ನವದೆಹಲಿ: ಇಂದೋರ್‌ನ ಹೋಳ್ಕರ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಎರಡು ವಿಶಿಷ್ಟ ದಾಖಲೆಯನ್ನು ಮಾಡಿದೆ.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ದಾಖಲಿಸಿದ ಗರಿಷ್ಠ ಮೊತ್ತ (399 /5) ದಾಖಲಿಸಿದ ಸಾಧನೆ ಮಾಡಿದೆ.
ಜತೆಗೆ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತ ಅತಿ ಹೆಚ್ಚು ಸಿಕ್ಸರ್‌ಗಳನ್ನು (3,000) ಹೊಡೆದ ಮೊದಲ ತಂಡ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 399 ರನ್ ಗಳಿಸಿತ್ತು. ಮಳೆ ಸುರಿದ ಕಾರಣ ಡಕ್ವರ್ಥ್ ಲೂಯಿಸ್ ನಿಯಮದನ್ವಯ ಗುರಿಯನ್ನು ಪರಿಷ್ಕರಿಸಲಾಯಿತು. 33 ಓವರ್‌ಗಳಲ್ಲಿ 317 ರನ್‌ಗಳ ಗುರಿ ನಿಗದಿ ಮಾಡಲಾಯಿತು. ಆದರೆ, ಭಾರತದ ಬೌಲರ್‌ಗಳ ದಾಳಿಯ ಮುಂದೆ ಆಸ್ಟ್ರೇಲಿಯಾ ತಂಡವು 28.2 ಓವರ್‌ಗಳಲ್ಲಿ 217 ರನ್ ಗಳಿಸಿ ಆಲೌಟ್ ಆಯಿತು.
ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಭಾರತದ ಆಟಗಾರರು 2 ಶತಕ ಹಾಗೂ 2 ಸ್ಫೋಟಕ ಅರ್ಧಶತಕ ದಾಖಲಿಸಿದರು. ವಿಶೇಷವೆಂದರೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಸೂರ್ಯಕುಮಾರ್ ಎಲ್ಲ ಬೌಲರ್‌ಗಳನ್ನೂ ದಂಡಿಸಿದರು. ಕೇವಲ 24 ಎಸೆತಗಳಲ್ಲಿ ಅರ್ಧತತಕ ದಾಖಲಿಸಿದರು. ಅಜೇಯ 72 ಗಳಿಸಿದರು. ಆಸೀಸ್ ವೇಗಿ ಕ್ಯಾಮೆರಾನ್ ಗ್ರೀನ್ ಅವರ ಒಂದೇ ಓವರ್‌ನಲ್ಲಿ ಸತತ 4 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದರು. ಈ ಪಂದ್ಯದಲ್ಲಿ ಭಾರತದ ಬ್ಯಾಟರ್‌ಗಳು ಒಟ್ಟು 18 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.