ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕ ಸಂಶೋಧನೆಗೆ ‘ಕೆವಿಪಿವೈ’ ಪ್ರೋತ್ಸಾಹ

ಕಿಶೋರ ವೈಜ್ಞಾನಿಕ್ ಪ್ರೋತ್ಸಾಹನ್ ಯೋಜನ
Last Updated 30 ಜನವರಿ 2022, 19:30 IST
ಅಕ್ಷರ ಗಾತ್ರ

ಶುದ್ಧ ಹಾಗೂ ಮೂಲಭೂತ ವಿಜ್ಞಾನದ (Pure and Fundamental Science) ಓದಿನೆಡೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸಿ ಶಿಕ್ಷಣದ ಜೊತೆಗೆ ಸಂಶೋಧನಾ ಪ್ರವೃತ್ತಿಯನ್ನೂ ಪ್ರೋತ್ಸಾಹಿಸಿ ದೇಶದ ಸಂಶೋಧನಾ ರಂಗಕ್ಕೆ ಕಸುವು ತುಂಬಲು ಮಾಡಿದ ವಿನೂತನ ಪ್ರಯತ್ನವೇ ‘ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹನ್‘(ಕೆವಿಪಿವೈ) ಯೋಜನೆ.

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ 1999 ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಮೇಲ್ವಿಚಾರಣೆಯಲ್ಲಿ ಈ ಯೋಜನೆ ಪ್ರಾರಂಭಿಸಿತು. ಕಳೆದ ದಶಕದಿಂದ ಈ ಕೋರ್ಸ್‌ ಬಗ್ಗೆ ವಿದ್ಯಾರ್ಥಿ–ಪೋಷಕರಲ್ಲಿ ಆಸಕ್ತಿ ಹೆಚ್ಚುತ್ತಿದೆ.

ಕೆವಿಪಿವೈ ಪರೀಕ್ಷೆ ಪಾಸಾದ ಪ್ರಥಮ / ದ್ವಿತೀಯ ಪಿಯುಸಿ, ಪ್ರಥಮ ವರ್ಷದ ಬಿ.ಎಸ್ಸಿ/ಎಂ.ಎಸ್ಸಿ ಕೋರ್ಸ್ ಕಲಿಯುವ ವಿದ್ಯಾರ್ಥಿಗಳು ಕೆ.ವಿ.ಪಿ.ವೈ ಫೆಲೋಶಿಪ್ ಪಡೆಯಲು ಅರ್ಹರಾಗುತ್ತಾರೆ. ಮೂರು ವಿಭಾಗಗಳಲ್ಲಿ ಆನ್‌ಲೈನ್ ಪರೀಕ್ಷೆ ನಡೆಸುವ ಮೂಲಕ ದೇಶದಾದ್ಯಂತ ವಿದ್ಯಾರ್ಥಿಗಳನ್ನು ಫೆಲೋಶಿಪ್‌ಗೆ ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆ ಪಾಸಾದ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಅನುಸಾರ ಬೆಂಗಳೂರಿನ ಐಐಎಸ್‌ಸಿಯಲ್ಲಿ ನಾಲ್ಕು ವರ್ಷಗಳ ಅವಧಿಯ ಬಿ.ಎಸ್‌ಗೆ(ಬ್ಯಾಚುಲರ್ ಆಫ್ ಸೈನ್ಸ್‌) ಸೇರಬಹುದು. ಇಲ್ಲವೆ ದೇಶದಾದ್ಯಂತವಿರುವ ಐಐಎಸ್‌ಇಆರ್ (ISER– ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್) ಅಥವಾ ದೇಶದ ಅಂಗೀಕೃತ ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ ಮೂಲ ವಿಜ್ಞಾನ ವಿಷಯಗಳ ಪದವಿ ಶಿಕ್ಷಣಕ್ಕೆ ಸೇರಿ ಫೆಲೋಶಿಪ್ ಪಡೆಯಬಹುದು.

1. ಎಸ್‌ಎ ವಿಭಾಗ (SA – Stream)

ಎಸ್‌ಎಸ್‌ಎಲ್‌ಸಿ / 10ನೇ ತರಗತಿಯಲ್ಲಿ ಗಣಿತ ಮತ್ತು ವಿಜ್ಞಾನದ ವಿಷಯಗಳಲ್ಲಿ ಸರಾಸರಿ ಶೇ 75 ಅಂಕಗಳಿಸಿದ (ಪ.ಜಾ / ಪ.ಪಂ / ಅಂಗವಿಕಲರು, ಅಂಧರಿಗೆ ಶೇ 65) ಹಾಗೂ ಆಯಾ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ಪಿಯುಸಿ ಅಥವಾ 11ನೇ ತರಗತಿಯ ವಿಜ್ಞಾನ ವಿಭಾಗದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ.

ತೇರ್ಗಡೆಯಾದ ವಿದ್ಯಾರ್ಥಿಗಳು 2ನೇ ಪಿಯುಸಿ ಪರೀಕ್ಷೆಯಲ್ಲಿ ಗಣಿತ ಮತ್ತು ವಿಜ್ಞಾನದಲ್ಲಿ ಶೇ 60 ಅಂಕ (ಪ.ಜಾ / ಪ.ಪಂ / ಅಂಗ, ದೃಷ್ಟಿವಿಕಲರಿಗೆ ಶೇ 50) ಪಡೆದು ಮೂಲ ವಿಜ್ಞಾನದಲ್ಲಿ (B.Sc / B.S / B.Stat / B.Math / Int. M.Sc / Int. M.S) ಪ್ರವೇಶ ಪಡೆದು ಅಧ್ಯಯನ ಮುಂದುವರಿಸಿದರೆ, ಕೋರ್ಸ್ ಮುಗಿಯುವವರೆಗೆ ಫೆಲೋಶಿಪ್ ದೊರಕುತ್ತದೆ. ದ್ವಿತೀಯ ಪಿಯುಸಿ ಓದುತ್ತಿರುವಾಗ ಯಾವುದೇ ವಿದ್ಯಾರ್ಥಿವೇತನ ಇರುವುದಿಲ್ಲ.

2. ಎಸ್. ಎಕ್ಸ್ ವಿಭಾಗ (SX Stream)

ಎಸ್‌ಎಸ್‌ಎಲ್‌ಸಿ / 10ನೇ ತರಗತಿಯಲ್ಲಿ ಗಣಿತ ಮತ್ತು ವಿಜ್ಞಾನದಲ್ಲಿ ಶೇ 75 ಅಂಕ ಪಡೆದು 2ನೇ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪ್ರವೇಶ ಪಡೆದವರು ಈ ಪರೀಕ್ಷೆ ಬರೆಯಬಹುದು. ದ್ವಿತೀಯ ಪಿಯುಸಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ (ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ) ಸರಾಸರಿ ಶೇ 60 ಅಂಕ (ಪ.ಜಾ / ಪ.ಪಂ / ಅಂಗವಿಕಲರಿಗೆ ಶೇ 50) ಪಡೆದಿರಬೇಕು ಮತ್ತು ಅಂಗೀಕೃತ ವಿವಿಯ ಕಾಲೇಜುಗಳಲ್ಲಿ ಮೂಲಭೂತ ವಿಜ್ಞಾನದ ಕೋರ್ಸ್‌ಗಳಾದ B.Sc / B.S / B.Stat / B.Math / Int. M.Sc / Int. M.S ಗಳಲ್ಲಿ ಪ್ರವೇಶ ಪಡೆದು ಅಧ್ಯಯನ ಮುಂದುವರೆಸಬೇಕು.

3. ಎಸ್.ಬಿ ವಿಭಾಗ (SB Stream)

12ನೇ ತರಗತಿ / ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಶೇ 60 ಅಂಕ ಪಡೆದು ಈಗಾಗಲೇ ಅಂಗೀಕೃತ ವಿವಿಗಳ ಕಾಲೇಜುಗಳಲ್ಲಿ ಮೂಲ ವಿಜ್ಞಾನದ ವಿಷಯಗಳಲ್ಲಿ ಪ್ರಥಮ ಪದವಿ ಅಥವಾ ಸ್ನಾತಕೋತ್ತರ ಪದವಿ(ಪಿ.ಜಿ) ಅಧ್ಯಯನ ಮಾಡುತ್ತಿರುವವರು ಈ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. ಪ್ರಥಮ ವರ್ಷದ ಪದವಿಯಲ್ಲಿ ಆಯ್ದುಕೊಂಡಿರುವ ವಿಷಯಗಳಲ್ಲಿ ಸರಾಸರಿ ಶೇ 60 ಅಂಕ (ಪ.ಜಾ / ಪ.ಪಂ /ಅಂಗವಿಕಲರಿಗೆ ಶೇ 50) ಪಡೆದವರು ಫೆಲೋಶಿಪ್ ಪಡೆಯುತ್ತಾರೆ.

ಫೆಲೋಶಿಪ್‌ನ ವಿವರಗಳು

ಮೇಲೆ ತಿಳಿಸಿರುವ ಪರೀಕ್ಷೆಗಳನ್ನು ಪಾಸು ಮಾಡಿ, ಪ್ರಥಮ ವರ್ಷದ ಪದವಿಗೆ ಸೇರಿರುವ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ಕಾಲ ತಿಂಗಳಿಗೆ ₹5 ಸಾವಿರ ಮತ್ತು ವಾರ್ಷಿಕ ಆಕಸ್ಮಿಕ ಅನುದಾನ( contingency) ವಾಗಿ ₹ 20 ಸಾವಿರದಂತೆ ಒಟ್ಟು ಮೂರು ವರ್ಷಗಳಿಗೆ ₹2.40 ಲಕ್ಷ ಫೆಲೊಶಿಪ್ ನೀಡಲಾಗುತ್ತದೆ. ಪಿ.ಜಿ ಸೇರಿರುವ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಕಾಲ ತಿಂಗಳಿಗೆ ₹ 7ಸಾವಿರ ಮತ್ತು ವಾರ್ಷಿಕ ಆಕಸ್ಮಿಕ ಅನುದಾನ (contingency) ₹28 ಸಾವಿರ ಒಟ್ಟು ₹ 2.24ಲಕ್ಷ ನೀಡಲಾಗುತ್ತದೆ.

ಕೋರ್ಸ್‌ ಕುರಿತ ಹೆಚ್ಚಿನ ಮಾಹಿತಿಗೆ www.kvpy.iisc.ernet.in ಜಾಲತಾಣ ನೋಡಬಹುದು.

ಕೆವಿಪಿವೈ ಪ್ರಮುಖಾಂಶಗಳು...

ದೇಶದಾದ್ಯಂತ ಏಕಕಾಲಕ್ಕೆ ನಡೆಯುವ 3 ಗಂಟೆಯ ಪರೀಕ್ಷೆ

ಅರ್ಜಿ ಪ್ರಾರಂಭದ ದಿನಾಂಕ: ಜುಲೈ 2 ಅಥವಾ 3ನೇ ವಾರ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಆಗಸ್ಟ್ 4ನೇ ವಾರ

ಪರೀಕ್ಷಾ ದಿನಾಂಕ: ನವೆಂಬರ್ ಮೊದಲ ವಾರ

ಫಲಿತಾಂಶದ ದಿನಾಂಕ: ಡಿಸೆಂಬರ್ 3ನೇ ವಾರ

ಪರೀಕ್ಷಾ ಶುಲ್ಕ: ಸಾಮಾನ್ಯ / ಒಬಿಸಿಗೆ ₹1250

ಎಸ್‌ಸಿ / ಎಸ್‌ಟಿ / ಅಂಗವಿಕಲರಿಗೆ ₹ 625

2021ರ ಪರೀಕ್ಷೆ ನ.7ಕ್ಕೆ ನಿಗದಿಯಾಗಿತ್ತು. ಕೋವಿಡ್ ಕಾರಣದಿಂದಾಗಿ ಜ.9ಕ್ಕೆ ಮುಂದೂಡಲ್ಪಟ್ಟಿತ್ತು. ಕೆಲವು ರಾಜ್ಯಗಳಲ್ಲಿ ವಾರಾಂತ್ಯದ ಕರ್ಫ್ಯೂ ಇದ್ದುದ್ದರಿಂದ ಪರೀಕ್ಷೆ ಮತ್ತೆ ಮುಂದೂಡಲ್ಪಟ್ಟಿದೆ.

ನಿಬಂಧನೆ / ಅನುಕೂಲಗಳು:

1. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಭಾರತೀಯ ಪ್ರಜೆಯಾಗಿದ್ದು ಎಸ್‌ಎ ಗೆ 16 ವರ್ಷ, ಎಸ್‌ಎಕ್ಸ್‌ಗೆ 17 ವರ್ಷ ಮತ್ತು ಎಸ್‌ಬಿ ವಿಭಾಗಕ್ಕೆ ಸೇರಲು 18 ವರ್ಷ ತುಂಬಿರಬೇಕು.

2. ಪ್ರಥಮ ಪಿಯುಸಿ ಓದುವಾಗ ಎಸ್ಎ ಪರೀಕ್ಷೆ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯು ಹಂತದಲ್ಲಿ ಯಾವುದೇ ಫೆಲೋಶಿಪ್ ಇರುವುದಿಲ್ಲ. ಆ ವರ್ಷದಲ್ಲಿ ವಿದ್ಯಾರ್ಥಿಗಳನ್ನು ಸರ್ಕಾರದ ಖರ್ಚಿನಲ್ಲಿ ದೇಶದ ಆಯ್ದ ಸ್ಥಳದಲ್ಲಿ ನಡೆಯುವ ನ್ಯಾಷನಲ್ ಸೈನ್ಸ್ ಕ್ಯಾಂಪ್‌ಗೆ ಹಾಜರಾಗಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ.

3. ಕಾರಣಾಂತರಗಳಿಂದ ಓದು ನಿಲ್ಲಿಸುವ ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡಲಾಗುವುದಿಲ್ಲ.

4. ಫೆಲೋಶಿಪ್‌ ವಿದ್ಯಾರ್ಥಿಗಳಿಗೆ ವಿಶೇಷ ಗುರುತಿನ ಚೀಟಿ ನೀಡಲಾಗುತ್ತದೆ.ವಿದ್ಯಾರ್ಥಿಗಳು ಇದನ್ನು ಬಳಸಿಕೊಂಡು ದೇಶದ ಪ್ರಸಿದ್ಧ ಪ್ರಯೋಗಾಲಯಗಳು, ವಿವಿಧ ವಿವಿಗಳ ಗ್ರಂಥಾಲಯಗಳನ್ನು ಸಂದರ್ಶಿಸಿ ಅಧ್ಯಯನ ಕೈಗೊಳ್ಳಬಹುದು.

5. ಪ್ರವೇಶ ಪರೀಕ್ಷೆಯನ್ನು ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ತೆಗೆದುಕೊಳ್ಳಬಹುದು. (ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆ ನಡೆಸಬೇಕೆಂಬ ಒತ್ತಾಯ ಕೇಳಿಬಂದಿದ್ದು, ಈ ವಿಚಾರ ನ್ಯಾಯಾಲಯದಲ್ಲಿದೆ)

6. ಕೆವಿಪಿವೈ ಫೆಲೋಶಿಪ್ ಪಡೆಯುವ ವಿದ್ಯಾರ್ಥಿಗಳು ಬೇರೆ ವಿದ್ಯಾರ್ಥಿ ವೇತನಗಳನ್ನು ಪಡೆಯುವಂತಿಲ್ಲ.

7. ಪರೀಕ್ಷಾ ಅರ್ಜಿಯನ್ನು ಪ್ರತಿ ವರ್ಷ ಜುಲೈ ಎರಡನೇ ಭಾನುವಾರ ಕೆವಿಪಿವೈ ವೆಬ್‌ಸೈಟ್‌ನಲ್ಲಿ ಪಡೆಯಬಹುದು.

9. ಪರೀಕ್ಷೆಗೆ ಯಾವುದೇ ನಿಗದಿತ ಪಠ್ಯಕ್ರಮವಿಲ್ಲ. ವಿದ್ಯಾರ್ಥಿ ತಾನು ಕಲಿಯುತ್ತಿರುವ ಓದಿನ ಪಠ್ಯಕ್ರಮ ಅಭ್ಯಸಿಸಿದರೆ ಸಾಕು.

10. ಎಂಜಿನಿಯರಿಂಗ್‌ ಮತ್ತು ಮೆಡಿಕಲ್ ಕೋರ್ಸ್ ಸೇರುವ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಸಿಗುವುದಿಲ್ಲ.

(ಲೇಖಕರು: ಪ್ರಾಚಾರ್ಯರು, ವಿಡಿಯಾ ಪೂರ್ಣ ಪ್ರಜ್ಞ ಪದವಿ ಪೂರ್ವ ಕಾಲೇಜು, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT