ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನೇ ಹಬ್ಬ ಎಂದುಕೊಳ್ಳಿ: ಗರಿಮಾ ಪನ್ವಾರ್‌

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತರಾದ ಗರಿಮಾ ಪನ್ವಾರ್‌ ಕಿವಿಮಾತು
Last Updated 25 ಮಾರ್ಚ್ 2022, 12:35 IST
ಅಕ್ಷರ ಗಾತ್ರ

ಕಲಬುರಗಿ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪರೀಕ್ಷೆ ಕಠಿಣವಾಗಿರುತ್ತದೆಯೇ? ಸುಲಭವಾಗಿರುತ್ತದೆಯೇ? ಏನಾದರೂ ಬದಲಾವಣೆ ಆಗಿದೆಯೇ ಎಂಬ ಬಗ್ಗೆ ವಿದ್ಯಾರ್ಥಿಗಳು ತಲೆ ಕೆಡಿಸಿಕೊಳ್ಳಬೇಕಿಲ್ಲ. ಆತ್ಮವಿಶ್ವಾಸ ಒಂದಿದ್ದರೆ ಯಾವುದೂ ಕಠಿಣವಲ್ಲ. ಅದನ್ನು ಹಬ್ಬದಂತೆ ‘ಎಂಜಾಯ್‌’ ಮಾಡಿಕೊಂಡು ಬರೆಯಿರಿ...

ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತರಾದಗರಿಮಾ ಪನ್ವಾರ್‌ ಅವರು ಮಕ್ಕಳಿಗೆ ಹೇಳಿದ ಕಿವಿಮಾತುಗಳಿವು.

‘ಪ್ರಜಾವಾಣಿ’ ಕಲಬುರಗಿ ಕಚೇರಿಯಲ್ಲಿ ಶುಕ್ರವಾರ, ಎಸ್ಸೆಸ್ಸೆಲ್ಸಿ ಪರೀಕ್ಷೆ (ಮಾರ್ಚ್‌ 28ರಿಂದ ಏಪ್ರಿಲ್‌ 11) ಕುರಿತು ವಿದ್ಯಾರ್ಥಿಗಳಿಗಾಗಿ ಏರ್ಪಡಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಅವರು ಪ್ರಶ್ನೆಗಳಿಗೆ ಉತ್ತರಿಸಿದರು.

‘ಪರೀಕ್ಷೆ ಸಂದರ್ಭದಲ್ಲಿ ಮಕ್ಕಳು ಉಲ್ಲಾಸದಿಂದ ಇರುವುದು ಮುಖ್ಯ. ಈವರೆಗೆ ಎಷ್ಟು ಓದಿದ್ದೀರಿ, ಏನು ಓದಿದ್ದೀರಿ, ಅದು ಸಾಕಾಗುತ್ತದೆಯೇ ಎಂಬ ಗೊಂದಲ ಈಗ ಬೇಡ. ಓದಿದ್ದಷ್ಟನ್ನೂ ಸರಿಯಾಗಿ ಬರೆಯುತ್ತೇನೆ ಎಂಬ ಭರವಸೆ ಸಾಕು. ಯಾವುದಕ್ಕೂ ಆತಂಕ ಪಡದೇ, ಶಾಂತಚಿತ್ತರಾಗಿದ್ದರೆ ಒಳ್ಳೆಯ ಫಲಿತಾಂಶ ಪಡೆಯುತ್ತೀರಿ’ ಎಂದರು.

ಆಯ್ದ ಕೆಲವು ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.

* ರಾಘವೇಂದ್ರ ಭಕ್ರಿ– ಸುರಪುರ, ಬಲವಂತರಾಯ ಬೆಣ್ಣೂರ– ಜೇವರ್ಗಿ:ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಯಾವ ಕಾರ್ಯಕ್ರಮ ಕೈಗೊಂಡಿದ್ದೀರಿ?‌

– ಆಗಸ್ಟ್‌ 23ರಿಂದ ಭೌತಿಕ ತರಗತಿಗಳನ್ನು ನಡೆಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗಿದೆ.ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ಳಲಾಗಿದೆ. ಶೇ 100ರಷ್ಟು ಫಲಿತಾಂಶ ಪಡೆಯುವುದು ನಮ್ಮ ಗುರಿ. ಆ ನಿಟ್ಟಿನಲ್ಲಿ ಕೋವಿಡ್ ಸಂದರ್ಭದಲ್ಲೂ ತರಗತಿಗಳನ್ನು ನಡೆಸಲಾಗಿದೆ. ಫೋನ್ ಇನ್ ಕಾರ್ಯಕ್ರಮ, ಯೂಟ್ಯೂಬ್‌ ಮೂಲಕ ಬೋಧನೆ, ಶಿಕ್ಷಕರಿಗೆ ಕಾರ್ಯಾಗಾರ, ಮಕ್ಕಳಿಗೆ ಪೂರ್ವ ಸಿದ್ಧತಾ ಪರೀಕ್ಷೆ ಮತ್ತು ಸರಣಿ ಪರೀಕ್ಷೆಗಳನ್ನು ನಡೆಸಲಾಗಿದೆ. ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

‌* ಶಿವಕುಮಾರ– ರಾಯಚೂರು, ಸ್ವಾತಿ– ಸಿರಗುಪ್ಪ: ಪ್ರಶ್ನೆ ಪತ್ರಿಕೆಯ ಮಾದರಿ ಎಲ್ಲಿ ಸಿಗುತ್ತದೆ?

–‘ದೀವಿಗೆ’ ಎಂಬ ಪುಸ್ತಕದಲ್ಲಿ ಪ್ರಶ್ನೆಪತ್ರಿಕೆಯ ಬ್ಲೂಪ್ರಿಂಟ್ ಇದೆ. ಅದರಲ್ಲಿ ಪ್ರಶ್ನೆ ಪತ್ರಿಕೆಯ ಸ್ವರೂಪ, ವಿನ್ಯಾಸ, ಹಳೆಯ ಪ್ರಶ್ನೆಪತ್ರಿಕೆಗಳು ಸಿಗುತ್ತವೆ. ಅವುಗಳನ್ನು ಅಭ್ಯಾಸ ಮಾಡಬಹುದು.

* ಅಂಬಿಕಾ, ನಾಗರಾಜ, ದೀಪಕ್, ಶಿವಕುಮಾರ, ನೇಹಾ, ನಿರ್ಮಲಾ:ಪರೀಕ್ಷೆ ಸ್ವರೂಪ ಹೇಗಿರುತ್ತದೆ?

3 ಗಂಟೆ 15 ನಿಮಿಷ ಪರೀಕ್ಷೆ ಅವಧಿ ಇದೆ. ಒಟ್ಟು 38 ಪ್ರಶ್ನೆಗಳು ಇರುತ್ತದೆ. ಅದರಲ್ಲಿ ಬಹು ಆಯ್ಕೆಯ ಪ್ರಶ್ನೆಗಳು, ಒಂದು ಅಂಕ, ಎರಡು ಅಂಕ, ಮೂರು ಅಂಕ ಮತ್ತು ಐದು ಅಂಕದ ಪ್ರಶ್ನೆಗಳು ಇರುತ್ತವೆ. ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸಿದರೆ ಪರೀಕ್ಷೆ ಎದುರಿಸಲು ಸುಲಭವಾಗುತ್ತದೆ. ಈ ಬಾರಿ ಕೊರೊನಾ ಕಾರಣಕ್ಕೆ ಶೇ 20ರಷ್ಟು ಪಠ್ಯವನ್ನು ಕಡಿತ ಮಾಡಲಾಗಿದೆ. ಅಲ್ಲದೇ ಈಗಾಗಲೇ 20 ಅಂಕಗಳ ಆಂತರಿಕ (ಇಂಟರ್ನಲ್‌) ಪರೀಕ್ಷೆಯನ್ನು ಎಲ್ಲರಿಗೂ ತೆಗೆದುಕೊಳ್ಳಲಾಗಿದೆ. 80 ಅಂಕಗಳಿಗೆ ಮಾತ್ರಲಿಖಿತ ಪರೀಕ್ಷೆ ನಡೆಯುತ್ತದೆ. ಇದರಲ್ಲಿ ಶೇ 40ರಷ್ಟು ಪ್ರಶ್ನೆಗಳು ಸರಳವಾಗಿರುತ್ತವೆ. ಶೇ 30ರಷ್ಟು ಮಧ್ಯಮ ಮತ್ತು ಶೇ 10ರಷ್ಟು ಪ್ರಶ್ನೆಗಳು ಕಠಿಣವಾಗಿರುತ್ತವೆ. ಎಲ್ಲ ವಿಷಯಗಳ ಪರೀಕ್ಷೆಗಳಿಗೂ ಈ ಮಾದರಿ ಅನ್ವಯವಾಗುತ್ತದೆ.

*ರಾಜು– ಮಾನ್ವಿ: ಪರೀಕ್ಷಾ ಕೇಂದ್ರಗಳಲ್ಲಿ ಏನೇನು ವ್ಯವಸ್ಥೆ ಇದೆ?

– ನೀರಿನ ಬಾಟಲಿ ಒಳಗೆ ಒಯ್ಯುವಂತಿಲ್ಲ. ನೀರು ಕೊಡಲು ಸಿಬ್ಬಂದಿ ಇರುತ್ತಾರೆ. ಕೇಳಿ ಪಡೆಯಬಹುದು. ಸೂಕ್ತ ವಿದ್ಯುತ್‌, ಫ್ಯಾನ್ ಇರುವಂತೆ ವ್ಯವಸ್ಥೆ ನೋಡಿಕೊಳ್ಳಲಾಗಿದೆ. ಬಿಸಿಲಿನಿಂದ ತೊಂದರೆ ಆದರೆ ಬೇರೆಡೆ ಕೂಡ್ರಿಸಿ ಅನುಕೂಲ ಮಾಡಲಾಗುವುದು.

* ಪ್ರೀತಿ– ಆಳಂದ: ಸೆಂಟರ್‌ ಒಳಗೆ ಹೋಗುವಾಗಲೇ ಭಯವಾಗುತ್ತದೆ, ಏನು ಮಾಡಲಿ?

– ಪರೀಕ್ಷಾ ಕೇಂದ್ರಕ್ಕೆ ಹೋಗುವ ಅರ್ಧ ಗಂಟೆ ಮೊದಲು ‘ಮೈಂಡ್ ಫ್ರೀ’ ಮಾಡಿಕೊಳ್ಳಿ. ಹಸಿವು, ನೀರಡಿಕೆಯಿಂದ ಹೋಗಬೇಡಿ. ಮೃದು ಆಹಾರ ಸೇವಿಸಿ, ನೀರು ಕುಡಿಯಿರಿ. ಗಡಿಬಿಡಿ ಮಾಡಿಕೊಳ್ಳದೇ ಮುಂಚಿತವಾಗಿ ತಲುಪಿ. ಅಗತ್ಯವಿದ್ದರೆ ಪರೀಕ್ಷಾ ಕೇಂದ್ರದ ವರೆಗೆ ಪಾಲಕರೊಬ್ಬರನ್ನು ಜೊತೆಗೆ ಕರೆದುಕೊಂಡು ಹೋಗಿ. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿ ಹರಿದಾಡಿದರೂ ಗಮನ ಕೊಡಬೇಡಿ.

ಪರೀಕ್ಷೆಗಿಂತ ಜೀವನ ಬಹಳ ದೊಡ್ಡದು

ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಖ್ಯ. ಆದರೆ, ಜೀವನ ಪರೀಕ್ಷೆಗಿಂತಲೂ ಬಹಳ ದೊಡ್ಡದು. ಈ ವಿಚಾರದಲ್ಲಿ ಮಕ್ಕಳಾಗಲೀ, ಪಾಲಕರಾಗಲೀ, ಶಿಕ್ಷಕರಾಗಲೀ ಒತ್ತಡ ತಂದುಕೊಳ್ಳುವ ಅಗತ್ಯವಿಲ್ಲ. ಪರೀಕ್ಷೆಗೆ ಎಷ್ಟು ಮಹತ್ವ ಕೊಡಬೇಕೋ ಅಷ್ಟನ್ನೂ ಕೊಡಿ. ಆದರೆ, ಅದೇ ಜೀವನದ ಕೊನೆಯ ಹಂತವಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ಕೆಲವರಿಗೆ ಹೆಚ್ಚು ಅಂಕ ಬರಬಹುದು, ಕೆಲವರಿಗೆ ಕಡಿಮೆ ಬರಬಹುದು ಮತ್ತೆ ಕೆಲವರು ಅನುತ್ತೀರ್ಣ ಆಗಬಹುದು; ಎಲ್ಲರಿಗೂ ಮತ್ತೆಮತ್ತೆ ಅವಕಾಶಗಳು ಇವೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಯಾವುದಕ್ಕೂ ಜಗ್ಗದೇ, ಕುಗ್ಗದೇ, ಹಿಗ್ಗಿ ನಡೆಯಿರಿ...

–ಗರಿಮಾ ಪನ್ವಾರ್‌

ಹಾಲ್‌ಟಿಕೆಟ್‌ ತಪ್ಪಾಗಿದೆಯೇ? ಹೆದರಬೇಡಿ

ಹಾಲ್‌ ಟಿಕೆಟ್‌ನಲ್ಲಿ ಅಕ್ಷರದ ದೋಷವಾಗಿದ್ದರೆ ಹೆದರಬೇಕಿಲ್ಲ. ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ತೊಂದರೆ ಆಗುವುದಿಲ್ಲ. ಪರೀಕ್ಷೆ ಮುಗಿದ ನಂತರ ಆಯಾ ಪ್ರಾಂಶುಪಾಲರಿಗೆ ಹಾಲ್‌ಟಿಕೆಟ್‌ ಹಾಗೂ ಬೇಕಾದ ದಾಖಲೆಗಳ ಜೆರಾಕ್ಸ್ ನೀಡಿ. ಅದನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಕೆಎಸ್‌ಇಇಬಿ)ಗೆ ಕಳುಹಿಸುತ್ತಾರೆ. ಮಾರ್ಕ್ಸ್‌ಕಾರ್ಡಿನಲ್ಲಿ ಸರಿಯಾದ ಹೆಸರೇ ಬರುತ್ತದೆ. ಒಂದು ವೇಳೆ ಅಂಕಪಟ್ಟಿಯಲ್ಲೂ ಹೆಸರು ತಪ್ಪಾಗಿದ್ದರೆ ಅದನ್ನು ತಿದ್ದುವುದಕ್ಕಾಗಿಯೇ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಭಾಗೀಯ ಕಚೇರಿಯಲ್ಲಿ ಪ್ರತ್ಯೇಕ ವ್ಯವಸ್ಥೆ ಇದೆ. 15 ದಿನದೊಳಗೆ ಅರ್ಜಿ ಸಲ್ಲಿಸಿ ತಿದ್ದಿಕೊಳ್ಳಬಹುದು.

–ಸಿ.ಎಸ್‌.ಮುಧೋಳ, ಆಯುಕ್ತರ ಆ‍ಪ್ತ ಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗ

ಶುಲ್ಕ ಕಟ್ಟದಿದ್ದರೂ ಪರೀಕ್ಷೆಗೆ ನಿರಾಕರಿಸುವಂತಿಲ್ಲ

‘ನನ್ನ ಪುತ್ರ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾನೆ. ಶುಲ್ಕ ಕಟ್ಟದ ಕಾರಣ ಪರೀಕ್ಷೆಗೆ ಅವಕಾಶ ಕೊಡುವುದಿಲ್ಲ ಎಂದು ಸಂಸ್ಥೆಯವರು ಹೆದರಿಸುತ್ತಿದ್ದಾರೆ. ನಾನು ಕಂತುಗಳಲ್ಲಿ ಶುಲ್ಕ ಕಟ್ಟುತ್ತೇನೆ ಎಂದು ಹೇಳಿದರೂ ಕೇಳುತ್ತಿಲ್ಲ. ಸಹಾಯ ಮಾಡಿ’ ಎಂದು ಪಾಲಕರೊಬ್ಬರು ಮನವಿ ಮಾಡಿದರು.

‘ಪರೀಕ್ಷೆ ಸಂದರ್ಭದಲ್ಲಿ ಯಾವುದೇ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಕೂಡದು. ಒಂದು ವೇಳೆ ಅವಧಿಯೊಳಗೆ ಶುಲ್ಕ ಕಟ್ಟಲು ಆಗದಿದ್ದರೂ ಪರೀಕ್ಷೆ ನಿರಾಕಸುವಂತಿಲ್ಲ. ಹಾಗೇನಾದರೂ ಮಾಡಿದರೆ ಸಂಸ್ಥೆಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ. ಈಗ ಪರೀಕ್ಷೆಗೆ ಅವಕಾಶ ಕೊಟ್ಟು, ಮುಂದಿನ ದಿನಗಳಲ್ಲಿ ಶುಲ್ಕದ ವಿಚಾರ ಬಗೆಹರಿಸಿಕೊಳ್ಳಬೇಕು’ ಎಂದು ಗರಿಮಾ ಎಚ್ಚರಿಕೆ ನೀಡಿದರು.

ಪರೀಕ್ಷಾ ಕೇಂದ್ರಕ್ಕೆ ಬಸ್‌

ಪರೀಕ್ಷೆಗೆ ಸರಿಯಾದ ಸಮಯಕ್ಕೆ ಹಾಜರಾಗಲು ಬಸ್‌ ಕಲ್ಪಿಸಿ ಎಂದು ಅಫಜಲಪುರ ತಾಲ್ಲೂಕಿನ ಬಳೂರ್ಗಿಯಸದ್ಧಾಂ ನಾಕೇದಾರ ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗರಿಮಾ, ‘ಪರೀಕ್ಷಾ ಕೇಂದ್ರಗಳು ಬೇರೆ ಊರಲ್ಲಿ ಇದ್ದರೆ, ಅಂಥ ಊರಿನಿಂದ ಪರೀಕ್ಷಾ ಕೇಂದ್ರಕ್ಕೆ ಹೋಗಿ– ಬರಲು ಪ್ರತ್ಯೇಕವಾಗಿ ಉಚಿತ ಬಸ್‌ ವ್ಯವಸ್ಥೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಈ ರೀತಿ ಉಚಿತ ಬಸ್‌ ಕಲ್ಪಿಸಿದೆ. ವಿದ್ಯಾರ್ಥಿಗಳು ಅಥವಾ ಪಾಲಕರು ಮುಂಚಿತವಾಗಿಯೇ ನಿಮ್ಮ ಸಾರಿಗೆ ಘಟಕದ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಒಳ್ಳೆಯದು ಎಂದರು.

ಕೋವಿಡ್‌ ಮುಂಜಾಗ್ರತಾ ಕ್ರಮಗಳೇನು?

ಪರೀಕ್ಷೆ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಮಾಸ್ಕ್, ಸ್ಯಾನಿಟೈಸರ್ ಬಳಸಲು, ಥರ್ಮಲ್ ಸ್ಕ್ರೀನಿಂಗ್‌ ಮಾಡುವ ಬಗ್ಗೆ ಈ ಭಾಗದ 24 ಸಾವಿರ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ.

ವಿದ್ಯಾರ್ಥಿಗೆ ಕೋವಿಡ್ ದೃಢಪಟ್ಟಿದ್ದರೆ ಅದೇ ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಯಾರಾದರೂ ಆಸ್ಪತ್ರೆಗೆ ದಾಖಲಾಗಿದ್ದರೆ ಅವರು ಇದ್ದಲ್ಲಿಯೇ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗುವುದು.

ಪ್ರತಿ ಕೊಠಡಿಯಲ್ಲಿ 20 ವಿದ್ಯಾರ್ಥಿಗಳು ಇರುತ್ತಾರೆ. ಒಂದು ಬೆಂಚಿನಲ್ಲಿ ಒಬ್ಬ ವಿದ್ಯಾರ್ಥಿಯಂತೆ ‘ಜಿಗ್‌ಜ್ಯಾಗ್’ ಮಾದರಿಯಲ್ಲಿ ಕೂರಿಸಲಾಗುವುದು. ಇದರಿಂದ ನಕಲು ತಡೆಯಲು ಸಹಾಯವಾಗಲಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT