ಗುರುವಾರ , ಮೇ 26, 2022
31 °C
ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ಕಿವಿಮಾತು

ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ: ಶಿವಶರಣಪ್ಪ ಮೂಳೆಗಾಂವ ಕಿವಿಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಇದೇ 22ರಿಂದ ಮೇ 18ರವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆಯಲಿದ್ದು, ಯಾವುದೇ ಆತಂಕಕ್ಕೆ ಒಳಗಾಗದೇ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

‘ಪ್ರಜಾವಾಣಿ’ ಕಲಬುರಗಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಫೋನ್‌ ಇನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಉಪನ್ಯಾಸಕರಿಗೆ ಪರಿಣಾಮಕಾರಿ ಬೋಧನೆ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಪೂರ್ವಭಾವಿ ಪರೀಕ್ಷೆಯೂ ನಡೆದಿದೆ. ಪರೀಕ್ಷೆಗಳು ಬಂದಾಗ ಒತ್ತಡ ಹೆಚ್ಚಾಗುವುದು ಸಹಜ. ಆದರೆ, ಒತ್ತಡಕ್ಕೆ ಒಳಗಾಗುವುದರಿಂದ ಪರೀಕ್ಷೆ ಸರಿಯಾಗಿ ಬರೆಯಲು ಆಗುವುದಿಲ್ಲ. ಪೋಷಕರೂ ಈ ನಿಟ್ಟಿನಲ್ಲಿ ಎಚ್ಚರ ವಹಿಸಬೇಕು ಎಂದರು.

ಫೋನ್‌ ಇನ್‌ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಕೇಳಿದ ಪ್ರಶ್ನೆಗಳ ಆಯ್ದ ಭಾಗ ಇಲ್ಲಿದೆ.

* ಅಕ್ಷತಾ, ಯಡ್ರಾಮಿ: ಈ ಬಾರಿ ಪರೀಕ್ಷೆಯಲ್ಲಿ ಏನಾದರೂ ಬದಲಾವಣೆಗಳಿವೆಯೇ?

-ಈ ಬಾರಿಯ ಪ್ರಶ್ನೆಪತ್ರಿಕೆಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಬೋಧನೆಗೆ ಕಡಿಮೆ ಅವಧಿ ದೊರಕಿದ್ದರಿಂದ ಉತ್ತರ ಬರೆಯಲು ಹೆಚ್ಚು ಪ್ರಶ್ನೆಗಳ ಆಯ್ಕೆಗಳನ್ನು ನೀಡಲಾಗಿದೆ. ಉದಾಹರಣೆಗೆ 15 ಪ್ರಶ್ನೆಗಳಲ್ಲಿ ಯಾವುದಾದರೂ 8 ಉತ್ತರಗಳನ್ನು ಬರೆಯಬಹುದು. ಅಲ್ಲದೇ, ಉತ್ತರ ಪತ್ರಿಕೆಯಲ್ಲಿ 24 ಪುಟಗಳಿರುತ್ತವೆ. ಪರೀಕ್ಷೆ ಆರಂಭವಾಗುವ 15 ನಿಮಿಷಗಳ ಮುಂಚೆಯೇ ಪ್ರಶ್ನೆಪತ್ರಿಕೆಯನ್ನು ವಿತರಿಸಲಾಗುತ್ತದೆ.

* ಉಮೇಶ, ಪಾಲಕರು: ಪ್ರಶ್ನೆಪತ್ರಿಕೆಗಳ ಭದ್ರತೆ ಹೇಗೆ ಮಾಡಿದ್ದೀರಿ?

–ಆಯಾ ವಿಷಯದಲ್ಲಿ ನುರಿತ ತಜ್ಞರ ತಂಡವು ಪ್ರಶ್ನೆಪತ್ರಿಕೆ ತಯಾರಿಸಿರುತ್ತದೆ. ಯಾವ ಪ್ರಶ್ನೆಪತ್ರಿಕೆ ಯಾರು ಸಿದ್ಧಪಡಿಸಿದ್ದಾರೆ ಎಂಬುದು ಯಾರಿಗೂ ತಿಳಿಯುವುದಿಲ್ಲ. ಕಲಬುರಗಿಯಿಂದ ದೂರದಲ್ಲಿರುವ ಪರೀಕ್ಷಾ ಕೇಂದ್ರಗಳಿಗೆ ಬೇಗನೇ ತಲುಪಲು ಮುಂಚೆಯೇ ಪ್ರಶ್ನೆ‍ಪತ್ರಿಕೆ ವಾಹನ ಹೊರಡುತ್ತದೆ. ಪ್ರಶ್ನೆಪತ್ರಿಕೆಗಳ ಉಸ್ತುವಾರಿಗೆ ತಹಶೀಲ್ದಾರ್, ಬಿಇಒ ಹಾಗೂ ಹಿರಿಯ ಪ್ರಾಚಾರ್ಯರನ್ನು ಒಳಗೊಂಡ ತಂಡವನ್ನು ರಚನೆ ಮಾಡಲಾಗಿದೆ.

* ರೋಹಿತ್, ಕಲಬುರಗಿ: ನಾನು ಅರ್ಥಶಾಸ್ತ್ರ ವಿಷಯದ ಬಗ್ಗೆ ಹೆಚ್ಚು ಓದಲು ಆಗಿಲ್ಲ. ಏನು ಮಾಡಬೇಕೆಂಬುದು ಗೊತ್ತಾಗುತ್ತಿಲ್ಲ.

– ಒಂದು ವೇಳೆ ಪರೀಕ್ಷೆ ಬರೆಯುಷ್ಟು ಓದು ನಿಮ್ಮಲ್ಲಿ ಇಲ್ಲವೆಂದಾದರೆ ಯೋಚನೆ ಮಾಡಬೇಡಿ, ಮುಂದಿನ ಸಪ್ಲಿಮೆಂಟರಿಗೆ ತಯಾರಿ ಮಾಡಿಕೊಳ್ಳಿ. ಅಥವಾ ಓದಿಕೊಳ್ಳಲು ಈಗಲೂ ಸಮಯವಿದೆ. ನಿಮ್ಮ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರೊಂದಿಗೆ ಚರ್ಚಿಸಿದರೆ ಯಾವ ಅಂಶಗಳನ್ನು ಮನನ ಮಾಡಬೇಕು ಎಂದು ಸಲಹೆ ನೀಡುತ್ತಾರೆ. ಇದೇ ರೀತಿ ಕೆಲವು ಅನನುಕೂಲಗಳ ಕಾರಣ ಕೆಲವರಿಗೆ ಪರೀಕ್ಷೆಯನ್ನು ಸರಿಯಾಗಿ ಬರೆಯುವಷ್ಟು ಸಿದ್ಧತೆ ಮಾಡಿಕೊಂಡಿರುವುದಿಲ್ಲ. ಅಂಥವರು ಎದೆಗುಂದುವ ಅವಶ್ಯಕತೆ ಇಲ್ಲ. ಮುಂದೆಯೂ ಅವಕಾಶಗಳಿದ್ದು, ಅವುಗಳತ್ತ ಗಮನ ಹರಿಸಬೇಕು. ಇದೇ ಕೊನೆಯ ಪರೀಕ್ಷೆ ಎಂಬ ಮಟ್ಟಿಗೆ ಯೋಚನೆ ಮಾಡಬೇಡಿ.

* ಸಿದ್ಧಾರ್ಥ, ಆಳಂದ: ಈಗ ಡಿಬಾರ್‌ ಮಾಡಿದ ಉದಾಹರಣೆಗಳೇ ಇಲ್ಲ, ಕಾರಣವೇನು?

–ಮುಂಚೆ ಯಾವ ಕಾಲೇಜಿನಲ್ಲಿ ವಿದ್ಯಾರ್ಥಿ ಓದುತ್ತಾರೋ ಅದೇ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರವೂ ಇರುತ್ತಿತ್ತು. ಕೆಲವು ಖಾಸಗಿ ಕಾಲೇಜಿನವರು ನಕಲು ಮಾಡಿಸುತ್ತಿದ್ದರು. ತಪಾಸಣೆ ವೇಳೆ ವಿದ್ಯಾರ್ಥಿಗಳು ಸಿಕ್ಕಿಬಿದ್ದಾಗ ಡಿಬಾರ್‌ ಆಗುತ್ತಿದ್ದರು. ಆದರೆ, ಈಗ ವ್ಯವಸ್ಥೆ ಬದಲಾಗಿದೆ. ಒಂದು ಕಾಲೇಜಿನ ವಿದ್ಯಾರ್ಥಿಗಳು ಬೇರೊಂದು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಬೇಕಾಗುತ್ತದೆ. ಇದು ಸಿಬ್ಬಂದಿಯಿಂದ ನಕಲು ತಡೆಯಲು ಅನುಕೂಲ. ಅಲ್ಲದೇ, ಪರೀಕ್ಷೆಯಲ್ಲಿ ಫೇಲ್‌ ಆದರೆ, ಪೂರಕ ಪರೀಕ್ಷೆ ಅಥವಾ ಮುಂದಿನ ವರ್ಷ ಬರೆಯಬಹುದು, ಒಂದು ವೇಳೆ ಡಿಬಾರ್‌ ಆದರೆ ಮೂರು ವರ್ಷ ಹಾಳಾಗುತ್ತದೆ ಎಂಬ ಅರಿವು ಕೂಡ ವಿದ್ಯಾರ್ಥಿಗಳಲ್ಲಿ ಮೂಡಿದೆ. ಹೀಗಾಗಿ, ಡಿಬಾರ್‌ ಮಾಡುವ ಪರಿಸ್ಥಿತಿಗಳು ತೀರ ಕಡಿಮೆ ಆಗಿವೆ.

*ಹಲವು ಪಾಲಕರು: ಕೊರೊನಾ ಲಾಕ್‌ಡೌನ್‌ ಕಾರಣದಿಂದಾಗಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪಠ್ಯಕ್ರಮ ಕಡಿತಗೊಳಿಸಿದಂತೆ ಪಿಯು ತರಗತಿಗೂ ಮಾಡಿದ್ದಾರೆಯೇ?

–ಇಲ್ಲ. ಪಿಯು ತರಗತಿಗಳನ್ನು ಕಳೆದ ಐದು ತಿಂಗಳಿಂದ ನಿರಂತರ ನಡೆಸಲಾಗಿದೆ. ಹೆಚ್ಚುವರಿ ತರಗತಿ ತೆಗೆದುಕೊಂಡು ಪಾಠಗಳನ್ನು ಮುಗಿಸಲಾಗಿದೆ. ಹಾಗಾಗಿ, ಪಠ್ಯಕ್ರಮದಲ್ಲಿ ಕಡಿತಗೊಳಿಸಿಲ್ಲ. ಬದಲಾಗಿ, ಪ್ರಶ್ನೆ ಪತ್ರಿಕೆಯ ಮಾದರಿಯಲ್ಲೇ ಕೆಲವು ಅನುಕೂಲ ಮಾಡಿಕೊಡಲಾಗಿದೆ. ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಶ್ನೆಗಳನ್ನು ನೀಡಿ, ಹೆಚ್ಚು ಆಯ್ಕೆಗಳು ಸಿಗುವಂತೆ ಮಾಡಲಾಗಿದೆ. ಕಡಿಮೆ ಓದಿದ ವಿದ್ಯಾರ್ಥಿಗಳಿಗೂ ಪರೀಕ್ಷೆ ಸುಲಭವಾಗಲಿದೆ.

* ಇಸಾಕ್‌, ಪಾಲಕರು: ಸಿಬ್ಬಂದಿ ನಿಯೋಜನೆ ಹೇಗೆ ಮಾಡಿದ್ದೀರಿ?

–ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿ ಕೊಠಡಿಗೆ ಒಬ್ಬ ಮುಖ್ಯ ಅಧೀಕ್ಷಕ, ಒಬ್ಬ ಪ್ರಶ್ನೆಪತ್ರಿಕೆ ಕಸ್ಟೋಡಿಯನ್‌, ಒಬ್ಬ ಉತ್ತರ ಪತ್ರಿಕೆ ಕಸ್ಟೋಡಿಯನ್‌ ಇರುತ್ತಾರೆ. ಜಿಲ್ಲಾಧಿಕಾರಿ ಕಚೇರಿಯಿಂದ ಕೂಡ ಒಬ್ಬ ಜಿಲ್ಲಾಮಟ್ಟದ ಚೀಫ್‌ ಆಬ್ಸರ್ವರ್‌ ಅವರನ್ನು ನಿಯೋಜಿಸಲಾಗುತ್ತದೆ.

* ಕೊಠಡಿಯಲ್ಲಿ ಏನೇನು ವ್ಯವಸ್ಥೆ ಮಾಡಿದ್ದೀರಿ?

–ಈಗ ತೀವ್ರ ಬಿಸಿಲಿನ ಪ್ರತಾಪ ಇರುವ ಕಾರಣ ಪ್ರತಿ ಕೊಠಡಿಯಲ್ಲೂ ಉತ್ತಮ ಫ್ಯಾನ್‌ ಇರುವಂತೆ ನೋಡಿಕೊಳ್ಳಲಾಗಿದೆ. ಎಲ್ಲ ಕಡೆಯೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ. ಎಲ್ಲಿ ಫ್ಯಾನ್‌ಗಳು ಸರಿಯಾಗಿ ಇಲ್ಲವೋ ಆ ಎಲ್ಲ ಕಾಲೇಜುಗಳ ಪ್ರಾಂಶುಪಾಲರಿಗೆ ಈಗಾಗಲೇ ಹೊಸ ಫ್ಯಾನ್‌ ಹಾಕುವಂತೆ ಸೂಚನೆ ನೀಡಲಾಗಿದೆ. ಬಹುಪಾಲು ಪರೀಕ್ಷೆಗಳು ಬೆಳಗಿನ ಸಮಯದಲ್ಲೇ ಇವೆ. ಹೀಗಾಗಿ, ವಿದ್ಯಾರ್ಥಿಗಳಿಗೆ ತೊಂದರೆ ಆಗುವುದಿಲ್ಲ.

* ಕಳೆದ ಬಾರಿ ಯಡ್ರಾಮಿಯಲ್ಲಿ ಇಂಗ್ಲಿಷ್‌ ಪರೀಕ್ಷೆ ವೇಳೆ ಕೇಂದ್ರದ ಮುಂದೆ ಗದ್ದಲ ನಡೆದಿತ್ತು. ಇಂಥ ಘಟನೆ ಮರುಕಳಿಸದಂತೆ ಏನು ಕ್ರಮ ವಹಿಸಿದ್ದೀರಿ?

–ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಹೊರಡಿಸಲಾಗುತ್ತದೆ. ಜೊತೆಗೆ, ಪೊಲೀಸ್‌ ಭದ್ರತೆ ಕೂಡ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ತೊಂದರೆ ನೀಡುವಂಥ ಕೆಲಸ ಯಾರೇ ಮಾಡಿದರೂ ಕ್ರಮಕ್ಕೆ ಮುಂದಾಗಲಾಗುವುದು.

ಉಚಿತ ಪ್ರಯಾಣಕ್ಕೆ ಅವಕಾಶ

ಪಿಯುಸಿ ದ್ವಿತೀಯ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ ಎಂದು ಶಿವಶರಣಪ್ಪ ಮೂಳೆಗಾಂವ ತಿಳಿಸಿದರು.

ವಿದ್ಯಾರ್ಥಿನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು, ‘ತಮ್ಮ ಊರಿನಿಂದ ಪರೀಕ್ಷಾ ಕೇಂದ್ರವಿರುವ ಊರಿಗೆ ಉಚಿತವಾಗಿ ಪ್ರಯಾಣಿಸಬಹುದಾಗಿದ್ದು, ವಿದ್ಯಾರ್ಥಿಗಳು ನಿರ್ವಾಹಕರಿಗೆ ತಮ್ಮ ಹಾಲ್‌ ಟಿಕೆಟ್‌ ತೋರಿಸಬೇಕು. ಕೆಲ ಗ್ರಾಮಗಳಲ್ಲಿ ಬೆಳಿಗೆ ಬೇಗನೇ ಹೋಗುವ ಬಸ್‌ಗಳಿದ್ದರೆ ಅವುಗಳನ್ನು ಪರೀಕ್ಷಾ ಸಮಯಕ್ಕೆ ತಕ್ಕಂತೆ ಸಮಯ ಹೊಂದಾಣಿಕೆ ಮಾಡಲೂ ಅಧಿಕಾರಿಗಳು ಒಪ್ಪಿದ್ದಾರೆ ಎಂದರು.

ಅಕ್ರಮ ತಡೆಯಲು ‘ದಿ ಎಂಡ್’ ಮೊಹರು!

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ 24 ಪುಟಗಳ ಉತ್ತರ ಪತ್ರಿಕೆಯನ್ನು ನೀಡಲಾಗುತ್ತದೆ. ವಿದ್ಯಾರ್ಥಿ ಎಷ್ಟು ಪುಟ ಬೇಕಾದರೂ ಬರೆಯಬಹುದು. ಹೆಚ್ಚುವರಿ ಉತ್ತರ ಪತ್ರಿಕೆಗಳನ್ನು ಬರೆಯಲೂ ಅವಕಾಶವಿದೆ. ಉತ್ತರ ಪತ್ರಿಕೆ ಬರೆದ ಬಳಿಕ ಆ ವಿದ್ಯಾರ್ಥಿ ಕೊನೆಯ ಉತ್ತರ ಬರೆದ ಪುಟಕ್ಕೆ ‘ದಿ ಎಂಡ್’ ಎಂಬ ಮೊಹರನ್ನು ಹಾಕಲಾಗುತ್ತದೆ. ಇದರಿಂದ ಅಕ್ರಮವಾಗಿ ಉತ್ತರ ಬರೆಯುವುದು ತಪ್ಪಲಿದೆ. ಇದನ್ನು ಮೊದಲ ಬಾರಿಗೆ ಜಾರಿಗೆ ತರಲಾಗಿದೆ ಎಂದು ಶಿವಶರಣಪ್ಪ ಮಾಹಿತಿ ನೀಡಿದರು.

25ನೇ ಸ್ಥಾನಕ್ಕೆ ತರುವ ಗುರಿ

ಕಳೆದ ಬಾರಿ ಕಲಬುರಗಿ ಜಿಲ್ಲೆಯು ಪಿಯು ಫಲಿತಾಂಶದಲ್ಲಿ ರಾಜ್ಯದಲ್ಲಿ 28ನೇ ಸ್ಥಾನದಲ್ಲಿತ್ತು. ಈ ಬಾರಿ 25ನೇ ಸ್ಥಾನಕ್ಕೆ ಏರುವ ಗುರಿ ಹೊಂದಲಾಗಿದೆ. ಉಪನ್ಯಾಸಕರ ಕೊರತೆ ಇದ್ದ ಕಡೆ ಬೇರೆ ಕಾಲೇಜಿನಿಂದ ಹೆಚ್ಚುವರಿ ಉಪನ್ಯಾಸಕರನ್ನು ನಿಯೋಜನೆ ಮಾಡಲಾಗಿತ್ತು. ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಅಷ್ಟೂ ಪಠ್ಯಕ್ರಮವನ್ನು ಅವಸರದಿಂದ ಮುಗಿಸುವ ಬದಲು ಪ್ರಮುಖವಾದ ಪಠ್ಯವನ್ನು ಪರಿಣಾಮಕಾರಿಯಾಗಿ ಬೋಧಿಸಿ ವಿದ್ಯಾರ್ಥಿಗಳಿಗೆ ಮನನ ಮಾಡಿಸುವಂತೆ ತಿಳಿಸಲಾಗಿತ್ತು. ಈ ಬಾರಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಈ ಕ್ರಮ ಸಹಾಯಕ್ಕೆ ಬರಬಹುದು ಎಂದು ಡಿಡಿಪಿಯು ಮಾಹಿತಿ ನೀಡಿದರು.

ಇನ್ನೂ ಬೇಕು ಮೂರು ಹೆಚ್ಚುವರಿ ಕೇಂದ್ರ

ಜಿಲ್ಲೆಯಲ್ಲಿ 257 ಪಿಯು ಕಾಲೇಜುಗಳಿವೆ. ದ್ವಿತೀಯ ಪಿಯು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಇನ್ನೂ ಮೂರು ಪರೀಕ್ಷಾ ಕೇಂದ್ರಗಳು ಹೆಚ್ಚುವರಿಯಾಗಿ ಬೇಕಾಗಿವೆ. ಅಫಲಪುರ, ಚಿತ್ತಾಪುರ ಹಾಗೂ ಕಲಬುರಗಿ ತಾಲ್ಲೂಕಿಗೆ ಒಂದೊಂದು ಪರೀಕ್ಷಾ ಕೇಂದ್ರ ನೀಡುವಂತೆ ಕೋರಿಕೆ ಸಲ್ಲಿಸಲಾಗಿತ್ತು. ಆದರೆ, ಕಾಯ್ದೆ ಪ್ರಕಾರ ಅದು ಸಧ್ಯವಾಗಲಿಲ್ಲ. ಕಾಲೇಜು ಆರಂಭವಾದ ಮೂರು ವರ್ಷಗಳ ಬಳಿಕವೇ ಅಲ್ಲಿ ಪರೀಕ್ಷಾ ಕೇಂದ್ರಕ್ಕೆ ಅನುಮತಿ ನೀಡಲು ಸಾಧ್ಯ. ಮುಂದಿನ ವರ್ಷದಿಂದ ಇದು ಜಾರಿಗೆ ಬರಲಿದೆ ಎಂದು ಶಿವಶರಣಪ್ಪ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಒಂದು ಡೆಸ್ಕ್‌ನಲ್ಲಿ ಇಬ್ಬರು

ಕಳೆದ ಬಾರಿ ಕೊರೊನಾ ಕಾರಣದಿಂದ ಅಂತರ ಕಾಪಾಡಿಕೊಳ್ಳುವ ಸಲುವಾಗಿ ಒಂದು ಡೆಸ್ಕ್‌ಗೆ ಒಬ್ಬರನ್ನು ಮಾತ್ರ ಕೂಡ್ರಿಸಲಾಗಿತ್ತು. ಆದರೆ, ಈ ಬಾರಿ ಕೊರೊನಾ ಹಾವಳಿ ನಿಂತಿದೆ. ಹಾಗಾಗಿ ಪ್ರತಿ ಡೆಸ್ಕ್‌ ಮೇಲೆ ಇಬ್ಬರು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಶಿವಶರಣಪ್ಪ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.