ಶುಕ್ರವಾರ, ನವೆಂಬರ್ 15, 2019
21 °C
ತೆರಕಣಾಂಬಿ ಮೊರಾರ್ಜಿ ದೇಸಾಯಿ ವಸತಿ ಶಾಲೆ: ಎಸ್ಸೆಸ್ಸೆಲ್ಸಿಯಲ್ಲಿ ಸತತ ಶೇ 90ಕ್ಕೂ ಹೆಚ್ಚು ಫಲಿತಾಂಶ

ಈ ಶಾಲೆಯ ಮಕ್ಕಳು ಪರೀಕ್ಷೆಯಲ್ಲೂ, ಪರಿಸರ ಕಾಳಜಿಯಲ್ಲೂ ಮಾದರಿ

Published:
Updated:
Prajavani

ಗುಂಡ್ಲುಪೇಟೆ: ಪ್ರತಿವರ್ಷ ಎಸ್ಸೆಸ್ಸೆಲ್ಸಿಯಲ್ಲಿ ತಾಲ್ಲೂಕಿನ ಒಟ್ಟಾರೆ ಫಲಿತಾಂಶ ಕಡಿಮೆ ಇದ್ದರೂ, ತೆರಕಣಾಂಬಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಫಲಿತಾಂಶ ಮಾತ್ರ ಶೇ 90ರ ಮೇಲೆಯೇ ಇರುತ್ತದೆ.

ಹತ್ತು ವರ್ಷಗಳಿಂದ ಸತತವಾಗಿ ಶೇ 90ಕ್ಕಿಂತ ಹೆಚ್ಚು ಫಲಿತಾಂಶವನ್ನು ದಾಖಲಿಸುತ್ತಾ ಬಂದಿದೆ.  2006ರಲ್ಲಿ ಸ್ಥಾಪನೆಯಾಗಿರುವ ಈ ಶಾಲೆ ಇದುವರೆಗೆ ಎರಡು ಬಾರಿ ಶೇ 100ರಷ್ಟು ಫಲಿತಾಂಶ ದಾಖಲಿಸಿದೆ. ತಾಲ್ಲೂಕಿನಲ್ಲಿ ಹಲವು ವಸತಿ ಶಾಲೆಗಳಿದ್ದರೂ, ಈ ಶಾಲೆಯಂತೆ ಶೈಕ್ಷಣಿಕ ಸಾಧನೆ ಮಾಡಿದ ಉದಾಹರಣೆ ಇಲ್ಲ. 

ಪ್ರಸ್ತುತ 10ನೇ ತರಗತಿಯಲ್ಲಿ 50 ವಿದ್ಯಾರ್ಥಿಗಳು ಓದುತ್ತಿದ್ದಾರೆ. ವಸತಿ ನಿಲಯದಲ್ಲೇ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇರುವುದರಿಂದ ಮಕ್ಕಳಿಗೆ ಹೆಚ್ಚಿನ ಸಮಯ ಕಲಿಕೆಗೆ ಅವಕಾಶ ಸಿಗುತ್ತದೆ. ಶಾಲಾ ಸಮಯ ಅಲ್ಲದೇ, ಬೆಳಿಗ್ಗೆ ಮತ್ತು ರಾತ್ರಿ ಸಮಯದಲ್ಲಿ ವಿಶೇಷ ತರಗತಿ, ರಸ ಪ್ರಶ್ನೆ, ಗುಂಪು ಅಧ್ಯಯನ ಹೀಗೆ ಮಕ್ಕಳ ಕಲಿಕೆಗೆ ಬೇಕಾಗುವಂತಹ ವಾತಾವರಣ ನಿರ್ಮಿಸಿ ಕೊಡುತ್ತಾರೆ ಇಲ್ಲಿನ ಶಿಕ್ಷಕ ವೃಂದ.

ಮಾದರಿ ಕಾಳಜಿ: ಈ ಶಾಲೆಯ ಮಕ್ಕಳಿಗೆ ಪರಿಸರ ಕಾಳಜಿಯೂ ಹೆಚ್ಚಿದೆ. ಶಾಲೆಯಲ್ಲಿ ವಿವಿಧ ಜಾತಿಯ ಆಲಂಕಾರಿಕ ಮತ್ತು ಹಣ್ಣಿನ ಗಿಡಗಳನ್ನು ಬೆಳೆಸಿ ಪರಿಸರ ಹಸಿರಾಗಿರುವಂತೆ ನೋಡಿಕೊಳ್ಳುತ್ತಿದ್ದಾರೆ. ಶಾಲಾ ಆವರಣದಲ್ಲಿ ಸೀಬೆ, ಕಿತ್ತಳೆ, ದಾಳಿಂಬೆ, ಮಾವು ಸೇರಿದಂತೆ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ. ತೆಂಗಿನ ಮರಗಳೂ ಇವೆ.

ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಅವರು ಶಾಲೆಯ ಒಡನಾಟದಲ್ಲಿ ಇದ್ದು ಪರಿಸರ, ಗಿಡಮರ, ಪ್ರಾಣಿಗಳ ಬಗ್ಗೆ ಮಾಹಿತಿ ನೀಡಿ ಮಕ್ಕಳಲ್ಲಿ ಪರಿಸರ ಕಾಳಜಿಯನ್ನು ಬೆಳೆಸುತ್ತಿದ್ದಾರೆ. ಶಾಲೆಯ 20 ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್‌ನಲ್ಲಿ ರಾಜ್ಯ ಪುರಸ್ಕಾರ ಪಡೆದು ಸಾಧನೆ ಮಾಡಿದ್ದಾರೆ.

‘ಎಲ್ಲರ ಸಹಕಾರದಿಂದ ಉತ್ತಮ ಫಲಿತಾಂಶ’

ಶೈಕ್ಷಣಿ ಸಾಧನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಾಲೆಯ ಪ್ರಾಂಶುಪಾಲ ಧನಂಜಯ ಅವರು, ‘ಎಸ್ಸೆಸ್ಸೆಲ್ಸಿಯಲ್ಲಿ ನಿರಂತರವಾಗಿ ಉತ್ತಮ ಫಲಿತಾಂಶ ಬರಲು ಶಿಕ್ಷಕರು ಕಾರಣ. ಬೋಧಕರು ಇಲ್ಲೇ ಉಳಿದು ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಕಲಿಯಬೇಕು ಎಂಬ ಹಂಬಲ ಇಲ್ಲಿನ ವಿದ್ಯಾರ್ಥಿಗಳಲ್ಲೂ ಇದೆ. ಎಲ್ಲರ ಸಹಕಾರದಿಂದ ಪ್ರತಿವರ್ಷ  ಉತ್ತಮ ಫಲಿತಾಂಶ ಬರುತ್ತಿದೆ’ ಎಂದು ಹೇಳಿದರು. 

‘ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಯಾರಾಗುವಂತೆ ಶಿಕ್ಷಕರು ಈಗಾಗಲೇ ಸಿದ್ಧತೆ ಮಾಡಿಸುತ್ತಿದ್ದಾರೆ. ಪರೀಕ್ಷೆಗೆ ಪೂರಕವಾಗುವಂತೆ ಪ್ರಶ್ನೆಗಳನ್ನು ತಯಾರು ಮಾಡಿ, ಪರೀಕ್ಷೆ ಬರೆಸಿ ಕಲಿಕೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ’ ಎಂದು 10ನೇ ತರಗತಿಯ ವಿದ್ಯಾರ್ಥಿಗಳು ಹೇಳುತ್ತಾರೆ. 

ಪ್ರತಿಕ್ರಿಯಿಸಿ (+)