರಿಪೂರ್ಣ ಜ್ಞಾನ, ನಾಯಕತ್ವದ ಸಾಮರ್ಥ್ಯ, ಮನೋಧೋರಣೆ, ನೈತಿಕತೆ, ಪಾರದರ್ಶಕತೆ, ಸಮಯದ ನಿರ್ವಹಣೆ, ಶಿಸ್ತು, ಬದ್ಧತೆ, ಸಂವಹನಾ ಸಾಮರ್ಥ್ಯ, ತಾರ್ಕಿಕ ಯೋಚನಾ ಸಾಮರ್ಥ್ಯ, ಪ್ರೇರಣಾ ಕೌಶಲ ಇತ್ಯಾದಿಗಳನ್ನು ಆಯ್ಕೆಯ ಪ್ರಕ್ರಿಯೆಯಲ್ಲಿ ಕೂಲಂಕಶವಾಗಿ ಪರೀಕ್ಷಿಸಲಾಗುತ್ತದೆ. ಹಾಗಾಗಿ, ನಿಮ್ಮ ಶಕ್ತಿ, ಸಾಮರ್ಥ್ಯ, ಆಸಕ್ತಿ ಮತ್ತು ಅಭಿರುಚಿಯ ಆಧಾರದ ಮೇಲೆ ಕೆಎಎಸ್ ವೃತ್ತಿ ನಿಮಗೆ ಸರಿಹೊಂದುವುದೇ ಎಂದು ಸ್ವಯಂವಿಮರ್ಶೆ ಮಾಡುವುದು ಒಳ್ಳೆಯದು. ಆ ನಂತರ ಪರೀಕ್ಷೆಗಳ ಮಾದರಿ, ಪಠ್ಯಕ್ರಮ, ವಿಷಯದ ಅನುಸಾರ ಶಿಫಾರಸು ಮಾಡಿರುವ ಪುಸ್ತಕಗಳನ್ನು ತಿಳಿದುಕೊಂಡು ನಿಮ್ಮ ವೃತ್ತಿ ಯೋಜನೆಯ ಅನುಗುಣವಾಗಿ ಕಾರ್ಯತಂತ್ರವನ್ನು ರೂಪಿಸಬೇಕು. ಕೆಎಎಸ್ ಆಯ್ಕೆ ಪ್ರಕ್ರಿಯೆ ಕಠಿಣವಾಗಿರುವುದರಿಂದ, ನಿಮ್ಮ ಎಲ್ಲಾ ಪ್ರಯತ್ನಗಳನ್ನು ಈ ನಿಟ್ಟಿನಲ್ಲಿ ಕೇಂದ್ರೀಕರಿಸುವುದು ಅಗತ್ಯ. ಆದ್ದರಿಂದ, ಬಿ.ಇಡಿ ಮಾಡುವುದು ಸೂಕ್ತವಲ್ಲವೆನ್ನುವುದು ನಮ್ಮ ಅಭಿಪ್ರಾಯ.

ನೀವು ಎಂ.ಎಸ್ಸಿ (ಸಸ್ಯಶಾಸ್ತ್ರ) ಮಾಡಿರುವುದರಿಂದ ಹಾಗೂ ಸದ್ಯಕ್ಕೆ ಉದ್ಯೋಗದ ಅವಶ್ಯಕತೆಯಿರುವುದರಿಂದ, ಬಯೋಟೆಕ್ನಾಲಜಿ, ಔಷಧ, ಆಹಾರ, ನರ್ಸರಿಗಳು, ಪರಿಸರ, ಪ್ರಯೋಗಾಲಯಗಳು, ಸಂಶೋಧನೆ ಮುಂತಾದ ವಲಯಗಳಲ್ಲಿ ವೃತ್ತಿಯನ್ನು ಅರಸಬಹುದು. ವೃತ್ತಿಯೋಜನೆ ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/@ExpertCareerConsultantAuthor

________

2. ನಾನು ಬಿ.ಎಸ್ಸಿ ಪದವಿಧರ. ಮುಂದೆ ಬಿ.ಇಡಿ ಮಾಡಬೇಕೆಂದಿದ್ದೇನೆ. ಈಗ ಬಿ.ಇಡಿ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಹೇಗೆ ಮಾಡಬೇಕು? ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವುದು ಒಳ್ಳೆಯದೇ? ಅಥವಾ, ಕೇವಲ ಒಂದು ಪರೀಕ್ಷೆಯನ್ನು ಗುರಿಯಾಗಿಟ್ಟುಕೊಂಡು ಓದುವುದು ಒಳ್ಳೆಯದೇ?
–ರಾಜಶೇಖರ ಬಡಗಾ, ಯಾದಗಿರಿ.

ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಕುರಿತು ಇದೇ ತಿಂಗಳ 5ನೇ ತಾರೀಖಿನ ಸಂಚಿಕೆಯ ಪ್ರಶ್ನೋತ್ತರ ಅಂಕಣದಲ್ಲಿ ವಿವರಿಸಲಾಗಿದೆ. ದಯವಿಟ್ಟು ಓದಿಕೊಳ್ಳಿ. ಕೆಲವು ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಪರಿಣಾಮಕಾರಿಯಾದ ಓದುವಿಕೆ, ಸಾಕಷ್ಟು ಪರಿಶ್ರಮ, ಸಮಯದ ನಿರ್ವಹಣೆ ಅತ್ಯಗತ್ಯ. ಹಾಗಾಗಿ, ವೃತ್ತಿಯೋಜನೆಯಂತೆ ನಿಮ್ಮ ಗುರಿಯನ್ನು ನಿರ್ಧರಿಸಿ, ಆ ನಿಟ್ಟಿನಲ್ಲಿ ಒಂದೆರಡು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ನಿಮ್ಮ ಪ್ರಯತ್ನಗಳನ್ನು ಕೇಂದ್ರೀಕರಿಸಬೇಕು. ಪರಿಣಾಮಕಾರಿ ಓದುವಿಕೆ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:https://www.youtube.com/watch?v=3PzmKRaJHmk

________

3. ನಾನು ಬಿಎ ಮತ್ತು ಬಿ.ಇಡಿ ಪದವಿಯನ್ನು ಪೂರ್ಣಗೊಳಿಸಿ, ಎಚ್‌ಎಸ್‌ಟಿಆರ್ ಪರೀಕ್ಷೆಗೆ ತಯಾರಿ ನಡೆಸಿದ್ದೇನೆ. ನಾನು ಶೇ 90ರಷ್ಟು ದೃಷ್ಟಿ ದೋಷವಿರುವ ಅಭ್ಯರ್ಥಿಯಾಗಿದ್ದೇನೆ. ಆದ್ದರಿಂದ, ನೇಮಕಾತಿಯಲ್ಲಿ ತೊಂದರೆಯಾಗಬಹುದೇ?
ಹೆಸರು, ಊರು ತಿಳಿಸಿಲ್ಲ.

ಬಿಎ, ಬಿ.ಇಡಿ ಮುಗಿಸಿ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ (ಎಚ್‌ಎಸ್‌ಟಿಆರ್) ಪರೀಕ್ಷೆಗೆ ತಯಾರಿ ನಡೆಸುತ್ತಿರುವ ನಿಮಗೆ ಅಭಿನಂದನೆಗಳು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪರೀಕ್ಷಾ ಸಹಾಯಕರನ್ನು ಬಳಸಿಕೊಳ್ಳುವುದೂ ಸೇರಿದಂತೆ ಇನ್ನಿತರ ಸೌಲಭ್ಯಗಳಿವೆ. ಹಾಗೂ, ಸರ್ಕಾರದ ಮತ್ತು ಸರ್ಕಾರದ ಅನುದಾನಿತ ಎಲ್ಲಾ ಶಿಕ್ಷಣ ಸಂಸ್ಥೆಗಳ ನೇಮಕಾತಿಯಲ್ಲಿ ವಿಶೇಷ ಚೇತನ ಅಭ್ಯರ್ಥಿಗಳಿಗೆ ಮೀಸಲಾತಿಯಿದೆ. ನಿಖರವಾದ ಮಾಹಿತಿ ಮತ್ತು ನಿಯಮಾವಳಿಗಾಗಿ ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಿ ಅಥವಾ ಈ ಜಾಲತಾಣವನ್ನು ಗಮನಿಸಿ: https://schooleducation.kar.nic.in/secednKn/secedu.html

________

4. ನಾನೀಗ ಟಿ.ಸಿ.ಎಚ್, ಬಿ.ಎಸ್ಸಿ ಮತ್ತು ಬಿ.ಇಡಿ ಓದಿ ಪ್ರಸ್ತುತ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಮಕ್ಕಳ ಆಪ್ತ ಸಮಾಲೋಚಕ ಆಗಬೇಕೆಂದಿದ್ದೇನೆ. ವೃತ್ತಿಯ ಜೊತೆಗೆ ಮಾಡಬಹುದಾದ ಡಿಪ್ಲೊಮಾ ಕೋರ್ಸ್, ಕಾಲೇಜುಗಳ ಬಗ್ಗೆ ತಿಳಿಸಿ. ಧನ್ಯವಾದಗಳು.
ಪ್ರಶಾಂತ ಕುಮಾರ್, ಹಗರಿಬೊಮ್ಮನಹಳ್ಳಿ.

ಸ್ಪರ್ಧಾತ್ಮಕ ಪೈಪೋಟಿ, ಅತಿಯಾದ ಶೈಕ್ಷಣಿಕ ಒತ್ತಡ, ಪೋಷಕರ ನಿರೀಕ್ಷೆ ಮುಂತಾದ ಕಾರಣಗಳಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಅಗತ್ಯವಿರುವ ಈ ಕಾಲಘಟ್ಟದಲ್ಲಿ ನಿಮ್ಮ ಆಲೋಚನೆ ಮೆಚ್ಚುವಂತದ್ದು. ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಮಾರ್ಗದರ್ಶನ ನೀಡಲು ತಾಳ್ಮೆ, ಅನುಭೂತಿ, ಸೇವಾ ಮನೋಭಾವ, ಉತ್ತಮ ಸಂವಹನ ಕೌಶಲ, ವಿಶ್ಲೇಷಾತ್ಮಕ ಕೌಶಲ, ದೂರದೃಷ್ಟಿ, ಉದ್ಯೋಗ ಕ್ಷೇತ್ರದ ಜ್ಞಾನ ಇತ್ಯಾದಿಗಳನ್ನು ಬೆಳೆಸಿಕೊಳ್ಳಬೇಕು.

ದೂರಶಿಕ್ಷಣ/ಆನ್‌ಲೈನ್ ಮೂಲಕ ಕೌನ್ಸೆಲಿಂಗ್ ಸಂಬಂಧಪಟ್ಟ ವಿಷಯಗಳಲ್ಲಿ (ಶೈಕ್ಷಣಿಕ ಮಾರ್ಗದರ್ಶನ, ವೃತ್ತಿಪರ ಮಾರ್ಗದರ್ಶನ, ಕೌಟುಂಬಿಕ ಮತ್ತು ಪೋಷಕರ ಮಾರ್ಗದರ್ಶನ, ಕೌನ್ಸೆಲಿಂಗ್ ಮನೋವಿಜ್ಞಾನ, ಮಾನಸಿಕ ಚಿಕಿತ್ಸೆ ಇತ್ಯಾದಿ), ನಿಮ್ಮ ಅನುಕೂಲ ಮತ್ತು ಆದ್ಯತೆಗೆ ತಕ್ಕಂತೆ ಸ್ನಾತಕೋತ್ತರ/ಡಿಪ್ಲೊಮಾ/ಸರ್ಟಿಫಿಕೆಟ್ ಕೋರ್ಸ್ಗಳನ್ನು ಮಾಡಬಹುದು. ವಿಷಯಾನುಸಾರ ಹಲವಾರು ಕೋರ್ಸ್/ಕಾಲೇಜು ಆಯ್ಕೆಗಳಿರುವುದರಿಂದ ಕೂಲಂಕುಶವಾಗಿ ಪರಿಶೀಲಿಸಿ, ಅಂತಿಮ ನಿರ್ಧಾರವನ್ನು ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಗಮನಿಸಿ:https://www.shiksha.com/search?q=student%20counselling%20courses&s[]=16&rf=filters

________

5. ನಾನು ಎಂ.ಎಸ್ಸಿ (ಗಣಿತ) ಮಾಡಿದ್ದು, ಶಿಕ್ಷಕ ವೃತ್ತಿಯಲ್ಲಿ ಆಸಕ್ತಿಯಿಲ್ಲ. ಖಾಸಗಿ ಕ್ಷೇತ್ರದಲ್ಲಿರುವ ಅವಕಾಶಗಳ ಬಗ್ಗೆ ತಿಳಿಸಿ.
–ಹೆಸರು, ಊರುತಿಳಿಸಿಲ್ಲ,

ಎಂ.ಎಸ್ಸಿ (ಗಣಿತ) ಮಾಡಿದ ನಂತರ ಖಾಸಗಿ ಕ್ಷೇತ್ರದ ಬ್ಯಾಂಕಿಂಗ್, ಐಟಿ, ಕಂಪ್ಯೂಟಿಂಗ್, ಡೇಟಾಬೇಸ್ ಮ್ಯಾನೇಜ್‌ಮೆಂಟ್, ಅನಲಿಟಿಕ್ಸ್, ರಿಸರ್ಚ್, ಇನ್ವೆಸ್ಟ್ಮೆಂಟ್ ಮುಂತಾದ ಕ್ಷೇತ್ರಗಳಲ್ಲಿ ಅವಕಾಶಗಳಿದ್ದು, ಇಲ್ಲಿನ ಪ್ರತಿಷ್ಠಿತ ಸಂಸ್ಥೆಗಳಲ್ಲಿ ನೀವು ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

ಈ ಕ್ಷೇತ್ರಗಳಲ್ಲಿ, ಪ್ರತಿ ಉದ್ಯೋಗಿಗೆ ಅನ್ವಯವಾಗುವ ಉದ್ಯೋಗದ ವಿವರಗಳಿಗೆ (ಕರ್ತವ್ಯಗಳು, ಹೊಣೆಗಾರಿಕೆಗಳು, ಚಟುವಟಿಕೆಗಳು ಇತ್ಯಾದಿ) ಅನುಗುಣವಾಗಿ ಜ್ಞಾನ ಮತ್ತು ಕೌಶಲಗಳ ಅಗತ್ಯವಿರುತ್ತದೆ. ಹಾಗಾಗಿ, ವಿಷಯದ ಜ್ಞಾನ ಮತ್ತು ವೃತ್ತಿ ಸಂಬAಧಿತ ಕೌಶಲಗಳನ್ನು ನಿರಂತರವಾಗಿ ಪರಿಷ್ಕರಿಸುತ್ತಿರಬೇಕು.

________

6. ನಾನು ಎಂ.ಎಸ್ಸಿ (ರಸಾಯನ ಶಾಸ್ತ್ರ) ಮುಗಿಸಿದ್ದು, ಬಿ.ಇಡಿ ಮತ್ತು ಪಿ.ಎಚ್‌ಡಿ ಕೋರ್ಸ್‌ಗಳನ್ನು ಏಕಕಾಲದಲ್ಲಿ ಮಾಡಬೇಕೆಂದುಕೊಂಡಿದ್ದೇನೆ. ಇದರಿಂದ, ಮುಂದೆ ಸರ್ಕಾರಿ ಕೆಲಸಗಳಿಗೆ ತೊಂದರೆಯಾಗಬಹುದೇ?
–ಹೆಸರು, ಊರು ತಿಳಿಸಿಲ್ಲ.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗದ ನಿಯಮಾವಳಿ ಎರಡು ಪದವಿಗಳನ್ನು ಏಕಕಾಲದಲ್ಲಿ ಮಾಡುವ ಅವಕಾಶವನ್ನು ಕಲ್ಪಿಸಿದೆ. ಹಾಗಾಗಿ, ನಮ್ಮ ಅಭಿಪ್ರಾಯದಂತೆ, ಸರ್ಕಾರಿ ನೇಮಕಾತಿಯ ಪ್ರಕ್ರಿಯೆಯಲ್ಲಿ ತೊಂದರೆಯಾಗುವ ಸಾಧ್ಯತೆಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT