ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷಾ ವಿಷಯಗಳಿಗೆ ಅಂಕ ನೀಡುವ ಪದ್ಧತಿಯನ್ನು ಕೈಬಿಡುವ ಶಾಲಾ ಶಿಕ್ಷಣ ಇಲಾಖೆಯ ನಿರ್ಧಾರ, ಹತ್ತನೇ ತರಗತಿಯ ವಿದ್ಯಾರ್ಥಿಗಳ ಮೇಲಿನ ಹೊರೆಯನ್ನು ತಗ್ಗಿಸುವ ಮಹತ್ವದ ಕ್ರಮವಾಗಿದೆ. ಮೂರನೇ ಭಾಷೆಗೆ ಅಂಕಗಳ ಬದಲು ಗ್ರೇಡ್ ನೀಡುವ ಹೊಸ ಪದ್ಧತಿಯನ್ನು 2026ರ ಪರೀಕ್ಷೆಯಿಂದಲೇ ಅನ್ವಯವಾಗುವಂತೆ ಜಾರಿಗೆ ತರಲು ಇಲಾಖೆ ನಿರ್ಧರಿಸಿದೆ. ಈ ಹಿಂದಿನಂತೆ ಹೊಸ ಪದ್ಧತಿಯಲ್ಲೂ ವಿದ್ಯಾರ್ಥಿಗಳು 625 ಅಂಕಗಳಿಗೆ ಪರೀಕ್ಷೆ ಬರೆಯಲಿದ್ದಾರೆ. ಆದರೆ, ತೃತೀಯ ಭಾಷೆಯ ಫಲಿತಾಂಶ ಗ್ರೇಡಿಂಗ್ಗಷ್ಟೇ ಸೀಮಿತಗೊಳ್ಳುವುದರಿಂದ, ಶೇಕಡವಾರು ನಿರ್ಧರಿಸಲು 525 ಅಂಕಗಳನ್ನಷ್ಟೇ ಪರಿಗಣಿಸಲಾಗುತ್ತದೆ. ಕನ್ನಡಪರ ಸಂಘಟನೆಗಳು ಮತ್ತು ಚಿಂತಕರ ಒತ್ತಾಯದ ಮೇರೆಗೆ ಈ ಬದಲಾವಣೆ ಮಾಡಿರುವುದಾಗಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. 2025ರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸುಮಾರು 1.48 ಲಕ್ಷ ವಿದ್ಯಾರ್ಥಿಗಳು ಹಿಂದಿ ವಿಷಯದಲ್ಲಿ ಅನುತ್ತೀರ್ಣರಾಗಿದ್ದರು, 2024ರಲ್ಲೂ ಹಿಂದಿಯಲ್ಲಿ ಫೇಲಾದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಮಕ್ಕಳ ಪಾಲಿಗೆ ಹಿಂದಿ ಹೇರಿಕೆ ಮಾರಕವಾಗುತ್ತಿದೆ ಎನ್ನುವ ಆತಂಕ ಕನ್ನಡ ಸಂಘಟನೆಗಳಿಂದ ವ್ಯಕ್ತವಾಗಿತ್ತು. ಆ ಆತಂಕಕ್ಕೆ ಸ್ಪಂದಿಸಿರುವ ಸರ್ಕಾರ, ತೃತೀಯ ಭಾಷೆಯಲ್ಲಿ ಪಡೆಯುವ ಅಂಕಗಳನ್ನು ಫಲಿತಾಂಶದಿಂದ ಹೊರಗಿಡಲು ತೀರ್ಮಾನಿಸಿದೆ. ಇದರಿಂದಾಗಿ, ವಿದ್ಯಾರ್ಥಿಗಳ ಮೇಲಿನ ಮಾನಸಿಕ ಒತ್ತಡ ಕಡಿಮೆ ಆಗಲಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಮಕ್ಕಳ ಮೇಲಿನ ದೊಡ್ಡದೊಂದು ಹೊರೆ ಇಳಿದಂತಾಗುತ್ತದೆ.

ತೃತೀಯ ಭಾಷೆಯಾಗಿ ಹಿಂದಿಯ ಮಹತ್ವವನ್ನು ಕುಗ್ಗಿಸುವ ಸರ್ಕಾರದ ನಿರ್ಧಾರವನ್ನು ದ್ವಿಭಾಷಾ ಸೂತ್ರದತ್ತ ಸಾಗುವ ದಾರಿಯಲ್ಲಿನ ಮಹತ್ವದ ಹೆಜ್ಜೆಯ ರೂಪದಲ್ಲಿಯೂ ಗುರ್ತಿಸಲಾಗುತ್ತಿದೆ. ರಾಜ್ಯದಲ್ಲಿ ದ್ವಿಭಾಷಾ ನೀತಿಯನ್ನು ಇನ್ನೂ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರೂ, ದ್ವಿಭಾಷಾ ನೀತಿಯ ಭಾಗವಾಗಿಯೇ ಎಸ್ಎಸ್ಎಲ್ಸಿಯಲ್ಲಿ ಹಿಂದಿ ವಿಷಯದ ಅಂಕಗಳನ್ನು ಫಲಿತಾಂಶಕ್ಕೆ ಪರಿಗಣಿಸದಿರಲು ನಿರ್ಧರಿಸಲಾಗಿದೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ. ಸರ್ಕಾರದ ನಿರ್ಧಾರವನ್ನು ಬಿಜೆಪಿ ನಾಯಕರು ಕಟುವಾಗಿ ಟೀಕಿಸಿದ್ದಾರೆ. ಯಾವುದೇ ಶೈಕ್ಷಣಿಕ ದೃಷ್ಟಿಕೋನವಿಲ್ಲದ, ರಾಜಕೀಯಪ್ರೇರಿತ ನಿರ್ಧಾರ ಇದಾಗಿದೆ ಎನ್ನುವ ಟೀಕೆಗಳು ವ್ಯಕ್ತವಾಗಿವೆ. ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲೇ ಮಹತ್ವದ ಬದಲಾವಣೆಯನ್ನು ತಂದಿರುವ ಸರ್ಕಾರದ ಕ್ರಮ, ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲಿದೆ ಎನ್ನುವ ಅಭಿಪ್ರಾಯಗಳೂ ಇವೆ. ಹಿಂದಿಯನ್ನು ನಗಣ್ಯಗೊಳಿಸಿರುವ ಕ್ರಮ ವಿದ್ಯಾರ್ಥಿಗಳ ಬಹುಭಾಷಾ ಸಾಮರ್ಥ್ಯ ಹಾಗೂ ರಾಷ್ಟ್ರೀಯ ಏಕತೆಯ ಮೇಲೆ ಪರಿಣಾಮ ಬೀರಲಿದೆ ಎನ್ನುವ ವಿಶ್ಲೇಷಣೆಗಳೂ ಇವೆ. ಪರೀಕ್ಷೆಗಳು ಆರಂಭವಾಗುವವರೆಗೂ ಕಾಯುವ ಬದಲು, ಪರೀಕ್ಷೆಗೆ ಸಾಕಷ್ಟು ಮುಂಚಿತವಾಗಿ ಸರ್ಕಾರ ತೀರ್ಮಾನ ಕೈಗೊಳ್ಳಬಹುದಾಗಿತ್ತು. ಇಲ್ಲವೇ ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಪದ್ಧತಿಯನ್ನು ಜಾರಿಗೊಳಿಸಬಹುದಿತ್ತು ಎನ್ನುವುದು ಒಪ್ಪಬಹುದಾದ ಮಾತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಹಿಂದಿ ವಿಷಯದಲ್ಲಿ ಅನುತ್ತೀರ್ಣರಾಗುತ್ತಿರುವ ಮಕ್ಕಳ ದೊಡ್ಡ ಸಂಖ್ಯೆಯನ್ನು ಗಮನಿಸಿದರೆ, ಸರ್ಕಾರದ ನಿರ್ಧಾರ ವಿಳಂಬವಾದರೂ ಸಮಯೋಚಿತ ಎಂದು ಭಾವಿಸಬೇಕಾಗಿದೆ.

ಸಾವಿರಾರು ಮಕ್ಕಳು ಅನುತ್ತೀರ್ಣರಾಗುವುದನ್ನು ತಪ್ಪಿಸುವ ನಿರ್ಧಾರಕ್ಕೆ ಶೈಕ್ಷಣಿಕ ಹಾಗೂ ಸಾಮಾಜಿಕ ಮಹತ್ವವಿದೆ. ಹಿಂದಿ ಭಾಷೆಯು ರಾಷ್ಟ್ರೀಯ ಏಕತೆಗೆ ಪೂರಕ ಎನ್ನುವ ಮಾತಿನಲ್ಲಿಯೂ ಅರ್ಧ ಸತ್ಯವಷ್ಟೇ ಇದೆ. ಹಿಂದಿಯಷ್ಟೇ ಎಲ್ಲ, ಎಲ್ಲ ಭಾರತೀಯ ಭಾಷೆಗಳೂ ಏಕತೆಗೆ ಪೂರಕವೇ. ಆದರೆ, ರಾಷ್ಟ್ರೀಯ ಸಂದರ್ಭದಲ್ಲಿ ಹಿಂದಿಯನ್ನು ಹೊರತುಪಡಿಸಿ ಕನ್ನಡವೂ ಸೇರಿದಂತೆ ಯಾವ ಭಾರತೀಯ ಭಾಷೆಯ ಪ್ರಸ್ತಾಪವೂ ಆಗುವುದಿಲ್ಲ. ಸ್ಥಳೀಯ ಭಾಷೆಗಳ ಮೇಲೆ ಪ್ರಾಬಲ್ಯ ಸಾಧಿಸುವ ಉದ್ದೇಶದ ಹಿಂದಿ ಹೇರಿಕೆಯು ರಾಜಕೀಯ ಹುನ್ನಾರದ ರೂಪದಲ್ಲಿ ದಶಕಗಳಿಂದಲೂ ವ್ಯವಸ್ಥಿತವಾಗಿ ನಡೆಯುತ್ತಿದೆ. ಹಾಗಾಗಿ, ಭಾಷಾ ದಬ್ಬಾಳಿಕೆಯ ಪ್ರತಿರೋಧದ ಕ್ರಮವಾಗಿಯೂ ಹಿಂದಿ ಭಾಷಾ ಅಂಕಗಳನ್ನು ಫಲಿತಾಂಶಕ್ಕೆ ಪರಿಗಣಿಸದಿರುವ ನಿರ್ಧಾರವನ್ನು ಗಮನಿಸಬಹುದಾಗಿದೆ. ಆದರೆ, ಕನ್ನಡದ ಸಮಗ್ರ ಬೆಳವಣಿಗೆಯ ದೃಷ್ಟಿಯಿಂದ ಗಮನಿಸಿದರೆ, ತೃತೀಯ ಭಾಷೆಯ ಅಂಕಗಳನ್ನು ಫಲಿತಾಂಶಕ್ಕೆ ಪರಿಗಣಿಸದಿರುವ ನಿರ್ಧಾರ ಸಮಸ್ಯಾತ್ಮಕವೂ ಹೌದು. ಪ್ರಸ್ತುತ ಔಪಚಾರಿಕವಾಗಿಯಷ್ಟೇ ತೃತೀಯ ಭಾಷೆಯ ರೂಪದಲ್ಲಿ ಕನ್ನಡವನ್ನು ಉಳಿಸಿಕೊಂಡಿರುವ ಖಾಸಗಿ ಶಾಲೆಗಳು, ಇನ್ನುಮುಂದೆ ಕನ್ನಡವನ್ನು ಮತ್ತಷ್ಟು ನಿರ್ಲಕ್ಷಿಸುವ ಸಾಧ್ಯತೆಯಿದೆ. ಹಾಗಾದಲ್ಲಿ, ಕನ್ನಡದ ಮಕ್ಕಳನ್ನು ಕನ್ನಡದಿಂದ ದೂರವಾಗಲು ಅವಕಾಶ ಕಲ್ಪಿಸಿದಂತಾಗುತ್ತದೆ. ಅದನ್ನು ತಪ್ಪಿಸುವುದಕ್ಕಾಗಿ, ಮುಂದಿನ ಶೈಕ್ಷಣಿಕ ವರ್ಷದಿಂದ ಭಾಷಾನೀತಿಯನ್ನು ಸರ್ಕಾರ ಪರಿಷ್ಕರಿಸುವುದು ಅಗತ್ಯ. ತೃತೀಯ ಭಾಷೆಯ ಬದಲು, ಪ್ರಥಮ ಇಲ್ಲವೇ ದ್ವಿತೀಯ ಭಾಷೆಯನ್ನಾಗಿ ಕನ್ನಡ ಕಲಿಯುವುದನ್ನು ಸರ್ಕಾರ ಕಡ್ಡಾಯಗೊಳಿಸಬೇಕಾಗಿದೆ. ಅದಾಗದೆ ಹೋದರೆ, ಕನ್ನಡದ ಹಿತಾಸಕ್ತಿಯ ಹೆಸರಿನ ಪ್ರಯತ್ನ ಕನ್ನಡವನ್ನೇ ಬಡವಾಗಿಸಲು ಕಾರಣವಾಗಬಹುದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-51-54031699

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.