ಮಂಗಳವಾರ, ಜೂನ್ 22, 2021
29 °C

ಆಕರ ಗ್ರಂಥ, ಟಿಪ್ಪಣಿಗೆ ಇರಲಿ ಆದ್ಯತೆ..

ಸಂದರ್ಶನ: ಚನ್ನಬಸಪ್ಪ ರೊಟ್ಟಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು ಜಿಲ್ಲೆ, ಲಿಂಗಸುಗೂರು ತಾಲ್ಲೂಕಿನ ಯಲಗಟ್ಟಾ ಗ್ರಾಮದ ತಿರುಪತಿ ಪಾಟೀಲ ಕೆಎಎಸ್‌ ಅಧಿಕಾರಿ. ಸದ್ಯ ಧಾರವಾಡದಲ್ಲಿ ಪ್ರೊಬೇಷನರಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಇವರು ತಮ್ಮ ಅನುಭವದ ಜೊತೆ ಸ್ಪರ್ಧಾರ್ಥಿಗಳಿಗೆ ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ.

***

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಸಕ್ತಿ ಮೂಡಿದ್ದು ಯಾವಾಗ? ಹೇಗೆ?

ಡಿ.ಇಡಿ ಮುಗಿಸಿದ ನಂತರ ಕೆಲಸ ಮಾಡುವ ಅನಿವಾರ್ಯತೆಯಿಂದ ಬೆಂಗಳೂರಿನಲ್ಲಿ 6 ತಿಂಗಳು ಗಾರೆ ಕೆಲಸ ಮಾಡಿದೆ. ನಂತರ ಉನ್ನತ ಗುರಿ ಸಾಧನೆಯ ಛಲದೊಂದಿಗೆ ಪದವಿಗೆ ಪ್ರವೇಶ ಪಡೆದಾಗಲೇ ನನ್ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಓದಿನ ಆಸಕ್ತಿ ಮೂಡಿತ್ತು. ಅದರಲ್ಲೂ ಪದವಿ 2 ನೇ ವರ್ಷದಲ್ಲಿ ಕಾಲೇಜಿಗೆ ಅತಿಥಿಯಾಗಿ ಬಂದಿದ್ದ ಪ್ರೊಬೇಷನರಿ ಐಎಎಸ್ ಅಧಿಕಾರಿ ಉಜ್ವಲಕುಮಾರ್ ಘೋಷ್, ಕೆಎಎಸ್‌ ಅಧಿಕಾರಿಗಳಾದ ಟಿ.ಯೋಗೇಶ್, ವಿ.ಬಿ.ಹಂಚಿನಾಳ, ಚಂದ್ರಶೇಖರ್ ಕುಂಬಾರ್ (ಕೆ.ಇ.ಎಸ್) ಅವರಿಂದ ದೊರೆತ ಸ್ಫೂರ್ತಿ ನನ್ನಲ್ಲಿ ಈ ಓದಿನ ಕಿಚ್ಚನ್ನು ಹೊತ್ತಿಸಿತು.

ಪದವಿಯಲ್ಲಿದ್ದಾಗ ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ಯಾವ ರೀತಿಯಾಗಿತ್ತು?

ಬಿಎ 2ನೇ ತರಗತಿಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಓದು ಆರಂಭಿಸಿದೆ. ಪ್ರಚಲಿತ ವಿದ್ಯಮಾನಗಳ ನೋಟ್ಸ್‌ ಮಾಡುವುದು, ಹಳೆಯ ಪ್ರಶ್ನೆಪತ್ರಿಕೆಗಳನ್ನು ಅವಲೋಕಿಸುವುದು, ಸುದೀರ್ಘ ಓದು, ಸ್ಪರ್ಧಾ ನಿಯತಕಾಲಿಕೆಗಳ ಓದು, ಸ್ನೇಹಿತರ ಜೊತೆ ಚರ್ಚೆ ಇದು ಆಗ ನನ್ನ ಅಧ್ಯಯನದ ಕ್ರಮವಾಗಿತ್ತು.

ಪದವಿ ನಂತರ ?

ಪದವಿ ನಂತರ ವಿದ್ಯಾಕಾಶಿ ಧಾರವಾಡಕ್ಕೆ ಬಂದು ಸರ್ಕಾರ ಉಚಿತ ಐಎಎಸ್ ಕೋಚಿಂಗ್‌ಗಾಗಿ ನಡೆಸುವ ಪರೀಕ್ಷೆಯಲ್ಲಿ ಆಯ್ಕೆಯಾಗಿ ಬೆಂಗಳೂರಿನ ಯೂನಿವರ್ಸಲ್ ತರಬೇತಿ ಕೇಂದ್ರದಲ್ಲಿ 9 ತಿಂಗಳವರೆಗೆ ತರಬೇತಿ ಪಡೆದೆ. ನಂತರ ಪೊಲೀಸ್‌ ಇಲಾಖೆಯಲ್ಲಿರುವ ಸಹೃದಯಿ ಶ್ರೀನಿವಾಸ್ ಅವರ ಆಶ್ರಯದಲ್ಲಿ 2 ವರ್ಷ ಬೆಂಗಳೂರಿನಲ್ಲೇ ಉಳಿದುಕೊಂಡು ಅಧ್ಯಯನ ಮಾಡಿದೆ.

ಮೊದಲು ಎದುರಿಸಿದ ಸ್ಪರ್ಧಾತ್ಮಕ ಪರೀಕ್ಷೆ ಯಾವುದು?

2014 ರಲ್ಲಿ ಕೆಎಎಸ್‌ ಪರೀಕ್ಷೆ ಎದುರಿಸಿ, ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್‌ ಪಾಸಾದೆ. ಆದರೆ, ಕಲಿಕೆಯಲ್ಲಿ ಪ್ರಬುದ್ಧತೆ, ಸಂಪನ್ಮೂಲ, ಮಾರ್ಗದರ್ಶನ, ಓದುವ ಸ್ನೇಹಿತರ ಕೊರತೆ, ಅತಿಯಾದ ಆತ್ಮವಿಶ್ವಾಸದಿಂದ ಮೇನ್ಸ್‌ನಲ್ಲಿ ಪಾಸಾಗಲಿಲ್ಲ. ನಂತರ ಎಸ್‌.ಡಿ.ಎ, ಎಫ್.ಡಿ.ಎ, ಗ್ರಾ.ಪಂ ಸೆಕ್ರೆಟರಿ ಗ್ರೇಡ್–1, ಪಿಡಿಒ, ಪಿ.ಎಸ್‌.ಐ… ಈ ಎಲ್ಲ ಪರೀಕ್ಷೆಗಳಲ್ಲೂ ಸಾಲುಸಾಲು ವೈಫಲ್ಯ ಎದುರಾಯಿತು. ಅತಿಯಾದ ಆತ್ಮವಿಶ್ವಾಸವೇ ನನಗೆ ಮುಳುವಾಗಿತ್ತು.

 ವೈಫಲ್ಯದಿಂದ ಪುಟಿದೆದ್ದುದು ಹೇಗೆ?

2016 ರಲ್ಲಿ ಬೆಂಗಳೂರಿನಿಂದ ಮರಳಿ ಧಾರವಾಡಕ್ಕೆ ಬಂದೆ. ಈ ಹಂತದಲ್ಲಿ ಕೆಲವು ಸ್ನೇಹಿತರು, ಊರಿನ ಜನರ ಕೊಂಕುಮಾತು ಎದುರಾದವು, ನನ್ನಲ್ಲಿ ಕೆಎಎಸ್ ಆಸೆಯೂ ಕಮರಿತ್ತು. ಮನೆಯಲ್ಲಿರುವ ಕಿತ್ತು ತಿನ್ನುವ ಬಡತನದಿಂದ ಯಾವುದಾದರೊಂದು ನೌಕರಿ ಸಿಕ್ಕರೆ ಸಾಕು ಎಂಬಂತಾಗಿತ್ತು. ಆಗ, ಸಹೋದರ ಶರಣು ಬಾಗೂರ, ಸ್ನೇಹಿತ ಚಂದ್ರಕಾಂತ ರೆಡ್ಡಿಯವರ ಸ್ಫೂರ್ತಿಯ ಮಾತುಗಳಿಂದ ಪ್ರೇರಣೆ ಪಡೆದು ಕರ್ನಾಟಕ ವಿಶ್ವವಿದ್ಯಾಲಯದ ಗ್ರೀನ್ ಗಾರ್ಡನ್‌ನಲ್ಲಿ ಓದಲು ಸೇರುತ್ತಿದ್ದ ಸುಮಾರು 500 ಸ್ಪರ್ಧಾರ್ಥಿಗಳಿಗೆ ಉಚಿತವಾಗಿ ಬೋಧನೆ ಮಾಡಿದ್ದು ಉಪಯುಕ್ತವಾಯಿತು. ಇದೇ ವೇಳೆ ಎಸ್‌ಡಿಎ ಪರೀಕ್ಷೆಯಲ್ಲಿ ನಾನು ಪಾಸಾದೆ. ಇದು ಆತ್ಮವಿಶ್ವಾಸವನ್ನು ನೂರ್ಮಡಿಸಿತು. ನಂತರ ಉನ್ನತ ಹುದ್ದೆಗೆ ಏರಬೇಕು ಎಂಬ ದೃಢ ನಿರ್ಧಾರ ಮೂಡಿತು.

ಒಮ್ಮೆಲೇ 6 ಸರ್ಕಾರಿ ಹುದ್ದೆಗಳು ಒಲಿದದ್ದು ಹೇಗೆ?

ಎಸ್‌ಡಿಎ ಪರೀಕ್ಷೆಯಲ್ಲಿ ಪಾಸಾದ ನಂತರ ಮೊರಾರ್ಜಿ ಶಾಲೆಯಲ್ಲಿ ಎಫ್‌.ಡಿ.ಎ, ಮಾರ್ಕೆಟಿಂಗ್ ಅಸಿಸ್ಟೆಂಟ್, ಆಶ್ರಮ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ, ಎಕ್ಸೈಸ್ ಗಾರ್ಡ್‌, ಇಎಸ್‌ಐ ಹುದ್ದೆಗಳು ಒಲಿದು ಬಂದವು. ಹಾವೇರಿ ಜಿಲ್ಲೆ ಹಿರೇಕೇರೂರು ತಾಲ್ಲೂಕಿನಲ್ಲಿ ಇಎಸ್‌ಐ ಹುದ್ದೆಗೆ ಹಾಜರಾದೆ. ಈ ಮಧ್ಯದಲ್ಲಿ ಬರೆದಿದ್ದ ಕೆಎಎಸ್ ಪ್ರಿಲಿಮ್ಸ್‌ನಲ್ಲಿ ಮತ್ತೊಮ್ಮೆ ಪಾಸಾದೆ. ಆಗ ಈ ಮೊದಲಿನಂತೆ ಮುಖ್ಯ ಪರೀಕ್ಷೆಯಲ್ಲಿ ಸೋಲಬಾರದು ಎಂಬ ನಿರ್ಧಾರ ಮಾಡಿದ್ದೆ.

ಕೆಎಎಸ್ ಮುಖ್ಯ ಪರೀಕ್ಷೆಗೆ ತಯಾರಾದದ್ದು ಹೇಗೆ?

ಧಾರವಾಡದಲ್ಲಿ ಜತೆಗೂಡಿದ ಸಮಾನಮನಸ್ಕ ಸ್ನೇಹಿತರಾದ ಕೃಷ್ಣಾ ಶಾಂತಗೇರಿ, ಸೋಮಶೇಖರ ಬಿರಾದಾರ ಮತ್ತು ನಾನು ಗುಂಪು ಅಧ್ಯಯನ ಆರಂಭಿಸಿದೆವು. ಈ ವೇಳೆ ಯೋಜನಾಬದ್ಧ ಓದು, ಬರವಣಿಗೆ, ಸಂಪನ್ಮೂಲ ಸಂಗ್ರಹ, ಗುಂಪು ಚರ್ಚೆ ಇವುಗಳ ಮೂಲಕ ನಾವು ಮೂವರು ಕೂಡ ಮೇನ್ಸ್ ಪಾಸಾಗಿ ಸಂದರ್ಶನಕ್ಕೂ ಆಯ್ಕೆಯಾದೆವು. ಸಂದರ್ಶನದ ನಂತರ ನನಗೆ ಹುದ್ದೆಯ ನಿರೀಕ್ಷೆ ಇರಲಿಲ್ಲ. ಆದರೆ, ನಾನು ಉತ್ತಮ ಪ್ರಯತ್ನ ಮಾಡಿದ್ದೇನೆ ಎನ್ನುವ ವಿಶ್ವಾಸವಿತ್ತು. ಅಂತೂ 2019 ಡಿಸೆಂಬರ್‌ನಲ್ಲಿ ತಹಶೀಲ್ದಾರ್ ಆಗಿ ಆಯ್ಕೆ ಆದೆ. ಪ್ರಸ್ತುತ ಧಾರವಾಡ ಜಿಲ್ಲೆಯಲ್ಲಿ ಪ್ರೊಬೇಷನರಿ ತಹಶೀಲ್ದಾರ್ ಆಗಿ ಸೇವೆಯಲ್ಲಿದ್ದೇನೆ.

 ಸ್ಪರ್ಧಾರ್ಥಿಗಳಿಗೆ ಕಿವಿಮಾತೇನು?

ಸ್ಪರ್ಧಾರ್ಥಿಗಳಲ್ಲಿ ಮುಖ್ಯವಾಗಿ ತಾಳ್ಮೆ ಬೇಕು. ಟೀಕೆ, ಕೊಂಕು ಮಾತುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ನಿರಂತರ ಅಧ್ಯಯನ, ಜ್ಞಾನದ ಹಂಚಿಕೆ, ಸಮಾನಮನಸ್ಕರ ಜೊತೆ ಚರ್ಚೆ, ಸಕಾರಾತ್ಮಕ ಚಿಂತನೆ, ಉತ್ತಮ ಆಕರ ಗ್ರಂಥಗಳ ಓದು, ಸ್ವಂತ ನೋಟ್ಸ್‌ ಇವೆಲ್ಲವನ್ನೂ ಮಾಡಬೇಕು. ಇಂದಿಗೂ ಕೂಡ ನಾನು ಯುಪಿಎಸ್‌ಸಿ ಪರೀಕ್ಷೆಗೆ ಓದುತ್ತಿದ್ದೇನೆ. ಮತ್ತೊಮ್ಮೆ ಕೆಎಎಸ್ ಪರೀಕ್ಷೆ ಬರೆದು ಉನ್ನತ ಹುದ್ದೆ ಪಡೆಯಬೇಕೆಂಬ ಪ್ರಯತ್ನ ಮಾಡುತ್ತಿದ್ದೇನೆ. ನಾನು ಗ್ರಾಮೀಣ ಪ್ರದೇಶ, ಸರ್ಕಾರಿ ಶಾಲೆ, ಬಡತನದ ಹಿನ್ನೆಲೆಯಿಂದ ಬಂದಿದ್ದರೂ ತಂದೆ ವಡಿಕೆಪ್ಪ, ತಾಯಿ ದೇವಮ್ಮರ ಬೆವರಿನ ಹನಿಯ ಸಾರ್ಥಕತೆ, ಗೆಳೆಯರ ಸಹಕಾರ, ಸಹೃದಯರ ನೆರವು, ಸ್ವಯಂ ಅಧ್ಯಯನದಿಂದ ಯಶಸ್ಸು ಪಡೆದೆ. ಎಲ್ಲಾ ಸ್ಪರ್ಧಾರ್ಥಿಗಳಿಗೂ ಯಶಸ್ಸು ಲಭಿಸಲಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು