ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆಗೊಂದಿಷ್ಟು ಆ್ಯಪ್‍ಗಳು; ಮೊಬೈಲ್ ಅಪ್ಲಿಕೇಷನ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ

Last Updated 19 ಅಕ್ಟೋಬರ್ 2021, 22:00 IST
ಅಕ್ಷರ ಗಾತ್ರ

ಕಲಿಕೆಗೆ ನೆರವಾಗುವ ಕೆಲವೊಂದು ಆ್ಯಪ್‌ಗಳ ವಿವರಗಳು ಹೀಗಿವೆ:

ಸ್ವಯಮ್: (Swayam - Study Webs for Active learning for Young Aspiring Minds): ಇದು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಸ್ವಕಲಿಕೆ ಮಾಡಲಿಚ್ಛಿಸುವ ವಿದ್ಯಾರ್ಥಿಗಳಿಗಾಗಿಯೇ ರೂಪಿಸಿರುವ ಉಚಿತ ಆ್ಯಪ್. ದೇಶದ 135ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ 1300ಕ್ಕೂ ಹೆಚ್ಚು ಅಧ್ಯಾಪಕರು ಸಿದ್ಧಪಡಿಸಿರುವ 2150ಕ್ಕೂ ಹೆಚ್ಚು ಕೋರ್ಸ್‌ಗಳನ್ನು ಇದು ಒಳಗೊಂಡಿದೆ. ಯಾವುದೇ ಹಂತದಲ್ಲಿ ಕಲಿಕೆ ಮುಂದುವರೆಸುವ ಇಚ್ಛೆ ಹೊಂದಿರುವ ಯಾವುದೇ ವ್ಯಕ್ತಿ ಈ ಆ್ಯಪ್‍ನ ಮೂಲಕ ಆನ್‍ಲೈನ್‍ನಲ್ಲಿ ತನಗೆ ಇಷ್ಟವಾದ ಕೋರ್ಸ್ ತೆಗೆದುಕೊಂಡು, ಉಚಿತವಾಗಿ ಕಲಿಕಾ ಸಾಮಗ್ರಿಗಳನ್ನು ಪಡೆದು, ಅಧ್ಯಯನ ಮಾಡಬಹುದು. ಆನ್‍ಲೈನ್ ಮೂಲಕ ಕಲಿತು ಕ್ರೆಡಿಟ್‌ಗಳನ್ನು ಪಡೆಯುವ ಸೌಲಭ್ಯವನ್ನು ಇದು ಒದಗಿಸುತ್ತದೆ. ಒಂದು ವೇಳೆ ವಿದ್ಯಾರ್ಥಿ ತಾನು ಅಧ್ಯಯನ ಮಾಡಿದ ಕೋರ್ಸ್‌ಗೆ ಸರ್ಟಿಫಿಕೇಟ್ ಪಡೆಯಬಯಸಿದಲ್ಲಿ ಮಾತ್ರ ನಿರ್ದಿಷ್ಟ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಪರೀಕ್ಷೆಗೆ ಮುನ್ನ ಸಮೀಪದ ಕಲಿಕಾ ಕೇಂದ್ರಗಳಲ್ಲಿ ನಡೆಸಲಾಗುವ ಪ್ರತ್ಯಕ್ಷ ತರಗತಿಗಳಿಗೆ ಹಾಜರಾಗಬಹುದು. ಸ್ವಯಮ್‍ನ ಜಾಲತಾಣಕ್ಕೆ (sswayam.gov.in)) ಭೇಟಿ ನೀಡಿ ಸಂಬಂಧಿಸಿದ ಮಾಹಿತಿಗಳನ್ನು ಪಡೆಯಬಹುದು.

ಫೆಟ್ (PhET): ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಕಾರ್ಲ್ ವೀಮನ್(Carl Weiman) 2002ರಲ್ಲಿ ಖ್ಯಾತ ಕೊಲೆರಾಡೋ ವಿಶ್ವವಿದ್ಯಾಲಯಕ್ಕಾಗಿ ರೂಪಿಸಿಕೊಟ್ಟ ಆ್ಯಪ್ ಇದು. ಪ್ರಾರಂಭದಲ್ಲಿ ಕೇವಲ ಭೌತವಿಜ್ಞಾನದ ಕಲಿಕೆಗೆ ಮೀಸಲಾಗಿದ್ದ ಈ ಆ್ಯಪ್ ಕ್ರಮೇಣ ರಸಾಯನವಿಜ್ಞಾನ, ಜೀವವಿಜ್ಞಾನ ಮತ್ತು ಗಣಿತಗಳ ಜೊತೆಗೆ, ಭೂವಿಜ್ಞಾನದ ಕಲಿಕೆಯನ್ನೂ ತನ್ನ ವ್ಯಾಪ್ತಿಗೆ ಸೇರಿಸಿಕೊಂಡು ಒಂದು ಜನಪ್ರಿಯ ಆ್ಯಪ್ ಆಗಿ ಬೆಳೆದಿದೆ. ಹೆಸರಾಂತ ಪ್ರಾಧ್ಯಾಪಕರು ರಚಿಸಿಕೊಟ್ಟ ಸುಮಾರು 3000ಕ್ಕೂ ಹೆಚ್ಚು ಪಠ್ಯಗಳನ್ನು ಇದು ಹೊಂದಿದೆ. ವಿದ್ಯಾರ್ಥಿಗಳಲ್ಲಿ ಕುತೂಹಲವನ್ನು ಹೆಚ್ಚಿಸಿ, ಪ್ರಶ್ನಿಸುವ ಮನೋಭಾವವನ್ನು ಉತ್ತೇಜಿಸುವ ರೀತಿಯಲ್ಲಿ ಪಠ್ಯಗಳನ್ನು ರೂಪಿಸಲಾಗಿದೆ. ಕಾಣದ್ದನ್ನು ನೋಡುವಂತೆ ಮಾಡುವ ದೃಶ್ಯ ಹಾಗೂ ಮಾನಸಿಕ ಮಾದರಿಗಳನ್ನು ಇದು ಒದಗಿಸುತ್ತದೆ. ವಸ್ತುವಿನ ಚಲನೆ, ಗ್ರಾಫ್ ಮತ್ತು ಅಂಕಿ-ಅಂಶಗಳ ಮೂಲಕ ವಿದ್ಯಾರ್ಥಿಗೆ ನೈಜ ಪ್ರಪಂಚದ ಚಿತ್ರಣ ಒದಗುವಂತೆ ಆ್ಯಪ್ ಅನ್ನು ರೂಪಿಸಲಾಗಿದೆ. ವಿದ್ಯಾರ್ಥಿಗಳ ಗಮನವನ್ನು ಸೆರೆ ಹಿಡಿದಿಡುವಲ್ಲಿ ಯಶಸ್ವಿಯಾಗಿರುವ ಈ ಆ್ಯಪ್, ಪಠ್ಯದಲ್ಲಿ ಬರುವ ಸಿದ್ಧಾಂತಗಳಿಗೆ ಸಂಬಂಧಿಸಿದಂತೆ ಕಾರಣ(cause) ಮತ್ತು ಪರಿಣಾಮ(effect)ಗಳ ಸ್ಪಷ್ಟ ಅರಿವನ್ನು ವಿದ್ಯಾರ್ಥಿಗಳಿಗೆ ಮೂಡಿಸುತ್ತದೆ. ಪಠ್ಯಕ್ಕೆ ಪೂರಕವಾದ ಪ್ರಶ್ನೆಗಳಿಗೆ ಹಾಗೂ ಸಂಬಂಧಿಸಿದ ಸಂದೇಹಗಳಿಗೆ ಸೂಕ್ತ ವಿವರಣೆಯನ್ನೂ ನೀಡುತ್ತದೆ. ವಿಡಿಯೊಗಳು, ಛದ್ಮನ (simulation) ಮಾದರಿಗಳು ಹಾಗೂ ಬದಲಾಯಿಸಬಹುದಾದ ನಿಯತಾಂಕಗಳು ಈ ಆ್ಯಪ್‍ನ ವೈಶಿಷ್ಟ್ಯ. ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಈ ಆ್ಯಪ್ ಅತ್ಯುಪಯುಕ್ತ. ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವುದು ಇದರ ಇನ್ನೊಂದು ಹೆಗ್ಗಳಿಕೆ.

ಟೀಚ್‍ಮಿಂಟ್(teachmint): ಬೆಂಗಳೂರಿನ ನಾಲ್ಕು ಉತ್ಸಾಹಿ ಯುವಕರು ಸೇರಿ ಕೇವಲ 21 ದಿನಗಳಲ್ಲಿ ರೂಪಿಸಿದ ಒಂದು ಉಪಯುಕ್ತ ಶೈಕ್ಷಣಿಕ ಆ್ಯಪ್ ಇದು. ಪ್ರಸ್ತುತ, ದೇಶದ ಅತಿ ದೊಡ್ಡ ಆನ್‍ಲೈನ್ ಶಿಕ್ಷಣ ಕೇಂದ್ರ ಎಂಬ ಹೆಗ್ಗಳಿಕೆ ಈ ಉಚಿತ ಆ್ಯಪ್‍ಗೆ ಇದೆ. ಈಗ 5000ಕ್ಕೂ ಹೆಚ್ಚು ನಗರಗಳಲ್ಲಿ, 20ಲಕ್ಷಕ್ಕೂ ಹೆಚ್ಚು ತರಗತಿ ಕೋಣೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಶಿಕ್ಷಕರಿಂದ ಈ ಆ್ಯಪ್ ಬಳಕೆಯಾಗುತ್ತಿದೆ. ಶಿಕ್ಷಕರೇ ತಮ್ಮ ಅನುಕೂಲಕ್ಕೆ ತಕ್ಕಂತೆ ಆನ್‍ಲೈನ್ ತರಗತಿ ಕೋಣೆಗಳನ್ನು ಸೃಷ್ಟಿಸಿಕೊಂಡು, ತರಗತಿಗಳನ್ನು ನಡೆಸಬಹುದು. ತಮ್ಮ ಉಪನ್ಯಾಸವನ್ನು ರೆಕಾರ್ಡ್ ಮಾಡಿಟ್ಟುಕೊಂಡು ಸಕಾರಣದಿಂದ ಗೈರುಹಾಜರಾದ ವಿದ್ಯಾರ್ಥಿಗಳಿಗೆ ಒದಗಿಸಬಹುದು. ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂಭಾಷಣೆ ನಡೆಸಬಹುದು. ಚರ್ಚೆಯಲ್ಲಿ ಅವರನ್ನೂ ಒಳಗೊಳ್ಳಬಹುದು. ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಸಲಹೆಗಳನ್ನು ನೀಡಬಹುದು. ವಿದ್ಯಾರ್ಥಿಗಳ ಹಾಜರಾತಿ, ಶುಲ್ಕ ವಸೂಲಿ ಮುಂತಾದ ದಾಖಲೆಗಳನ್ನೂ ವ್ಯವಸ್ಥಿತಗೊಳಿಸಬಹುದು. ವಿದ್ಯಾರ್ಥಿ ಶಿಕ್ಷಕರಷ್ಟೇ ಅಲ್ಲ, ಶಾಲೆಗಳೂ ಈ ಆ್ಯಪ್ ಬಳಸಬಹುದು.

ಫೋಟೊಮ್ಯಾಥ್(Photomath): ಗಣಿತ ‘ಕಬ್ಬಿಣದ ಕಡಲೆ’ ಎಂಬ ಅಭಿಪ್ರಾಯ ಹೊಂದಿರುವ ವಿದ್ಯಾರ್ಥಿಗಳಿಗೆ ಈ ಆ್ಯಪ್ ಒಂದು ವರದಾನ. ಲಂಡನ್‍ನ ಮೈಕ್ರೋಬ್ಲಿಂಕ್(Microblink) ಎಂಬ ಸಂಸ್ಥೆ ರೂಪಿಸಿದ ಆ್ಯಪ್ ಇದು. ನಿಮ್ಮ ಸ್ಮಾರ್ಟ್ ಫೋನ್ ಅಥವಾ ಐ ಪ್ಯಾಡ್‍ನ ಕ್ಯಾಮೆರಾವನ್ನು ಬಳಸಿಕೊಂಡು ಗಣಿತದ ಕ್ಲಿಷ್ಟಕರ ಸಮಸ್ಯೆಗಳನ್ನು ಈ ಆ್ಯಪ್ ಮೂಲಕ ಬಗೆಹರಿಸಿಕೊಳ್ಳಬಹುದು. ಯಾವುದೇ ಗಣಿತದ ಸಮಸ್ಯೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಆ್ಯಪ್‍ಗೆ ಕಳಿಸಿದಲ್ಲಿ, ಕೆಲವೇ ಕ್ಷಣಗಳಲ್ಲಿ ಆ ಸಮಸ್ಯೆಯನ್ನು ಹಂತ, ಹಂತವಾಗಿ ಬಿಡಿಸಿ, ಉತ್ತರವನ್ನು ಸೂಚಿಸುತ್ತದೆ. ಉತ್ತರ ಪಡೆಯುವ ಪರ್ಯಾಯ ಮಾರ್ಗಗಳನ್ನೂ ಸೂಚಿಸುತ್ತದೆ. ಗಣಿತಜ್ಞರು ಪರಿಶೀಲಿಸಿ ಸಿದ್ಧಪಡಿಸಿದ ಉತ್ತರಗಳು ಇದರಲ್ಲಿ ದೊರಕುತ್ತವೆ. ಪ್ರಾರಂಭದ ಹಂತದಲ್ಲಿ ಮುದ್ರಿತವಾದ ಸಮಸ್ಯೆಗಳನ್ನು ಮಾತ್ರ ಗುರುತಿಸುವ ಸಾಮರ್ಥ್ಯ ಇದ್ದ ಈ ಆ್ಯಪ್ ಈಗ ಇನ್ನಷ್ಟು ಸುಧಾರಣೆಗಳಿಗೆ ಒಳಪಟ್ಟು, ಕೈಬರಹದಲ್ಲಿರುವ ಗಣಿತದ ಸಮಸ್ಯೆಗಳನ್ನೂ ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ. ವಿದ್ಯಾರ್ಥಿಗಳನ್ನು ಸೋಮಾರಿಯಾಗಿಸುತ್ತದೆ ಎಂಬ ಅಪಾದನೆ ಇದೆಯಾದರೂ, ವಿದ್ಯಾರ್ಥಿ ಸಮೂಹದಲ್ಲಿ ಇದು ಅತ್ಯಂತ ಜನಪ್ರಿಯವಾಗಿರುವ ಆ್ಯಪ್‌ಗಳಲ್ಲಿ ಒಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT