16 ವರ್ಷದ ನಮ್ಮ ಒಬ್ಬಳೇ ಮಗಳು ಮೊಬೈಲ್ ವ್ಯಸನಿಯಾಗಿದ್ದಾಳೆ. ಎಷ್ಟೇ ಬುದ್ಧಿಮಾತು ಹೇಳಿದರೂ ಕೇಳುತ್ತಿಲ್ಲ. ಕಾಲೇಜು, ಅಭ್ಯಾಸದತ್ತ ಗಮನವಿಲ್ಲ. ಫ್ಯಾಷನ್, ರೀಲ್ಸ್ ಮಾಡುವುದರ ಕಡೆಗೆ ಗಮನ. ಲೈಕ್ಸ್ ಬಂದಿಲ್ಲವೆಂದು ಕೊರಗುತ್ತಾಳೆ. ಇದಕ್ಕಾಗಿ ಹರಕೆಯನ್ನೂ ಹೊತ್ತಿದ್ದಾಳೆ. ಇದರಿಂದಲೇ ಆದಾಯ ಬರುತ್ತದೆ, ಕಾಯಬೇಕಷ್ಟೆ ಎಂದು ಹೇಳುತ್ತಾಳೆ. ನಿದ್ರೆ, ಊಟ ಸರಿಯಾಗಿ ಮಾಡದೆ ಸೊರಗಿದ್ದಾಳೆ. ಸಣ್ಣಗೆ ಇರುವುದು ಮಹಾನ್ ಅದೃಷ್ಟ ಎಂದು ವಾದಿಸುತ್ತಾಳೆ. ಓದಿ ಉದ್ಧಾರ ಆದವರಿಗಿಂತ ಓದದೇ ಉದ್ಧಾರ ಆದವರು ಹೆಚ್ಚು ಎನ್ನುತ್ತಾ ಮಾತು ಮಾತಿಗೂ ರೇಗುತ್ತಾಳೆ. ಭವಿಷ್ಯದ ಬಗ್ಗೆ ಹೇಳಿದರೆ ‘ನೀವು ಮಾಡಿಟ್ಟ ಆಸ್ತಿ ಯಾರಿಗೆ? ನನಗೆ ತಾನೆ’ ಎಂದೆಲ್ಲ ವಾದಿಸುತ್ತಾಳೆ. ಅವಳ ಬದುಕು–ಭವಿಷ್ಯದ್ದೇ ಚಿಂತೆಯಾಗಿದೆ. ಹೇಗೆ ಸರಿ ಮಾಡಬೇಕು ತಿಳಿಯುತ್ತಿಲ್ಲ.

–ಗೌರಿ ಸತೀಶ, ಬುಗರಿಗದ್ದೆ

ಉತ್ತರ...

ನಿಮಗಿರುವ ಚಿಂತೆ ಮತ್ತು ಅಸಹಾಯಕತೆ ನನಗೆ ಅರ್ಥವಾಗುತ್ತದೆ. 15– 16ರ ವಯಸ್ಸೆಂದರೆ, ಹುಡುಗಿಯ ಜೀವನದಲ್ಲಿ ಅನಿರೀಕ್ಷಿತ ತಿರುವು ಬರುವ ಹಂತ. ಜೀವರಸಾಯನಿಕ ವೈಪರೀತ್ಯದಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಅವಳಲ್ಲಿ ಬದಲಾವಣೆಯಾಗುತ್ತದೆ. ಬದುಕಿನ ಗಾಂಭೀರ್ಯ ಅರ್ಥವಾಗದ ವಯಸ್ಸದು. ವಸಂತ ಕಾಲದ ಕೋಗಿಲೆಯಂತೆ ಹಾಡುತ್ತಾ, ನಲಿಯುತ್ತಾ ಇರುವುದಷ್ಟೇ ಚೆನ್ನಾಗಿ ಅನ್ನಿಸುವ ಕಾಲವದು. ಅವಳಿಗೆ ಅವಳಿಷ್ಟದ ಸ್ವಾತಂತ್ರ್ಯ ಬೇಕಾಗಿರುತ್ತದೆ.

ಆದರೆ ಮೊಬೈಲ್, ಸಾಮಾಜಿಕ ಮಾಧ್ಯಮ ಹಾಗೂ ಹೊರಗಿನ ಪ್ರಭಾವಗಳು ಆ ‘ಸ್ವಾತಂತ್ರ್ಯ’ವನ್ನು ತಪ್ಪಾಗಿ ಮಾರ್ಗದರ್ಶಿಸುತ್ತಿವೆ. ಅದನ್ನು ಸತ್ಯ ಎಂದು ಆಕೆ ನಂಬುತ್ತಾಳೆ. ಇಂದಿನ ಕಾಲದಲ್ಲಿ ಸೋಷಿಯಲ್ ಮೀಡಿಯಾ ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿದೆ. ಇದರ ಪ್ರಭಾವದಲ್ಲಿ ಇಂದಿನ ‘ಝೆನ್– ಜಿ’ಗಳು ಮುಳುಗೇಳುತ್ತಿದ್ದಾರೆ. ಇದರ ಅತಿಯಾದ ಬಳಕೆ ಅವರ ಜೀವನದಲ್ಲಿ ಹಲವು ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತಿದೆ ಎನ್ನುವುದು ನಿರ್ವಿವಾದ. ಇದರ ಪರಿಣಾಮದಿಂದ ಮುಂದೆ ಎಂತಹ ಜಗತ್ತು ನಿರ್ಮಾಣವಾಗುತ್ತದೆ ಎನ್ನುವುದನ್ನು ನಾವು ಕಾದು ನೋಡಬೇಕಷ್ಟೆ.

ನಿಮ್ಮ ಮಗಳಿಗೆ ನೀವು ಉಪದೇಶ ಕೊಡಲು ಹೋಗುವುದಕ್ಕಿಂತ, ಅವಳ ಮನಃಸ್ಥಿತಿಯನ್ನು ತಿಳಿಯಲು ಪ್ರಯತ್ನಿಸಿ. ‘ನೀನು ಇಷ್ಟೊಂದು ಸಮಯ ರೀಲ್ಸ್ ಮಾಡ್ತೀಯಲ್ಲ, ಅದರಿಂದ ನಿನಗೆ ಎಷ್ಟು ಸಂತೋಷ ಸಿಗುತ್ತದೆ? ನಿನ್ನ ಭವಿಷ್ಯದ ನಿರ್ಮಾಣಕ್ಕೆ ಅದರಿಂದ ಹೇಗೆ ಸಹಾಯವಾಗುತ್ತದೆ?’ ಎಂದು ಕೇಳಿ. ಅವಳ ಉತ್ತರವನ್ನು ಗಮನಿಸಿ. ನೀವು ಚಿಂತೆಯಿಂದ, ಕೋಪದಿಂದ ಮಾತನಾಡಿದಷ್ಟು ಅವಳ ಪ್ರತಿರೋಧವೂ ಹೆಚ್ಚಾಗಬಹುದು.

ಮನೆಯಲ್ಲಿ ಎಲ್ಲರೂ ರಾತ್ರಿ ಹತ್ತು ಗಂಟೆಯ ನಂತರ ಮೊಬೈಲ್ ಫೋನ್ ಬಳಸುವುದನ್ನು ನಿಲ್ಲಿಸುವ ಕ್ರಮವನ್ನು ಪ್ರಾರಂಭಿಸಿ. ಹಾಗೆ ಮಾಡುವುದರಿಂದ ನೀವು ಅವಳೊಬ್ಬಳನ್ನೇ ನಿಯಂತ್ರಿಸಲು ಪ್ರಯತ್ನಿಸಿದಂತೆ ಅವಳಿಗೆ ಭಾಸವಾಗುವುದಿಲ್ಲ. ಎಲ್ಲರೂ ರಾತ್ರಿ ಒಟ್ಟಿಗೇ ಊಟ ಮಾಡುವುದರಿಂದ, ಬೆಳಿಗ್ಗೆ ಎಲ್ಲರೂ ಒಟ್ಟಿಗೇ ವಾಕಿಂಗ್ ಹೋಗುವುದರಿಂದ, ವಾರಕ್ಕೊಮ್ಮೆ ಎಲ್ಲರೂ ಕೆಲವು ಗಂಟೆಗಳಷ್ಟಾದರೂ ಒಟ್ಟಿಗೇ ಹೊರಗೆ ಎಲ್ಲಾದರೂ ಹೋಗಿಬರುವುದರಿಂದ ಪರಸ್ಪರ ಹತ್ತಿರವಾಗುವುದಕ್ಕೆ ಸಹಾಯವಾಗುತ್ತದೆ. ಇದರಿಂದ ಅನೇಕ ಸಮಸ್ಯೆಗಳು ಹುಟ್ಟಿನಲ್ಲಿಯೇ ಸಾಯುತ್ತವೆ. ಸಂಸಾರದಲ್ಲಿ ಸಾಮರಸ್ಯ ಹೆಚ್ಚಬೇಕಾದರೆ, ಪರಸ್ಪರರು ಸಾಧ್ಯವಾದಷ್ಟೂ ಮಾನಸಿಕವಾಗಿ ಹತ್ತಿರವಾಗಬೇಕು. ಇದಕ್ಕಾಗಿ ಎಲ್ಲರೂ ಒಂದಿಷ್ಟು ತ್ಯಾಗವನ್ನು ಮಾಡಬೇಕಾಗುತ್ತದೆ.

ಹದಿಹರೆಯದ ಅವಳ ಅಟಾಟೋಪಗಳನ್ನು ಒಂದೆರಡು ದಿನಗಳಲ್ಲಾಗಲೀ ನಾಲ್ಕಾರು ಮಾತುಗಳಲ್ಲಾಗಲೀ ಆರೆಂಟು ಮಾತ್ರೆಗಳಿಂದಾಗಲೀ ಸರಿಪಡಿಸಲು ಸಾಧ್ಯವಿಲ್ಲ. ಅದಕ್ಕಾಗಿ ಕುಟುಂಬದ ನೀವೆಲ್ಲರೂ ಪರಸ್ಪರ ಸಹನೆಯಿಂದ ಸತತವಾಗಿ ಪ್ರಯತ್ನಿಸಬೇಕು. ಸೋಷಿಯಲ್ ಮೀಡಿಯಾದ ‘ಲೈಕ್ಸ್’ ಗಳಿಂದಾಗಲೀ ‘ಫಾಲೋವರ್ಸ್’ ಗಳಿಂದಾಗಲೀ ನಿಜಜೀವನದಲ್ಲಿ ಪ್ರಯೋಜವಾಗುವುದು ತೀರಾ ಕಡಿಮೆ ಎನ್ನುವುದನ್ನು ಕೆಲವು ಉದಾಹರಣೆಗಳ ಮೂಲಕ ಅವಳಿಗೆ ತಿಳಿಸಿ ಹೇಳಿ.

ನಿಮ್ಮ ಮಗಳು ಭಾವನಾತ್ಮಕ ವ್ಯಕ್ತಿತ್ವದವಳಾದರೂ ವ್ಯಾವಹಾರಿಕವಾಗಿ ಚತುರೆಯಂತೆ ಕಾಣುತ್ತಾಳೆ. ಈ ವಯಸ್ಸಿನಲ್ಲಿಯೇ ನಿಮ್ಮ ಆದಾಯದ ಬಗ್ಗೆ, ಆಸ್ತಿಯ ಬಗ್ಗೆ ಅವಳಿಗೆ ತಿಳಿದಿದೆ ಎನ್ನುವುದು ಸಮಾಧಾನದ ವಿಷಯವೇನಲ್ಲ. ಅವಳಿಗೆ ದೇವರ ಮೇಲೆ ಭಯ, ಭಕ್ತಿ ಹಾಗೂ ವಿಶ್ವಾಸ ಇದ್ದಂತಿದೆ. ಅದರ ಮೂಲಕ ಅವಳನ್ನು ಸರಿದಾರಿಗೆ ತರಲು ಪ್ರಯತ್ನಿಸಬಹುದು. ಇಷ್ಟೆಲ್ಲ ಪ್ರಯತ್ನದ ನಂತರವೂ ನಿಮ್ಮ ನಿರೀಕ್ಷೆಯ ಪರಿಣಾಮ ಕಾಣದಿದ್ದರೆ, ಅವಳ ಜೊತೆಗೆ ನೀವು ಮಾನಸಿಕ ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-51-2090792918

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.