ಬೆಂಗಳೂರು: ‘ಕೇಂದ್ರ ಸರ್ಕಾರವು ರೂಪಿಸಿರುವ ನೂತನ ಶಿಕ್ಷಣ ನೀತಿ (ಎನ್‌ಇಪಿ) ಸಂವಿಧಾನ ವಿರೋಧಿಯಾಗಿದೆ. ವಿಧಾನಮಂಡಲದಲ್ಲಿ ಚರ್ಚಿಸಿದೇ ಈ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರದಂತೆ ಸಂಘಟಿತ ಹೋರಾಟ ನಡೆಸಬೇಕು’ ಎಂಬ ಅಭಿಪ್ರಾಯ ಸಮುದಾಯ–ಕರ್ನಾಟಕದ ನೇತೃತ್ವದಲ್ಲಿ ಸೋಮವಾರ ನಡೆದ ಸಮಾಲೋಚನಾ ಸಭೆಯಲ್ಲಿ ವ್ಯಕ್ತವಾಯಿತು.
ಭಾರತೀಯ ಜ್ಞಾನ ವಿಜ್ಞಾನ ಸಮಿತಿ, ವಿವಿಧ ವಿದ್ಯಾರ್ಥಿ ಮತ್ತು ದಲಿತ ಸಂಘಟನೆಗಳ ಸಹಭಾಗಿತ್ವದಲ್ಲಿ ನಗರದ ಗಾಂಧಿಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಶಿಕ್ಷಣ ತಜ್ಞರು, ಸಾಹಿತಿಗಳು, ಹೋರಾಟಗಾರರು ಮತ್ತು ವಿದ್ಯಾರ್ಥಿ ಮುಖಂಡರು ಪಾಲ್ಗೊಂಡಿದ್ದರು. ಎನ್‌ಇಪಿ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ ಎಲ್ಲರೂ, ರಾಜ್ಯದಲ್ಲಿ ಹೊಸ ನೀತಿಯ ಅನುಷ್ಠಾನಕ್ಕೆ ಹೊರಡಿಸಿರುವ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಹೋರಾಟ ನಡೆಸುವ ಇಂಗಿತ ವ್ಯಕ್ತಪಡಿಸಿದರು.
ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ‘ಕೇಂದ್ರ ಸರ್ಕಾರವು ಸಂವಿಧಾನವನ್ನು ಗಾಳಿಗೆ ತೂರಿಕೊಂಡು ಆಡಳಿತ ನಡೆಸುತ್ತಿರುವುದಕ್ಕೆ ಎನ್‌ಇಪಿ ಸಾಕ್ಷಿ. ಸಂವಿಧಾನಕ್ಕೆ ವಿರುದ್ಧವಾಗಿರುವ ಈ ನೀತಿಯ ಅನುಷ್ಠಾನಕ್ಕೆ ರಾಜ್ಯದಲ್ಲಿ ಅವಕಾಶ ನೀಡಬಾರದು’ ಎಂದರು.
ರಾಜ್ಯಸಭಾ ಸದಸ್ಯ ಡಾ.ಎಲ್. ಹನುಮಂತಯ್ಯ, ‘ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿದೆ. ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಮಾನ ಅಧಿಕಾರವಿದೆ. ಆದರೆ, ಎನ್‌ಇಪಿ ಮೂಲಕ ಕೇಂದ್ರ ಸರ್ಕಾರವು ರಾಜ್ಯದ ಅಧಿಕಾರವನ್ನು ಆಕ್ರಮಿಸಿಕೊಳ್ಳುತ್ತಿದೆ’ ಎಂದು ಹೇಳಿದರು.
ಹೊಸ ಶಿಕ್ಷಣ ನೀತಿಯಲ್ಲಿ ವರ್ಣಾಶ್ರಮ ವ್ಯವಸ್ಥೆಯನ್ನು ಸ್ಥಿರೀಕರಿಸುವ ಪ್ರಯತ್ನ ಅಡಗಿದೆ. ಆದರೆ, ಅದನ್ನೇ 21ನೇ ಶತಮಾನದ ಶಿಕ್ಷಣ ನೀತಿ ಎಂದು ನಂಬಿಸಲಾಗುತ್ತಿದೆ. ಈ ಬಗ್ಗೆ ಜನರು ಎಚ್ಚೆತ್ತುಕೊಂಡು ಹೋರಾಟ ನಡೆಸಬೇಕಿದೆ ಎಂದರು.
ಶಿಕ್ಷಣ ತಜ್ಞ ಡಾ.ಪಿ.ವಿ. ನಿರಂಜನಾರಾಧ್ಯ ಅವರು ಹಿಂದಿನ ಮತ್ತು ಹೊಸ ಶಿಕ್ಷಣ ನೀತಿಗಳ ಕುರಿತು ವಿಶ್ಲೇಷಣೆ ಮಂಡಿಸಿದರು. ಎನ್‌ಇಪಿ ವಿರುದ್ಧ ಹೋರಾಟ ಆರಂಭಿಸಿರುವ ಎಲ್ಲರನ್ನೂ ಒಂದೇ ವೇದಿಕೆಗೆ ತರುವ ಪ್ರಯತ್ನ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಲೇಖಕಿ ಡಾ. ವಸುಂಧರಾ ಭೂಪತಿ, ಶಿಕ್ಷಣ ತಜ್ಞ ಬಿ. ಶ್ರೀಪಾದ ಭಟ್, ದಲಿತ ಸಂಘಟನೆಗಳ ಮುಖಂಡರಾದ ಮಾವಳ್ಳಿ ಶಂಕರ್, ಬಿ. ರಾಜಶೇಖರ ಮೂರ್ತಿ, ಮೋಹನ್ ರಾಜ್, ಜಿಗಣಿ ಶಂಕರ್, ಎನ್. ವೆಂಕಟೇಶ್, ಎಸ್‌ಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಅಮರೇಶ್ ಕಡಗದ, ಕರ್ನಾಟಕ ವಿದ್ಯಾರ್ಥಿ ಸಂಘಟನೆ ಮುಖಂಡ ಸರೋವರ್ ಬೆಂಕಿಕೆರೆ, ವಿದ್ಯಾರ್ಥಿ ಜನತಾ ದಳದ ಹರಿಪ್ರಸಾದ್, ಕರ್ನಾಟಕ ರಾಷ್ಟ್ರ ಸಮಿತಿಯ ಅಮರೇಶ್ ವಿ, ಸಮುದಾಯ ಕರ್ನಾಟಕದ ಉಪಾಧ್ಯಕ್ಷ ಟಿ. ಸುರೇಂದ್ರ ರಾವ್ ಮತ್ತು ಸಹ ಕಾರ್ಯದರ್ಶಿ ವಿಮಲಾ ಕೆ.ಎಸ್. ಸಭೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.