ಚಿಕ್ಕ ಚೊಕ್ಕ ಪಠ್ಯ; ಗಾಢ ಪರಿಣಾಮ

ಸೋಮವಾರ, ಮಾರ್ಚ್ 18, 2019
31 °C
ಯಾಂತ್ರಿಕವಾಗುತ್ತಾ ಸತ್ವಹೀನಗೊಳ್ಳುತ್ತಿರುವ ಶಿಕ್ಷಣಕ್ಕೆ ಬೇಕಾಗಿದೆ ಹೊಸ ಆಲೋಚನೆ

ಚಿಕ್ಕ ಚೊಕ್ಕ ಪಠ್ಯ; ಗಾಢ ಪರಿಣಾಮ

Published:
Updated:
Prajavani

ಶಿಕ್ಷಣಕ್ಕೆ ಸಂಬಂಧಿಸಿದ ಚರ್ಚೆಗಳು ಇತ್ತೀಚೆಗೆ ಕೇವಲ ಕಲಿಕಾ ಮಾಧ್ಯಮಕ್ಕೆ ಸಂಬಂಧಿಸಿದ ಪರಿಹಾರವಿಲ್ಲದ, ಏನನ್ನು ಮಾಡುವುದಕ್ಕೂ ಸಾಧ್ಯವಿಲ್ಲದ ಚರ್ಚೆಯಾಗಿ ಪರಿಣಮಿಸಿವೆ. ಆದರೆ, ಭಾಷಾ ಮಾಧ್ಯಮದ ಆಚೆಗೂ ಶಿಕ್ಷಣದ ಹಲವು ಅವಶ್ಯಕತೆಗಳು ಇವೆ.

ಇತ್ತೀಚಿನ ದಿನಗಳಲ್ಲಿ ಕಲಿಕಾಂಶಗಳ ಪ್ರಮಾಣದಲ್ಲಿ ಏರಿಕೆಯಾಗಿ, ಪಠ್ಯಗಳ ಗಾತ್ರ ದೊಡ್ಡದಾಗುತ್ತಾ ಹೋಗಿದೆ. ಇದಕ್ಕಿರುವ ಎರಡು ಪ್ರಮುಖ ಕಾರಣಗಳೆಂದರೆ, ಬಹು ವಿಧದ ಆಸಕ್ತಿಯ ಒತ್ತಡ ತಂಡಗಳು ಶಿಕ್ಷಣದ ಮೇಲೆ ಪ್ರಭಾವ ಬೀರುವುದು. ಒಂದೊಂದು ತಂಡಕ್ಕೆ ಅದಕ್ಕೆ ಬೇಕಾದ ಸಂಗತಿಗಳನ್ನು ಪಠ್ಯಕ್ಕೆ ಸೇರಿಸುವ ಅಪೇಕ್ಷೆ ಇರುತ್ತದೆ. ಈ ಒತ್ತಡಗಳಿಗೆ ಮಣಿಯುತ್ತಾ ಹೋದಂತೆ ಪಠ್ಯದ ಅಂಶಗಳು ಜಾಸ್ತಿಯಾಗುತ್ತವೆ. ಎರಡನೆಯದು, ಭವಿಷ್ಯಕ್ಕೆ ಬೇಕಾದದ್ದನ್ನೆಲ್ಲ ಮಕ್ಕಳಿಗೆ ಕಲಿಸಿಬಿಡಬೇಕು ಎಂಬ ನಿರೀಕ್ಷೆ.

ಆದರೆ ನಿಜವಾಗಿ ಇಡೀ ಜೀವನಕ್ಕೆ ಬೇಕಾದ್ದನ್ನೆಲ್ಲ ಈಗಲೇ ಕಲಿಸಲು ಆಗುವುದಿಲ್ಲ. ಇಂದಿನ ಸನ್ನಿವೇಶ ಇನ್ನು ಕೆಲವು ವರ್ಷಗಳಲ್ಲಿ ಇರುವುದಿಲ್ಲ. ಆದ್ದರಿಂದ ಕಲಿಸಬೇಕಾದದ್ದು ಭವಿಷ್ಯಕ್ಕೆ ಬೇಕಾದ ವಿವರಗಳನ್ನಲ್ಲ. ಭವಿಷ್ಯದಲ್ಲಿನ ಅವಶ್ಯಕತೆಗೆ ತಕ್ಕಂತೆ ಬೇಕಾದ್ದನ್ನು ತ್ವರಿತವಾಗಿ ಕಲಿತುಕೊಳ್ಳಬಲ್ಲ ಸಾಮರ್ಥ್ಯಗಳನ್ನು ಮಕ್ಕಳಲ್ಲಿ ರೂಢಿಸಬೇಕು.

ಸಾಮರ್ಥ್ಯಗಳು ಮಕ್ಕಳಲ್ಲಿ ಬೆಳೆಯಬೇಕಾದರೆ ಪಠ್ಯದ ಗಾತ್ರ ಚಿಕ್ಕದಾಗಬೇಕು. ಕಲಿಕೆಯ ಪರಿಣಾಮ ಗಾಢ
ವಾಗಿರಬೇಕು. ಇದು ಸಾಧ್ಯವಾಗಬೇಕಾದರೆ ಪಠ್ಯವಸ್ತು, ಕಲಿಕಾ ಪ್ರಕ್ರಿಯೆ ಮತ್ತು ಶಿಕ್ಷಕರ ದಕ್ಷತೆ ಹೆಚ್ಚಬೇಕು.

ನಮ್ಮ ಪಠ್ಯವಸ್ತುವಿನಲ್ಲಿ ಎರಡೆರಡು ಬಾರಿ ಬರುವ ಸಂಗತಿಗಳು ಯಥೇಚ್ಛ ಇವೆ. ಉದಾಹರಣೆಗೆ, ಸ್ವಾತಂತ್ರ್ಯ ಹೋರಾಟದ ಪಾಠ ಏಳನೆಯ ತರಗತಿಯಲ್ಲೂ ಬರುತ್ತದೆ, ಹತ್ತನೆಯ ತರಗತಿಯಲ್ಲೂ ಬರುತ್ತದೆ. ಯಾವುದೋ ಒಂದು ಕಾಲಕ್ಕೆ ಮಕ್ಕಳು ಏಳನೇ ತರಗತಿಯಲ್ಲಿ ಶಾಲೆ ಬಿಡುವವರಿರುತ್ತಾರೆ ಎಂಬ ಕಲ್ಪನೆಯ ಹಿನ್ನೆಲೆಯಲ್ಲಿ, ಅಂತಹವರಿಗೂ ಸ್ವಾತಂತ್ರ್ಯ ಹೋರಾಟದ ಬಗ್ಗೆ ತಿಳಿದಿರಬೇಕು ಎಂದುಕೊಂಡು ಈ ರೀತಿ ಪಠ್ಯ ವಿನ್ಯಾಸವನ್ನು ಮಾಡಿದ್ದು ಸರಿಯಾಗಿಯೇ ಇದೆ. ಆದರೆ ಈಗ ಕನಿಷ್ಠ ಕಲಿಕೆಯ ಮಟ್ಟವೇ ಎಸ್ಎಸ್ಎಲ್‌ಸಿ ಆಗಿದೆ. ಹಾಗಿರುವಾಗ ಏಳನೇ ತರಗತಿಯಲ್ಲಿ ಇದರ ಅವಶ್ಯಕತೆ ಇಲ್ಲ. ಹೀಗೆ ಬೇರೆ ಬೇರೆ ಪಠ್ಯಗಳಲ್ಲಿ ಮತ್ತೆ ಮತ್ತೆ ಬರುವ ಪಾಠಗಳನ್ನು ತೆಗೆಯಬೇಕು.

ಪ್ರತಿ ಪಠ್ಯಕ್ಕೂ ಅದರದೇ ತಾತ್ವಿಕ ವಿನ್ಯಾಸವಿರುತ್ತದೆ. ವಿಜ್ಞಾನಕ್ಕೆ ಶೋಧಕ ಪ್ರವೃತ್ತಿ, ಇತಿಹಾಸಕ್ಕೆ ವಿಶಾಲ ದೃಷ್ಟಿಕೋನ, ಗಣಿತಕ್ಕೆ ಅಮೂರ್ತವಾದದ್ದನ್ನೂ ಅರ್ಥ ಮಾಡಿಕೊಳ್ಳಬಲ್ಲ ಸಾಮರ್ಥ್ಯ ಮುಂತಾದವು ತಾತ್ವಿಕ ಸ್ವರೂಪಗಳು. ಅದಕ್ಕೆ ತಕ್ಕಂತೆ ಬೋಧನೆ- ಕಲಿಕೆ- ಮೌಲ್ಯಮಾಪನ ನಡೆದಾಗ ಮಕ್ಕಳ ಸಾಮರ್ಥ್ಯ ವರ್ಧನೆಯಾಗುತ್ತದೆ. ಇದರ ಬಗ್ಗೆ ಶಿಕ್ಷಕರಿಗೆ ಸಾಕಷ್ಟು ಜ್ಞಾನ ಇರಬೇಕು ಮತ್ತು ಅದನ್ನು ಜಾರಿಗೊಳಿಸಲು ಸಾಧ್ಯವಾಗುವ ಶೈಕ್ಷಣಿಕ ಪರಿಸರವಿರಬೇಕು. ಜ್ಞಾನವನ್ನು ತರಬೇತಿಯ ಮೂಲಕ ಕೊಡಲಾಗುತ್ತದೆ. ಮುಂದೆಯೂ ಕೊಡಬಹುದು. ಆದರೆ ಅದನ್ನು ಆಗುಮಾಡುವಂತಹ ಆಡಳಿತಾತ್ಮಕ ಸನ್ನಿವೇಶ ಬಹಳ ಅಗತ್ಯವಿದೆ. ಮುಖ್ಯವಾಗಿ ಉನ್ನತ ಶಿಕ್ಷಣದಲ್ಲಿ ಇರುವಂತೆ, ಶೈಕ್ಷಣಿಕ ಆಡಳಿತದ ವಿಭಾಗ ಮತ್ತು ಅಕಡೆಮಿಕ್ ವಿಭಾಗಗಳನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿಯೂ ಪ್ರತ್ಯೇಕಗೊಳಿಸಬೇಕು. ಬೋಧನೆ ಮತ್ತು ಕಲಿಕಾ ಪ್ರಕ್ರಿಯೆ ಸೃಜನಶೀಲ ಚಟುವಟಿಕೆಯಾಗಿದೆ. ಅದರಲ್ಲಿ ನಿರತರಾದವರಿಗೆ ಆಡಳಿತಾತ್ಮಕ ಜವಾಬ್ದಾರಿ ಬಂದ ಕೂಡಲೇ ಬೋಧನಾ ಪ್ರಕ್ರಿಯೆ ದುರ್ಬಲವಾಗಿಬಿಡುತ್ತದೆ.

ಇವತ್ತು ಕಲಿಕೆಯು ಬಹುತೇಕ ಅತ್ಯುತ್ತಮ ಅಂಕಗಳನ್ನು ಪಡೆಯುವುದಕ್ಕೆ ಸೀಮಿತವಾದಂತಿದೆ ಮತ್ತು ಶಿಕ್ಷಕರು, ಪಾಲಕರು ಕೂಡ ಅಷ್ಟನ್ನೇ ಕಲಿಕೆಯ ವ್ಯಾಪ್ತಿಗೆ ಸೀಮಿತಗೊಳಿಸಿಕೊಂಡಂತಿದೆ. ಖಂಡಿತವಾಗಿಯೂ ಕಲಿಕೆ ನಡೆದಿದೆ ಎಂದು ಆಡಳಿತವು ಅರ್ಥ ಮಾಡಿಕೊಳ್ಳಲು ಒಂದು ಮಾನದಂಡ ಬೇಕು ಮತ್ತು ಅತ್ಯುತ್ತಮ ಅಂಕಗಳೇ ಆ ಮಾನದಂಡವೂ ಹೌದು. ಆದರೆ ಆ ಅಂಕಗಳು ಹೇಗೆ ಬರುತ್ತಿವೆ ಮತ್ತು ಹೇಗೆ ಬರಬೇಕು ಎನ್ನುವುದೂ ಮುಖ್ಯವಾಗಬೇಕು. ನಿಜವಾಗಿ ಪರೀಕ್ಷೆಯು ವಿದ್ಯಾರ್ಥಿಗೆ ಎಷ್ಟು ಗೊತ್ತಿದೆ ಎಂಬುದನ್ನು ಪರೀಕ್ಷಿಸುವುದಿಲ್ಲ. ಬದಲು ಪರೀಕ್ಷಾ ಪ್ರಶ್ನೆಪತ್ರಿಕೆಯು ಬಯಸಿದಂತೆ, ಮೂರು ಗಂಟೆಯಲ್ಲಿ ವಿದ್ಯಾರ್ಥಿ ಏನನ್ನು ಬರೆಯಬಲ್ಲ ಎಂಬುದನ್ನಷ್ಟೇ ಪರೀಕ್ಷಿಸುತ್ತದೆ.

ಪರೀಕ್ಷೆಯ ಅಂಕಗಳಿಗೆ ಜಾಸ್ತಿ ಮಹತ್ವವನ್ನು ಕೊಡುತ್ತಾ ಹೋದ ಹಾಗೆ ವಿದ್ಯಾರ್ಥಿಗಳಿಗೆ ಗೊತ್ತು ಮಾಡುವುದಕ್ಕೆ ಶಿಕ್ಷಕರು, ಪಾಲಕರು ಹೆಚ್ಚು ಆಸಕ್ತಿಯನ್ನು ತಳೆಯುವುದಿಲ್ಲ. ಬರೆಯಲು ಗೊತ್ತು ಮಾಡುವುದಕ್ಕೆ ಮಾತ್ರ ಆಸಕ್ತಿ ತಳೆಯುತ್ತಾರೆ. ವಿಚಾರ ಗೊತ್ತಿಲ್ಲದೆ, ಬರೆಯಲು ಮಾತ್ರ ಗೊತ್ತಾಗಲು ಸಾಧ್ಯವೇ ಎಂದು ಕೇಳಿದರೆ ಖಂಡಿತವಾಗಿಯೂ ಸಾಧ್ಯವಿದೆ. ಏನೂ ಅರ್ಥವಾಗದೆಯೂ ಬರೆಯಲು ಸಾಧ್ಯವಿದೆ. ಆಗ ವಿದ್ಯಾರ್ಥಿಯ ಬಳಿ ಅಂಕಗಳು ಮಾತ್ರ ಉಳಿದುಕೊಳ್ಳುತ್ತವೆ ಹೊರತು ಜ್ಞಾನವಲ್ಲ. ಜ್ಞಾನ ಅವರ ಬಳಿ ಉಳಿದುಕೊಳ್ಳಬೇಕಾದರೆ ಕಲಿಕೆ ನಡೆದುದರ ಪರಿಣಾಮವಾಗಿ ಅಂಕಗಳು ಬರಬೇಕು. ಅಂದರೆ ಕಲಿಕೆಗೆ ಜಾಸ್ತಿ ಮಹತ್ವ ಕೊಡಬೇಕೇ ಹೊರತು ಅಂಕಗಳಿಗಲ್ಲ ಮತ್ತು ಅಂಕ ಕಡಿಮೆ ಬಂತು ಎನ್ನುವುದನ್ನೇ ವಿದ್ಯಾರ್ಥಿಯ ಮತ್ತು ಶಿಕ್ಷಕರ ಅನರ್ಹತೆ ಎಂದು ಭಾವಿಸಬಾರದು.

ಅದಕ್ಕನುಗುಣವಾಗಿ ಕಲಿಕೆಯನ್ನು ನಿರ್ವಹಿಸಬೇಕಾದರೆ ಶಿಕ್ಷಕರನ್ನು ಬಹು ಆಯ್ಕೆ ಮಾದರಿಯ ಪ್ರಶ್ನೆಗಳ ಮೂಲಕ ಆಯ್ಕೆ ಮಾಡುವ ಪದ್ಧತಿಯನ್ನು ಕೈಬಿಟ್ಟು ಪ್ರಬಂಧ ಮಾದರಿಯ ಪ್ರಶ್ನೆಗಳ ಮೂಲಕ ಆಯ್ಕೆ ಮಾಡಬೇಕು. ಪ್ರಬಂಧ ಮಾದರಿಯಲ್ಲಿ ಶಿಕ್ಷಕರ ಮನೋಧರ್ಮ ಏನು ಎನ್ನುವುದು ವ್ಯಕ್ತವಾಗುತ್ತದೆ. ಮಕ್ಕಳ ಬಗ್ಗೆ ಇರುವ ಕಾಳಜಿ ಉತ್ತರದಲ್ಲಿ ವ್ಯಕ್ತವಾಗುತ್ತದೆ. ಶಿಕ್ಷಕರ ಆಲೋಚನಾಕ್ರಮ ಗೊತ್ತಾಗುತ್ತದೆ.

ತರಗತಿ ಕೋಣೆಯು ಶಿಕ್ಷಕರಿಗೆ ಸುರಕ್ಷಿತ ಸ್ಥಳವಾಗಬೇಕು. ತರಗತಿಯಲ್ಲಿರುವ ಶಿಕ್ಷಕರ ಮೇಲೆ, ಅವರು ಆ ಕೆಲಸಕ್ಕೆ ಹೋಗಿಲ್ಲ, ಈ ಕೆಲಸಕ್ಕೆ ಹೋಗಿಲ್ಲ ಎಂದು ಕ್ರಮ ತೆಗೆದುಕೊಳ್ಳಲು ಅವಕಾಶ ಇರಬಾರದು. ಕಲಿಕೆ ಸರಿಯಾಗಿ ನಡೆಯಬೇಕಾದರೆ ಕಲಿಕಾ ಸಿದ್ಧತೆ ಬಹಳ ಅಗತ್ಯ. ಮಕ್ಕಳನ್ನು ಸ್ವೀಕರಿಸಲು ಸಿದ್ಧಪಡಿಸದೆ ಕೊಡುತ್ತಾ ಹೋದರೆ ಯಾವುದೂ ಸ್ವೀಕರಿಸಲ್ಪಡುವುದಿಲ್ಲ. ಕ್ರೀಡೆ, ದೈಹಿಕ ಶ್ರಮ, ಸಹಪಠ್ಯ ಚಟುವಟಿಕೆ, ಸಂವಾದ ಮುಂತಾದ ವಿಧಾನಗಳಿಂದ ಮಕ್ಕಳನ್ನು ಕಲಿಕೆಗೆ ಸಿದ್ಧ ಪಡಿಸಲು ಆಗುತ್ತದೆ. ಆದರೆ ಪರೀಕ್ಷಾ ಒತ್ತಡ, ಪಠ್ಯವಸ್ತು ಹೊರೆಯಾದಾಗ ಇದೇನನ್ನೂ ಮಾಡಲು ಆಗುವುದಿಲ್ಲ.

ಮಕ್ಕಳಲ್ಲಿ ಸಾಮರ್ಥ್ಯ ವರ್ಧನೆಯ ದೃಷ್ಟಿಯಿಂದ ಪರೀಕ್ಷೆಗಳು ಕಡಿಮೆಯಾಗಿ ಮೌಲ್ಯಮಾಪನ ಜಾಸ್ತಿಯಾಗಬೇಕು. ಪರೀಕ್ಷೆ ಎಂದರೆ ತೀರ್ಪು. ಬಂದ ಅಂಕವನ್ನು ಮತ್ತೆಂದೂ ಬದಲಾಯಿಸಲು ಆಗುವುದಿಲ್ಲ. ಮೌಲ್ಯಮಾಪನ ಹಾಗಲ್ಲ. ಎಲ್ಲಿ ದೋಷವಿದೆ ಎಂದು ವಿದ್ಯಾರ್ಥಿಗೆ ಅರ್ಥ ಮಾಡಿಸಿ ತನ್ನನ್ನು ತಾನು ಉತ್ತಮೀಕರಿಸಿಕೊಳ್ಳಲು ಮಾರ್ಗದರ್ಶನ ಮಾಡುತ್ತದೆ. ಆದರೆ ಮೌಲ್ಯಮಾಪನವನ್ನು ಬೋಧಿಸಿದ ಶಿಕ್ಷಕರೇ ಮಾಡಬೇಕಾಗುತ್ತದೆ. ಕಲಿಕೆಯಲ್ಲಿ ಹಿಂದುಳಿದವರಿಗೆ ಸ್ವಲ್ಪ ಸುಲಭದ ಪ್ರಶ್ನೆಗಳನ್ನು ಕೊಟ್ಟು ಅವರಲ್ಲಿ ಆತ್ಮವಿಶ್ವಾಸ ಬರುವ ಹಾಗೆಯೂ, ಕಲಿಕೆಯಲ್ಲಿ ಮುಂದುವರಿದವರಿಗೆ ಸವಾಲಿನ ರೂಪದ ಪ್ರಶ್ನೆಗಳನ್ನು ಕೊಟ್ಟು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವಂತೆ ಪ್ರೇರಕವಾಗಿಯೂ ಪ್ರಶ್ನೆಗಳಿರಬೇಕು. ಆದ್ದರಿಂದ ಸಾಧ್ಯವಾದಷ್ಟೂ ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟ ಎಂದು ಸಾಮಾನ್ಯ ಪ್ರಶ್ನೆಪತ್ರಿಕೆ ತಯಾರಿಸುವುದನ್ನು ಕಡಿಮೆ ಮಾಡಿ ಆಯಾ ಶಿಕ್ಷಕರೇ ಪ್ರಶ್ನೆ ಪತ್ರಿಕೆ ತಯಾರಿಸುವಂತಾಗಬೇಕು.

ಯಾವುದೇ ಜ್ಞಾನದ ತಾಯಿ ಶಿಕ್ಷಣವೇ. ಅದು ಯಾಂತ್ರಿಕವಾಗುತ್ತಾ ಆಗುತ್ತಾ ಸತ್ವಹೀನಗೊಳ್ಳುತ್ತಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಹೊಸ ಆಲೋಚನೆಗಳು ಮತ್ತು ಅನುಷ್ಠಾನಗಳ ಅಗತ್ಯವಿದೆ.


ಅರವಿಂದ ಚೊಕ್ಕಾಡಿ

 

Tags: 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !