ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕರ ನಂಬಿಕೆಯೇ ಮಕ್ಕಳ ಆತ್ಮವಿಶ್ವಾಸ: ವಿಶೇಷ ಲೇಖನ

Last Updated 27 ಮಾರ್ಚ್ 2023, 0:22 IST
ಅಕ್ಷರ ಗಾತ್ರ

ಕೆಲವು ದಿನಗಳ ಹಿಂದೆ ಎಜುಕೇಷನ್ ಆ್ಯಪ್‌ ಒಂದರಿಂದ ಕರೆ ಬಂತು. ‘ಇತ್ತೀಚೆಗೆ ನಡೆಸಿದ ಪರೀಕ್ಷೆಯಲ್ಲಿ ನಿಮ್ಮ ಮಗಳು ಉತ್ತಮ ನಿರ್ವಹಣೆ ತೋರಿದ್ದಾಳೆ. ನಮ್ಮಲ್ಲಿಂದ ಒದಗುವ ತರಗತಿಗಳಿಗೆ ಹಾಜರಾಗುವುದಕ್ಕೆ ಶೇ 80ರಷ್ಟು ರಿಯಾಯಿತಿ ಇದೆ ನಿಮಗೆ. ಇದಕ್ಕೆ ಸಂಬಂಧಿಸಿದಂತೆ ಪೂರ್ಣ ವಿವರ ಕೊಡುತ್ತೇವೆ, ನೀವೊಂದು ಕೌನ್ಸೆಲಿಂಗ್ ಸೆಷನ್‌ನಲ್ಲಿ ಭಾಗವಹಿಸಬೇಕು’ ಇತ್ಯಾದಿ ಮಾತನಾಡಿದರು. ಮಗಳಿಗೂ ಕುತೂಹಲ ಇದ್ದುದರಿಂದ ಸಂಜೆಯ ಹೊತ್ತಿಗೆ ಅವರು ಕಳುಹಿಸಿದ ಲಿಂಕ್ ಒತ್ತಿ ಮೀಟಿಂಗ್‌ನಲ್ಲಿ ಭಾಗವಹಿಸಿದ್ದಾಯಿತು. ಪಠ್ಯಕ್ಕೆ ಸಂಬಂಧಿಸಿದಂತೆ ತನಗೆ ಸ್ವಲ್ಪಮಟ್ಟಿಗೆ ಗಣಿತ ಮತ್ತು ರಸಾಯನ ಶಾಸ್ತ್ರ ಕಠಿಣ ಎಂದಳು. ‘ಸರಿ, ನಿನಗೊಂದು ಸಣ್ಣ ಪರೀಕ್ಷೆ ಕೊಡುತ್ತೇವೆ, ಹತ್ತು ಪ್ರಶ್ನೆಗಳಿಗೆ ಉತ್ತರಿಸಿದರೆ ಆಯ್ತು’ ಎಂದರು ಇವಳಲ್ಲಿ ಮಾತನಾಡುತ್ತಿದ್ದವರು.

ಗಣಿತ ಪರೀಕ್ಷೆ! ಮೊದಲ ಪ್ರಶ್ನೆಯೇ ಇವಳ ಪಠ್ಯಕ್ರಮಕ್ಕೆ ಮೀರಿದ್ದಾಗಿತ್ತು. ತಾನು ಓದುತ್ತಿರುವುದು ಸ್ಟೇಟ್ ಸಿಲೆಬಸ್ ಎಂದರೆ ಅವರು ‘ಇದು ಸ್ಟೇಟ್ ಸಿಲೆಬಸ್‌ನ ಮೇಲೆ ಇರುವ ಪ್ರಶ್ನೆಗಳೇ’ ಎಂದು ಸಮರ್ಥಿಸಿಕೊಂಡರು. ಹತ್ತು ಪ್ರಶ್ನೆಗಳಲ್ಲಿ ನನ್ನ ಮಗಳು ನಾಲ್ಕು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದಳು. ಅವಳ ಮುಖದಲ್ಲಿ ಗೊಂದಲ, ದುಃಖ, ಆತಂಕ ಎದ್ದು ಕಾಣುವುದಕ್ಕೆ ತೊಡಗಿತು. ಮೀಟಿಂಗ್‌ನಿಂದ ಹೊರಬಂದು ಬಿಡು, ಎಂದರೆ ಅವಳು ಕೇಳಲೊಲ್ಲಳು. ‘ಅವರೇನಾದರೂ ಅಂದುಕೊಂಡರೆ’ ಎಂಬ ಚಿಂತೆ ಅವಳದು. ಹೀಗೇ ಮುಂದುವರಿಯಿತು. ಇಷ್ಟಾದ ಮೇಲೆ ‘ನಿಮ್ಮಮ್ಮನನ್ನು ಕರಿ, ಮಾತಾಡಬೇಕು’ ಅಂದವರು ‘ನೋಡಿದ್ರಾ ಮೇಡಂ, ಮಗಳು ಓದ್ತಿದ್ದಾಳೆ ಅಂತ ನೀವಂದುಕೊಂಡಿದ್ದೀರಿ. ಒಳ್ಳೆಯ ಶಾಲೆ ಅಂದುಕೊಂಡಿದ್ದೀರಿ. ಅವಳಿಗೆ ಏನೂ ಬರಲ್ಲ, ಬೇಸಿಕ್ಸೇ ಗೊತ್ತಿಲ್ಲ, ನೋಡಿ ಅವಳ ನಿರ್ವಹಣೆ ‘ಬಿಲೋ ಆವರೇಜ್’ ಇದೆ. ಅವಳಿಗೆ ನಿಜಕ್ಕೂ ಟ್ಯೂಷನ್ ಬೇಕು, ನಮ್ಮ ಪ್ಲಾನ್ಸ್ ಬಗ್ಗೆ ಹೇಳ್ತೀವಿ’ ಎಂದು ಮೊದಲುಗೊಂಡರು. ನಮಗೆ ಆಸಕ್ತಿಯಿಲ್ಲ ಎಂದು ಮೀಟಿಂಗ್ ಕೊನೆಗೊಳಿಸಿದೆ.

ಇಂಥ ಸಂದರ್ಭಗಳು ಎದುರಾದಾಗ ಪೋಷಕರಿಗೆ ತಮ್ಮ ಮಕ್ಕಳ ಪರೀಕ್ಷಾ ಸಿದ್ಧತೆಯ ಬಗ್ಗೆ ಅನುಮಾನ ಮೂಡುವುದು ಸಹಜ. ಮಕ್ಕಳ ಮೇಲೆ ಎಗರಾಡಿ, ಕೂಗಾಡಿ ಹೊಡೆದು ಬಡಿದು ಮಾಡುವವರೂ ಇಲ್ಲದಿಲ್ಲ. ಒಂದೆಡೆ ಓಡುತ್ತಿರುವ ತಂತ್ರಜ್ಞಾನದ ಪ್ರಗತಿ, ಅದರೊಂದಿಗೆ ಓಡಲೇಬೇಕಾದ ನಮ್ಮ ಅನಿವಾರ್ಯತೆ ಬದುಕನ್ನು ಹಿಂಡಿಹಿಪ್ಪೆ ಮಾಡುವ ಪ್ರಯತ್ನದಲ್ಲಿದೆ. ಇನ್ನೂ ನಾಲ್ಕು ವರ್ಷ ಕಳೆದ ಮೇಲೆ ಸಿಗಬೇಕಾದುದನ್ನು ಇಂದೇ ಪಡೆಯಬೇಕೆಂಬ ಹಠ ಹೆತ್ತವರಿಗೂ; ಅದೇ ಒತ್ತಡ ಮಕ್ಕಳಿಗೂ. ಇತ್ತ ಬಾಲ್ಯದ ಸಂಭ್ರಮವೇ ಇಲ್ಲದಂತೆ, ಬದುಕನ್ನು ಅರಳಿಸಿಕೊಳ್ಳುವುದಕ್ಕೆ ಬೇಕಾದ ಸಮಯವನ್ನೇ ಕೊಡದಂತೆ ಬಾಳುವ ಹಂತಕ್ಕೆ ಬಂದುನಿಂತಿದ್ದೇವೆ. ಪ್ರೆಶರ್‌ಕುಕ್ಕರ್ ನಮ್ಮ ಬದುಕಿನ ಬಿಂಬವಾಗಿದೆ. ತೆರೆದ ಪಾತ್ರೆಯಲ್ಲಿ ಅನ್ನ ಬೇಯಿಸುವ ಕಾಲಕ್ಕೆ ಮನುಷ್ಯರಿಗೂ ತಾಳ್ಮೆಯಿತ್ತು, ಈಗ ಸಮಯವನ್ನು ಬಂಧಿಸುವ ಯತ್ನ ಮಾಡುತ್ತಲೇ ಮಕ್ಕಳನ್ನೂ ಅರೆಬೆಂದ ಕಾಳುಗಳನ್ನಾಗಿ ಮಾಡುವ ವ್ಯವಸ್ಥೆಯೊಳಗೆ ಹೆಣಗಾಡುತ್ತಿದ್ದೇವೆ.

ಪೋಷಕರಾಗಿ ನಾವು ಏನು ಮಾಡಬಹುದು?

l ತಾಳ್ಮೆಯಿಂದ ವರ್ತಿಸುವುದು ಅತ್ಯಗತ್ಯ. ನಮ್ಮ ಸಿಟ್ಟು ಮಕ್ಕಳನ್ನು ಮತ್ತಷ್ಟು ಕುಗ್ಗಿಸೀತು ಎಂಬ ಎಚ್ಚರವಿರಲಿ.

l ನಮ್ಮ ಮಕ್ಕಳ ಓದಿನ ಸಾಮರ್ಥ್ಯ ನಮಗೆ ತಿಳಿದಿರಲಿ. ಅವರೊಂದಿಗೆ ಕುಳಿತು ಆಗೀಗ ಅವರ ಕಲಿಕೆಯನ್ನು ಗಮನಿಸುತ್ತಿರಿ.

l ಮಕ್ಕಳಿಗೆ ಟ್ಯೂಷನ್ ಬೇಕೆ ಬೇಡವೇ ಎಂಬ ತೀರ್ಮಾನದಲ್ಲಿ ಪೋಷಕರ ಜತೆಗೆ ಮಗುವಿನ ಅಗತ್ಯಗಳನ್ನೂ ಪರಿಗಣಿಸಿ.

l ಇಂತಹ ಕರೆಗಳಿಂದ ಪರೀಕ್ಷಾ ಸಮಯದಲ್ಲಿ ಮಕ್ಕಳ ಆತ್ಮವಿಶ್ವಾಸ ಕುಸಿಯದಂತೆ ನೋಡಿಕೊಳ್ಳಿ.

l ಚಾಕ್‌ಪೀಸ್ ಹಿಡಿದು, ಬೋರ್ಡ್ ಮೇಲೆ ಬರೆದು ಬೋಧಿಸುವ, ತನ್ನ ಜ್ಞಾನ ಮತ್ತು ಬೋಧನಾ ಕೌಶಲಗಳಿಂದಲೇ ಮಕ್ಕಳ ಕಲ್ಪನೆಗಳನ್ನು ಅರಳಿಸಿ ಕಲಿಸುವ ಶಿಕ್ಷಕರ ಬಗ್ಗೆ ಮಕ್ಕಳ ಗೌರವ ಮಾಸದಂತೆ ಎಚ್ಚರವಹಿಸಿ.

l ಮಕ್ಕಳು ಓದುತ್ತಿರುವ ಶಾಲೆಯ ಬಗೆಗೆ, ಕಲಿಸುವ ಗುರುಗಳ ಬಗೆಗೆ ಪೋಷಕರಿಗೂ ಗೌರವ ಇದೆಯೆಂಬುದನ್ನು ಮಕ್ಕಳ ಮುಂದೆ ಅಭಿವ್ಯಕ್ತಗೊಳಿಸಿ.

ಸೃಜನಶೀಲತೆಯನ್ನು ಸಲಹಿ

ನಮ್ಮ ಮಕ್ಕಳನ್ನು ಪ್ರೀತಿಸುವುದು, ಬದುಕಿನ ಕುರಿತು ಪ್ರೀತಿ, ಕಾಳಜಿ ಮೂಡಿಸುವುದು ಮತ್ತು ಅವರೊಳಗಿನ ಸೃಜನಶೀಲತೆ, ಜೀವನಪ್ರೀತಿ ಎಂದೂ ಕಮರದ ಹಾಗೆ ಕಾಪಿಡುವುದು ನಮ್ಮ ಬದ್ಧತೆ. ನಮ್ಮ ಮಕ್ಕಳನ್ನು ಎಲ್ಲರಿಗಿಂತ ಹೆಚ್ಚು ನಂಬಬೇಕಾದುದು ಮತ್ತು ಆ ನಂಬಿಕೆಯನ್ನು ಭದ್ರವಾಗಿಸುವಂತೆ ಅವರನ್ನು ಬೆಳೆಸುವುದು ಪೋಷಕರಾಗಿ ನಮಗೆ ಕರ್ತವ್ಯ. ಹೆಜ್ಜೆಹೆಜ್ಜೆಗೂ ನಮ್ಮ ಮಕ್ಕಳನ್ನು ನಾವೇ ನಂಬದೇ ಹೋದರೆ, ಅವರ ಪ್ರತಿಯೊಂದು ನಡೆಯನ್ನೂ ಅನುಮಾನಿಸಿದರೆ ಮುಂದೆ ಸಮಾಜ ಅವರನ್ನು ನಂಬುವಂತೆ ಅವರು ಬದುಕಲಾಗದು.

ಹೆತ್ತವರ ಪ್ರೀತಿ ವಿಶ್ವಾಸ ಬೇಕು

ಜಾಹೀರಾತಿನ ಯುಗದಲ್ಲಿ, ಶಿಕ್ಷಣವೂ ಅಪ್ಪಟ ವ್ಯವಹಾರವಾಗಿದೆ. ಇಂಥ ವ್ಯವಸ್ಥೆಯಲ್ಲಿ ಮಕ್ಕಳು ಸೊರಗದಿರಲಿ. ಮಕ್ಕಳಿಗೆ ನಿಜಕ್ಕೂ ಬೇಕಾದುದು ಟ್ಯೂಷನ್ ಅಲ್ಲ, ಅಪ್ಪಅಮ್ಮನ ಕೊನೆಮೊದಲಿರದ ಪ್ರೀತಿ ಮತ್ತು ವಿಶ್ವಾಸ. ಮಕ್ಕಳ ಯಶಸ್ಸನ್ನು ಅವರ ಸಾಮಾಜಿಕ, ಭಾವನಾತ್ಮಕ ಹೊಂದಾಣಿಕೆಯಲ್ಲಿ ನೋಡಬೇಕೇ ಹೊರತು ಅವರನ್ನು ಎಂದೂ ನೋಡಿರದ, ಯಾವ ಸಂಬಂಧವೂ ಇಲ್ಲದ ಟ್ಯೂಷನ್ ಕಂಪೆನಿಯೊಂದರ ಮಾರ್ಕೆಟಿಂಗ್ ಮ್ಯಾನೇಜರ್‌ನ ಮಾತುಗಳಲ್ಲಿ ಅಲ್ಲ. ನಮ್ಮ ಮಕ್ಕಳು ಅವರ ಅಂಕಪಟ್ಟಿಗಳಿಂತ ಎಂದಿಗೂ ಶ್ರೇಷ್ಠವಾಗಿಯೇ ಇರುತ್ತಾರೆ ಎಂಬ ನಂಬಿಕೆಯೊಂದಿದ್ದರೆ ಸಾಕು, ಮಕ್ಕಳು ಯಶಸ್ಸಿನ ಏಣಿಯನ್ನು ಅರ್ಧ ಏರಿ ಆಗಿರುತ್ತದೆ.

ಕವಿ ಖಲೀಲ ಗಿಬ್ರಾನ್ ಹೇಳುವಂತೆ ಮಕ್ಕಳಿಗೆ ಕೊನೆಯಿರದ ಪ್ರೀತಿಯನ್ನು ಕೊಟ್ಟರೆ ಅವರು ದಿಗಂತದೆಡೆಗೆ ನೆಟ್ಟಿರುವ ತಮ್ಮ ಗುರಿಯನ್ನು ಸಾಧಿಸಲು ಸಫಲರಾಗುತ್ತಾರೆ. ಪೋಷಕರೆಂದರೆ ಮಕ್ಕಳೆಂಬ ಜೀವಂತ ಬಾಣಗಳನ್ನು ಗುರಿತಲುಪಿಸಲು ಬೇಕಾದ ಬಿಲ್ಲುಗಳು. ಇವೆರಡನ್ನೂ ಬಳಸುವ ಭಗವಂತನೆಂಬ ಬಿಲ್ಗಾರ ಗುರಿ ತಲುಪುವ ಬಾಣವನ್ನೂ ಅದಕ್ಕೆ ಪೂರಕವಾಗಿ ಒದಗಿದ ಬಿಲ್ಲನ್ನೂ ಏಕಪ್ರಕಾರವಾಗಿ ಪ್ರೀತಿಸುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT