ದೀಪಾ ಹಿರೇಗುತ್ತಿ

ಪಶ್ಚಿಮ ಘಟ್ಟಗಳ ನಟ್ಟ ನಡುವಿನಲ್ಲಿ ತೊರೆಯೊಂದು ಹರಿಯುತ್ತಿತ್ತು. ಆ ತೊರೆಗೋ ಆದಷ್ಟು ಬೇಗ ಸಮುದ್ರ ಸೇರುವ ಆಸೆ. ಹಾಗಾಗಿ ಅದು ಅತೀ ವೇಗವಾಗಿ ಸಾಗುತ್ತಿತ್ತು. ಅದೇ ಉತ್ಸಾಹದಲ್ಲಿ ಬಂಡೆಗಳ ಮೇಲಿಂದ ರಭಸವಾಗಿ ಹಾರುತ್ತ ಗಡಿಬಿಡಿಯಿಂದ ಇಳಿಯುತ್ತಿತ್ತು. ಹಾಗೆ ಬೆಟ್ಟದಿಂದ ಗರ್ಜಿಸುತ್ತ ಇಳಿದು ಸಾಗುವಾಗ ಅದಕ್ಕೆ ಒಂದು ನದಿಯ ಭೇಟಿಯಾಯಿತು. ಆ ನದಿಯೋ ನಿಧಾನವಾಗಿ ಬೆಟ್ಟದಿಂದಿಳಿದು ಕಣಿವೆಯಲ್ಲಿ ಮೌನವಾಗಿ ಹರಿಯುತ್ತಿತ್ತು.

‘ನೀನ್ಯಾಕಿಷ್ಟು ನಿಧಾನವಾಗಿ ಹರಿಯುತ್ತಿದ್ದೀಯಾ?’ ಎಂದು ಕೇಳಿತು ತೊರೆ ನದಿಯ ಹತ್ತಿರ. ‘ನಿನಗೆ, ನಿನ್ನ ಗುರಿ ಬೇಗ ಸೇರಬೇಕೆಂಬ ಆಸೆ ಇಲ್ಲವೇ?’ ಎಂದೂ ಕೇಳಿತದು. ಆಗ ನದಿ, ‘ನಾನು ನಿಂತಿಲ್ಲವಲ್ಲ, ಚಲಿಸುತ್ತಿದ್ದೇನೆ, ಆದರೆ ನನಗೆ ಧಾವಂತವಿಲ್ಲ ಅಷ್ಟೇ’ ಅಂದಿತು. ಸಾಮಾನ್ಯವಾಗಿ ತೊರೆ ನದಿಯೊಂದಿಗೆ ಸೇರಿಕೊಂಡು ಮುನ್ನಡೆಯಬೇಕಿತ್ತು. ಆದರೆ ನದಿಯ ನಿಧಾನಗತಿಯನ್ನು ನೋಡಿ ತೊರೆ ನಕ್ಕು ತನ್ನದೇ ಆದ ದಾರಿಯಲ್ಲಿ ಇನ್ನಷ್ಟು ವೇಗವಾಗಿ ಸಾಗಿತು. ಸಣ್ಣ ಪುಟ್ಟ ಕಲ್ಲುಗಳನ್ನು ಬುಡಸಮೇತ ಕಿತ್ತು, ಬಂಡೆಗಳಿಗೆ ಢಿಕ್ಕಿ ಹೊಡೆಯುತ್ತಾ, ಆದಷ್ಟು ವೇಗವಾಗಿ ಸಾಗುತ್ತಿತ್ತು. ಹಾಗೆ ಸಾಗುತ್ತ ಸಾಗುತ್ತ ದಣಿಯಿತು. ಮಣ್ಣನ್ನು ರಭಸವಾಗಿ ಕೊಚ್ಚಿಕೊಂಡು ಹೋಗಿದ್ದರಿಂದ ತೊರೆ ಕೆಂಪಾಯಿತು. ಅನತಿ ದೂರದಲ್ಲಿ ನದಿ ನಿಧಾನವಾಗಿ ಸಾಗುತ್ತಲೇ ಇತ್ತು. ಅಡೆತಡೆಗಳಿದ್ದರೆ ಅವನ್ನು ಸುತ್ತಿಕೊಂಡು, ಹೊಲಗದ್ದೆಗಳಿಗೆ ನೀರನ್ನೊದಗಿಸುತ್ತ, ಹಗಲಿನ ಆಕಾಶವನ್ನು ಪ್ರತಿಫಲಿಸಿ ಹೊಳೆಯುತ್ತ ಸಾಗುತ್ತಿತ್ತು. ಆ ನದಿಯ ದಂಡೆಯಲ್ಲಿ ಮನೆಗಳಾದವು, ಪಕ್ಷಿಗಳು ಸನಿಹದ ಮರಗಳಲ್ಲಿ ಗೂಡು ಕಟ್ಟಿದವು. ನದಿ ಸಾಗಿದ ದಾರಿಯುದ್ದಕ್ಕೂ ಬದುಕು ನಳನಳಿಸುತ್ತಿತ್ತು.

ಹೀಗೇ ಒಂದು ದಿನ ವೇಗವಾಗಿ ಹರಿದು ಸೋತ ತೊರೆ ನದಿಯೊಂದಿಗೆ ಸೇರಿಕೊಂಡಿತು. ‘ನನಗೆ ಒಂದು ಅರ್ಥವಾಗುತ್ತಿಲ್ಲ. ಸಮುದ್ರ ಸೇರಲೆಂದು ನಾನೆಷ್ಟು ವೇಗವಾಗಿ, ಹುರುಪಿನಿಂದ ಸಾಗಿದೆ. ಆದರೂ ಬಹಳ ಸುಸ್ತಾಗಿ ಹೋಗಿದ್ದೇನೆ. ಅಸ್ಪಷ್ಟವಾಗಿ ಯೋಚಿಸುತ್ತಿದ್ದೇನೆ. ಆದರೆ ನೀನು ನಿಧಾನಕ್ಕೆ ಹರಿದರೂ ಸ್ಪಷ್ಟವಾಗಿದ್ದೀಯಾ, ಆಳವಾಗಿದ್ದೀಯಾ, ಮುಂದೆ ಹೋಗುತ್ತಲೂ ಇದ್ದೀಯಾ ಹೇಗೆ?’ ಎಂದು ಕೇಳಿತು.

ಆಗ ನದಿ, ‘ಬದುಕೆಂದರೆ ವೇಗವಾಗಿ ಓಡಿ ಮುಗಿಸಬೇಕಾದ ಪಂದ್ಯವಲ್ಲ. ನಿಧಾನವಾಗಿ ಸಾಗಿದಾಗ ನೀನು ಜಗತ್ತನ್ನು ಸ್ಪಷ್ಟವಾಗಿ ನೋಡುತ್ತೀಯ, ಆಳವಾಗಿ ಹರಿಯುತ್ತೀಯ, ಇತರರಿಗೆ ಸಹಾಯವನ್ನೂ ಮಾಡುತ್ತೀಯ. ಒಂದಲ್ಲ ಒಂದು ದಿನ ಸಮುದ್ರ ಸೇರುವುದಂತೂ ನಿಜ. ಅಲ್ಲವೇ’ ಎಂದು ಉತ್ತರಿಸಿತು.

ತೊರೆ ಈಗ ನದಿಯ ಭಾಗವಾಗಿತ್ತಲ್ಲ. ಆ ಪ್ರಶಾಂತ ಹರಿಯುವಿಕೆ ತೊರೆಗೆ ಹೊಸ ಚೇತನ ನೀಡಿದಂತಾಯಿತು. ನದಿಯೊಂದಿಗೆ ಸೇರಿ ತೊರೆಯೂ ಸಾವಧಾನದಿಂದ ಸಮುದ್ರದೆಡೆಗೆ ಸಾಗಿತು.

ಈ ಕಥೆಯಲ್ಲಿರುವ ತೊರೆಯಂತೆ ಇವತ್ತಿನ ಯುವಜನಾಂಗ ತಕ್ಷಣದ ಯಶಸ್ಸು, ಶ್ರೀಮಂತಿಕೆ ಮತ್ತು ಜನಪ್ರಿಯತೆಗೆ ಹಾತೊರೆಯುತ್ತಿದೆ. ನಲವತ್ತು ವರ್ಷದೊಳಗೆ ನಿವೃತ್ತರಾಗಿಬಿಡಬೇಕು, ಪ್ರತಿದಿನವನ್ನೂ ಅನುಭವಿಸಬೇಕೆಂಬ ಯೋಚನಾ ಲಹರಿಯ ಬಲೆಗೆ ಬಿದ್ದು ದುಡುಕುತ್ತಿದೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ತಮ್ಮದೇ ನಿರೀಕ್ಷೆಯ ಭಾರ ಹೊರಲಾಗದೇ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದೆ. ಸಾಮಾಜಿಕ ಜಾಲತಾಣಗಳ ದಾಸರಾಗಿ ಇತರರೊಂದಿಗೆ ಹೋಲಿಕೆ ಮಾಡಿಕೊಂಡು ಆಡಲಾಗದೇ ಅನುಭವಿಸಲಾಗದೇ ನರಳುತ್ತಿದೆ.

ಹಾಗಂತ ಸಾಧನೆ ಮಾಡಲು ಕಷ್ಟಪಡುವುದು ಬೇಡವೇ ಎಂದರೆ ಖಂಡಿತ ಬೇಕು. ತರಾತುರಿಗೆ ಬಿದ್ದು ಹಿಂದೆ ಮುಂದೆ ನೋಡದೇ ಓಡಿ ಸೋಲುವ ಬದಲು ಸಾವಧಾನಚಿತ್ತದಿಂದ ಯೋಚಿಸಿ ದೃಢ ಹೆಜ್ಜೆಗಳನ್ನಿಡುತ್ತ ಮುನ್ನಡೆಯಬೇಕು. ಕಾರಣ ಬದುಕು ಪಂದ್ಯವಲ್ಲ, ಪಯಣ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-51-402634125

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.