ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಪಾಠ ಅರ್ಥವಾಗದಿದ್ದರೆ ಇಲ್ಲಿದೆ ಟೆಕ್ನಿಕ್ಸ್

Last Updated 16 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

1.ನಾನು ಬಿಎ (ಅರ್ಥಶಾಸ್ತ್ರ) ಪದವಿ ಮುಗಿಸಿದ್ದೇನೆ. ಮುಂದೆ ಎಲ್‌ಎಲ್‌ಬಿ ಅಥವಾ ಎಂಎ, ಬಿ.ಇಡಿ ಆಯ್ಕೆಗಳಲ್ಲಿ ಯಾವುದನ್ನು ಮಾಡುವುದು ಸೂಕ್ತ ತಿಳಿಸಿ ಸರ್.
ಊರು. ಹೆಸರು ತಿಳಿಸಿಲ್ಲ.
ನಿಮ್ಮ ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯಿರುವ ಕ್ಷೇತ್ರವನ್ನು ಆರಿಸಿಕೊಂಡರೆ, ವೃತ್ತಿಯಲ್ಲಿ ಯಶಸ್ಸು ಮತ್ತು ಜೀವನದಲ್ಲಿ ಸಂತೃಪ್ತಿಯನ್ನು ಗಳಿಸಲು ಸುಲಭವಾಗುತ್ತದೆ. ಹಾಗಾಗಿ, ವಕೀಲಿ ವೃತ್ತಿಯಲ್ಲಿ ಆಸಕ್ತಿಯಿದ್ದರೆ ಎಲ್‌ಎಲ್‌ಬಿ ಮಾಡಬಹುದು ಮತ್ತು ಶಿಕ್ಷಕ
ವೃತ್ತಿಯಲ್ಲಿ ಆಸಕ್ತಿಯಿದ್ದಲ್ಲಿ ಎಂಎ, ಬಿ.ಇಡಿ ಮಾಡಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:https://www.youtube.com/c/EducationalExpertManagementCareerConsultant

2. ನಾನು ಎಂಕಾಂ ಮುಗಿಸಿ ಮೂರು ವರ್ಷ ಆಗಿದೆ. ಹೊಟ್ಟೆಪಾಡಿಗೆ ಚಹದಂಗಡಿ ಇಟ್ಟುಕೊಂಡಿದ್ದೀನಿ. ಮುಂದೇನು ಮಾಡಬೇಕು ಗೊತ್ತಾಗುತ್ತಿಲ್ಲ. ದಯವಿಟ್ಟು ಹೇಳಿ ಸರ್.
ಹೆಸರು, ಊರು ತಿಳಿಸಿಲ್ಲ.
ನಿಮ್ಮ ಸ್ವಾಭಾವಿಕ ಆಸಕ್ತಿ ಮತ್ತು ಅಭಿರುಚಿಯಂತೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬಹುದು. ಈ ಸಾಧ್ಯತೆಗಳನ್ನು ಪರಿಶೀಲಿಸಿ:
 ಸರ್ಕಾರಿ ಕ್ಷೇತ್ರದ ಹೆಚ್ಚು ಕಡಿಮೆ ಎಲ್ಲಾ ಇಲಾಖೆಯ ಕೆಲಸಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿಯಾಗುತ್ತಿದೆ.
 ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದ ಬ್ಯಾಂಕಿಂಗ್ ನೇಮಕಾತಿಗಳೂ ಸಹ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕವೇ ಆಗುತ್ತಿದೆ.
 ಶಿಕ್ಷಣ ಸಂಬಂಧಿತ ಡಿಪ್ಲೊಮಾ/ಬಿ.ಇಡಿ ಕೋರ್ಸ್ ಮುಗಿಸಿ ಶಿಕ್ಷಕ ವೃತ್ತಿಯನ್ನು ಅರಸಬಹುದು.
 ಸ್ವಂತ ಪರಿಶ್ರಮದಿಂದ ಕೆಪಿಎಸ್‌ಸಿ/ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗಿ ಸರ್ಕಾರಿ ವಲಯದ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬಹುದು.
 ಭಾಷೆ/ನಿರ್ದಿಷ್ಟ ವಿಷಯದಲ್ಲಿ ಅಭಿರುಚಿ ಮತ್ತು ಪರಿಣತಿಯಿದ್ದಲ್ಲಿ, ಅನುವಾದ/ವಿಷಯಾಭಿವೃದ್ಧಿ/ಮಾಧ್ಯಮ ಕ್ಷೇತ್ರದಲ್ಲಿರುವ
ಅವಕಾಶಗಳನ್ನು ಅರಸಬಹುದು. ಇದಲ್ಲದೆ, ನೀವು ಈಗ ನಡೆಸುತ್ತಿರುವ ವ್ಯಾಪಾರವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿದರೆ ಸಂತೃಪ್ತಿ ದೊರಕುವುದೇ ಎಂದೂ ಪರಿಶೀಲಿಸಿ.

3. ನಾನು ಕನ್ನಡ ಮಾಧ್ಯಮದಲ್ಲಿ ಹತ್ತನೇ ತರಗತಿ ಮುಗಿಸಿ ಪಿಯುಸಿ (ಪಿಸಿಎಂಬಿ) ಮಾಡುತ್ತಿದ್ದೇನೆ. ಆದರೆ, 3 ತಿಂಗಳಾದರೂ ವಿಷಯ ಕಠಿಣ ಆಗುತ್ತಿದೆ. ಯಾವ ರೀತಿ ಓದಬೇಕೆಂದು ಮಾಡಬೇಕೆಂದು ತಿಳಿಯುತ್ತಿಲ್ಲ. ವ್ಯಾಸಂಗದಲ್ಲಿ ಹಿಂದೆ ಉಳಿಯುತ್ತಿದ್ದೇನೆ. ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣುವುದು ಹೇಗೆ? ನಿಮ್ಮ ಸಲಹೆ, ಸೂಚನೆಗಳನ್ನು ನೀಡಿ.
ಹೆಸರು, ಊರು ತಿಳಿಸಿಲ್ಲ.
ಪಿಯುಸಿ ಇಂಗ್ಲಿಷ್ ಮಾಧ್ಯಮದಲ್ಲಿರುವುದರಿಂದ ನಿಮಗೆ ಕಷ್ಟವಾಗುತ್ತಿದ್ದಲ್ಲಿ, ಇಂಗ್ಲಿಷ್ ಭಾಷೆಯ ಪರಿಣತಿ ಗಳಿಸಲು ಇದೇ ತಿಂಗಳ 3ನೇ ತಾರೀಖಿನ ಪ್ರಶ್ನೋತ್ತರದಲ್ಲಿರುವ ಸಲಹೆಗಳನ್ನು ಅನುಸರಿಸಿ. ಆದರೆ ಭಾಷೆಯ ಸಮಸ್ಯೆಯಿಲ್ಲದೆ, ಉಪನ್ಯಾಸಗಳು ಅರ್ಥವಾಗದಿದ್ದಲ್ಲಿ ಈ ಸಲಹೆಗಳನ್ನು ಗಮನಿಸಿ:
 ತರಗತಿಯಲ್ಲಿ ಭೋಧಿಸುವ ವಿಷಯ ಅರ್ಥವಾಗದಿದ್ದರೆ ಸಂಕೋಚವಿಲ್ಲದೆ ಪ್ರಶ್ನೆಗಳನ್ನು ಕೇಳಬೇಕು. ಏಕೆಂದರೆ,
ಪ್ರಶ್ನೆಗಳನ್ನು ಕೇಳುವುದರಿಂದ ವಿಮರ್ಶಾತ್ಮಕ ಚಿಂತನಾ ಕೌಶಲಗಳ ಅಭಿವೃದ್ಧಿಯ ಜೊತೆಗೆ, ವಿಷಯದ ಬಗ್ಗೆ ಒಳನೋಟಗಳು ಲಭಿಸಿ ಕಲಿಕೆ ಪರಿಣಾಮಕಾರಿಯಾಗುತ್ತದೆ.
 ತರಗತಿಯಲ್ಲಿ ಪರಿಣಾಮಕಾರಿಯಾಗಿ ಟಿಪ್ಪಣಿ (ನೋಟ್ಸ್) ಬರೆಯುವುದರಿಂದ ಕಲಿಕೆಯ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ಆತ್ಮವಿಶ್ವಾಸ ಬೆಳೆಯುತ್ತದೆ.
 ಪರಿಣಾಮಕಾರಿ ಓದುವಿಕೆಯ ಕಲೆಯನ್ನು ಎಸ್‌ಕ್ಯು3ಆರ್‌ ನಂಥತಂತ್ರಗಾರಿಕೆಯ ಮೂಲಕ ರೂಢಿಸಿಕೊಳ್ಳಿ. ಇದರಿಂದ, ಜ್ಞಾಪಕ ಶಕ್ತಿಯೂ ವೃದ್ಧಿಸುತ್ತದೆ.

ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:https://www.youtube.com/watch?v=3PzmKRaJHmk

4.ಸರ್, ಪ್ರಥಮ ವರ್ಷದ ಬಿ.ಇಡಿ ವ್ಯಾಸಂಗ ಮಾಡುತ್ತಿದ್ದೇನೆ, ನಾನು ಈಗಿನಿಂದಲೇ ಟಿಇಟಿ ಬರೆಯಲು ಅಭ್ಯಾಸ ಮಾಡಬೇಕೆಂದುಕೊಂಡಿದ್ದೇನೆ. ಬಿ.ಇಡಿ ಅಭ್ಯಾಸದ ಕಡೆ ಹೆಚ್ಚಿನ ಆಸಕ್ತಿ ಇಲ್ಲ. ಬಿ.ಇಡಿ ಹೆಚ್ಚಿನ ಅಂಕ ಪಡೆಯದೇ ಉತ್ತೀರ್ಣನಾದರೆ ಮುಂದೆ ತೊಂದರೆಯಾಗಬಹುದೇ? ಟಿಇಟಿ ಮತ್ತು ಸಿಇಟಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಸೂಕ್ತವಾದ ಪುಸ್ತಕಗಳನ್ನು ತಿಳಿಸಿ.
ಹೆಸರು, ಊರು ತಿಳಿಸಿಲ್ಲ.
ಒಬ್ಬ ಯಶಸ್ವಿ ಶಿಕ್ಷಕರಾಗಲು ವೃತ್ತಿಸಂಬಂಧಿತ ಜ್ಞಾನ ಮತ್ತು ಕೌಶಲಗಳನ್ನು ಬಿ.ಇಡಿ ಕೋರ್ಸಿನಲ್ಲಿ ಹೇಳಿಕೊಡಲಾಗುತ್ತದೆ. ಉದಾಹರಣೆಗೆ, ಬಾಲ್ಯ ಮತ್ತು ಬೆಳವಣಿಗೆ, ಕಲಿಕೆ ಮತ್ತು ಭೋಧನೆ, ಪಠ್ಯಕ್ರಮ, ಅಧ್ಯಾಪನ ಶಾಸ್ತ್ರ, ಸಂವಹನ, ತಾಳ್ಮೆ ಮುಂತಾದ ಶಿಕ್ಷಕ ವೃತ್ತಿಗೆ ಅತ್ಯಗತ್ಯವಾದ ವಿಷಯಗಳಿರುತ್ತವೆ. ಹಾಗಾಗಿ, ಬಿ.ಇಡಿ ಕೋರ್ಸನ್ನು ಗಂಭೀರವಾಗಿ ತೆಗೆದುಕೊಂಡು ವೃತ್ತಿಗೆ ಬೇಕಾಗುವ ಜ್ಞಾನ ಮತ್ತು ಕೌಶಲಗಳನ್ನು ಪಡೆಯಬೇಕು. ಇದೇ ನಿಮ್ಮ ಗುರಿಯಾಗಿರಲಿ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಲು ಕನಿಷ್ಠ ಶೇ 50 ಅಂಕಗಳಿರಬೇಕು. ವೃತ್ತಿಯಲ್ಲಿ ಯಾವ ವಿಷಯವನ್ನು ಭೋಧಿಸುತ್ತೀರೋ ಅದಕ್ಕೆ ಅನುಗುಣವಾಗಿ ಟಿಇಟಿ ಪರೀಕ್ಷೆಯ ತಯಾರಿಯಿರಬೇಕು. ಪರೀಕ್ಷೆಯ ಮಾದರಿ, ಪುಸ್ತಕಗಳು ಇತ್ಯಾದಿ ಮಾಹಿತಿಗಾಗಿ ಗಮನಿಸಿ:https://www.freshersnow.com/best-books-for-karnataka-tet-exam

5. ಸರ್, ನಾನು ಪಿಯುಸಿ (ವಿಜ್ಞಾನ) ವ್ಯಾಸಂಗ ಮಾಡಿ ಈಗ ಸ್ಪರ್ಧಾತ್ಮಕ ಪರೀಕ್ಷೆಗೆಂದು ಬಿಎ ಪದವಿ ಮಾಡುತ್ತಿದ್ದೇನೆ. ಪ್ರಸ್ತುತ ಬಿಎ ಮೊದಲನೇ ವರ್ಷ ಮುಗಿದಿದೆ. ಈಗ ನಮ್ಮ ತಂದೆಯವರು ಒಬ್ಬ ಉನ್ನತ ಸರ್ಕಾರಿ ಹುದ್ದೆಯಲ್ಲಿರುವ ಅಧಿಕಾರಿ ಬಳಿ ಕೇಳಿದ ಸಲಹೆಯ ಪ್ರಕಾರ ಪುನಃ ಬಿ.ಎಸ್ಸಿಗೆ ಸೇರು ಅಂತಿದ್ದಾರೆ. ಈಗ, ಯಾವುದಕ್ಕೆ ಪ್ರವೇಶ ಪಡೆಯಲಿ ಅಂತ ತುಂಬಾ ಗೊಂದಲದಲ್ಲಿದ್ದೀನಿ. ದಯವಿಟ್ಟು ಸಲಹೆ ನೀಡಿ ಸರ್.
ಹೆಸರು, ಊರು ತಿಳಿಸಿಲ್ಲ.

ನೀವು ಈಗಾಗಲೇ ಬಿಎ ಮೊದಲ ವರ್ಷ ಮುಗಿಸಿದ್ದೀರಿ. ನಿಮ್ಮ ಗುರಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ವೃತ್ತಿಯನ್ನು ಅರಸಬೇಕೆನ್ನುವುದಾದರೆ ಬಿಎ ಪದವಿಯನ್ನು ಮುಗಿಸುವುದು ಸೂಕ್ತ. ‌

6. 4 ವರ್ಷದ ಪದವಿಯ ನಂತರ ಎಂಎ ಮತ್ತು ಪಿಎಚ್‌ಡಿ ಕೋರ್ಸುಗಳು ಎಷ್ಟು ವರ್ಷ ಇರುತ್ತವೆ?
ಹೆಸರು, ಊರು ತಿಳಿಸಿಲ್ಲ.
ನಾಲ್ಕು ವರ್ಷದ ಪದವಿಯನ್ನು ಮಾಡಿದ ಬಳಿಕ ಎಂಎ ಒಂದು ವರ್ಷದ್ದಾಗಿರುತ್ತದೆ. ಪದವಿ ಕೋರ್ಸಿನ 4ನೇ ವರ್ಷ ಸಂಶೋಧನೆಗೆ
ಮೀಸಲಾಗಿರುತ್ತದೆ ಹಾಗೂ ಪದವಿಯ ನಂತರ ನೇರವಾಗಿ ಪಿಎಚ್‌ಡಿ ಮಾಡಲು ಅರ್ಹತೆಯಿರುತ್ತದೆ. ಪಿಎಚ್‌ಡಿ ಮಾಡಲು 3-5 ವರ್ಷ ಬೇಕಾಗಬಹುದು.

7. ನಾನು ಎಂಜಿನಿಯರಿಂಗ್ ಮಾಡಬೇಕು ಎಂದುಕೊಂಡಿದ್ದೇನೆ. ಕೃತಕ ಬುದ್ದಿಮತ್ತೆ ಮತ್ತು ಕಂಪ್ಯೂಟರ್ ಸೈನ್ಸ್ ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿದರೆ ಮುಂದೆ ಅವಕಾಶಗಳಿವೆ?
ಹೆಸರು, ಊರು ತಿಳಿಸಿಲ್ಲ.
ನೀವು ಕೇಳಿರುವ ಎರಡೂ ಕ್ಷೇತ್ರಗಳಿಗೆ ಬೇಡಿಕೆಯಿದೆ. ಹಾಗಾಗಿ, ನಿಮ್ಮ ಆಸಕ್ತಿ, ಅಭಿರುಚಿಯಂತೆ ನಿರ್ಧರಿಸಿ.

8. ನಾನು 6 ರಿಂದ 10ನೇ ತರಗತಿಯವರಗೆ ವಸತಿ ಶಾಲೆಯಲ್ಲಿ ಅಂಗವಿಕಲರ ಕೋಟಾದಲ್ಲಿ ಕಲಿತಿದ್ದೇನೆ. ಆದರೆ, ಪ್ರಸ್ತುತ ಕನಿಷ್ಠ 40 ಅಂಗವೈಕಲ್ಯ ಬರುತ್ತಿಲ್ಲ. ಹೀಗಾಗಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಂಗವಿಕಲರ ಮೀಸಲಾತಿಯ ಅಡಿಯಲ್ಲಿ ಅರ್ಜಿ ಹಾಕಬಾರದೆಂದು ನಿರ್ಧರಿಸಿದ್ದೀನಿ. ಆದರೆ ನನ್ನ ಹತ್ತನೇ ತರಗತಿಯ ಅಂಕಪಟ್ಟಿಯಲ್ಲಿ ಅಂಗವಿಕಲತೆಯನ್ನು ನಮೂದಿಸುವುದರಿಂದ ಮುಂದೆ ಕೆಲಸವನ್ನು ಪಡೆಯುವ ಹಂತದಲ್ಲಿ ಸಮಸ್ಯೆ ಆಗಬಹುದೇ?
ಊರು. ಹೆಸರು ತಿಳಿಸಿಲ್ಲ.
ನಮ್ಮ ಅಭಿಪ್ರಾಯದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಮುಖಾಂತರ ವೃತ್ತಿಯನ್ನು ಅರಸುವ ಸಂದರ್ಭದಲ್ಲಿ ಸಮಸ್ಯೆ ಆಗಲಾರದು. ಆದರೆ, ವೈಯಕ್ತಿಕ ಸಂದರ್ಶನದಲ್ಲಿ ಈ ಕುರಿತು ವಿವರಣೆಯನ್ನು ಕೇಳಿದರೆ, ಸೂಕ್ತವಾದ ಉತ್ತರವನ್ನು ನೀಡಿ.

9. ಸರ್, ನಾನು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅನಿವಾರ್ಯ ಕಾರಣಗಳಿಂದ ಕರ್ತವ್ಯಕ್ಕೆ ದೀರ್ಘಕಾಲದವರೆಗೆ ಹಾಜರಾಗಲು ಸಾಧ್ಯವಾಗಿರುವುದಿಲ್ಲ. ಈ ಕಾರಣದಿಂದಾಗಿ ನನ್ನನ್ನು ಸಂಸ್ಥೆಯಿಂದ ವಜಾ ಮಾಡಿರುತ್ತಾರೆ. ನಾನು ಸದ್ಯ ಕೆಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುತ್ತೇನೆ. ಆದರೆ, ಮೇಲ್ಕಂಡ ಪ್ರಕರಣದಿಂದ ನಾನು ಸರ್ಕಾರಿ ಹುದ್ದೆಗಳಿಗೆ

ಆಯ್ಕೆಯಾಗುವಲ್ಲಿ ತೊಂದರೆ ಉಂಟಾಗುವುದೇ ಎಂಬ ಗೊಂದಲ ಕಾಡುತ್ತಿದೆ. ದಯವಿಟ್ಟು ಇದರ ಬಗ್ಗೆ ಪರಿಹಾರ ತಿಳಿಸಿ.
ಊರು. ಹೆಸರು ತಿಳಿಸಿಲ್ಲ.

ನಿಮ್ಮ ನೇಮಕಾತಿಯ ನಿಯಮಗಳು, ನಿಬಂಧನೆಗಳು ಹಾಗೂ ಸೇವೆಯಿಂದ ವಜಾ ಮಾಡಿರುವ ಕಾರಣಗಳನ್ನು ಪರಿಶೀಲಿಸದೆ ಸಲಹೆ
ನೀಡಲಾಗುವುದಿಲ್ಲ. ಆದರೆ, ವೈಯಕ್ತಿಕ ಸಂದರ್ಶನದಲ್ಲಿ ಈ ಬಗ್ಗೆ ಪ್ರಶ್ನೆಗಳನ್ನು ಕೇಳಿದರೆ, ನೀವು ಸರ್ಕಾರಿ ಸೇವೆಯಿಂದ ವಜಾ ಆದ ಸಂದರ್ಭ ಮತ್ತು ಕಾರಣಗಳ ವಿವರಣೆಗಳನ್ನು ಸಂದರ್ಶಕರಿಗೆ ನೀಡಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT