ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಾ... ಶಾಲೆಗೆ ಹೋಗಿ ಬರುವೆಯಾ? ಪೋಷಕರಿಗೆ ಇಲ್ಲಿವೆ ಸಲಹೆಗಳು

–ಅರುಣಾ ಯಡಿಯಾಳ್ ಲೇಖನ
Published 27 ಮೇ 2023, 2:24 IST
Last Updated 27 ಮೇ 2023, 2:24 IST
ಅಕ್ಷರ ಗಾತ್ರ

ಜೂನ್‌ ಒಂದರಿಂದ ಶೈಕ್ಷಣಿಕ ವರ್ಷ ಆರಂಭವಾಗಲಿದೆ. ಬೆಚ್ಚಗಿನ ಮನೆ, ಅಪ್ಪ ಅಮ್ಮನನ್ನು ಬಿಟ್ಟು ಶಾಲೆ ಹೋಗುವುದೆಂದರೆ ಹಲವು ಮಕ್ಕಳಿಗೆ ದುಃಖವೇ ಬಂದು ಬಿಡುತ್ತದೆ. ಅದರಲ್ಲೂ ಮೊದಲ ಬಾರಿಗೆ ವಿದ್ಯಾದೇಗುಲಕ್ಕೆ ಅಡಿ ಇಡುವ ಮಕ್ಕಳು ಹಾಗೂ ಪೋಷಕರಿಗೂ ಇದೊಂದು ಭಾವಾನಾತ್ಮಕ ಘಟ್ಟವೇ ಸರಿ. ಈ ಘಟ್ಟವನ್ನು ಸರಾಗವಾಗಿ ಹಾದು ಹೋಗುವ ಕುರಿತು ಮಂಗಳೂರಿನ ಮನೋವೈದ್ಯೆ

ಅರುಣಾ ಯಡಿಯಾಳ್ ಲೇಖನ

ಮರಿ ಹಕ್ಕಿಗೆ ಬೇಕೇ ಬೇಕು ಶಾಲೆ ಎಂಬ ಬಾನು. ತಾನೇ ಇಟ್ಟ ತತ್ತಿಗೆ ಕಾವು ಕೊಟ್ಟು, ಮರಿ ಮಾಡಿ, ಕಾಳು ತಿನ್ನಿಸಿದ ಅಮ್ಮ ಹಕ್ಕಿಗೆ ಗೊತ್ತೇ ಇರುತ್ತದೆ ಅಲ್ಲವೇ ರಕ್ಕೆ ಬಲಿತ  ನಂತರ ಮರಿಹಕ್ಕಿಗಳು ಗೂಡು ಬಿಟ್ಟು ಹಾರಿ ಹೋಗುವ ಸಂಗತಿ. ಹಾಗೆಯೇ  ಪ್ರತಿ ಮಗುವು ಪೋಷಕರ ಮುದ್ದು ಮುಚ್ಚಟೆಯಲ್ಲಿ ಬೆಳೆದು ಬಂದಿದ್ದರೂ ನಾಲ್ಕೈದು ವರ್ಷವಾಗುತ್ತಲೇ ಶಾಲೆಗೆ ಹೋಗುವ ಅನಿವಾರ್ಯ ಬಂದೇ ಬರುತ್ತದೆ. ಇದು  ಮಕ್ಕಳ ಹಾಗೂ ಪೋಷಕರ ಜೀವನದಲ್ಲಿ ಮುಖ್ಯ ಮೈಲಿಗಲ್ಲು ಹೌದು. ಮೊದಲನೇಯ ಸಲ ಮನೆಯ, ಮನೆಯವರ ಬೆಚ್ಚಗಿನ ಪರಿಚಿತ ವಲಯದಿಂದ ಹೊಸದಾದ ಅಪರಿಚಿತ ಶಾಲೆಯ ಆವರಣಕ್ಕೆ ತೆರಳುವಾಗ ಉತ್ಸಾಹದ ಬುಗ್ಗೆಗಳಂತಿರುವ ಮಕ್ಕಳಲ್ಲೂ ಕೆಲವೊಮ್ಮೆ ಆತಂಕ ಕಾಣಿಸಿಕೊಳ್ಳಬಹುದು. 

ಕುತೂಹಲ, ಖುಷಿ, ಉಮೇದು ಎಷ್ಟು ಇರುತ್ತದೋ ಅಷ್ಟೆ ವ್ಯಕ್ತ, ಅವ್ಯಕ್ತ ಭಯ, ಅಳುಕು, ಗೊಂದಲ ಆತಂಕ ಕೂಡ ಈ ಪುಟ್ಟ ಮನಗಳಲ್ಲಿ ಇರಬಹುದು. ಈ ಗೊಂದಲ, ಆತಂಕ, ಚಿಂತೆ ಪೋಷಕರನ್ನೂ ಕಾಡಬಹುದು. ಮನೆಯಲ್ಲಿಯೇ ಮೊದಲೇ ಅಕ್ಕ, ಅಣ್ಣ ಇದ್ದಲ್ಲಿ  ಈ ಶಾಲೆಯ ಮೊದಲ ದಿನದ ಭಯ ಅದೆಷ್ಟೋ ಕಡಿಮೆಯೂ ಇರಬಹುದು. ಕುಣಿದು ಕುಪ್ಪಳಿಸಿ ಶಾಲೆಗೆ ಹೋಗುವ ಮಕ್ಕಳು ಕೂಡ ಕೆಲವೊಮ್ಮೆ ಅಳುತ್ತ, ಶಾಲೆಗೆ ಹೋಗಲ್ಲ ಎಂದು ರಂಪ ಮಾಡಬಹುದು. ಈ ಮೊದ ಮೊದಲು ಶಾಲೆಗೆ ಕಳುಹಿಸುವ ಸಾಹಸ ಪೋಷಕರನ್ನು ಭಾವನಾತ್ಮಕವಾಗಿ ಜರ್ಜರಿಸಿ ಹೈರಾಣಾಗಿಸುವಂತೆ ಮಾಡಿರುವ ಉದಾಹರಣೆಗಳು ಇವೆ. ಇಷ್ಟೆಲ್ಲ ಆದರೂ ಮಕ್ಕಳನ್ನು ಶಾಲೆಗೆ ಕಳುಹಿಸದೇ ಮನೆಯಲ್ಲಿಯೇ ಉಳಿಸಿಕೊಳ್ಳಲು ಆದೀತೆ?. ಶಾಲೆಗೆ ಕಳುಹಿಸುವ ಅನಿವಾರ್ಯ ಎಂದ ಮೇಲೆ ಆ ಕೆಲಸವನ್ನು ಸುಸೂತ್ರವಾಗಿ ಸರಾಗವಾಗಿ ಮಾಡಿಕೊಂಡು ಹೋಗಲು ಕಲಿತರೆ ಒಳಿತಲ್ಲವೇ.  ಮಕ್ಕಳನ್ನು ಮೊದಲ ಸಲ ಶಾಲೆಗೆ ಕಳುಹಿಸುವ ಮುನ್ನ ಈ ಸಲಹೆ ಸೂಚನೆಗಳನ್ನು ಅನುಸರಿಸಿದರೆ ಎದುರಾಗುವ ಇಂಥ ಕಷ್ಟಗಳು ಬೆಣ್ಣೆಯಂತೆ ಕರಗಿ ಹೋಗಬಹುದು.  ಒಮ್ಮೆ ಪಾಲಿಸಿ ನೋಡಿ. 

ಪೋಷಕರಿಗೆ ಇಲ್ಲಿವೆ ಸಲಹೆಗಳು

lಮೊದಲನೆಯದಾಗಿ ಮಗು ಹೋಗಲಿರುವ ಶಾಲೆ, ಕುಳಿತುಕೊಳ್ಳುವ ಕೊಠಡಿ, ಆಡುವ ಮೈದಾನವನ್ನು ಶಾಲೆಗೆ ಹೋಗುವ ಮುನ್ನ ಮಗುವಿನೊಂದಿಗೆ ಹೋಗಿ ನೋಡಿ ಬಂದು ಆ ಹೊಸ ವಾತಾವರಣವನ್ನು ಮಗುವಿಗೆ ಪರಿಚಯಿಸಿ. 

lಶಾಲೆಯ ಬಗ್ಗೆ, ಶಿಕ್ಷಕರ ಬಗ್ಗೆ, ಸಿಗಲಿರುವ ಪುಟ್ಟ ಗೆಳೆಯರ ಬಗ್ಗೆ , ಕಲಿಯುವ ಹೊಸ ಪಾಠ, ಆಟಗಳ ಬಗ್ಗೆ ಸದಾ ಸಕಾರಾತ್ಮಕವಾಗಿ ಮಾತನಾಡಿ, ಮಕ್ಕಳನ್ನು ಹುರಿದುಂಬಿಸಿ. ಮನೆಯಲ್ಲಿರುವ ದೊಡ್ಡ ಮಕ್ಕಳಿಗೂ ಹಾಗೇ ಮಾಡಲು ತಾಕೀತು ಮಾಡಿ.

lಶಾಲೆಯ ಬಗ್ಗೆ ಒಳ್ಳೆಯ ಸಕಾರಾತ್ಮಕ(ಪಾಸಿಟಿವ್‌) ಕಥೆಗಳನ್ನು ಓದಿ ಹೇಳಿ. ಆ ಬಗೆಗಿನ ಕಥೆ ಪುಸ್ತಕಗಳನ್ನು ತರಿಸಿಕೊಂಡು ಓದಿ ಹೇಳಿ. ಶಾಲೆಯಲ್ಲಿ ತಂದೆ ತಾಯಿಯ ಆರೈಕೆ ಸಹಾಯವಿಲ್ಲದೇ ಇರಬೇಕಾಗಿ ಬರುವ ಸಂದರ್ಭದಲ್ಲಿ ಬೇಕಾಗುವ ಜೀವನ ಕಲೆಗಳನ್ನು ಮನೆಯಲ್ಲಿಯೇ ಅಭ್ಯಾಸ ಮಾಡಿಸಿ ಕಳಿಸಿ. ಉದಾಹರಣೆಗೆ ಕೈ ಬಾಯಿ ತೊಳೆದುಕೊಳ್ಳುವುದು, ಕರವಸ್ತ್ರ ಬಳಸುವುದು, ಶೌಚಾಲಯಕ್ಕೆ ಹೋಗಿ ಬರುವುದು, ಶುಚಿತ್ವ ಕಾಪಾಡಿಕೊಳ್ಳುವುದು, ಊಟದ ಡಬ್ಬಿ, ನೀರಿನ ಬಾಟಲಿಯನ್ನು ತೆಗೆಯುವುದು, ಊಟದ ಬುತ್ತಿಯನ್ನು ಖಾಲಿ ಮಾಡಿ ತರುವುದು, ಶಾಲೆಯ ಚೀಲವನ್ನು ಜೋಡಿಸಿಟ್ಟುಕೊಂಡು, ವಸ್ತುಗಳನ್ನು ಜೋಪಾನವಾಗಿ ಪ್ರತಿ ದಿನವೂ ವಾಪಸ್ ತರುವುದು, ಇತರ ಮಕ್ಕಳ ವಸ್ತುಗಳನ್ನು ತರದೇ ಇರುವುದು ಇತರೆ ಕಲೆಗಳನ್ನು ಅಭ್ಯಾಸ ಮಾಡಿಸಿ ಕಳುಹಿಸಿದರೆ ಮಕ್ಕಳಲ್ಲೂ ಆತ್ಮವಿಶ್ವಾಸ ಮೂಡುತ್ತದೆ. 

lಮಕ್ಕಳಿಗೆ ಶಾಲೆಯಲ್ಲಿ ಏನೇ ತೊಂದರೆಯಾದರೂ ಯಾರನ್ನಾದರೂ ಸಹಾಯ ಕೇಳಿ ಪಡೆಯುವಂತೆ ತರಬೇತಿ ನೀಡಬೇಕು. ತಮ್ಮ ಹೆಸರು, ತಂದೆ ತಾಯಿಯ ಹೆಸರು, ವಿಳಾಸ, ಸಂಪರ್ಕ ಸಂಖ್ಯೆಗಳನ್ನು ಕಲಿಸಿ, ಶಾಲೆಗೆ ಕಳುಹಿಸಿದರೆ ಮಕ್ಕಳಿಗೂ ಧೈರ್ಯ ಬರುತ್ತದೆ. ಏನೇ ಆದರೂ ಮನೆಯಲ್ಲಿ ಆದದ್ದನ್ನು ಹೇಳಿಕೊಳ್ಳಬೇಕು ಎಂದು ಹೇಳಿದರೆ ಒಳ್ಳೆಯದು. 

l ಸರಿಯಾದ ಸಮಯದಲ್ಲಿ ಮಕ್ಕಳಿಗೆ ನಿದ್ರೆ, ಆಹಾರ, ಆಟ, ಆರಾಮ, ವಿರಾಮ, ನಿದ್ರೆ, ಮನರಂಜನೆ ಎಲ್ಲ ಸಿಗುವಂತೆ ಮನೆಯಲ್ಲಿಯೇ ಒಂದು ಶಿಸ್ತಿನ ತಳಹದಿ ಇದ್ದರೆ ಮಕ್ಕಳು ಶಾಲೆಯ ಶಿಸ್ತಿಗೂ ಹೊಂದಿಕೊಳ್ಳಲು ಸುಲಭವಾಗುತ್ತದೆ. 

lಶಾಲೆಗೆ ಹೋಗಿ ಬರುವ ಮಕ್ಕಳು ಸುಸ್ತಾಗಿ, ಸಿಟ್ಟಾಗಿಯೂ ಇರುವ ಸಾಧ್ಯತೆ ಇರುತ್ತದೆ. ಬೇರೆ ಮಕ್ಕಳಿಂದ ಯಾವುದಾದರೂ ಸೋಂಕು, ಸೀನು, ಹೇನು ಹೊತ್ತುಕೊಂಡು ಬರುವ ಸಂಭವವೂ ಅಧಿಕವೇ. ಆಗೆಲ್ಲ ಪೋಷಕರು ತಾಳ್ಮೆಗೆಡದೇ ಸಂಯಮದಿಂದ ಶಾಲೆ, ಶಿಕ್ಷಕರನ್ನು ದೂರದೇ ಪರಿಸ್ಥಿತಿಯನ್ನು ನಿಭಾಯಿಸಲು ಕಲಿತುಕೊಳ್ಳಬೇಕು. ಬೇರೆ  ಪೋಷಕರೊಂದಿಗೆ, ಶಿಕ್ಷಕರೊಂದಿಗೆ ಸಂಪರ್ಕದಲ್ಲಿರಬೇಕು.  ಒಟ್ಟಿನಲ್ಲಿ ತಮ್ಮಲ್ಲಿ ಆಗುತ್ತಿರುವ ತುಮಲಗಳನ್ನು ಮಕ್ಕಳೆದುರು ತೋರಗೊಡದೇ ಮಕ್ಕಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು. 

ಪ್ರತಿ ಮನೆಯ ಮರಿ ಹಕ್ಕಿಗೂ ಶಾಲೆಯೆಂಬ ಬಾನು ಬೇಕು ಸ್ವಚ್ಛಂದವಾಗಿ ಹಾರಲು. ಆ ಬಾನಿಗೂ ಬೇಕು ಈ ಮರಿ ಹಕ್ಕಿಗಳ ಹಾರಾಟ, ಕಲರವ. ತಮ್ಮದೇ ಆದ ಸೋಜಿಗವನ್ನು ಜಗದೊಡನೆ ಹಂಚಿಕೊಳ್ಳಲು ಪೋಷಕರು ಇಡಬೇಕಾದ ಮೊದಲ ಹೆಜ್ಜೆ ಇದುವೇ ಅಲ್ಲವೇ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT