ಭಾನುವಾರ, ಸೆಪ್ಟೆಂಬರ್ 26, 2021
28 °C

ಕಲಿಕೆಗೆ ಪೂರಕ ಅಭ್ಯಾಸದ ಹಾಳೆಗಳು

ಆರ್.ಬಿ. ಗುರುಬಸವರಾಜ Updated:

ಅಕ್ಷರ ಗಾತ್ರ : | |

Prajavani

ಮಾಹಿತಿ ತಂತ್ರಜ್ಞಾನದ ಇಂದಿನ ಯುಗದಲ್ಲಿ ಮಾಹಿತಿ ಸಂಗ್ರಹಣೆಯು ಹೆಚ್ಚುತ್ತಲೇ ಇದೆ. ಆದರೆ ಆ ಮಾಹಿತಿಯನ್ನು ಹೇಗೆ ಬಳಸಬೇಕು ಮತ್ತು ಜ್ಞಾನವನ್ನು ಹೇಗೆ ಹೊಸ ಉತ್ಪನ್ನವಾಗಿಸಬೇಕು ಎಂಬುದನ್ನು ಶಿಕ್ಷಣವು ಗಟ್ಟಿಗೊಳಿಸುತ್ತದೆ. ಮಾಹಿತಿಯನ್ನು ರಚಿಸುವ ಮತ್ತು ಬಳಸುವ ಪ್ರಕ್ರಿಯೆಯಲ್ಲಿ ತ್ವರಿತ ಬದಲಾವಣೆಗಳು ಆಗಿರುವುದರಿಂದ ಸಮಾಜದ ನಿರೀಕ್ಷೆಗಳು ಸಹ ಬದಲಾಗಿವೆ. ಕೋವಿಡ್ ನಂತರ ತಂತ್ರಜ್ಞಾನ ಆಧಾರಿತ ಕಲಿಕೆಯು ಹೆಚ್ಚು ವ್ಯಾಪಕವಾಗುತ್ತಿದೆ. ಇದು ಕಲಿಸುವವರಿಗೂ, ಕಲಿಯುವವರಿಗೂ ಮತ್ತು ಪಾಲಕರಿಗೂ ಕಿರಿಕಿರಿ ಎನಿಸಿದೆ. ಸಾಂಪ್ರದಾಯಿಕ ಬೋಧನೆ ಹಾಗೂ ಕಲಿಕೆಗಳು ತಾತ್ಕಾಲಿಕವಾಗಿ ದೂರವಾಗುತ್ತಿವೆ. ಆದರೂ ಸಾಂಪ್ರದಾಯಿಕ ಕಲಿಕೆಯನ್ನು ಮುಂದುವರೆಸಲು ಶಿಕ್ಷಕರು ಶ್ರಮಿಸುತ್ತಿದ್ದಾರೆ. ಇದರ ಭಾಗವಾಗಿ ಅಭ್ಯಾಸದ ಹಾಳೆ (ವರ್ಕ್‌ಶೀಟ್ಸ್‌)ಗಳು ಹೆಚ್ಚು ಪ್ರಸ್ತುತವಾಗುತ್ತಿವೆ.

ಅಭ್ಯಾಸದ ಹಾಳೆಗಳೆಂದರೇನು?
ಕಲಿಕೆಯನ್ನು ದೃಢಪಡಿಸಲು ಬಳಸುವ ಕಾಗದವೇ ಅಭ್ಯಾಸದ ಹಾಳೆ. ಸ್ಮಾರ್ಟ್ ಕಲಿಕಾ ವಿಧಾನಗಳ ಮೂಲಕ ವಿಷಯ/ ಪರಿಕಲ್ಪನೆಯನ್ನು ಅರ್ಥೈಸಿಕೊಂಡು ಸೃಜನಾತ್ಮಕ ಚಟುವಟಿಕೆ ಮೂಲಕ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಅಭ್ಯಾಸದ ಹಾಳೆಗಳು ಸಹಾಯ ಮಾಡುತ್ತವೆ. ಪಠ್ಯಪುಸ್ತಕದ ಹೊರತಾಗಿಯೂ ಕಲಿಕಾರ್ಥಿಗಳನ್ನು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸುವಲ್ಲಿ ಕಲಿಕಾ ಹಾಳೆಗಳು ಮಹತ್ವದ ಪಾತ್ರ ವಹಿಸುತ್ತವೆ. ಅಭ್ಯಾಸದ ಹಾಳೆಗಳ ಬಹುಮುಖ್ಯ ಉಪಯೋಗವೇನೆಂದರೆ ಪಾಲಕರೂ ಸಹ ಸುಲಭವಾಗಿ ಕಲಿಕಾ ವಿಧಾನವನ್ನು ಅರ್ಥೈಸಿಕೊಂಡು ಮಗು ಕಲಿಯಲು ಸಹಾಯ ಮಾಡಬಹುದು. ಅಭ್ಯಾಸದ ಹಾಳೆಯಲ್ಲಿನ ಚಟುವಟಿಕೆಗಳು ಬಹುತೇಕವಾಗಿ ಮೋಜಿನಿಂದ ಕೂಡಿದ್ದು ಮಕ್ಕಳು ಖುಷಿಯಿಂದ ಕಲಿಕೆಯಲ್ಲಿ ಪಾಲ್ಗೊಳ್ಳುತ್ತಾರೆ.

ಎನ್.ಸಿ.ಎಫ್-2005, ಶಿಕ್ಷಣ ಹಕ್ಕು ಕಾಯ್ದೆ-2009 ಹಾಗೂ ಹೊಸ ಶಿಕ್ಷಣ ನೀತಿ-2020ರ ಆಶಯಕ್ಕೆ ಪೂರಕವಾಗಿ ಅಭ್ಯಾಸದ ಹಾಳೆಯಲ್ಲಿನ ಪ್ರತಿ ಕಲಿಕಾಂಶವು ಶಿಶುಕೇಂದ್ರಿತವಾಗಿ ರಚಿತವಾಗಿರುತ್ತದೆ. ಅಲ್ಲದೇ ಅಭ್ಯಾಸದ ಹಾಳೆಗಳು ಚಿತ್ರಗಳಿಂದ ಕೂಡಿದ್ದು, ಆಕರ್ಷಕ ವಿನ್ಯಾಸದಲ್ಲಿ ರೂಪುಗೊಂಡಿರುತ್ತವೆ. ಇಲ್ಲಿ ಕೇವಲ ಬರವಣಿಗೆಗೆ ಒತ್ತು ನೀಡದೇ, ಪಠ್ಯಾಂಶವನ್ನು ಓದಿ ಅರ್ಥೈಸಿಕೊಂಡು ತನ್ನದೇ ಶೈಲಿಯಲ್ಲಿ ಕಲಿಕೆಯನ್ನು ವ್ಯಕ್ತಪಡಿಸಲು ಅವಕಾಶ ಇರುತ್ತದೆ. ಮಗುವಿನ ಕಲಿಕೆಯನ್ನು ವಿವಿಧ ಆಯಾಮಗಳಲ್ಲಿ ಮೌಲ್ಯಮಾಪನ ಮಾಡಲು ವಿವಿಧ ಕಲಿಕಾ ಚಟುವಟಿಕೆ ನೀಡಲಾಗಿರುತ್ತದೆ. ಸರಿ-ತಪ್ಪು ತಿಳಿಸುವ, ಗುರುತಿಸುವ, ವರ್ಗೀಕರಿಸುವ, ವ್ಯತ್ಯಾಸ ತಿಳಿಸುವ, ಜೋಡಿಸುವ, ನಕಲು ಮಾಡುವ, ತನ್ನದೇ ಸ್ವಯಂ ಉತ್ತರ ನೀಡುವ ಚಟುವಟಿಕೆಗಳನ್ನು ಅಭ್ಯಾಸದ ಹಾಳೆಗಳು ಹೊಂದಿರುತ್ತವೆ. ಮಗುವಿನ ಸ್ವಯಂ ಕಲಿಕೆಗೆ ಅಗತ್ಯವಾದ ಎಲ್ಲಾ ಅಂಶಗಳನ್ನು ಅಭ್ಯಾಸದ ಹಾಳೆಗಳು ಒಳಗೊಂಡಿರುತ್ತವೆ.

ಅಭ್ಯಾಸದ ಹಾಳೆಗಳು ಸಂಪೂರ್ಣವಾಗಿ ರಚನಾವಾದದ ಹಿನ್ನೆಲೆಯಲ್ಲಿ ರೂಪುಗೊಂಡಿವೆ. ರಚನಾವಾದವು 5-ಇ ಅಂಶಗಳನ್ನು ಒಳಗೊಂಡಿದೆ. ಅವುಗಳೆಂದರೆ, ತೊಡಗಿಸಿಕೊ(ಎಂಗೇಜ್), ಅನ್ವೇಷಿಸು(ಎಕ್ಸ್‌ಫ್ಲೋರ್), ಅಭಿವ್ಯಕ್ತಿಸು (ಎಕ್ಸ್‌ಪ್ಲೆನೇಶನ್), ವಿಸ್ತರಿಸು(ಎಲಾಬೊರೇಟ್) ಮತ್ತು ಮೌಲ್ಯಮಾಪಿಸು(ಇವ್ಯಾಲ್ಯುಯೇಷನ್). ಕಲಿಕೆಯ ಐದು ಹಂತಗಳು ಅಭ್ಯಾಸ ಹಾಳೆಯಲ್ಲಿ ಅಡಕವಾಗಿರುವುದರಿಂದ ಇವು ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ರೂಪುಗೊಂಡ ಹಾಳೆಗಳಾಗಿವೆ. ಅಭ್ಯಾಸದ ಹಾಳೆಗಳ ಮೂಲಕ ಕಲಿಕಾರ್ಥಿಯು ತನಗೆ ಬೇಕಾದ ಜ್ಞಾನವನ್ನು ತಾನೇ ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗುತ್ತಾನೆ. ಮಗು ತನಗೆ ಬೇಕಾದ ಜ್ಞಾನವನ್ನು ತಾನೇ ಕಟ್ಟಿಕೊಳ್ಳುವಂತಾಗಬೇಕು ಎಂಬುದನ್ನು ರಾಷ್ಟ್ರೀಯ ಶಿಕ್ಷಣ ನೀತಿಯು ಒತ್ತಿ ಹೇಳುತ್ತದೆ.

ಅಭ್ಯಾಸದ ಹಾಳೆಗಳ ಪ್ರಯೋಜನಗಳು
ಪರಿಣಾಮಕಾರಿಯಾದ ಸ್ವತಂತ್ರ ಕಲಿಕೆಗೆ ಸಹಕಾರಿ. ಅಭ್ಯಾಸದ ಹಾಳೆಗಳನ್ನು ಬಳಸಿ ಕಲಿಕಾರ್ಥಿಯು ಸ್ವತಃ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಕಲಿಕೆಯು ಪರಿಣಾಕಾರಿಯಾಗುವುದರ ಜೊತೆಗೆ ಶಾಶ್ವತವಾಗಿರುತ್ತದೆ.

ಇದು ಸುಲಭ ಹಂತಗಳ ವೈಯಕ್ತಿಕ ಕಲಿಕಾ ವಿಧಾನವಾಗಿದೆ. ಅಭ್ಯಾಸದ ಹಾಳೆಗಳ ಮೂಲಕ ಮಗು ಹಂತ ಹಂತವಾದ ಕಲಿಕೆಯನ್ನು ಗಳಿಸಿಕೊಳ್ಳುತ್ತದೆ. ಇದು ಶಿಶುಕೇಂದ್ರಿತ ಕಲಿಕಾ ವಿಧಾನವಾಗಿರುವುದರಿಂದ ಮಗು ಆಸಕ್ತಿಯಿಂದ ಕಲಿಕೆಯಲ್ಲಿ ತೊಡಗಿಕೊಳ್ಳುತ್ತದೆ.

ಅಭ್ಯಾಸದ ಹಾಳೆಗಳು ಮಗುವಿಗೆ ಮುಕ್ತ ಕಲಿಕಾ ಸಮಯದ ಅವಕಾಶವನ್ನು ಕಲ್ಪಿಸುತ್ತದೆ. ಅಂದರೆ ಮಗು ತನಗೆ ಅನುಕೂಲವಾದ ಸಮಯದಲ್ಲಿ ಕಲಿಕೆಗೆ ತೊಡಗಿಸಿಕೊಳ್ಳಲು ಅವಕಾಶ ಇರುತ್ತದೆ.

ಕಲಿಕಾರ್ಥಿಗಳ ಕಾರ್ಯಕ್ಷಮತೆಯನ್ನು ಅಳೆಯಲು ಸಹಕಾರಿ. ಕಲಿಕಾರ್ಥಿಗಳ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಕ್ಷೇತ್ರಗಳನ್ನು ಗುರುತಿಸಲು ಅಭ್ಯಾಸದ ಹಾಳೆಗಳು ಸಹಕಾರಿಯಾಗಿವೆ.

ಇವು ಕೇವಲ ಕಲಿಯಲು ಮಾತ್ರವಲ್ಲ. ಬದಲಾಗಿ ಕಲಿಕಾರ್ಥಿಯು ಕಲಿತಿರುವುದನ್ನು ಮರುಸೃಷ್ಟಿಸಲು ಅವಕಾಶ ನೀಡುತ್ತವೆ. ಮಕ್ಕಳು ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗಿವೆ.

ಹೋಂವರ್ಕ್‌ ಕಿರಿಕಿರಿಯನ್ನು ತಪ್ಪಿಸಿ ಸಂತಸದಿಂದ ಅಭ್ಯಾಸದಲ್ಲಿ ತೊಡಗುವಂತೆ ಮಾಡುತ್ತವೆ. ಇದು ನನ್ನ ಕಲಿಕೆಯ ಭಾಗ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುತ್ತವೆ.

ಇದರಲ್ಲಿನ ಚಟುವಟಿಕೆಗಳು ಪೋಷಕರಿಗೂ ಸುಲಭವಾಗಿ ಅರ್ಥವಾಗುವಂತೆ ಇರುವುದರಿಂದ ಅವರೂ ಸಹ ಮಕ್ಕಳ ಕಲಿಕೆಯಲ್ಲಿ ಭಾಗವಹಿಸಲು ಅನುಕೂಲವಾಗುತ್ತದೆ.

ಅಭ್ಯಾಸದ ಹಾಳೆಗಳು ಮಕ್ಕಳನ್ನು ಸ್ಕ್ರೀನ್‌ನಿಂದ ದೂರ ಇಡುತ್ತವೆ. ಇದರಲ್ಲಿನ ವೈವಿಧ್ಯಮಯ ಚಟುವಟಿಕೆಗಳು ಮಕ್ಕಳಿಗೆ ಅಮಿತಾನಂದ ನೀಡುವುದರಿಂದ ಮೊಬೈಲ್, ಐಪಾಡ್, ಟ್ಯಾಬ್, ಕಂಪ್ಯೂಟರ್, ಟಿವಿಗಳಂತಹ ಗ್ಯಾಜೆಟ್‌ಗಳಿಂದ ದೂರ ಇರಲು ಸಹಕಾರಿಯಾಗಿವೆ.

ಇವು ಮಕ್ಕಳನ್ನು ಪಠ್ಯದಾಚೆಗಿನ ಕಲಿಕೆಯನ್ನು ಪ್ರೋತ್ಸಾಹಿಸುತ್ತವೆ. ಅವರ ಆಲೋಚನೆಗೆ ಅನುಗುಣವಾಗಿ ಅನ್ವೇಷಣೆಯಲ್ಲಿ ತೊಡಗಲು ಉತ್ತೇಜಿಸುತ್ತವೆ. ಹೊಸ ಕಲಿಕೆಯ ಮೂಲಕ ಪರಿಕಲ್ಪನೆಗಳನ್ನು ಸುಧಾರಿಸುತ್ತವೆ.

ಈ ಹಾಳೆಗಳ ಕಾರ್ಯವು ಮಕ್ಕಳಿಗೆ ಮೋಜು ಎನಿಸುವಂತೆ ಭಾಸವಾಗುತ್ತದೆ. ಹಾಗಾಗಿ ಸ್ವಪ್ರೇರಣೆಯಿಂದ ಕಲಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಆಟ ಮತ್ತು ಇನ್ನಿತರೇ ಚಟುವಟಿಕೆಗಳನ್ನು ಇದಕ್ಕಾಗಿಯೇ ಮೀಸಲಿಡಲು ಬಯಸುತ್ತಾರೆ.

ಅಭ್ಯಾಸದ ಹಾಳೆಗಳು ಮುದ್ರಿತ ರೂಪದಲ್ಲಿರು ವುದರಿಂದ ಪುನರಾರ್ತಿತ ಕಲಿಕೆಗೆ ಸಹಕಾರಿಯಾಗಿವೆ. ಆ ಮೂಲಕ ಕಲಿಕಾರ್ಥಿಯು ತನ್ನ ಕಲಿಕೆಯನ್ನು ಅಭಿವೃದ್ದಿಪಡಿಸಿಕೊಳ್ಳಲು ಸಹಕಾರಿಯಾಗಿವೆ.

ವಿದ್ಯಾರ್ಥಿಗಳ ಕಲಿಕಾ ಪ್ರಗತಿಯ ಮೇಲೆ ನಿಗಾ ಇಡಲು ಸುಲಭವಾದ ಸಾಧನವಾಗಿರುವುದರಿಂದ ಮೌಲ್ಯಮಾಪನಕ್ಕೆ ಪೂರಕ ಸಾಮಗ್ರಿ ಒದಗಿಸುತ್ತವೆ.

ಅಭ್ಯಾಸದ ಹಾಳೆಗಳು ಹೀಗಿರಲಿ..
ಕಲಿಕಾರ್ಥಿಯ ಕಲಿಕಾ ಮಟ್ಟಕ್ಕೆ ತಕ್ಕಂತೆ ಅಭ್ಯಾಸದ ಹಾಳೆಗಳಿರಬೇಕು.

ಆಕರ್ಷಕ ವಿನ್ಯಾಸ ಹಾಗೂ ವೈವಿಧ್ಯಮಯ ಚಟುವಟಿಕೆಗಳಿರಬೇಕು.

ಮನೋರಂಜನಾತ್ಮಕ ಅಂಶಗಳಿಂದ ಕೂಡಿರಬೇಕು.

ಕಲಿಕಾ ಹಂತಗಳ ಸ್ಪಷ್ಟತೆ ಇರಬೇಕು.

ಚಿಂತನಶೀಲ ಕೌಶಲಗಳಿಂದ ರೂಪಿತವಾಗಿರಬೇಕು.

ಹೆಚ್ಚಿನ ಅಭ್ಯಾಸಕ್ಕೆ ಪ್ರೇರಣೆ ನೀಡುವಂತಿರಬೇಕು.

ವಿಶ್ಲೇಷಣೆ ಮತ್ತು ವಿವರಣೆಗಳಿಗೆ ಸೂಕ್ತ ಮಾರ್ಗಸೂಚಿಗಳಿರಬೇಕು.

ಹೊಸ ಆಲೋಚನೆಗಳನ್ನು ದಾಖಲಿಸಲು ಅವಕಾಶ ಇರಬೇಕು.

ಕಲಿಕೆ ಹೊರೆಯಾಗದಂತೆ ಎಚ್ಚರಿಕೆ ವಹಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು