ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಸಿ: ವಿಜ್ಞಾನ–ಇಂಗ್ಲಿಷ್‌ ಕಗ್ಗಂಟು ಜೊತೆಗಿರಲಿ ನಿಘಂಟು

Last Updated 13 ಜೂನ್ 2022, 2:48 IST
ಅಕ್ಷರ ಗಾತ್ರ

ಉತ್ತಮ ಅಂಕಗಳಿಸಿ ಎಸ್‌ಎಸ್‌ಎಲ್‌ಸಿ ಪಾಸಾದ ಬಹುತೇಕ ವಿದ್ಯಾರ್ಥಿಗಳ ಪ್ರಥಮ ಆಯ್ಕೆ ಪಿಯುಸಿಯಲ್ಲಿ ವಿಜ್ಞಾನ ವಿಷಯವೇ ಆಗಿರುತ್ತದೆ. ಕಡಿಮೆ ಅಂಕಗಳಿಸಿದ ಅನೇಕರು ಕಾಮರ್ಸ್ ಅಥವಾ ಕಲಾ ವಿಭಾಗ ಆಯ್ಕೆ ಮಾಡಿಕೊಳ್ಳುತ್ತಾರೆ.

ಎಂಜಿನಿಯರಿಂಗ್ ಮತ್ತು ವೈದ್ಯಕೀಯ – ಅರೆವೈದ್ಯಕೀಯ ಕೋರ್ಸ್ ಓದಬಯಸುವವರು ಅನಿವಾರ್ಯವಾಗಿ ವಿಜ್ಞಾನವನ್ನೇ ಆಯ್ಕೆ ಮಾಡಿಕೊಳ್ಳಬೇಕು. ನಗರ ಹಾಗೂ ಪಟ್ಟಣ ಪ್ರದೇಶಗಳ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಕಲಿತವರು ಪಿಯುಸಿಯಲ್ಲಿ ವಿಜ್ಞಾನ ವಿಷಯ ಆರಿಸಿಕೊಂಡು ಸುಲಭವಾಗಿ ಓದು ಮುಂದುವರೆಸುತ್ತಾರೆ. ಆದರೆ, 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ, ಜೀವನದಲ್ಲಿ ಏನಾದರೂ ದೊಡ್ಡದಾಗಿ ಸಾಧಿಸಬೇಕೆಂಬ ಗುರಿಯೊಂದಿಗೆ ಪಿಯುಸಿಯಲ್ಲಿ ವಿಜ್ಞಾನ ವಿಷಯ (ಇಂಗ್ಲಿಷ್‌ ಮಾಧ್ಯಮದಲ್ಲಿ) ತೆಗೆದುಕೊಳ್ಳುವ ಗ್ರಾಮೀಣ ಮತ್ತು ಅರೆ ನಗರ ಪ್ರದೇಶದ ಮಕ್ಕಳಿಗೆ ಓದು ಕಠಿಣವಾಗುತ್ತದೆ. ಉಪನ್ಯಾಸಕರು ಬಳಸುವ ಇಂಗ್ಲಿಷ್‌ನಿಂದಾಗಿ ಕಂಗಾಲಾಗಿಬಿಡುತ್ತಾರೆ!

ಆಂಗ್ಲ ಮಾಧ್ಯಮದ ಏರು ಹಾದಿ

ಮಾಧ್ಯಮ ಬದಲಾದಾಗ, ಹೊಸದಕ್ಕೆ ಹೊಂದಿಕೊಳ್ಳುವುದು ತುಂಬಾ ಕಷ್ಟ. ವಿಜ್ಞಾನ ವಿಭಾಗದ ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ ವಿಷಯಗಳಲ್ಲಿ ಬರುವ ಪಾರಿಭಾಷಿಕ ಪದಗಳ ಅರ್ಥ ತಿಳಿಯು ವುದು, ಪದಗಳ ಉಚ್ಚಾರಣೆ, ಸ್ಪೆಲಿಂಗ್ ಬರೆಯುವುದು, ನೆನಪಿಟ್ಟು ಕೊಳ್ಳುವುದು, ಪರೀಕ್ಷೆಗಳಲ್ಲಿ ಯಥಾವತ್ತಾಗಿ ಉತ್ತರಿಸುವುದು ಇವೆಲ್ಲ ಅಷ್ಟು ಸುಲಭವಲ್ಲ.

ಕನ್ನಡ ಮಾಧ್ಯಮದಲ್ಲಿ ಕಲಿತ ‘ವೇಗೋತ್ಕರ್ಷ‘, ‘ದಿಶಾಯುಕ್ತ‘, ‘ಪತ್ರ ಹರಿತ್ತು‘, ‘ದ್ಯುತಿ ಸಂಶ್ಲೇಷಣೆ‘, ‘ಶ್ರೇಢಿ‘, ‘ವಿದ್ಯುದ್ವಿಭಜನೆ‘, ‘ಬಾಷ್ಪೀಕರಣ‘, ‘ಆವೇಗ‘, ‘ಜಡತ್ವ‘, ‘ರೋಹಿತ‘, ‘ವಿಲೋಮ‘.. ಇಂಥ ಪದಗಳಿಗೆ ಸಮನಾದ ಇಂಗ್ಲಿಷ್ ಪದಗಳು ಪಠ್ಯದಲ್ಲಿರುತ್ತವೆ. ಆದರೆ ಇದಕ್ಕೆ ಇದೇ ಸಮನಾದ ಪದ ಎಂಬುದು ವಿದ್ಯಾರ್ಥಿಗಳಿಗೆ ಅಷ್ಟು ಬೇಗ ತಿಳಿಯುವುದಿಲ್ಲ. ಅದನ್ನು ಆಂಗ್ಲಮಾಧ್ಯಮದಲ್ಲಿ ಪಾಠ ಮಾಡುವವರು ಹೇಳಿ ಕೊಡುವುದು ವಿರಳ.

‘ಎಕ್ಸ್‌’ ಬೆಲೆಯನ್ನು ಕಂಡು ಹಿಡಿಯಿರಿ ಎಂಬು ದಕ್ಕೆ ‘ಸಾಲ್ವ್ ಫಾರ್ ಎಕ್ಸ್’ (Solve for x), ಮೂಲಗಳನ್ನು ಕಂಡು ಹಿಡಿಯಿರಿ ಎಂಬುದಕ್ಕೆ ‘ಫ್ಯಾಕ್ಟರೈಸ್(Factories)’, ಸ್ಪರ್ಶಕಗಳನ್ನು ಎಳೆಯಿರಿ ಎಂಬುದಕ್ಕೆ ‘ಡ್ರಾ ದ ಟ್ಯಾಂಜೆಂಟ್(Draw the Tangent)’ – ಇಂತಹ ವಾಕ್ಯಗಳು ತುಂಬಾ ಗೊಂದಲ ಸೃಷ್ಟಿಸುತ್ತವೆ.

ಬಯಾಲಜಿಯ ಪದಗಳನ್ನು ಬರೆಯುವುದು, ಉಚ್ಚರಿಸುವುದು ಬೇರೆ ಬೇರೆ ಎಂದು ಗೊತ್ತಾದಾಗ ಜಂಘಾಬಲವೇ ಉಡುಗಿಹೋಗುತ್ತದೆ. ಉದಾಹರಣೆಗೆ ಟೆರಿಡೋಫೈಟಾ ಎಂಬ ಪದವನ್ನು PTeridophyta ಎಂದು ‘P’ ಅಕ್ಷರದಿಂದ ಪ್ರಾರಂಭಿಸಿ ಬರೆಯುತ್ತೇವೆ. ಅದೇ ರೀತಿ ಸೈಕಾಲಜಿ ( Psychology) ಪದ ಕೂಡ. ಇದು ಅನೇಕ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸುತ್ತದೆ. ಇಂಥ ಸಮಸ್ಯೆಗಳಿಂದಾಗಿ ಕೆಲವರು ಅರ್ಧಕ್ಕೆ ಕಾಲೇಜು ಬಿಡುತ್ತಾರೆ. ಇನ್ನೂ ಕೆಲವರು ಆರ್ಟ್ಸ್,ಕಾಮರ್ಸ್‌ಗೆ ಬದಲಾಯಿಸಿಕೊಂಡು ಓದು ಮುಂದುವರೆಸುತ್ತಾರೆ.

ಈಸಬೇಕು – ಇದ್ದು ಓದಬೇಕು

ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡ ಮೇಲೆ ಆಂಗ್ಲಮಾಧ್ಯಮದ ತೊಡಕುಗಳ ನಿವಾರಣೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ವಿಜ್ಞಾನ – ಪಾರಿಭಾಷಿಕ ಪದವಿವರಣ ಕೋಶಗಳನ್ನು ಮತ್ತು ಇಂಗ್ಲಿಷ್ – ಕನ್ನಡ ನಿಘಂಟನ್ನು ತಪ್ಪದೇ ಓದಬೇಕು.

ಇಂಗ್ಲಿಷ್ ಕನ್ನಡ ಎರಡನ್ನೂ ಬಲ್ಲ ನುರಿತ ಅಧ್ಯಾಪಕರನ್ನು ಸಂಪರ್ಕಿಸಿ ಯಾವುದಕ್ಕೆ ಏನು ಅರ್ಥ, ಹೇಗೆ ಉಚ್ಚರಿಸಬೇಕು,ಹೇಗೆ ನೆನಪಿಟ್ಟು ಕೊಳ್ಳಬೇಕು ಎಂಬುದನ್ನು ಕೇಳಿ ತಿಳಿದುಕೊಳ್ಳಬೇಕು.

ಆಯಾ ವಿಷಯಕ್ಕೆ ಸಂಬಂಧಿಸಿದ ಪಾರಿಭಾಷಿಕ ಪದಗಳಿರುತ್ತವೆ. ಅವುಗಳ ಅರ್ಥವನ್ನು ಮೊದಲು ಗ್ರಹಿಸಬೇಕು. ಯಾರು ಏನನ್ನೇ ಓದಿದರೂ ಅದನ್ನು ತಮಗೆ ಅರ್ಥವಾಗುವ ಭಾಷೆಗೆ ಭಾಷಾಂತರ ಮಾಡಿಕೊಂಡೇ ಅರ್ಥಮಾಡಿಕೊಳ್ಳುತ್ತಾರೆ. ಆದ್ದರಿಂದ ನಾವು ಮೂಲದಲ್ಲಿ ಓದಿದ ಮಾಧ್ಯಮದಿಂದ ಇಂಗ್ಲಿಷ್ ಮಾಧ್ಯಮದ ವಿಜ್ಞಾನ ಕೋರ್ಸ್ ಸೇರಿಕೊಂಡಾಗ ಅದೇ ಕ್ರಮ ಅನುಸರಿಸಬೇಕು.

ಯಾವುದೇ ಪದವನ್ನು ಅನುವಾದ ಮಾಡಿಕೊಳ್ಳುವಾಗ ಪದಾನುವಾದ ಮಾಡಬಾರದು. ಮೂಲ ಇಂಗ್ಲಿಷ್ ಪದದ ಅರ್ಥವನ್ನು ಅನುವಾ ದಿಸಿಕೊಳ್ಳಬೇಕು.

ರೇಡಿಯೊ, ಟಿವಿ, ಶೈಕ್ಷಣಿಕ ಸಾಕ್ಷ್ಯಚಿತ್ರಗಳಲ್ಲಿ ತಜ್ಞರು ಬಳಸುವ ಪದಗಳನ್ನು ಗಮನವಿಟ್ಟು ಕೇಳಿಸಿಕೊಂಡು ಅವರು ನೀಡುವ ಅರ್ಥ ವಿವರಣೆ, ಪ್ರಯೋಗ ವಿಶ್ಲೇಷಣೆಗಳನ್ನು ಗಹನವಾಗಿ ಗ್ರಹಿಸಬೇಕು.

ಒಂದೇ ಪದ ಬೇರೆ, ಬೇರೆ ವಿಷಯಗಳಿಗನುಗುಣವಾಗಿ ಬೇರೆ ಅರ್ಥ ಪಡೆಯುತ್ತವೆ. ಉದಾಹರಣೆಗೆ ‘ನ್ಯೂಕ್ಲಿಯಸ್’ಗೆ ಬಯಾಲಜಿಯಲ್ಲಿ ‘ಕೋಶಬೀಜ’ ಎನ್ನುತ್ತೇವೆ. ಅದನ್ನೇ ರಸಾಯನ ವಿಜ್ಞಾನದಲ್ಲಿ ‘ಪರಮಾಣು ಬೀಜ’ ಎನ್ನುತ್ತೇವೆ. ವಿಷಯ ಸನ್ನಿವೇಶಕ್ಕೆ ತಕ್ಕಂತೆ ಪದಗಳನ್ನು ಅರ್ಥ ಮಾಡಿಕೊಂಡು ಬಳಸಬೇಕು.

ಇಂಗ್ಲಿಷ್ ದಿನ ಪತ್ರಿಕೆಗಳನ್ನು ಓದಿ ಅರ್ಥ ಮಾಡಿಕೊಳ್ಳುವುದನ್ನು ರೂಢಿ ಮಾಡಿಕೊಳ್ಳಬೇಕು.

‌ನಿಮ್ಮ ಗಮನದಲ್ಲಿರಲಿ; ಎಸ್ಸೆಸ್ಸೆಲ್ಸಿವರೆಗೂ ಕನ್ನಡ ಮಾಧ್ಯಮದಲ್ಲಿ ಕಲಿತವರು, ಮುಂದೆ ವಿಜ್ಞಾನ ಓದಿ ಐಎಎಸ್, ಐಪಿಎಸ್ ಪರೀಕ್ಷೆ ಪಾಸು ಮಾಡಿ, ವೈದ್ಯರು, ಎಂಜಿನಿಯರ್‌, ವಿಜ್ಞಾನಿ ಗಳೂ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳಿಸಿ ಯಶಸ್ವಿಯಾದ ಹಲವರು ಇದ್ದಾರೆ. ಹಾಗಾಗಿ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಇಂಗ್ಲಿಷ್ ಮಾಧ್ಯಮದ ಓದು ಆಗಿಬರುವುದೇ ಇಲ್ಲ ಎಂಬುದೆಲ್ಲ ಸುಳ್ಳು ಮತ್ತು ತಪ್ಪು. ಕನ್ನಡ ಭಾಷೆಯನ್ನು ಸರಿಯಾಗಿ ಕಲಿತವರು ಇನ್ನಾವುದೇ ಭಾಷೆಯನ್ನು ಚೆನ್ನಾಗಿ ಕಲಿಯುತ್ತಾರೆ ಎಂಬುದು ಸಾರ್ವಕಾಲಿಕ ಸತ್ಯ. ಸೂಕ್ತ ಪರಿಕರಗಳೊಂದಿಗೆ ಆತ್ಮವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ತನ್ನಿಂತಾನೆ ದೊರಕುತ್ತದೆ.

ಕನ್ನಡದಲ್ಲೇ ಸೈನ್ಸ್‌..!

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕನ್ನಡ ಭಾಷೆಯಲ್ಲಿ ಎಂಜಿನಿಯರಿಂಗ್ ಕಲಿಸುವ ಕೆಲಸಕ್ಕೆ ಮುಂದಾಗಿದೆ. ಅದು ಯಶಸ್ವಿಯಾದಲ್ಲಿ ವೈದ್ಯಕೀಯ ವಿಜ್ಞಾನವನ್ನು ಕನ್ನಡದಲ್ಲಿ ಹೇಳಿಕೊಡುವ ದಿನಗಳು ಬಂದೇ ಬರುತ್ತವೆ. ಇದು ಸಂಶೋಧನೆ ಮತ್ತು ಅಭಿವೃದ್ಧಿ ವಿಷಯಗಳಿಗೂ ಅನ್ವಯಗೊಂಡು ಇಂಗ್ಲಿಷ್ ಮಾಧ್ಯಮದ ಓದು ಸಾಧ್ಯವೇ ಇಲ್ಲ ಎನ್ನುವವರಿಗೆ ದೊಡ್ಡ ಅನುಕೂಲ ಕಲ್ಪಿಸುತ್ತದೆ.

ಎಸ್ಸೆಸ್ಸೆಲ್ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದೆ. ನಂತರ ಪಿಯುಸಿಯಲ್ಲಿ ವಿಜ್ಞಾನ ವಿಭಾಗದ ‘ಪಿಸಿಎಂಸಿ’ ಸಂಯೋಜನೆಗೆ ಸೇರಿಕೊಂಡೆ. ಪ್ರಾರಂಭದಲ್ಲಿ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಪದಗಳನ್ನು ಅರ್ಥೈಸಿಕೊಳ್ಳಲು ತುಂಬಾ ಕಷ್ಟಪಟ್ಟೆ. ಆದರೆ, ಉಪನ್ಯಾಸಕರು, ಸಹಪಾಠಿಗಳ ನೆರವಿನಿಂದ ಪದಗಳನ್ನು ತಿಳಿಯುತ್ತಾ, ಕಲಿಕೆಯನ್ನು ಸುಲಭ ಮಾಡಿಕೊಂಡೆ. ನಾನೀಗ ಪಿಯುಸಿ ಮುಗಿಸಿ ಮೆಕ್ಯಾನಿಕಲ್ ಎಂಜಿನಿ ಯರಿಂಗ್ ಓದುತ್ತಿದ್ದೇನೆ. ಈಗ ಯಾವುದೇ ಸಮಸ್ಯೆ ಇಲ್ಲ.

-ನವೀನ್ ವೈ.ಎಂ, ಏಕಾಶಿಪುರ, ದೊಡ್ಡಬಳ್ಳಾಪುರ

ಕನ್ನಡ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ಓದಿದ್ದ ನಾನು, ಪಿಯುಸಿಯಲ್ಲಿ ಆರ್ಟ್ಸ್ ಓದಬೇಕೆಂದುಕೊಂಡಿದ್ದೆ. ಆದರೆ, ಹೆಚ್ಚು ಅಂಕ ಬಂದಿದ್ದರಿಂದ, ನಮ್ಮ ಟೀಚರ್‌, ಪಿಯುಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಿಸಿದರು. ಆರಂಭದಲ್ಲಿ ಪಾಠ ಅರ್ಥವಾಗುತ್ತಿರಲಿಲ್ಲ. ನಮ್ಮ ಹೈಸ್ಕೂಲ್‌ನ ಪದ್ಮಾ ಮೇಡಂ ಶಬ್ದಗಳ ಅರ್ಥ ತಿಳಿಯಲು ‘ಭಾರದ್ವಾಜ ಡಿಕ್ಷನರಿ’ ಓದು ಎಂದರು. ಆ ಸಲಹೆ ನನಗೆ ತುಂಬಾ ಸಹಾಯಕ್ಕೆ ಬಂತು. ನಾನೀಗ ಪಿಯುಸಿ ಮುಗಿಸಿ, ಎಲೆಕ್ಟ್ರಾನಿಕ್ಸ್‌ ಅಂಡ್ ಕಮ್ಯುನಿಕೇಷನ್ ವಿಭಾಗದಲ್ಲಿಎಂಜಿನಿಯರಿಂಗ್‌ ಓದುತ್ತಿದ್ದೇನೆ.

-ಕಾವ್ಯ, ಅರಳುಮಲ್ಲಿಗೆ, ದೊಡ್ಡಬಳ್ಳಾಪುರ

ಇಂಗ್ಲಿಷ್ ಆನ್‌ಲೈನ್ ಪದಕೋಶಗಳು

dictionary.com

merriam – webster.com

dictionary. cambridge.org

ಆನ್‌ಲೈನ್ ಕನ್ನಡ ಪದಕೋಶಗಳು

bharatavani.in / dictionary – page

baraha.com/v10/kannada/index.php

kanaja.in/?page_id=11120

ಆನ್‌ಲೈನ್ ಜ್ಞಾನಕೋಶಗಳು

britannica.com

wikipedia.org

kn.wikipedia.org

kannada.bharatavani.in

kanaja.in

ಲೇಖಕರು: ಪ್ರಾಚಾರ್ಯರು, ವಿಡಿಯ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT