ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಶ್ರವಣದೋಷವಿದ್ದವರಿಗೆ ಯಾವ ಕೆಲಸ ಸಿಗಬಹುದು?

Last Updated 26 ಸೆಪ್ಟೆಂಬರ್ 2022, 3:10 IST
ಅಕ್ಷರ ಗಾತ್ರ

1. ನಾನು ಮೊದಲ ಪಿಯುಸಿ (ಕಾಮರ್ಸ್) ಓದುತ್ತಿದ್ದೇನೆ. ನನಗೆ ಶ್ರವಣ ದೋಷವಿದೆ. ನಮಗೆ ಯಾವ ಉದ್ಯೋಗಗಳು ಸಿಗಬಹುದು?

ಹೆಸರು, ಊರು ತಿಳಿಸಿಲ್ಲ.

ನಿಮಗೆ ಯಾವ ಮಟ್ಟದ ಶ್ರವಣ ದೋಷಯಿದೆಯೆಂದು ನೀವು ತಿಳಿಸಿಲ್ಲ. ಆದರೂ ನಿರಾಶೆಯಿಂದ ನಿಮ್ಮ ಭವಿಷ್ಯದ ಕನಸುಗಳ ಬಗ್ಗೆ ರಾಜಿಯಾಗದಿರಿ. ಗಂಭೀರವಾದ ಶ್ರವಣ ದೋಷವಿದ್ದರೂ ಸಹ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಆಯೋಜಿಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಐಎಎಸ್ ಹುದ್ದೆಯನ್ನು ಪಡೆದು ವೃತ್ತಿ ಜೀವನದಲ್ಲಿ ಯಶಸ್ವಿಯಾಗಿರುವ ಉದಾಹರಣೆಗಳುಂಟು. ಐಎಎಸ್ ಸೇರಿದಂತೆ ಸರ್ಕಾರದ ಅನೇಕ ಹುದ್ದೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಾತಿಯೂ ಇದೆ. ಇದಲ್ಲದೆ, ಖಾಸಗಿ ಕ್ಷೇತ್ರದ ಉತ್ಪಾದನೆ, ರೀಟೇಲ್, ಆರೋಗ್ಯ, ಮನರಂಜನೆ, ಶಿಕ್ಷಣ, ಹಣಕಾಸು ಮುಂತಾದ ಕ್ಷೇತ್ರಗಳಲ್ಲಿಯೂ ಉದ್ಯೋಗಾವಕಾಶಗಳಿವೆ. ಆದ್ದರಿಂದ, ನಿಮಗೆ ಸ್ವಾಭಾವಿಕ ಒಲವು ಮತ್ತು ಆಸಕ್ತಿಯಿರುವ ಕ್ಷೇತ್ರವನ್ನು ಗುರುತಿಸಿ, ಅಗತ್ಯವಾದ ಜ್ಞಾನ ಮತ್ತು ಕೌಶಲಗಳನ್ನು ಗಳಿಸಿ ವೃತ್ತಿಜೀವನವನ್ನು ರೂಪಿಸಿಕೊಳ್ಳಬಹುದು. ಸೂಕ್ತವಾದ ಚಿಕಿತ್ಸೆಯಿಂದ ಶ್ರವಣ ದೋಷದ ವ್ಯಾಪ್ತಿ ಮತ್ತು ತೀವ್ರತೆಯನ್ನು ಕಡಿಮೆಗೊಳಿಸಲು ಪ್ರಯತ್ನಿಸಿ .

2. ನಾನು ರಸಾಯನ ವಿಜ್ಞಾನದಲ್ಲಿ ಎಂ.ಎಸ್ಸಿ ಮಾಡಬೇಕು ಎಂದುಕೊಂಡಿದ್ದೇನೆ. ನನಗೆ ಇದೇ ವಿಷಯದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುವ ಆಸೆ ಇದೆ. ಆದರೆ, ರಸಾಯನ ವಿಜ್ಞಾನದಲ್ಲಿ ಯಾವ ವಿಷಯ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಗೊಂದಲ ಇದೆ. ಮಾರ್ಗದರ್ಶನ ಮಾಡಿ.

ವರ್ಷಾ, ಕೊಪ್ಪಳ.

ರಸಾಯನ ವಿಷಯದಲ್ಲಿ ವಿಜ್ಞಾನಿಯಾಗಬೇಕಾದರೆ, ಎಂ.ಎಸ್ಸಿ ನಂತರ ಪಿಎಚ್‌ಡಿ ಮಾಡುವುದು ಒಳ್ಳೆಯದು. ನಿಮ್ಮ ಆಸಕ್ತಿ, ಒಲವಿನಂತೆ ವೃತ್ತಿಯೋಜನೆಯನ್ನು ಮಾಡಿ ಎಂ.ಎಸ್ಸಿ ಮಾಡಿದರೆ ಸಾಕೇ ಅಥವಾ ಪಿಎಚ್‌ಡಿ ಮಾಡಬೇಕೇ ಎಂದು ನಿರ್ಧರಿಸಿ. ರಸಾಯನ ಶಾಸ್ತ್ರದ ಪ್ರಮುಖ ಶಾಖೆಗಳೆಂದರೆ ಆರ್ಗ್ಯಾನಿಕ್, ಇನ್‌ಆರ್ಗ್ಯಾನಿಕ್, ಅನಲಿಟಿಕಲ್, ಮೆಡಿಸಿನಲ್,
ಮಾಲಿಕ್ಯುಲರ್ ಮತ್ತು ಬಯೋ ಕೆಮಿಸ್ಟ್ರಿ. ಯಾವ ವಿಷಯದಲ್ಲಿ ವಿಜ್ಞಾನಿಯಾಗಬೇಕು ಎಂದು ಈಗಲೇ ನಿರ್ಧರಿಸಿದರೆ ಎಂ.ಎಸ್ಸಿ ನಂತರ ಪಿಎಚ್‌ಡಿ ಮಾಡಲು ಅನುಕೂಲ. ಪಿಎಚ್‌ಡಿ ಸಂಶೋಧನೆ ಕುರಿತು ಸಾಕಷ್ಟು ಸಂಪನ್ಮೂಲಗಳು ಇದ್ದರೂ ಸಹ ವಿಷಯವನ್ನು ನಿರ್ಧರಿಸುವುದು ಸುಲಭವಲ್ಲ. ವಿಷಯದ ಪ್ರಸ್ತುತತೆ, ವಿಷಯದ ಕುರಿತು ಸ್ವಾಭಾವಿಕವಾದ ಒಲವು ಮತ್ತು ಪ್ರೇರಣೆಯ ಜೊತೆಗೆ ಮಾರ್ಗದರ್ಶಕರ ಸಕಾರಾತ್ಮಕ ಅಭಿಪ್ರಾಯ ಮತ್ತು ಬೆಂಬಲವಿರಬೇಕು. ಎಂ.ಎಸ್ಸಿ ನಂತರ ಸರ್ಕಾರಿ ಮತ್ತು ಖಾಸಗಿ ವಲಯದ ರಾಸಾಯನಿಕ ಪದಾರ್ಥಗಳು, ಫಾರ್ಮಾ, ರಸಗೊಬ್ಬರ, ಡಿಸ್ಟಿಲರೀಸ್, ಜವಳಿ ಮತ್ತು ವರ್ಣದ್ರವ್ಯ, ಆಹಾರ ಮತ್ತು ಪಾನೀಯ ಸಂಸ್ಕರಣೆ, ಸಂಶೋಧನೆ, ಪ್ರಯೋಗಾಲಯಗಳು, ವಿದ್ಯಾಸಂಸ್ಥೆಗಳು ಸೇರಿದಂತೆ ಅನೇಕ ವಲಯಗಳಲ್ಲಿ ಉದ್ಯೋಗಾವಕಾಶಗಳಿವೆ. ಉನ್ನತ ಶಿಕ್ಷಣ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:https://www.youtube.com/c/EducationalExpertManagementCareerConsultant

3. 10ನೇ ತರಗತಿ ಓದುತ್ತಿದ್ದೇನೆ. ನಾನು ರಾಜ್ಯ ಪಠ್ಯಕ್ರಮ ಅಥವಾ ಐಸಿಎಸ್‌ಇ ಪಠ್ಯಕ್ರಮ ಮುಂದುವರಿಸಬೇಕೆ ? ಈಗಿನಿಂದಲೇ ಸಿಎ ಮಾಡಲು ಹೇಗೆ ತಯಾರಿ ನಡೆಸುವುದು? ಪೂರಕ ಕೋರ್ಸ್‌ಗಳನ್ನು ಮಾಡಿಕೊಳ್ಳಬಹುದೇ?

ಗಾನಾ ಗಂಗಮ್ಮ, ಊರು ತಿಳಿಸಿಲ್ಲ.

ಚಾರ್ಟೆಡ್ ಅಕೌಂಟೆಂಟ್ (ಸಿಎ) ಕೋರ್ಸ್ ಮಾಡುವುದಕ್ಕೆ ಐದು ಪ್ರಮುಖ ಹಂತಗಳಿವೆ.ಯಾವುದೇ ಪಠ್ಯಕ್ರಮದ 10ನೇ ತರಗತಿಯ ನಂತರ, ಸಿಎ ಫೌಂಡೇಷನ್ ಕೋರ್ಸ್‌ಗೆ ಇನ್‌ಸ್ಟಿಟ್ಯೂಟ್ ಅಫ್ ಚಾರ್ಟೆಡ್ ಅಕೌಂಟೆಂಟ್ಸ್ ಅಫ್ ಇಂಡಿಯ (ಐಸಿಎಐ) ಅವರಲ್ಲಿ ನೋಂದಾಯಿಸಿಕೊಂಡು, ಫೌಂಡೇಷನ್ ಕೋರ್ಸ್ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಬಹುದು. ಈ ಪರೀಕ್ಷೆಗೆ ಪಿಯುಸಿ ನಂತರ ಅರ್ಹತೆ ಸಿಗುತ್ತದೆ. ಈಗಲೇ ನೋಂದಾಯಿಸುವುದರಿಂದ, ಪರೀಕ್ಷೆಯ ತಯಾರಿಗೆ ಹೆಚ್ಚಿನ ಸಮಯ ಸಿಗುತ್ತದೆ. ಫೌಂಡೇಷನ್ ಕೋರ್ಸ್ ಪರೀಕ್ಷೆಯಲ್ಲಿ ಕನಿಷ್ಠ ಶೇ 50 ಅಂಕಗಳಲ್ಲಿ ಉತ್ತೀರ್ಣರಾಗಬೇಕು ಮತ್ತು ಪ್ರತಿ
ವಿಷಯದಲ್ಲಿ ಕನಿಷ್ಠ ಶೇ 40 ಅಂಕಗಳು ಗಳಿಸಿರಬೇಕು.ಫೌಂಡೇಷನ್ ಕೋರ್ಸ್ ನಂತರ ಸಿಎ ಮಧ್ಯಂತರ (ಇಂಟರ್‌ಮೀಡಿಯೆಟ್) ಕೋರ್ಸ್‌ಗೆ ನೋಂದಾಯಿಸಬೇಕು. ಮಧ್ಯಂತರ ಪರೀಕ್ಷೆಯ ನಂತರ ಮೂರು ವರ್ಷದ ಆರ್ಟಿಕಲ್‌ಶಿಪ್ ತರಬೇತಿಗಾಗಿ ಪ್ರಾಕ್ಟೀಸ್ ಮಾಡುತ್ತಿರುವ ಚಾರ್ಟೆಡ್ ಅಕೌಂಟೆಂಟ್ ಅವರಲ್ಲಿ ಸೇರಬೇಕು.ಕನಿಷ್ಠ 2 ವರ್ಷದ ತರಬೇತಿಯ ನಂತರ, ನೀವು ಸಿಎ ಅಂತಿಮ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು.ಸಿಎ ವೃತ್ತಿಗೆ ಪೂರಕವಾಗುವ ಅನೇಕ ಕೋರ್ಸ್‌ಗಳಿವೆ. ಈ ಸಾಧ್ಯತೆಗಳನ್ನು ಇಂಟರ್‌ಮೀಡಿಯೆಟ್ ಕೋರ್ಸ್ ನಂತರ ಪರಿಶೀಲಿಸುವುದು ಸೂಕ್ತ. ಅಂತಿಮ ಪರೀಕ್ಷೆಗೆ ಮುಂಚೆ, ಐಸಿಎಐ ನಡೆಸುವ ನಾಲ್ಕು ವಾರಗಳ ಐಟಿ ಮತ್ತು ಸಾಫ್ಟ್ ಸ್ಕಿಲ್ ಕೋರ್ಸ್
ಮಾಡಬೇಕು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:https://www.youtube.com/watch?v=fuTaa5UjZCo

4. ನಾನು ಬಿಎ ಪದವಿಯನ್ನು (ಎಚ್‌ಇಪಿ) ಮುಗಿಸಿದ್ದೇನೆ. ಬಿ.ಇಡಿಯಲ್ಲಿ ಐಚ್ಛಿಕ ಇಂಗ್ಲಿಷ್ ತೆಗೆದುಕೊಳ್ಳಬಹುದೇ? ಈ ರೀತಿ ಆಯ್ಕೆ ಇದೆಯೇ ತಿಳಿಸಿ.

ಹೆಸರು, ಊರು ತಿಳಿಸಿಲ್ಲ.

ಸಾಮಾನ್ಯವಾಗಿ ಬಿ.ಇಡಿ ಕೋರ್ಸ್‌ನಲ್ಲಿ ಕಡ್ಡಾಯವಾದ ವಿಷಯಗಳ ಜೊತೆಗೆ ಪದವಿ ಕೋರ್ಸ್‌ನಲ್ಲಿ ಓದಿರುವ ಎರಡು ಐಚ್ಛಿಕ ವಿಷಯಗಳನ್ನು ಆರಿಸಿಕೊಳ್ಳಬಹುದು. ಅದರೆ, ಆರಿಸಿಕೊಳ್ಳುವ ಐಚ್ಛಿಕ ವಿಷಯಗಳಲ್ಲಿ ಭೋಧಿಸುವ ಆಸಕ್ತಿ ಮತ್ತು ಪರಿಣತಿಯಿರಬೇಕು. ಉದಾಹರಣೆಗೆ, ನಿಮಗೆ ಇಂಗ್ಲಿಷ್ ಭಾಷೆಯಲ್ಲಿ ಪರಿಣತಿಯಿದ್ದು ಬಿ.ಇಡಿ ನಂತರ ಶಾಲೆಗಳಲ್ಲಿ ಇಂಗ್ಲಿಷ್ ಭೋಧಿಸುವ ಆಸಕಿಯಿದ್ದರೆ, ಇಂಗ್ಲಿಷ್ ಭಾಷೆಯನ್ನು ಒಂದು ಐಚ್ಛಿಕ ವಿಷಯವನ್ನಾಗಿ ಆರಿಸಿಕೊಳ್ಳಬಹುದು. ಜೊತೆಗೆ, ನಿಮಗೆ ಭೋಧಿಸಲು ಆಸಕ್ತಿ ಮತ್ತು ಪರಿಣತಿಯಿರುವ ಇನ್ನೊಂದು (ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ) ವಿಷಯವನ್ನು ಆರಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿ, ಪಠ್ಯಕ್ರಮ ಮತ್ತು ನಿಯಮಾವಳಿಗಳ ವಿವರಗಳಿಗೆ ನೀವು ಓದಲು ಬಯಸುವ ವಿಶ್ವವಿದ್ಯಾಲಯದ ಜಾಲತಾಣವನ್ನು ಗಮನಿಸಿ.

5. ನಾನು ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ವಿಭಾಗದಲ್ಲಿ ಬಿಎ ಪದವಿಯನ್ನು ಪಡೆದಿದ್ದೇನೆ. ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಈ ಪದವಿಯನ್ನು ಪರಿಗಣಿಸಬಹುದೇ?

ಮಹಮ್ಮದ್, ಬಳ್ಳಾರಿ.

ದೂರ ಶಿಕ್ಷಣ ಬ್ಯೂರೊ, ಯುಜಿಸಿ ಸಂಸ್ಥೆಯ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದ ಪದವೀಧರರು, ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಅರ್ಹರು. ನೀವು ಮಾಡಿರುವ ಪದವಿ ಕೋರ್ಸಿಗೆ ಮಾನ್ಯತೆ ಇದೆಯೇ ಎಂದು ಈ ಲಿಂಕ್ ಮುಖಾಂತರ ಪರಿಶೀಲಿಸಿ:https://deb.ugc.ac.in/

***

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT