ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚಿಂಗ್ ಇಲ್ಲದಿದ್ದರೆ ಅರ್ಧ ಗಂಟೆ ಹೆಚ್ಚು ಓದಿದರೆ ಸಾಕು: UPSC ಟಾಪರ್ ಪೂಜಾ ಸಂದರ್ಶನ

Published 31 ಮೇ 2023, 23:31 IST
Last Updated 31 ಮೇ 2023, 23:31 IST
ಅಕ್ಷರ ಗಾತ್ರ

– ಸುಧೀರ್‌ಕುಮಾರ್ .ಎಚ್.ಕೆ

ಕೋಚಿಂಗ್‌ ಪಡೆಯದೇ ಕೇಂದ್ರ ಲೋಕಸೇವಾ ಆಯೋಗದ(ಯುಪಿಎಸ್‌ಸಿ) ಪರೀಕ್ಷೆಯಲ್ಲಿ ಯಶಸ್ಸುಗಳಿಸಲು ಸಾಧ್ಯವೇ ? ಹೌದು, ಮೈಸೂರಿನ ಕುವೆಂಪುನಗರದ ಎಂ.ಪೂಜಾ ಎಲ್ಲೂ ಕೋಚಿಂಗ್‌ ತೆಗೆದುಕೊಳ್ಳದೇ 2022ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ 390ನೇ ರ‍್ಯಾಂಕ್‌ ಪಡೆದಿದ್ದಾರೆ. ಎರಡನೇ ಪ್ರಯತ್ನದಲ್ಲಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅವರು, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಹೇಗೆ ? ಎಂಬುದರ ಕುರಿತು ‘ಸ್ಪರ್ಧಾವಾಣಿ’ಯೊಂದಿಗೆ ಅನುಭವ ಹಂಚಿಕೊಂಡಿದ್ದಾರೆ.

* ಯುಪಿಎಸ್‌ಸಿ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಳಿಸಿದ್ದೀರಿ. ಮುಂದೆ...?

ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲು ಹೆಚ್ಚು ಆಸಕ್ತಿಯಿದೆ. ಅದರ ಹೊರತಾಗಿಯೂ ಯಾವುದೇ ಕ್ಚೇತ್ರದಲ್ಲಿ ಕೆಲಸ ಮಾಡಿದರೂ, ಕರ್ತವ್ಯದ ಮೂಲಕ ಹೆಸರು ಗಳಿಸಬೇಕು ಎಂಬುದೇ ನನ್ನ ಕನಸು. ಈ ಪರೀಕ್ಷೆಯ ಯಶಸ್ಸು ಖುಷಿ ಮತ್ತು ಅವಕಾಶ ನೀಡಿದೆ.

ಪೋಷಕರಾದ ಮುಕುಂದ ರಾವ್‌ ಬೇದ್ರೆ ಹಾಗೂ ಎಂ.ಪದ್ಮಾವತಿ ಅವರೊಂದಿಗೆ ಎಂ.ಪೂಜಾ
ಪೋಷಕರಾದ ಮುಕುಂದ ರಾವ್‌ ಬೇದ್ರೆ ಹಾಗೂ ಎಂ.ಪದ್ಮಾವತಿ ಅವರೊಂದಿಗೆ ಎಂ.ಪೂಜಾ

* ನಿಮ್ಮ ಕುಟುಂಬ ಮತ್ತು ಓದಿನ ಹಿನ್ನೆಲೆ..?

ನಮ್ಮದು ಮಧ್ಯಮವರ್ಗದ ಕುಟುಂಬ. ತಂದೆ ಮುಕುಂದ ರಾವ್‌ ಬೇದ್ರೆ ಅವರು ಖಾಸಗಿ ಸಂಸ್ಥೆಯ ಉದ್ಯೋಗಿ. ತಾಯಿ ಎಂ.ಪದ್ಮಾವತಿ ಗೃಹಿಣಿ. ಅಕ್ಕ ಇದ್ದಾರೆ.

ಮೈಸೂರಿನ ಕುವೆಂಪು ನಗರದ ಕಾವೇರಿ ಶಾಲೆಯಲ್ಲಿ 10ನೇ ತರಗತಿವರೆಗೆ, ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯು, ವಿದ್ಯಾವರ್ಧಕ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ಎಂಜಿನಿಯರಿಂಗ್ ಓದಿದ್ದೇನೆ. ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎನ್ನಿಸಿತು. ತಾಯಿಯ ಒತ್ತಾಸೆ ಮತ್ತು ವೃತ್ತಿಶಿಕ್ಷಣದ ಹಿನ್ನೆಲೆ ಯುಪಿಎಸ್‌ಸಿ ಪರೀಕ್ಷೆಯ ಪ್ರಯತ್ನಕ್ಕೆ ಧೈರ್ಯ ನೀಡಿತು.

* ಎರಡನೇ ಪ್ರಯತ್ನದಲ್ಲಿ ಯಶಸ್ಸು ದೊರೆತಿದೆ. ಪರೀಕ್ಷೆಗಾಗಿ ತಯಾರಿ ಹೇಗಿತ್ತು?

ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್‌ (ಪೂರ್ವಭಾವಿ ಪರೀಕ್ಷೆ) ಅನ್ನೇ ಪಾಸ್‌ ಮಾಡಲು ಆಗಿರಲಿಲ್ಲ. ಆತಂಕಕ್ಕೊಳಗಾಗಿ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿದ ಪ್ರಯತ್ನವೂ ಮುಳುವಾಗಿತ್ತು. ನಂತರ ‌ತಪ್ಪನ್ನು ಕಂಡುಕೊಂಡೆ. ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳ ಅಧ್ಯಯನ, ಅಣುಕು ಪರೀಕ್ಷೆಗಳತ್ತ ಗಮನ ಕೇಂದ್ರಿಕರಿಸಿದೆ. ತಪ್ಪುಗಳು ಮರುಕಳಿಸದಂತೆ  ನೋಡಿಕೊಂಡೆ.

* ಯುಪಿಎಸ್‌ಸಿ ಪರೀಕ್ಷೆ ಎದುರಿಸಲು ನೀವು ಕೋಚಿಂಗ್‌ ತೆಗೆದುಕೊಂಡಿದ್ದೀರಾ? ಕೋಚಿಂಗ್‌ ಕಡ್ಡಾಯವೇ ?

ಪರೀಕ್ಷೆ ತೆಗೆದುಕೊಳ್ಳಬೇಕೆಂದುಕೊಂಡಾಗಲೇ ಸ್ವಯಂ ಅಧ್ಯಯನ ಮಾಡಲು ನಿರ್ಧರಿಸಿದೆ. ತೀರ ಕಷ್ಟವಾದರೆ ಮಾತ್ರ ಕೋಚಿಂಗ್‌ ಸೇರೋಣ ಎಂಬ ಆಲೋಚನೆಯಿತ್ತು. ಆದರೆ ನನಗೆ ಇದೇ ಹೆಚ್ಚು ಸಹಕಾರಿ ಎನಿಸಿತು. ಎಲ್ಲರಿಗೂ ಕೋಚಿಂಗ್‌ ಬೇಕು ಎಂದು ನಾನು ಹೇಳುವುದಿಲ್ಲ. ಹಾಗೆಂದು ತೀರ ಅಗತ್ಯವಿದೆ ಎನಿಸಿದರೆ ಪಡೆಯುವುದೂ ತಪ್ಪಲ್ಲ. ಸಲಹೆ ಇಷ್ಟೇ, ಕೋಚಿಂಗ್‌ ಪಡೆಯಲು ಶಕ್ತರಲ್ಲದವರು ಆತಂಕ ಪಡುವ ಅಗತ್ಯವಿಲ್ಲ. ಅರ್ಧ ಗಂಟೆ ಹೆಚ್ಚು ಓದಿದರೆ ಯಶಸ್ಸು ಸಾಧ್ಯ.

* ನಿಮ್ಮ ಓದಿನ ಕ್ರಮದ ಬಗ್ಗೆ ಹೇಳಿ. ಹಾಗೆಯೇ, ಅಧ್ಯಯನ ಸಾಮಗ್ರಿಗಳ ಆಯ್ಕೆ ಹೇಗೆ ಮಾಡಿಕೊಂಡಿರಿ ?

ಒಬ್ಬಳೇ ಓದುತ್ತಾ ಹೋದಂತೆ ನನಗೆ ನಾನೇ ತರಬೇತುದಾರಳಾದೆ. ನನ್ನ ಸಾಮರ್ಥ್ಯ, ಕೊರತೆ ಕುರಿತು ತಿಳಿಯಿತು. ಸಾಧಾರಣವಾಗಿ ಎಲ್ಲರೂ ಉತ್ತಮ ಎಂದು ಪರಿಗಣಿಸುವ ಪುಸ್ತಕಗಳನ್ನೇ ನಾನೂ ಆಯ್ಕೆ ಮಾಡಿಕೊಂಡೆ. ನಿತಿನ್ ಸಾಂಗ್ವಾನ್ ಅವರ ‘ಎಸೆನ್ಸಿಯಲ್ ಸೋಷಿಯಾಲಜಿ’ ಪುಸ್ತಕವನ್ನು ಓದಿದೆ. ಈ ಪುಸ್ತಕ ಸಮಾಜ ಶಾಸ್ತ್ರವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಾಕಷ್ಟು ಒಳನೋಟಗಳನ್ನು ನೀಡಿತು.

ಆದಷ್ಟೂ ಕಡಿಮೆ ಪುಸ್ತಕಗಳಿದ್ದರೆ ಗೊಂದಲಗಳೂ ಕಡಿಮೆ ಇರುತ್ತವೆ. ಅವುಗಳನ್ನೇ ಹೆಚ್ಚು ಓದಿ, ಪುನರಾವರ್ತನೆ ಮಾಡುವುದು ಯಶಸ್ಸಿನ ಮಾರ್ಗದಲ್ಲಿ ಬಹಳ ಮುಖ್ಯ. ತೀರ ಸಮಸ್ಯೆ ಎದುರಾದಾಗ ಯೂಟ್ಯೂಬ್‌ ಮತ್ತು ಇಂಟರ್ನೆಟ್ ನೋಡುತ್ತಿದ್ದೆ. ಅಲ್ಲಿಯೂ ನಮ್ಮ ಆಯ್ಕೆ ನಿರ್ದಿಷ್ಟವಾಗಿರಬೇಕು.

ಇಂಟರ್ನೆಟ್‌ನಲ್ಲಿ ಯುಪಿಎಸ್‌ಸಿ ಟಾಪರ್ಸ್‌ಗಳ ಸಂದರ್ಶನಗಳನ್ನು ನೋಡಿ, ನೋಟ್ಸ್‌ ಮಾಡಿಕೊಳ್ಳುತ್ತಿದ್ದೆ. ಇವು ನನಗೆ ಸ್ವಂತ ಅಧ್ಯಯನ ಮಾಡಲು ಅಗತ್ಯವಾದ ತಾಂತ್ರಿಕತೆ ರೂಪಿಸಿಕೊಳ್ಳಲು ಸಹಾಯವಾಯಿತು.

* ಮುಖ್ಯ ಪರೀಕ್ಷೆಗೆ ಐಚ್ಛಿಕ ವಿಷಯ ಆಯ್ಕೆ ಹೇಗೆ ಮಾಡಿಕೊಂಡಿರಿ ?

ಎಂಜಿನಿಯರಿಂಗ್‌ ಓದಿದ್ದ ನನಗೆ ಸಮಾಜ ವಿಜ್ಞಾನದ ಬಗ್ಗೆ ಹೆಚ್ಚು ಅಧ್ಯಯನದ ಅವಕಾಶವಿರಲಿಲ್ಲ, ಕೇವಲ ಅನುಭವವಷ್ಟೇ. ನನ್ನ ಆಯ್ಕೆ ಹಾಗೂ ಮುಂದಿನ ವೃತ್ತಿಗೆ ಸಮಾಜದ ಕುರಿತು ಆಳವಾದ ಅಧ್ಯಯನ ಬೇಕು ಎನ್ನಿಸಿ ಸಮಾಜವಿಜ್ಞಾನ ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡೆ. ಮೊದಮೊದಲು ಕಷ್ಟವೆನಿಸಿತು. ಆದರೆ, ನಿರಂತರ ಓದು ಮತ್ತು ಪಠ್ಯಗಳ ಪುನರ್ಮನನ ವಿಷಯದ ಮೇಲೆ ಹಿಡಿತ ಸಾಧಿಸಲು ಸಹಕರಿಸಿತು.

ಪ್ರಜಾವಾಣಿ ಓದು ನೆರವಾಯ್ತು

*ಸಂದರ್ಶನ ಎದುರಿಸಿದ ಅನುಭವ ಹೇಗಿತ್ತು?

ನನ್ನ ಸಂದರ್ಶನದ ದಿನಾಂಕ ಕೊನೆಯಲ್ಲಿತ್ತು. ಸಹಜವಾಗಿಯೇ ಆತಂಕಕ್ಕೊಳಗಾಗಿದ್ದೆ. ಎಲ್ಲ ದಿನವೂ ಉತ್ತಮವೇ ಎಂದು ಹಾಜರಾದೆ. ಸಂದರ್ಶನದ ಕೋಣೆಯ ಹೊರಗಿದ್ದಾಗ, ಕಣ್ಮುಚ್ಚಿ ನನ್ನ ಜೀವನವನ್ನೇ ಒಮ್ಮೆ ಮೆಲುಕು ಹಾಕಿದೆ. ನನ್ನ ಪಯಣ ನನಗೆ ಖುಷಿ ನೀಡಿತು. ಅದೇ ಜೋಷ್‌ನಲ್ಲಿ ಒಳಹೋಗಿ, ಸಂತಸದಿಂದ ಸಂದರ್ಶಕರನ್ನು ಎದುರಿಸಿದೆ. ಬಹುಶಃ ಗೆಲುವಿಗೆ ಇದೂ ಸಹಕಾರಿಯಾಗಿದೆ.

ಸಂದರ್ಶನದಲ್ಲಿ ಪ್ರಶ್ನೆಗಳನ್ನು ಎದುರಿಸುವಾಗ ದಿನಪತ್ರಿಕೆಗಳ ಓದು ಹೆಚ್ಚು ಅಗತ್ಯ. ಕರ್ನಾಟಕದ ವಿಷಯಗಳಿಗಾಗಿ ಹಾಗೂ ಪ್ರಚಲಿತ ವಿದ್ಯಮಾನಗಳಿಗಾಗಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಅವಲಂಬಿಸಿದ್ದೆ. ಈ ಪತ್ರಿಕೆಗಳ ಓದು, ನನಗೆ ಸಂದರ್ಶನದ ವೇಳೆ ಹೆಚ್ಚು ನೆರವಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT