ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ಕ್ಷೇತ್ರದ ಪ್ರಚಲಿತ ವಿದ್ಯಮಾನಗಳು

Published 10 ಮೇ 2023, 19:30 IST
Last Updated 10 ಮೇ 2023, 19:30 IST
ಅಕ್ಷರ ಗಾತ್ರ

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಪ್ರಚಲಿತ ವಿದ್ಯಮಾನಗಳ ಕುರಿತ ಮಾದರಿ ಪ್ರಶ್ನೋತ್ತರಗಳಿರುತ್ತವೆ. ಈ ಪ್ರಶ್ನೋತ್ತರಕ್ಕೆ ಪೂರಕವಾದ ಕ್ರೀಡಾ ಕ್ಷೇತ್ರದ ಪ್ರಚಲಿತ ವಿದ್ಯಮಾನಗಳನ್ನು ಇಲ್ಲಿ ಕೊಡಲಾಗಿದೆ.

1. ಕ್ರಿಕೆಟಿಗ ಡೇವಿಡ್ ವಾರ್ನರ್‌

ಆಸ್ಟ್ರೇಲಿಯಾದ ಕ್ರಿಕೆಟಿಗ ಹಾಗೂ ಇಂಡಿಯನ್ ಪ್ರಿಮಿಯರ್ ಲೀಗ್‌ನ(ಐಪಿಎಲ್‌) ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ‘ಐಪಿಎಲ್‌’ನಲ್ಲಿ ಅತಿ ಹೆಚ್ಚು ಪಂದ್ಯಗಳ ನಾಯಕತ್ವವಹಿಸಿದ ವಿದೇಶಿ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ಕಾರ್ಯ ನಿರ್ವಹಿಸುವ ಮೂಲಕ ಈವರೆಗೂ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗಳಲ್ಲಿ 75ನೇ ಪಂದ್ಯದ ನಾಯಕತ್ವ ವಹಿಸಿಕೊಂಡಂತಾಗಿದೆ.ಇದಕ್ಕೂ ಮುಂಚೆ ಆಸ್ಟ್ರೇಲಿಯದ ಮತ್ತೊಬ್ಬ ಕ್ರಿಕೆಟಿಗ ಆಡಂ ಗಿಲ್ ಕ್ರಿಸ್ಟ್ ಅವರು ಈ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

2.  ‘ಅಂಡರ್-20 ಫುಟ್ಬಾಲ್ ವಿಶ್ವಕಪ್’ ಆತಿಥ್ಯ 

20 ವರ್ಷ ವಯೋಮಿತಿಯ ಒಳಗಿನ ಫುಟ್‌ಬಾಲ್ ವಿಶ್ವಕಪ್ ಆತಿಥ್ಯದ ಜವಾಬ್ದಾರಿಯನ್ನು ಇಂಡೋನೇಷ್ಯಾಗೆ ನೀಡಲಾಗಿತ್ತು. ಆದರೆ FIFA ಇದನ್ನು ರದ್ದುಗೊಳಿಸಿ ಆತಿಥ್ಯದ ಅಧಿಕಾರವನ್ನು ಅರ್ಜೆಂಟೀನಾಗೆ ಕಲ್ಪಿಸಿದೆ. ಇಂಡೋನೇಷ್ಯಾದ ಗವರ್ನರ್, ಬಾಲಿಯಲ್ಲಿ ನಡೆಯಬೇಕಿದ್ದ ಇಸ್ರೇಲ್ ವಿರುದ್ಧದ ಪಂದ್ಯವನ್ನು ರದ್ದುಗೊಳಿಸಿದ ಕಾರಣ FIFA ಈ ನಿರ್ಧಾರ ತೆಗೆದುಕೊಂಡಿದೆ.

3. ಇಂಟರ್ ಕಾಂಟಿನೆಂಟಲ್ ಫುಟ್‌ಬಾಲ್ ಕ್ರೀಡಾಕೂಟ –2023

ನಾಲ್ಕು ತಂಡಗಳು ಭಾಗವಹಿಸುವ ಇಂಟರ್ ಕಾಂಟಿನೆಂಟಲ್ ಫುಟ್‌ಬಾಲ್ ಕ್ರೀಡಾಕೂಟವನ್ನು ಜೂನ್ 9 ರಿಂದ 18 ರವರೆಗೆ ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಆಯೋಜಿಸಲಾಗುತ್ತಿದೆ. ಪ್ರಸ್ತುತ ಇದು ಮೂರನೇ ಆವೃತ್ತಿಯಾಗಿದ್ದು ಈ ಹಿಂದೆ ಕ್ರೀಡಾಕೂಟದ ಎರಡು ಆವೃತ್ತಿಗಳನ್ನು ಮುಂಬೈ ಮತ್ತು ಅಹಮದಾಬಾದ್‌ನಲ್ಲಿ ಆಯೋಜಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ಭಾರತ, ಲೆಬನಾನ್, ಮಂಗೋಲಿಯ ಮತ್ತು ವನೌಟೋ ರಾಷ್ಟ್ರಗಳು ಭಾಗವಹಿಸುತ್ತವೆ.‌

4. ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಕಗಿಸೊ ರಬಾಡ 

ಮೊಹಾಲಿಯ ಐ.ಎಸ್‌.ಬಿಂದ್ರಾ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವೆ ನಡೆದ ಐಪಿಎಲ್‌ ಕ್ರಿಕೆಟ್‌ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾದ ಬೌಲರ್‌ ಕಗಿಸೊ ರಬಾಡ ಮೂರನೇ ವಿಕೆಟ್ ಪಡೆಯುವ ಮೂಲಕ ಅತ್ಯಂತ ವೇಗವಾಗಿ 100 ವಿಕೆಟ್ ಪಡೆದ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕಗಿಸೊ ರಬಾಡಗೂ ಮುನ್ನ ಶ್ರೀಲಂಕಾದ ಕ್ರಿಕೆಟಿಗ ಲಸಿತ್ ಮಲಿಂಗ ಅವರು ಈ ದಾಖಲೆ ಹೊಂದಿದ್ದರು. ಲಸಿತ್ ಮಲಿಂಗ ಅವರು 70 ನೇ ಪಂದ್ಯದಲ್ಲಿ ನೂರು ವಿಕೆಟ್‌ಗಳ ಗಡಿ ತಲುಪಿದ್ದರು. ಆದರೆ ಕಗಿಸೊ ರಬಾಡ ಅವರು ತಮ್ಮ 64 ನೇ ಪಂದ್ಯದಲ್ಲಿ 100 ವಿಕೆಟ್‌‌ ಪಡೆದು ಲಸಿತ್ ಮಲಿಂಗ ಅವರನ್ನು ಹಿಂದಿಕ್ಕಿದರು.

ಐಪಿಎಲ್‌ನಲ್ಲಿ ನೂರು ವಿಕೆಟ್‌ ಗಡಿ ದಾಟಿರುವ  ಕ್ರಿಕೆಟಿಗರು: ಭುವನೇಶ್ವರ್ ಕುಮಾರ್, ರಶೀದ್ ಖಾನ್, ಅಮಿತ್ ಮಿಶ್ರಾ, ಆಶಿಶ್ ನೆಹ್ರಾ, ಯಜುವೇಂದ್ರ ಚಹಾಲ್

5. ವಿಶ್ವದ 3ನೇ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ 

ರಾಜಸ್ಥಾನದ ಜೈಪುರದಲ್ಲಿ ವಿಶ್ವದ ಮೂರನೇ ಅತಿ ದೊಡ್ಡ ಹಾಗೂ ಭಾರತದ ಎರಡನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸಲು ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್ ವೇದಾಂತ್ ಹಿಂದೂಸ್ತಾನ್ ಜಿಂಕ್ ಲಿಮಿಟೆಡ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಜೈಪುರದ ಚೋಂಪ್‌(Chomp) ಗ್ರಾಮದಲ್ಲಿ ಈ ಕ್ರೀಡಾಂಗಣ ನಿರ್ಮಾಣವಾಗಲಿದ್ದು, ಮೊದಲ ಹಂತದ ಕಾಮಗಾರಿ ಪೂರ್ಣವಾಗಲು ₹400 ಕೋಟಿ ಹೂಡಿಕೆ ಅವಶ್ಯಕತೆಯಿದೆಯೆಂದು ಅಂದಾಜಿಸಲಾಗಿದೆ. ಈ ಕ್ರೀಡಾಂಗಣಕ್ಕೆ ಅನಿಲ್ ಅಗರ್ವಾಲ್ ಅವರ ಹೆಸರನ್ನು ಇಡಲು ನಿರ್ಧರಿಸಲಾಗಿದೆ. ಇದು 75,000 ಆಸನ ಸಾಮರ್ಥ್ಯವಿರುವ ಕ್ರೀಡಾಂಗಣವಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್ ಘೋಷಿಸಿದೆ.

ವಿಶೇಷ ಸೂಚನೆ: ಯೋಜನೆಯ ಒಟ್ಟು ವೆಚ್ಚದಲ್ಲಿ ₹300 ಕೋಟಿಯನ್ನು ಹಿಂದುಸ್ತಾನ್ ಜಿಂಕ್ ಲಿಮಿಟೆಡ್ ಸಂಸ್ಥೆ ದೇಣಿಗೆಯ ರೂಪದಲ್ಲಿ ನೀಡಲು ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT