ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ ಸಾಧಕ ಮಹಮ್ಮದ್‌ ಹಾರಿಸ್‌ ಸುಮೈರ್‌: ಗುರಿ ತಲುಪಿಸಿದ ಆಸಕ್ತಿಯ ಓದು

ಸಹೋದರ ಫೈಜಾನ್‌, ಹರ್ಷ ಗುಪ್ತ ಪ್ರೇರಣೆ
Last Updated 25 ಸೆಪ್ಟೆಂಬರ್ 2021, 16:40 IST
ಅಕ್ಷರ ಗಾತ್ರ

ಬೀದರ್: ಯುಪಿಎಸ್‌ಸಿ ಪರೀಕ್ಷೆಯಲ್ಲಿ 270ನೇ ರ್‍ಯಾಂಕ್‌ ಪಡೆದ ಮಹಮ್ಮದ್‌ ಹಾರಿಸ್‌ ಸುಮೈರ್‌ ಬೀದರ್‌ನ ಪ್ರತಿಭೆಯಾಗಿದ್ದಾರೆ. ಸಹೋದರ ಫೈಜಾನ್ ಅಹಮ್ಮದ್ ಸಾಧನೆ ಹಾಗೂ ಜಿಲ್ಲೆಯಲ್ಲಿ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಹರ್ಷ ಗುಪ್ತ ಅವರು ದಿಟ್ಟತನದಿಂದ ಕೈಗೊಂಡ ಕಾರ್ಯದ ಪ್ರೇರಣೆ ಪಡೆದು ಎರಡನೇ ಪ್ರಯತ್ನದಲ್ಲೇ ಗುರಿ ಸಾಧಿಸಿ ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ.

ಗೆಳೆಯರ ಅಭಿನಂದನೆಗಳ ಸುರಿಮಳೆ ಹಾಗೂ ಒತ್ತಡದ ಸಮಯದಲ್ಲೂ ಒಂದಿಷ್ಟು ಬಿಡುವು ಮಾಡಿಕೊಂಡು ಮಹಮ್ಮದ್‌ ಹಾರಿಸ್‌ ಸುಮೈದ್‌ ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಯುಪಿಎಸ್‌ಸಿ ಪರೀಕ್ಷೆ ಬರೆಯಲು ಹೇಗೆ ಪ್ರೇರಣೆ ದೊರೆಯಿತು?

ಬೀದರ್‌ ನಗರದಲ್ಲಿ ಚಿಕ್ಕಚಿಕ್ಕ ಬೀದಿಗಳಿದ್ದವು. ಜಿಲ್ಲಾಧಿಕಾರಿಯಾಗಿದ್ದ ಹರ್ಷ ಗುಪ್ತ ಅವರು ಜನರ ವಿಶ್ವಾಸ ಗಳಿಸಿ ಛಲದೊಂದಿಗೆ ಮಾಸ್ಟರ್‌ ಪ್ಲಾನ್‌ ಜಾರಿ ಮಾಡಿ ಬೀದರ್ ನಗರದ ಅಭಿವೃದ್ಧಿಗೆ ಶ್ರಮಿಸಿದ್ದರು. ಉತ್ತಮ ಕೆಲಸಗಳಿಂದಾಗಿ ಅವರು ಇಂದಿಗೂ ಜನರ ಮನದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ. ನನ್ನ ಸಹೋದರ ಎರಡು ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದು ಪಾಸಾದರು. ಅವರೇ ನನ್ನ ಪಾಲಿಗೆ ಹಿರೋ ಆದರು. ಅವರ ಸಾಧನೆಯೇ ನನಗೆ ಪ್ರೇರಣೆ ಆಯಿತು.

ಪಾಲಕರ ಬೆಂಬಲ ಹೇಗಿತ್ತು?

ನನ್ನ ಮಗ, ಮಗಳು ಎಂಜಿನಿಯರ್‌, ಡಾಕ್ಟರ್‌ ಆಗಬೇಕು. ಉತ್ತಮ ಆದಾಯ ತರಬೇಕು ಎನ್ನುವ ಪಾಲಕರ ಸಂಖ್ಯೆ ಹೆಚ್ಚಾಗಿದೆ. ಆದರೆ, ನನ್ನ ಪಾಲಕರು ಸಂಯಮ ಹಾಗೂ ಪ್ರೀತಿಯಿಂದ ನಡೆದುಕೊಂಡು ನನ್ನಲ್ಲಿ ಉತ್ಸಾಹ ತುಂಬಿದರು. ಏಳು ವರ್ಷ ನಾನು ಮನೆಯ ವಾತಾವರಣದಲ್ಲಿ ಇರದಿದ್ದರೂ ತಂದೆ, ತಾಯಿಯ ಚಿತ್ರ ನನ್ನ ಕಣ್ಮುಂದೆ ಇರುತ್ತಿತ್ತು. ಅವರು ನನ್ನ ಮೇಲಿಟ್ಟ ವಿಶ್ವಾಸ ಹುಸಿಗೊಳಿಸಲಿಲ್ಲ.

ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ತಮ್ಮ ಸಂದೇಶ ಏನು?

ಅಲ್ಪಸಂಖ್ಯಾತ ಸಮುದಾಯ ಅಷ್ಟೇ ಅಲ್ಲ; ಎಲ್ಲ ಸಮುದಾಯಗಳ ವಿದ್ಯಾರ್ಥಿಗಳೂ ಶಿಕ್ಷಣದ ಮೂಲಕವೇ ತಮ್ಮನ್ನು ತಾವು ಬಲಪಡಿಸಿಕೊಳ್ಳಬೇಕು. ಸಮಾಜವನ್ನು ಸದೃಢಗೊಳಿಸಬೇಕು. ಶಿಕ್ಷಣ ಯಶಸ್ಸಿನ ಮಾರ್ಗ ತೋರಿಸುತ್ತದೆ. ಹೀಗಾಗಿ ಶಿಕ್ಷಣದ ಮೂಲಕವೇ ಜೀವನದಲ್ಲಿ ಸಾಧನೆ ಮಾಡಲು ಪ್ರಯತ್ನಿಸಬೇಕು.

ಐಎಎಸ್‌ ಅಧಿಕಾರಿಯಾಗಿ ಸಮಾಜಕ್ಕೆ ಏನು ಮಾಡಲು ಬಯಸಿದ್ದೀರಿ?

ಶೋಷಿತರ, ಬಡವರ ಏಳಿಗೆ ಹಾಗೂ ಗ್ರಾಮೀಣ ಅಭಿವೃದ್ಧಿ ನನ್ನ ಧ್ಯೇಯವಾಗಿದೆ. ಇವುಗಳಿಗೆ ಆದ್ಯತೆ ನೀಡಿದರೆ ಇನ್ನುಳಿದ ಅಂಶಗಳು ಸಹಜವಾಗಿ ವಿಕಾಸ ಹೊಂದುತ್ತವೆ ಎನ್ನುವುದು ನನ್ನ ಅಭಿಮತ. ಅಧಿಕಾರಿಯಾಗಿ ಈ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಲು ಸಾಧ್ಯವಿದೆ.

ಇಂದಿನ ವಿದ್ಯಾರ್ಥಿಗಳಿಗೆ ನೀವು ಕೊಡುವ ಸಲಹೆ ಏನು?

ಇಚ್ಛಾಶಕ್ತಿಯೊಂದಿಗೆ ಕೆಲಸ ಆರಂಭಿಸಿದರೆ ಒಂದು ದಿನ ಪ್ರತಿಫಲ ಸಿಕ್ಕೆ ಸಿಗುತ್ತದೆ. ನಿತ್ಯ ಐದು ತಾಸು ಇಷ್ಟುಪಟ್ಟು ಓದುತ್ತಿದ್ದರಿಂದಲೇ ಒಂದು ವರ್ಷದಲ್ಲಿ ಯಶ ಸಾಧಿಸಲು ಸಾಧ್ಯವಾಯಿತು. ವಿದ್ಯಾರ್ಥಿಗಳು ಉನ್ನತ ಗುರಿ ಇಟ್ಟುಕೊಂಡು ನಿರಂತರ ಪ್ರಯತ್ನ ನಡೆಸಬೇಕು. ಯಶ ಹುಡುಕಿಕೊಂಡು ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT