ಹಾಂಗ್‌ಝೌ: ಮಧ್ಯಮವೇಗಿ ಟೈಟಸ್ ಸಾಧು ಅವರ ಅಮೋಘ ಬೌಲಿಂಗ್ ಬಲದಿಂದ ಭಾರತ ಮಹಿಳಾ ಕ್ರಿಕೆಟ್ ತಂಡವು 19ನೇ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿತು.
ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಟೈಟಸ್ (6ಕ್ಕೆ3) ದಾಳಿಯ ಬಲದಿಂದ ಭಾರತ ತಂಡವು ಶ್ರೀಲಂಕಾ ಎದುರು 19 ರನ್‌ಗಳಿಂದ ಜಯಿಸಿತು. ಟೈಟಸ್ ಇದೇ 29ರಂದು ಹತ್ತೊಂಬತ್ತು ವರ್ಷದ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಜೂಲನ್ ಗೋಸ್ವಾಮಿ ಅವರ ಅನುಪಸ್ಥಿತಿಯಲ್ಲಿ ಟೈಟಸ್ ಭರವಸೆ ಮೂಡಿಸಿದರು.
ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಎರಡು ಪಂದ್ಯಗಳ ಅಮಾನತು ಶಿಕ್ಷೆ ಪೂರೈಸಿ ಮರಳಿದ ಹರ್ಮನ್‌ಪ್ರೀತ್ ಕೌರ್ ಈ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದರು.
ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ (46 ರನ್) ಮತ್ತು ಜೆಮಿಮಾ ರಾಡ್ರಿಗಸ್ (42 ರನ್) ಅವರ ಉತ್ತಮ ಬ್ಯಾಟಿಂಗ್ ಬಲದಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 116 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 97 ರನ್ ಗಳಿಸಿ ಸೋತಿತು. ಮಧ್ಯಮ ಕ್ರಮಾಂಕದ ಬ್ಯಾಟರ್ ಹಾಸಿನಿ ಪೆರೆರಾ (25; 22ಎ) ಮತ್ತು ನಿಕಾಶಿ ಡಿಸಿಲ್ವಾ (23; 34ಎ) ಅವರ ಹೋರಾಟ ಫಲ ನೀಡಲಿಲ್ಲ.
ಟೈಟಸ್ ಪ್ರಮುಖ ಮೂವರು ಬ್ಯಾಟರ್‌ಗಳ ವಿಕೆಟ್ ಗಳಿಸಿದರು. ವಿಜಯಪುರದ ರಾಜೇಶ್ವರಿ ಗಾಯಕವಾಡ (20ಕ್ಕೆ2) ಅವರು ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಪೆಟ್ಟು ನೀಡಿದರು. ದೀಪ್ತಿ ಶರ್ಮಾ, ಪೂಜಾ ವಸ್ತ್ರಕರ್ ಮತ್ತು ದೇವಿಕಾ ವೈದ್ಯ ತಲಾ ಒಂದು ವಿಕೆಟ್ ಗಳಿಸಿದರು.
ಭಾರತ ತಂಡವು ಕೂಟದ ಆರಂಭದಿಂದಲೂ ಚಿನ್ನ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ ಇಲ್ಲಿಯ ಕ್ರಿಕೆಟ್ ಮೈದಾನ ಮತ್ತು ಪಿಚ್‌ಗಳು ಕಳಪೆಮಟ್ಟದ್ದಾಗಿದ್ದವು.
ಹೋದ ವರ್ಷ ನಡೆದಿದ್ದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ತಂಡವು ಬೆಳ್ಳಿ ಪದಕ ಜಯಿಸಿತ್ತು.
ಸಂಕ್ಷಿಪ್ತ ಸ್ಕೋರು
ಭಾರತ: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 116 (ಹರ್ಮನ್‌ಪ್ರೀತ್ ಕೌರ್ 46, ಜೆಮಿಮಾ ರಾಡ್ರಿಗಸ್ 42) ಶ್ರೀಲಂಕಾ: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 97 (ಹಸಿನಿ ಪೆರೆರಾ 25, ಟೈಟಸ್ ಸಾಧು 6ಕ್ಕೆ3) ಫಲಿತಾಂಶ: ಭಾರತ ತಂಡಕ್ಕೆ 19 ರನ್‌ಗಳ ಜಯ ಮತ್ತು ಚಿನ್ನದ ಪದಕ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.