ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ಪ್ರೌಢಿಮೆ ಪರೀಕ್ಷಿಸುವ ‘ಪತ್ರಿಕೆ’ಗಳು

ಸಿವಿಲ್ ಸರ್ವೀಸಸ್ ಪ್ರಾಥಮಿಕ ಪಾಠ –9
Last Updated 18 ಮೇ 2022, 19:30 IST
ಅಕ್ಷರ ಗಾತ್ರ

ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಮುಖ್ಯ ಪರೀಕ್ಷೆಯ ಅವಿಭಾಜ್ಯ ಅಂಗಗಳಾದ ಪೇಪರ್ ಎ (ಕಡ್ಡಾಯ ಭಾರತೀಯ ಭಾಷೆ) ಮತ್ತು ಪೇಪರ್ ಬಿ (ಇಂಗ್ಲಿಷ್)ಗಳ ಅಂಕಗಳು ಅಭ್ಯರ್ಥಿಯ ಒಟ್ಟು ರ‍್ಯಾಂಕ್ ನಿರ್ಧರಿಸುವುದರಲ್ಲಿ ನಿರ್ಣಾಯಕ ಪಾತ್ರ ವಹಿಸುವುದಿಲ್ಲ. ಆದರೆ ಅಭ್ಯರ್ಥಿಗಳ ಭಾಷಾ ಕಲಿಕೆ, ಅರ್ಥ ವಿಶ್ಲೇಷಣೆ, ಅನುವಾದ, ಕಿರು ಬರಹ ರಚನೆಯ ಸಾಮರ್ಥ್ಯವನ್ನು ಅಳೆಯತ್ತವೆ. ಮುಂದಿನ ಹಂತಕ್ಕೆ ಅರ್ಹತೆ ಗಳಿಸಲು ಮುನ್ನೂರು ಅಂಕಗಳ ಎರಡು ಪತ್ರಿಕೆಗಳಲ್ಲಿ ಶೇ 25ರಷ್ಟು ಅಂದರೆ 75 ಅಂಕಗಳನ್ನು ಗಳಿಸಲೇಬೇಕು. ಇಲ್ಲದಿದ್ದಲ್ಲಿ ಉಳಿದ ಏಳು ಪತ್ರಿಕೆಗಳಲ್ಲಿ ಎಷ್ಟೇ ಹೆಚ್ಚು ಅಂಕ ಬಂದಿದ್ದರೂ ಯುಪಿಎಸ್‌ಸಿಯು ಅಭ್ಯರ್ಥಿಗಳಿಗೆ ಅದನ್ನು ತಿಳಿಸುವುದಿಲ್ಲ. ಮೂರುಗಂಟೆಗಳ ಅವಧಿಯಲ್ಲಿ ಪ್ರಶ್ನೆಪತ್ರಿಕೆಗೆ ಉತ್ತರ ಬರೆಯಬೇಕು. ಸಾಮಾನ್ಯ ಅಧ್ಯಯನ ಮತ್ತು ಐಚ್ಛಿಕ ವಿಷಯಗಳ ಬಗ್ಗೆ ಹೆಚ್ಚು ತಯಾರಿ ನಡೆಸುವ ಅಭ್ಯರ್ಥಿಗಳು ಈ ಎರಡು ಪತ್ರಿಕೆಗಳನ್ನು ನಿರ್ಲಕ್ಷಿಸುವುದು ಪ್ರತಿ ವರ್ಷದ ಪರೀಕ್ಷೆಯಲ್ಲಿ ಕಂಡು ಬಂದಿದೆ. ಕಳೆದ ವರ್ಷ ಶೇ 10ರಷ್ಟು ವಿದ್ಯಾರ್ಥಿಗಳು ಈ ಎರಡೂ ಪತ್ರಿಕೆಗಳಲ್ಲಿ ಅರ್ಹತೆಗೆ ಬೇಕಾದಷ್ಟು ಅಂಕ ಗಳಿಸಿರಲಿಲ್ಲ!

‘ಪತ್ರಿಕೆ ಎ’ -ಪ್ರಶ್ನೆಗಳ ಸ್ವರೂಪ

ಪ್ರಶ್ನೆಪತ್ರಿಕೆಯಲ್ಲಿ ನೂರು ಅಂಕಗಳ ಒಂದು ಕಿರು ಪ್ರಬಂಧ, 60 ಅಂಕಗಳ ರೀಡಿಂಗ್ ಕಾಂಪ್ರೆಹೆನ್ಷನ್‌ (ಓದಿನ ಗ್ರಹಿಕೆ), 60 ಅಂಕಗಳ ಪ್ರಿಸೀಸ್ (ಸಾರಾಂಶ) ರೈಟಿಂಗ್ 40 ಅಂಕಗಳ ಭಾಷಾನುವಾದ, 40 ಅಂಕಗಳ ವ್ಯಾಕರಣ ಪದಸಂಪತ್ತು ಮತ್ತು ಬಳಕೆಯ ಕುರಿತು ಪ್ರಶ್ನೆಗಳಿರುತ್ತವೆ. ಪ್ರಶ್ನೆಗಳು 10 ರಿಂದ 12ನೆಯ ತರಗತಿಯ ಮಟ್ಟದಲ್ಲಿರುತ್ತವೆ. ನೀವು ಶಾಲೆಯಲ್ಲಿ ಕಲಿತ ಪ್ರಥಮ ಭಾಷೆಯನ್ನೇ ಆಯ್ಕೆ ಮಾಡಿಕೊಂಡರೆ ಎದುರಿಸುವುದು ಸುಲಭ. ಇದು ನೀವೇ ಆಯ್ಕೆ ಮಾಡಿಕೊಂಡ ಭಾಷೆಯ ಪತ್ರಿಕೆಯಾದ್ದರಿಂದ ಸಹಜವಾಗಿಯೇ ನೀವು ಆತ್ಮವಿಶ್ವಾಸದಿಂದಿರುತ್ತೀರಿ. ಆದರೆ ಹೈಸ್ಕೂಲು ಶಿಕ್ಷಣದ ನಂತರ ಭಾಷೆಯ ವ್ಯಾಕರಣ, ಪದ ಸಂಪತ್ತು, ವಿಶೇಷ ವಾಕ್ಯರಚನೆಯ ಪರಿಣತಿಗಳೆಲ್ಲ ಮಸುಕಾಗಿರುತ್ತವೆ. ಪರೀಕ್ಷೆಗಾಗಿ ನಾವಾಡುವ ಭಾಷೆಯನ್ನೇ ಆಯ್ಕೆ ಮಾಡಿಕೊಂಡಾಗ ಅದರ ಬಗೆಗಿನ ಮುಖ್ಯ ಪುಸ್ತಕಗಳನ್ನು ಪುನಃ ಓದುವುದು ಅನಿವಾರ್ಯ. ಹಾಗೆಯೇ, ಪರೀಕ್ಷೆಗೆ ತಯಾರಾಗಲು ಬರೆಯುವುದನ್ನೂ ರೂಢಿಸಿಕೊಳ್ಳಿ. ಕಾಗುಣಿತಗಳಲ್ಲಿ(ಸ್ಪೆಲ್ಲಿಂಗ್) ತಪ್ಪುಗಳಾಗಬಾರದು. ಬರವಣಿಗೆ ಸರಳವಾಗಿದ್ದರೂ ಸ್ಫುಟವಾಗಿ ಮತ್ತು ವ್ಯಾಕರಣಬದ್ಧವಾಗಿರಲಿ. ಇಷ್ಟದ ಭಾಷೆಯಾದರೆ ಸಾಲದು, ಅದರ ಬಳಕೆ, ಬರವಣಿಗೆಯಲ್ಲಿ ಪ್ರಭುತ್ವವಿರಬೇಕು.

ವಿಷಯಾಂತರವಾಗದಿರಲಿ ಭಾಷಾಂತರ

ಭಾಷಾಂತರದ ಪ್ರಶ್ನೆಗಳಲ್ಲಿ ನೀವು ಆಯ್ಕೆ ಮಾಡಿಕೊಂಡ ಭಾಷೆಯಿಂದ ಇಂಗ್ಲಿಷ್‌ಗೆ, ಇಂಗ್ಲಿಷ್‌ನಿಂದ ನಿಮ್ಮ ಆಯ್ಕೆಯ ಭಾಷೆಗೆ ಭಾಷಾಂತರಿಸಬೇಕಾಗುತ್ತದೆ. ಪದ - ಪದದ ಯಥಾವತ್ ಭಾಷಾಂತರ ಮಾಡಬಾರದು. ಕೊಟ್ಟಿರುವ ಪ್ಯಾಸೇಜ್‌ನ ಅರ್ಥ ವ್ಯತ್ಯಾಸವಾಗದಂತೆ ಮತ್ತು ಯಾವ ಮುಖ್ಯ ವಿಷಯವನ್ನೂ ಬಿಡದೆ ಭಾಷಾಂತರಿಸಿ. ಪ್ರಶ್ನೆಪತ್ರಿಕೆಯಲ್ಲಿ ತಲಾ 20 ಅಂಕಗಳ ಎರಡು ಪ್ರಶ್ನೆಗಳಿರುತ್ತವೆ. ಪರಿಣಾಮಕಾರಿಯಾಗಿ ಉತ್ತರಿಸಲು ದಿನಪತ್ರಿಕೆಗಳ ಸಂಪಾದಕೀಯ ವಿಭಾಗದ ಲೇಖನಗಳನ್ನು ತಪ್ಪದೆ ಓದಿ ಅನುವಾದಿಸುವುದನ್ನು ಕಲಿಯಿರಿ. ಪ್ರಶ್ನೆಗಳ ಪದಗಳ ನಾನಾರ್ಥ, ವಿರುದ್ಧಾರ್ಥ, ಒಳಾರ್ಥ, ಸಂದರ್ಭಾರ್ಥ ಗ್ರಹಿಸಲು ನಿಘಂಟು ಮತ್ತು ಚಿತ್ರಾಧಾರಿತ ಶಬ್ದ ಕೋಶಗಳನ್ನು ಓದಿರಿ.

ಕಡ್ಡಾಯ ಇಂಗ್ಲಿಷ್ ಪೇಪರ್ ‘ಬಿ’ ಗೆ ತಯಾರಿ

ಅಭ್ಯರ್ಥಿಯ ಇಂಗ್ಲಿಷ್ ಭಾಷೆಯ ಓದು ಮತ್ತು ಅರ್ಥ ವಿಶ್ಲೇಷಣೆಯ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತದೆ ಈ ಪತ್ರಿಕೆ. ಅಭ್ಯರ್ಥಿಯು ಯಾವುದಾದರೂ ವಿಷಯದ ಕುರಿತು ತನ್ನ ಅಭಿಪ್ರಾಯವನ್ನು ಎಷ್ಟು ಸಮರ್ಥವಾಗಿ ಬರವಣಿಗೆಯ ಮೂಲಕ ವ್ಯಕ್ತಪಡಿಸಲು ಸಾಧ್ಯ ಎಂಬುದನ್ನು ಪರೀಕ್ಷಿಸುತ್ತದೆ. 300 ಅಂಕಗಳ ಪತ್ರಿಕೆಯನ್ನು 3 ಗಂಟೆಗಳ ಅವಧಿಯಲ್ಲಿ ಉತ್ತರಿಸಿ ಕನಿಷ್ಠ 75 ಅಂಕಗಳಿಸಲೇಬೇಕು. ಪತ್ರಿಕೆಯಲ್ಲಿ 100 ಅಂಕಗಳ ಒಂದು ಪ್ರಬಂಧ, 75 ಅಂಕಗಳ ರೀಡಿಂಗ್ ಕಾಂಪ್ರೆಹೆನ್ಶನ್, 75 ಅಂಕಗಳ ಸಾರಾಂಶ ಬರಹ ಮತ್ತು 50 ಅಂಕಗಳ ವ್ಯಾಕರಣದ ಪ್ರಶ್ನೆಗಳಿರುತ್ತವೆ. ಇಲ್ಲಿ ನಾಲ್ಕು ವಿಷಯಗಳನ್ನು ನೀಡಿರುತ್ತಾರೆ.100 ಅಂಕದ ಪ್ರಬಂಧ ಬರೆಯಲು ಸಾಕಷ್ಟು ತಯಾರಿ ಬೇಕಾಗುತ್ತದೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪ್ರಬಂಧಕ್ಕಾಗಿಯೇ 250 ಅಂಕಗಳ ಪ್ರತ್ಯೇಕ ಪತ್ರಿಕೆ ಇದೆ. ಅದಕ್ಕೆ ಮಾಡಿಕೊಂಡ ತಯಾರಿ ಇಲ್ಲೂ ಉಪಯೋಗಕ್ಕೆ ಬರುತ್ತದೆ. ಅಲ್ಲಿ 125 ಅಂಕಗಳ ಪ್ರಬಂಧವನ್ನು 1000- 1200 ಪದಗಳಲ್ಲಿ ಬರೆದರೆ ಇಲ್ಲಿನ ಪ್ರಬಂಧವನ್ನು 600 ಪದಗಳ ಮಿತಿಯಲ್ಲಿ ಬರೆಯಬೇಕು.

ಗ್ರಹಿಕೆಗೆ ಗ್ರಹಣ ಹಿಡಿಯದಿರಲಿ

ರೀಡಿಂಗ್ ಕಾಂಪ್ರೆಹೆನ್ಶನ್ (ಓದಿನ ಗ್ರಹಿಕೆ)ನಲ್ಲಿ 15 ಅಂಕಗಳ ಐದು ಪ್ರಶ್ನೆಗಳಿರುತ್ತವೆ. ಕೊಟ್ಟಿರುವ ಆಯ್ದ ಭಾಗವನ್ನು ಸರಿಯಾಗಿ ಅರ್ಥಮಾಡಿಕೊಂಡು ಪ್ರಶ್ನೆಗಳಿಗೆ ತಕ್ಕುದಾದ ಉತ್ತರಗಳನ್ನು ನಿಮ್ಮ ವಾಕ್ಯಗಳಲ್ಲೇ ಬರೆಯಬೇಕು. ಪ್ಯಾಸೇಜ್‌ನಲ್ಲಿರುವ ವಾಕ್ಯಗಳನ್ನು ತೆಗೆದುಕೊಂಡು ಉತ್ತರ ಬರೆಯಬಾರದು. ಹಾಗೇನಾದರೂ ಮಾಡಿದರೆ ನಿಮಗೆ ಸಿಗುವ ಅಂಕಗಳು ತೀರಾ ಕಡಿಮೆಯಾಗುತ್ತವೆ. ಪ್ಯಾಸೇಜ್‌ನ ಉತ್ತರಗಳನ್ನು ಸ್ಪಷ್ಟವಾಗಿ, ಸರಿಯಾಗಿ ಮತ್ತು ಸಂಕ್ಷಿಪ್ತವಾಗಿ ಬರೆಯಬೇಕೆಂಬ ಸೂಚನೆ ಪತ್ರಿಕೆಯಲ್ಲೇ ಇರುತ್ತದೆ. ಅದನ್ನು ಅನುಸರಿಸಿರಿ.

ಸಾರ ಕೆಡಿಸದ ಸಾರಾಂಶ

ಪ್ರೀಸೀಸ್ ರೈಟಿಂಗ್ ಎಂದರೆ ಕೊಟ್ಟ ಲೇಖನದ ಸಾರಾಂಶ ಬರೆಯುವುದು ಅಥವಾ ಸಂಕ್ಷಿಪ್ತ ರೂಪ ಬರೆಯುವುದು. ನೀವು ಬರೆಯುವ ಸಾರಾಂಶ ಪ್ರಶ್ನೆಪತ್ರಿಕೆಯಲ್ಲಿ ಸಾರಾಂಶ ಬರಹಕ್ಕಾಗಿ ನೀಡಿರುವ ಭಾಗದ ಮೂರನೆಯ ಒಂದು ಭಾಗದಷ್ಟಿರಬೇಕು. ಅದಕ್ಕೆ ಯಾವುದೇ ಶೀರ್ಷಿಕೆ ಬೇಡ. ಉತ್ತರ ನಿಮ್ಮ ಸ್ವಂತ ವಾಕ್ಯಗಳಲ್ಲಿರಲಿ. ಬರಹದ ಭಾಗದಲ್ಲಿನ ಮುಖ್ಯ ಪದ, ಸಂಗತಿಗಳು ನಿಮ್ಮ ಉತ್ತರದ ಪ್ರಮುಖ ಭಾಗವಾಗಿರಲಿ.

ವ್ಯಾಕರಣಕ್ಕೆ ಕಠಿಣ ಅಭ್ಯಾಸ ಅಗತ್ಯ

ಪ್ರಶ್ನೆಪತ್ರಿಕೆಯ ಕೊನೆಯಲ್ಲಿ 50 ಅಂಕಗಳಿಗೆ ಸಮನಾಗಿ ವ್ಯಾಕರಣದ ಎರಡು ಮುಖ್ಯ ಪ್ರಶ್ನೆಗಳಿದ್ದು ಅವುಗಳಲ್ಲಿ ಒಟ್ಟು ಎಂಟು ವಿವಿಧ ಪ್ರಶ್ನೆಗಳಿರುತ್ತವೆ. ತಪ್ಪಿರುವ ವಾಕ್ಯಗಳನ್ನು ಸರಿಪಡಿಸಿ, ಬಿಟ್ಟ ಸ್ಥಳ ತುಂಬಿರಿ, ಸರಿಯಾದ ಕ್ರಿಯಾಪದ ಬಳಸಿರಿ, ವಿರುದ್ಧಾರ್ಥಕ ಪದ ಬರೆಯಿರಿ, ವಾಕ್ಯಗಳನ್ನು ಅರ್ಥ ಕೆಡದಂತೆ ನೇರದಿಂದ ಪರೋಕ್ಷಕ್ಕೆ, ಪರೋಕ್ಷದಿಂದ ನೇರಕ್ಕೆ ಬದಲಾಯಿಸುವುದು, ಪದಗಳಿಂದ ವಾಕ್ಯ ರಚನೆ, ವಾಕ್ಯಗಳಲ್ಲಿ ನಾಣ್ಣುಡಿಗಳ ಬಳಕೆಗೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. ಅಭ್ಯರ್ಥಿಗಳು ಇಂಗ್ಲಿಷ್ ಮಾಧ್ಯಮದಲ್ಲೇ ಓದಿದ್ದರೆ ಈ ಪತ್ರಿಕೆಯಲ್ಲಿ ಅಂಕಗಳಿಕೆ ಸುಲಭ. ಆದರೆ ಅರ್ಹತೆಗೆ ಬೇಕಾದ 75 ಅಂಕಗಳ ಸುಲಭ ಗಳಿಕೆಗೆ ವ್ಯಾಕರಣದ ಪುಸ್ತಕಗಳನ್ನು ಓದಲೇಬೇಕು. ವ್ಯಾಕರಣದಲ್ಲಿ ಪ್ರಭುತ್ವವಿರುವವರು ಭಾಷೆಯ ಬಳಕೆಯಲ್ಲೂ ಪ್ರಭುತ್ವ ಪಡೆದಿರುತ್ತಾರೆ ಎಂಬುದು ನೆನಪಿರಲಿ.

ರೆನ್ ಅಂಡ್ ಮಾರ್ಟಿನ್ ಪುಸ್ತಕ ಮತ್ತು ಎಸ್.ಪಿ.ಬಕ್ಷಿ ಬರೆದ ಆಬ್ಜೆಕ್ಟಿವ್ ಜನರಲ್ ಇಂಗ್ಲಿಷ್ ಪುಸ್ತಕಗಳು ಉತ್ತಮ ಎಂಬುದು ಐಎಎಸ್ ಪಾಸಾದ ಹಲವರ ಅಭಿಮತ. ಜೊತೆಗೆ ಇಂಗ್ಲಿಷ್ ದಿನ ಪತ್ರಿಕೆಗಳ ಓದು ಮತ್ತು ಅವುಗಳಲ್ಲಿ ಪ್ರಕಟಗೊಳ್ಳುವ ‘ಮೈಂಡ್‌ ಯುವರ್ ಲಾಂಗ್ವೇಜ್, ಗೆಟ್ ಯುವರ್ ಗ್ರಾಮರ್ ಕರೆಕ್ಟ್’ ಎಂಬ ಲೇಖನ ತಪ್ಪದೇ ಓದಬೇಕು.

ಭಾಷೆ ಆಯ್ಕೆ

ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿ 22 ಭಾಷೆಗಳನ್ನು ಪಟ್ಟಿ ಮಾಡಲಾಗಿದೆ. ಪೇಪರ್ ಎ ನಲ್ಲಿ ನಿಮಗೆ ಅನುಕೂಲವಾದ ಯಾವುದಾದರೊಂದು ಭಾಷೆಯನ್ನು ಆಯ್ದುಕೊಂಡು ಉತ್ತರಿಸಬೇಕು.

ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ರಾಜ್ಯಗಳ ಅಭ್ಯರ್ಥಿಗಳಿಗೆ ಪೇಪರ್ ಎ ಕಡ್ಡಾಯವಲ್ಲ.

‘ಸಂಥಲಿ’ ಭಾಷೆಯ ಪ್ರಶ್ನೆಪತ್ರಿಕೆ ದೇವನಾಗರಿ ಲಿಪಿಯಲ್ಲಿರುತ್ತದೆ.ಉತ್ತರಗಳನ್ನು ದೇವನಾಗರಿ ಇಲ್ಲವೆ ಓಲ್ಚಿಕಿ (Olchiki)
ಭಾಷೆಯಲ್ಲಿ ಬರೆಯಬಹುದು.

(ಮುಂದಿನ ವಾರ ಪಾಠ 10 : ಐಚ್ಚಿಕ ವಿಷಯಗಳ ಆಯ್ಕೆ ಹೇಗೆ?)‌‌‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT