ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗಾಗಿ: ಕೇಳಿ, ನೋಡಿ, ಮಾಡಿ, ಓದಿ, ಕಲಿ

Last Updated 28 ನವೆಂಬರ್ 2021, 23:30 IST
ಅಕ್ಷರ ಗಾತ್ರ

ಎಲ್ಲ ಮಕ್ಕಳೂ ಒಂದೇ ರೀತಿಯಲ್ಲಿ ಕಲಿಯುವುದಿಲ್ಲ, ವರ್ತಿಸುವುದಿಲ್ಲ. ಪ್ರತಿ ಮಕ್ಕಳ ದಿನಚರಿಯೂ ಒಂದೇ ತರಹ ಇರುವುದಿಲ್ಲ. ಹಾಗಾಗಿ, ಮಕ್ಕಳ ಕಲಿಕಾ ಸಾಮರ್ಥ್ಯ, ಆಸಕ್ತಿ ಗುರುತಿಸಿ ಅದಕ್ಕೆ ಪೂರಕವಾಗಿ ಅವರನ್ನು ಬೆಳೆಸಬೇಕಿದೆ.

ಸ್ವಲ್ಪ ಆತಂಕದ ನಡುವೆ ಶಾಲೆಗಳು ಆರಂಭವಾಗಿ, ಮುನ್ನಡೆಯುತ್ತಿವೆ. ಸುಮಾರು ಎರಡು ವರ್ಷಗಳ ನಂತರ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಪೋಷಕರು ನಿಟ್ಟುಸಿರು ಬಿಡುವಂತಾಗಿದೆ. ಶಿಕ್ಷಕರ ಹುರುಪು ಮರುಕಳಿಸಿದೆ. ವಿದ್ಯಾರ್ಥಿಗಳು ಆನಂದದಿಂದ ಶಾಲೆಗೆ ಹೊರಟಿದ್ದಾರೆ.

ಮಕ್ಕಳ ಸಹಜ ಕಲಿಕೆಗೆ ಶಾಲೆ ಅತ್ಯವಶ್ಯಕ. ಎರಡು ವರ್ಷಗಳಿಂದ ಅನಿವಾರ್ಯವಾಗಿ ಆನ್‌ಲೈನ್‌ನಲ್ಲಿ ಪಾಠ ಕಲಿಯುತ್ತಿದ್ದ ಮಕ್ಕಳು ಈಗ ಶಾಲೆಯತ್ತ ಹೊರಟಿದ್ದಾರೆ. ಅವರೀಗ ಕೊಠಡಿಯೊಳಗಿನ ಕಲಿಕಾ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಅಣಿಗೊಳಿಸಲು ಪೋಷಕರು ಮೊದಲಿಗಿಂತ ಹೆಚ್ಚು ಆಸಕ್ತಿಯಿಂದ ತೊಡಗಿಕೊಳ್ಳಬೇಕಿದೆ.

ಇತ್ತೀಚೆಗೆ ಲಾಕ್‌ಡೌನ್ ಅವಧಿ ಹಾಗೂ ನಂತರ ಸಮಯದಲ್ಲಿ ಮಕ್ಕಳು ಮನೆಯಲ್ಲಿದ್ದಾಗ, ಪೋಷಕರು ಅವರಲ್ಲಿರುವ ವಿಶಿಷ್ಟ ಗುಣಗಳು ಮತ್ತು ಕಲಿಕೆಯ ರೀತಿಗಳನ್ನು ಗಮನಿಸಲು ಸಾಧ್ಯವಾಗಿದೆ. ಈ ಬಗ್ಗೆ ಬಹಳಷ್ಟು ಪೋಷಕರ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಮಕ್ಕಳಲ್ಲಿರುವ ಈ ವಿಶೇಷ ಗುಣಗಳು ಕೆಲವರಿಗೆ ಅಚ್ಚರಿ ಮೂಡಿಸಿದ್ದರೆ, ಅವರು ವಿಷಯಗಳನ್ನು ಕಲಿಯುವ, ಗ್ರಹಿಸುವ ವಿಧಾನ ಕಂಡು ಬೆರೆಗಾದವರೂ ಇದ್ದಾರೆ. ಇನ್ನೂ ಕೆಲವರಿಗೆ, ‘ನಮ್ಮ ಮಗು ಸುಧಾರಿಸಬೇಕಿದೆ’ ಅಂತ ಎನ್ನಿಸಿರಲೂಬಹುದು. ಏಕೆಂದರೆ, ಎಲ್ಲ ಮಕ್ಕಳೂ ಒಂದೇ ರೀತಿಯಲ್ಲಿ ಕಲಿಯುವುದಿಲ್ಲ, ವರ್ತಿಸುವುದಿಲ್ಲ. ಪ್ರತಿ ಮಕ್ಕಳ ದಿನಚರಿಯೂ ಒಂದೇ ತರಹ ಇರುವುದಿಲ್ಲ. ಹಾಗಾಗಿ, ಮಕ್ಕಳ ಕಲಿಕಾ ಸಾಮರ್ಥ್ಯ, ಆಸಕ್ತಿ ಗುರುತಿಸಿ ಅದಕ್ಕೆ ಪೂರಕವಾಗಿ ಅವರನ್ನು ಬೆಳೆಸಬೇಕಿದೆ.

ಹೀಗೆ ವಿಭಿನ್ನ ರೀತಿಯಲ್ಲಿ ಕಲಿಯುವ ಮಕ್ಕಳನ್ನು ತಜ್ಞರು, ವಿಷುವಲ್ ಲರ್ನರ್‌, ಆಡಿಟರಿ ಲರ್ನರ್, ರೀಡ್‌ - ರೈಟ್‌ ಲರ್ನರ್ಸ್ ಮತ್ತು ಕೈನೆಸ್ಥೆಟಿಕ್‌ ಲರ್ನರ್ಸ್‌ ಎಂದುನಾಲ್ಕು ಗುಂಪುಗಳಾಗಿ ವಿಂಗಡಿಸುತ್ತಾರೆ.

ಅ) ದೃಶ್ಯಗಳ ನೆರವಿಂದ ಕಲಿಕೆ (ವಿಷುಯಲ್‌ ಲರ್ನರ್ಸ್‌): ಕೆಲವು ಮಕ್ಕಳು ದೃಶ್ಯಗಳನ್ನು ನೋಡಿ ಕಲಿಯಲು ಇಷ್ಟಪಡುತ್ತಾರೆ ಮತ್ತು ಸಮರ್ಥವಾಗಿ ಕಲಿಯುತ್ತಾರೆ. ಕಣ್ಮುಚ್ಚಿ ಕುಳಿತು ಕಲಿತಿದ್ದನ್ನು ದೃಶ್ಯೀಕರಿಸಿಕೊಂಡು ಮೆಲುಕು ಹಾಕುತ್ತಾರೆ. ಇಂಥ ಮಕ್ಕಳಿಗೆ ಪೋಷಕರು, ಪಾಠಕ್ಕೆ ಸಂಬಂಧಪಟ್ಟ ವೀಡಿಯೊಗಳನ್ನು ತೋರಿಸುತ್ತಾ ಕಲಿಸಿದರೆ, ಅವರ ಕಲಿಕೆಯ ವೇಗ ಮತ್ತು ಆಸಕ್ತಿ ಹೆಚ್ಚಬಹುದು. ಪಾಠ ಅಥವಾ ಪಾಠದ ಮುಖ್ಯಾಂಶಗಳನ್ನು ಚರ್ಚಿಸುವಾಗ, ಮಕ್ಕಳಿಗೆ ಕಣ್ಣುಮುಚ್ಚಿ ಕುಳಿತು ಕಲಿತ ವಿಷಯಗಳನ್ನು ಮನನ (ದೃಶ್ಯೀಕರಿಸಿಕೊಳ್ಳುವಂತೆ) ಮಾಡಿಕೊಳ್ಳುವಂತೆ ತಿಳಿಸಬೇಕು.

ಆ) ಶ್ರವಣ/ನುಡಿಯಿಂದ ಕಲಿಕೆ (ಆಡಿಟರಿ ಲರ್ನರ್ಸ್‌): ಮಕ್ಕಳು ಕೇಳಿಸಿಕೊಳ್ಳುವುದರಿಂದ ಹಾಗೂ ಬೇರೆಯವರೊಂದಿಗೆ ಮಾತನಾಡಿ ಪಾಠವನ್ನು ಅಥವಾ ಪಾಠದ ಮುಖ್ಯಾಂಶವನ್ನು ಹಂಚಿಕೊಳ್ಳುವ ಮುಖಾಂತರ ಕಲಿಯುತ್ತಾರೆ. ಈ ರೀತಿಯ ಮಕ್ಕಳಿಗೆ ಓದಿದ ಪಾಠವನ್ನು ನಿಮ್ಮ ಜೊತೆ ಚರ್ಚಿಸುವಂತೆ ಹೇಳಿ ಅಥವಾ ಅವರು ನಿಮಗೆ ಕಲಿಸುವಂತೆ ಉತ್ತೇಜಿಸಿ. ಬೇಕಿದ್ದರೆ ಓದಿದ ಪಾಠವನ್ನು ರೆಕಾರ್ಡ್‌ ಮಾಡಿಕೊಂಡು ಮತ್ತೆ ಅದೇ ಪಾಠವನ್ನು ಕೇಳಿಸಿಕೊಳ್ಳುವಂತೆ ಹೇಳಿ.

ಇ) ಓದು/ಬರವಣಿಗೆಯಿಂದ ಕಲಿಕೆ (ರೀಡ್‌ - ರೈಟ್‌ ಲರ್ನರ್ಸ್): ಕೆಲವು ಮಕ್ಕಳು ಓದಿದ ಪಾಠವನ್ನು ಬರೆಯುವ ಮುಖಾಂತರ ಚೆನ್ನಾಗಿ ಕಲಿಯುತ್ತಾರೆ. ಬರವಣಿಗೆ, ಚಿತ್ರಕಲೆ ಮತ್ತಿತರ ಚಟುವಟಿಕೆಗಳನ್ನೊಳಗೊಂಡ ಪ್ರಾಜೆಕ್ಟ್‌ ಕೆಲಸಗಳಲ್ಲಿ ಹೆಚ್ಚು ಆಸಕ್ತಿಯನ್ನು ವಹಿಸುತ್ತಾರೆ. ಈ ಪ್ರಾಜೆಕ್ಟ್‌ ವರ್ಕ್‌ಗಳನ್ನು ಮಾಡುವಾಗ ಅತ್ಯಂತ ಆಸಕ್ತಿಯಿಂದ ಕಲಿಯುತ್ತಾರೆ. ಇಂಥ ಮಕ್ಕಳಿಗೆ ಹೆಚ್ಚು ಹೆಚ್ಚು ಬರೆದು ಅಭ್ಯಾಸ ಮಾಡುವಂತೆ ತಿಳಿಸಿ.

ಈ) ಚಟುವಟಿಕೆಗಳ ಮುಖಾಂತರ ಕಲಿಕೆ (ಕೈನೆಸ್ಥೆಟಿಕ್‌ ಲರ್ನರ್ಸ್‌): ಈ ರೀತಿಯ ಮಕ್ಕಳು ಚಟುವಟಿಕೆಗಳ ಮುಖಾಂತರ ಕಲಿಯಲು ಇಷ್ಟಪಡುತ್ತಾರೆ. ಕ್ರೀಡೆಗಳಲ್ಲಿ
ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಮನೆಯಲ್ಲಿ ಓದುವಾಗಲೂ ಇವರು ಒಂದುಕಡೆ ಕುಳಿತು ಓದುವುದಿಲ್ಲ. ಓಡಾಡಿಕೊಂಡು ಓದಲು ಇಷ್ಟಪಡುತ್ತಾರೆ. ಇಂಥವರಿಗೆ ಹೆಚ್ಚು ಚಟುವಟಿಕೆಗಳನ್ನು ಕೊಡಿ.

ಹೀಗೆ ಒಮ್ಮೆ, ಮಕ್ಕಳು ಕಲಿಯುವ ರೀತಿಯನ್ನು ಅರಿತರೆ, ಮನೆಯಲ್ಲಿ ಅದಕ್ಕೆ ಪೂರಕವಾದ ವಾತಾವರಣವನ್ನು ಪೋಷಕರು ಕಲ್ಪಿಸಿಕೊಡಬಹುದು ಹಾಗೂ ಅವರಲ್ಲಿ ಕಲಿಕೆಯ ಬಗ್ಗೆ ಆಸಕ್ತಿಯನ್ನು ಮೂಡಿಸಬಹುದು. ಈ ಲೇಖನದಲ್ಲಿ ತಿಳಿಸಿರುವ ಅಂಶಗಳು ಉದಾಹರಣೆಗಾಗಿ ಮಾತ್ರ. ಓದುಗರು, ನಿಮ್ಮ ನಿಮ್ಮ ಮಕ್ಕಳ ಬಗ್ಗೆ ಶಿಕ್ಷಕರಲ್ಲಿ ಕೇಳಿ ತಿಳಿದುಕೊಂಡು, ತಜ್ಞರೊಂದಿಗೆ ಚರ್ಚಿಸಿ ಮುಂದುವರಿಯಿರಿ.

(ಮುಂದಿನ ವಾರ: ಮಕ್ಕಳಿಗೆ ಪೂರಕವಾತಾವರಣ
ಕಲ್ಪಿಸುವುದರ ಜೊತೆಗೆ, ಕಲಿಯುವ ಆಸಕ್ತಿ ಹೆಚ್ಚಿಸಲು ಪೋಷಕರು
ಏನು ಮಾಡಬಹುದು ಎನ್ನುವುದರ ಬಗ್ಗೆ ತಿಳಿಯೋಣ).

(ಲೇಖಕರು: ನಿರ್ದೇಶಕರು,
ಸ್ಮಾರ್ಟ್‌ ಸೆರಬ್ರಮ್‌ ಪ್ರೈವೇಟ್‌ ಲಿಮಿಟೆಡ್‌, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT